ಇಪ್ಪತ್ನಾಲ್ಕು ದಿನಗಳ ನಂತರ ಸಿಕ್ಕ ಶವ

7

ಇಪ್ಪತ್ನಾಲ್ಕು ದಿನಗಳ ನಂತರ ಸಿಕ್ಕ ಶವ

Published:
Updated:

ಕನಕಪುರ: ದನ ಮೇಯಿಸಲು ಕಾಡಿಗೆ ತೆರಳಿದ್ದ ವ್ಯಕ್ತಿ ಕಾಡಾನೆ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ 24 ದಿನಗಳ ಬಳಿಕ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಸಾತನೂರು ಹೋಬಳಿ ಚಿಲಂದವಾಡಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ಸೋರೆಕಾಯಿ ದೊಡ್ಡಿ ಗ್ರಾಮದ ಹೊಂಬಾಳೇಗೌಡ (67) ಉರುಫ್ ಚಿಕ್ಕಣ್ಣ ಎಂದು ಗುರುತಿಸಲಾಗಿದೆ.

ಮೃತರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

24 ದಿನಗಳ ಹಿಂದೆ ದನ ಮೇಯಿಸಲು ಕಾಡಿಗೆ ಹೋಗಿದ್ದ ಅವರು ವಾಪಸು ಮನೆಗೆ ಬಂದಿರಲಿಲ್ಲ. ಸುಮಾರು 8-10 ದಿನ ರೈತರು ಕಾಡಿನೆಲ್ಲೆಡೆ ಹುಡಕಿದ್ದರೂ ಸುಳಿವು ಸಿಕ್ಕಿರಲಿಲ್ಲ. ಈ ಕುರಿತು ಮನೆಯವರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಶುಕ್ರವಾರ ಮಧ್ಯಾಹ್ನ ಕಾಡಿನಲ್ಲಿ ದನ ಮೇಯಿಸಲು ತೆರಳಿದ್ದ ವ್ಯಕ್ತಿಗಳಿಗೆ ಮನುಷ್ಯನ ಅಸ್ತಿಪಂಜರ ಕಾಣಿಸಿದೆ. ತಕ್ಷಣವೇ ಅವರು ವಿಷಯನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮೃತರ ಸಂಬಂಧಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಹೊಂಬಾಳೇಗೌಡರ ಶವ ಎಂಬುದು ಪತ್ತೆಯಾಗಿದೆ.

ಕಾಡಾನೆಯು ದಾಳಿ ನಡೆಸಿದ್ದ ಸಂದರ್ಭದಲ್ಲಿ ಸುತ್ತಮುತ್ತಲಿನ ಮರಗಳನ್ನು ಮುರಿದು ಹಾಕಿದ್ದು ಸ್ಥಳದಲ್ಲಿ ಶವವನ್ನು ಎಳೆದಾಡಿದ ಕುರುಹು ಕಂಡು ಬಂದಿದೆ. ಹೊಂಬಾಳೇಗೌಡ ದನ ಮೇಯಿಸಲು ಒಬ್ಬಂಟಿಯಾಗಿ ನಿರ್ಜನ ಪ್ರದೇಶಕ್ಕೆ ಹೋಗಿದ್ದರಿಂದ ಪ್ರಕರಣ ಬೆಳಕಿಗೆ ಬರುವುದು ತಡವಾಗಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry