ಇಫೆಟ್ಟುಸಿ ಪೆಸ್ತೊ ಕೊಸರು ಪೆನ್ನೆ ಸವಿ

7
ರಸಸ್ವಾದ

ಇಫೆಟ್ಟುಸಿ ಪೆಸ್ತೊ ಕೊಸರು ಪೆನ್ನೆ ಸವಿ

Published:
Updated:
ಇಫೆಟ್ಟುಸಿ ಪೆಸ್ತೊ ಕೊಸರು ಪೆನ್ನೆ ಸವಿ

ರೆಸ್ಟೋರೆಂಟ್‌ ಲಾಂಜ್‌ನಲ್ಲಿರುವ ಎರಡು ದೊಡ್ಡ ಕಿಟಕಿಗಳ ನಡುವಿನ ಸ್ಥಳದಲ್ಲಿ ದಪ್ಪ ಈರುಳ್ಳಿ ಪೋಣಿಸಿ ಹಾರಮಾಡಿ ನೇತುಹಾಕಿದ್ದರು. ಅದರ ಎದುರುಗಡೆಯೇ ವಿವಿಧ ಬಗೆಯ ಖಾದ್ಯಗಳನ್ನು ಜೋಡಿಸಿಡಲಾಗಿತ್ತು. ಲಾಂಜ್‌ನ ಮತ್ತೊಂದು ಭಾಗದಲ್ಲಿ ಅಡುಗೆ ಸಿದ್ಧಪಡಿಸಲು ಬೇಕಿರುವ ಹಲವು ಬಗೆಯ ಸಾಮಗ್ರಿಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದರು. ಅದರ ಪಕ್ಕದಲ್ಲೇ ಹಬೆಯಂತ್ರವಿತ್ತು. ಇವೆಲ್ಲವನ್ನು ಕಣ್ತುಂಬಿಕೊಳ್ಳುತ್ತಿರುವ ವೇಳೆಗೆ ಇಟಾಲಿಯನ್‌ ಬಾಣಸಿಗ ಬಿಲ್‌ ಮಾರ್ಚೆಟ್ಟಿ ಬಂದರು.ಡೊಳ್ಳು ಹೊಟ್ಟೆಯ ಬಾಣಸಿಗ ಮಾರ್ಚೆಟ್ಟಿ, ಬಂದವರಿಗೆ ತಮ್ಮ ಕೈರುಚಿ ಉಣಬಡಿಸುವ ಉತ್ಸಾಹದಲ್ಲಿದ್ದರು. ಅಡುಗೆ ಸಾಮಗ್ರಿಗಳನ್ನು ಜೋಡಿಸಿಟ್ಟ ಜಾಗಕ್ಕೆ ಬಂದವರೇ ಮೊದಲು ಇಂಡಕ್ಷನ್‌ ಸ್ಟೌ ಚಾಲೂ ಮಾಡಿದರು. ಅವರ ಮನಸ್ಸಿನಲ್ಲಿ ಬಂದವರಿಗೆಲ್ಲಾ ‘ಇಫೆಟ್ಟುಸಿ ಪೆಸ್ಟೊ’ ಉಣಿಸಬೇಕು ಎಂಬ ಆಲೋಚನೆ ಇತ್ತು.ಬಂದವರೇ ಮೊದಲಿಗೆ ಟೇಬಲ್‌ ಮೇಲಿದ್ದ ದೊಡ್ಡ ಬೌಲ್‌ನಿಂದ ತಮ್ಮ ದೊಡ್ಡ ಮುಷ್ಟಿಯಲ್ಲಿ ಎರಡು ಹಿಡಿ ಬ್ಯಾಸಿಲ್‌ ಎಲೆಗಳನ್ನು ಮಿಕ್ಸಿಗೆ ಹಾಕಿದರು. ನಂತರ ಅದರ ಮೇಲೆ ಅರ್ಧ ಕಪ್‌ ಪೈನ್‌ ನಟ್ಸ್‌, ಮೂರು ಚಮಚ ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಆಲಿವ್‌ ಆಯಿಲ್ ಸುರಿದು ಮಿಕ್ಸಿಯ ಮುಚ್ಚಳ ಮುಚ್ಚಿ ಸ್ವಿಚ್‌ ಅದುಮಿದರು. ನೀರಿನ ಅಂಶ ಇಲ್ಲದೇ ಇದ್ದಿದ್ದರಿಂದ ಮಿಕ್ಸಿ ಒಳಗಿನ ಚಕ್ರ ತಿರುಗದೇ ಗೊರ್‌ ಎಂಬ ಶಬ್ದ ಹೊಮ್ಮಿಸಿತು.