ಮಂಗಳವಾರ, ಏಪ್ರಿಲ್ 20, 2021
32 °C

ಇನ್‌ಸ್ಪೆಕ್ಟರ್‌ನಿಂದ ಲಂಚ ಕಸಿದು ಪೇದೆ ಪರಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್‌ಸ್ಪೆಕ್ಟರ್‌ಗೆ ನೀಡಲು ತಂದಿದ್ದ ಐದು ಲಕ್ಷ ರೂಪಾಯಿಯನ್ನು ಅದೇ ಠಾಣೆಯ ಕಾನ್‌ಸ್ಟೇಬಲ್ ಒಬ್ಬ ಕಸಿದುಕೊಂಡು ಪರಾರಿಯಾದ ಘಟನೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ನಡೆದಿದೆ. ಲಂಚ ಪ್ರಕರಣ ಭೇದಿಸಲು ಹೋಗಿದ್ದ ಲೋಕಾಯುಕ್ತ ಪೊಲೀಸರೇ ಈ ಘಟನೆಗೆ ಸಾಕ್ಷಿಯಾಗಿದ್ದಾರೆ.ಕೊತ್ತನೂರು ಠಾಣೆಯ ವ್ಯಾಪ್ತಿಯಲ್ಲಿ ನವೀನ್‌ಕುಮಾರ್ ಎಂಬುವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬಾಬು ಎಂಬುವರನ್ನು ವಿಚಾರಣೆಗಾಗಿ ಕರೆತಂದಿದ್ದ ಪೊಲೀಸರು ಐದು ದಿನಗಳಾದರೂ ಬಿಡುಗಡೆ ಮಾಡಿರಲಿಲ್ಲ. ಬಂಧನವನ್ನೂ ಖಚಿತಪಡಿಸಿರಲಿಲ್ಲ. ಬಾಬು ಅವರನ್ನು ಬಿಡುಗಡೆ ಮಾಡಲು ಠಾಣೆಯ ಇನ್‌ಸ್ಪೆಕ್ಟರ್ ಪುರುಷೋತ್ತಮ್ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗಿರೀಶ್ ಎಂಬುವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಬೆಳಿಗ್ಗೆ ದೂರು ನೀಡಿದ್ದರು.ಗುರುವಾರ ಸಂಜೆ ಗಿರೀಶ್ ಐದು ಲಕ್ಷ ರೂಪಾಯಿ ನಗದು ಸಮೇತ ಕೊತ್ತನೂರು ಪೊಲೀಸ್ ಠಾಣೆಗೆ ಹೋದರು. ಅವರ ಹಿಂದೆಯೇ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿಗಳಾದ ಅಬ್ದುಲ್ ಅಹದ್, ಎಸ್.ಗಿರೀಶ್, ಇನ್‌ಸ್ಪೆಕ್ಟರ್ ಶಿವಶಂಕರ್ ಮತ್ತು ಕೆ.ಅಂಜನ್‌ಕುಮಾರ್ ತೆರಳಿದರು. ಆದರೆ, ದೂರುದಾರ ಗಿರೀಶ್ ಠಾಣೆಗೆ ಹೋದಾಗ ಇನ್‌ಸ್ಪೆಕ್ಟರ್ ಪುರೋಷತ್ತಮ್ ಹಣ ಪಡೆಯಲಿಲ್ಲ. ಇದರಿಂದ ಗಿರೀಶ್ ಹಣದೊಂದಿಗೆ ಠಾಣೆಯಿಂದ ಹೊರಬಂದರು.ಗಿರೀಶ್ ಠಾಣೆಯಿಂದ ಹೊರಕ್ಕೆ ಬರುತ್ತಿದ್ದಂತೆ ಮೋಟಾರು ಬೈಕ್ ಒಂದರಲ್ಲಿ ಅಲ್ಲಿಗೆ ಬಂದ ಮಂಜುನಾಥ್ ಎಂಬ ಕಾನ್‌ಸ್ಟೇಬಲ್ ಐದು ಲಕ್ಷ ರೂಪಾಯಿ ಕಿತ್ತುಕೊಂಡು ಪರಾರಿಯಾದ. ಲೋಕಾಯುಕ್ತ ಪೊಲೀಸರ ತಂಡ ಆತನನ್ನು ಬೆಂಬತ್ತಿದ್ದರೂ ಹಿಡಿಯಲು ಸಾಧ್ಯ ಆಗಲಿಲ್ಲ. ಬಳಿಕ ಠಾಣೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದರು. ಬಾಬು ಎಂಬಾತನನ್ನು ಠಾಣೆಯ ಲಾಕಪ್‌ನಲ್ಲಿ ಇಟ್ಟಿರುವುದು ಪತ್ತೆಯಾಗಿದೆ. ಆದರೆ, ಆತನನ್ನು ವಶಕ್ಕೆ ಪಡೆದಿರುವ ಕುರಿತು ಠಾಣೆಯ ದಿನಚರಿ ಪುಸ್ತಕದಲ್ಲಿದಾಖಲಿಸಿರಲಿಲ್ಲ.`ಇನ್‌ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಕಾನ್‌ಸ್ಟೇಬಲ್ ಮಂಜುನಾಥ್ ವಿರುದ್ಧ ಅದೇ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಲಾಗಿದೆ. ಹಣದೊಂದಿಗೆ ಓಡಿ ಹೋಗಿರುವ ಮಂಜುನಾಥನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ. ಸ್ಥಳೀಯ ಪೊಲೀಸರೂ ಶೋಧಕಾರ್ಯದಲ್ಲಿ ತೊಡಗಿದ್ದಾರೆ~ ಎಂದ ಲೋಕಾಯುಕ್ತದ ಉನ್ನತ ಮೂಲಗಳು`ಪ್ರಜಾವಾಣಿ~ಗೆ ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.