ಮುಖ ಕಿವುಚುತ್ತಾ ಮಿಕ್ಸಿಯನ್ನು ಸ್ವಿಚ್‌ ಆಫ್‌ ಮಾಡಿ ಮುಚ್ಚಳ ತೆರೆದು ಮತ್ತಷ್ಟು ಆಲಿವ್‌ ಎಣ್ಣೆ ಸುರಿದರು. ನಂತರ ಮಿಕ್ಸಿಯೊಳಗಿದ್ದ ಬ್ಯಾಸಿಲ್‌ ಎಲೆಯ ಮಿಶ್ರಣ ಸರಾಗವಾಗಿ ಸುತ್ತತೊಡಗಿತು. ಎರಡು ನಿಮಿಷದ ನಂತರ ಮರ್ಚೆಟ್ಟಿ ಒಂದು ಸ್ಪೂನ್‌ನಲ್ಲಿ ಪೇಸ್ಟ್‌ ತೆಗೆದುಕೊಂಡು ರುಚಿ ನೋಡಿದರು.ಚೆನ್ನಾಗಿದೆ ಅನಿಸಿದ ನಂತರ ಮಿಕ್ಸಿ ಆಫ್‌ ಮಾಡಿ ಇಂಡಕ್ಷನ್‌ ಕುಕ್ಕರ್‌ನ ಮೇಲಿದ್ದ ಪುಟ್ಟ ಬಾಣಲೆಯಲ್ಲಿ ಎರಡು ಬಗೆಯ ಚೀಸ್‌, ಸಾಸ್‌ ಜತೆಗೆ ಎರಡು ಪೆಗ್‌ ಬ್ರ್ಯಾಂಡಿ ಸುರಿದು ವಗ್ಗರಣೆ ಹಾಕಿಕೊಂಡರು. ಆನಂತರ ಪೆಸ್ಟೊ ತಯಾರಿಗೆ ಬೇಕಾದ ಇಫೆಟ್ಟುಸಿಯನ್ನು ಸುಮಾರು ಅರ್ಧ ಕೇಜಿಯಷ್ಟು ತೆಗೆದುಕೊಂಡು ಪಕ್ಕದಲ್ಲಿದ್ದ ಹಬೆಯಂತ್ರದೊಳಕ್ಕೆ ಸುರಿದ ಒಂದು ನಿಮಿಷದಲ್ಲಿಯೇ ಬೆಂದಿತು. ಅಲ್ಲಿಂದ ಬಾಣಲೆಗೆ ಸುರಿದರು.ರುಬ್ಬಿಟ್ಟುಕೊಂಡ ಬ್ಯಾಸಿಲ್‌ ಪೇಸ್ಟ್‌ ಮಿಶ್ರಣ ಮಾಡಿದರು. ರುಚಿ ನೋಡಿ, ಅದನ್ನು ಇಂಡಕ್ಷನ್‌ ಸ್ಟೌನಿಂದ ಕೆಳಗಿಟ್ಟು ಬೇರೆ ಖಾದ್ಯಗಳ ತಯಾರಿಕೆಗೆ ಅಣಿಯಾದರು. ಇಫೆಟ್ಟುಸಿ ಪೆಸ್ಟೋ ತಯಾರಿಸಿದ ನಂತರ ಫಟಾಫಟ್‌ ಅಂತ ಪೆನ್ನೆ ವೋಡ್ಕಾ ಹಾಗೂ ಪೆನ್ನೆ ಅರಾಬೈತಾ ಸಿದ್ಧಪಡಿಸಿ ರುಚಿ ನೋಡಲು ಆಹ್ವಾನವಿತ್ತರು.ಬ್ರ್ಯಾಂಡಿ, ವೋಡ್ಕಾ ಸುರಿದು ತಯಾರಿಸಿದ್ದ ಮೂರು ಬಗೆಯ ಪೆನ್ನೆಯನ್ನು ಎಲ್ಲರೂ ಸವಿಯತೊಡಗಿದರು. ಬ್ಯಾಸಿಲ್‌ ಎಲೆಯಿಂದ ತಯಾರಿಸಿದ್ದ ಇಫೆಟ್ಟುಸಿ ಪೆಸ್ಟೊ ಬಾಯಿಗಿಟ್ಟುಕೊಂಡಾಗ ವಿಷವೇ ನಾಲಗೆ ಮೇಲೆ ಬಿದ್ದಂತೆ. ರುಚಿಯ ಮೊಗ್ಗುಗಳೆಲ್ಲವೂ ಅಲ್ಲಲ್ಲೇ ಮುದುರಿದವು. ಅಚ್ಚರಿಯೆಂದರೆ, ಇಟಾಲಿಯನ್‌ ಆಹಾರದ ಅಭ್ಯಾಸವಿದ್ದವರು ಇಫೆಟ್ಟುಸಿ ಪೆಸ್ಟೊ ರುಚಿ ಸವಿಯುತ್ತಿದ್ದರು.ಇಫೆಟ್ಟುಸಿಪೆಸ್ಟೊ ಇಷ್ಟವಾಗಲಿಲ್ಲವಾದ್ದರಿಂದ ಪಕ್ಕಕ್ಕಿಟ್ಟು ವೋಡ್ಕಾ ಪೆನ್ನೆ ರುಚಿ ನೋಡಿದ್ದಾಯಿತು. ಅದರ ರುಚಿ ಚೆನ್ನಾಗಿತ್ತು.

ಅಂದಹಾಗೆ, ಕೋರಮಂಗಲದಲ್ಲಿರುವ ಸ್ಪಗೆಟಿ ಕಿಚನ್‌ ಇಟಾಲಿಯನ್ ಆಹಾರ ಪ್ರಿಯರಿಗಾಗಿ ‘ಗಸ್ಟೋ ಡಿ ಇಟಾಲಿಯಾ’ ಎಂಬ ಬಫೆ ಪ್ರಾರಂಭಿಸಿದೆ. ಇದರ ಪ್ರಾರಂಭೋತ್ಸವದ ಅಂಗವಾಗಿ ಮಾಸ್ಟರ್‌ ಶೆಫ್‌ ಬಿಲ್‌ ಮಾರ್ಚೆಟ್ಟಿ ಬಂದಿದ್ದರು. ಜತೆಗೆ ಲೈವ್ ಆಗಿ ಕೆಲವು ಖಾದ್ಯಗಳನ್ನು ತಯಾರಿಸಿ ತಮ್ಮ ಕೈರುಚಿ ಉಣಬಡಿಸಿದರು.ಚಿಕನ್, ಫಿಶ್‌ ಸ್ಟಾರ್ಟರ್ಗಳ ರುಚಿ ತುಂಬಾ ಚೆನ್ನಾಗಿದೆ. ಅಪ್ಪಟ ಇಟಾಲಿಯನ್‌ ಶೈಲಿಯ ಖಾದ್ಯಗಳನ್ನು ಉಣಬಡಿಸಲು ಹೆಸರುವಾಸಿಯಾಗಿರುವ ಸ್ಪಗೆಟಿ ಕಿಚನ್‌ ಬಫೆಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ಪಿಜ್ಜಾ, ಪಾಸ್ತಾ, ಬಾಯಲ್ಲಿ ನೀರೂರಿಸುವ ಸ್ಟಾರ್ಟರ್ಗಳು, ಸಲಾಡ್‌ ಮತ್ತು ಡೆಸರ್ಟ್‌ಗಳನ್ನು ನೀಡುತ್ತದೆ.  ಸಾಕೆನಿಸುವಷ್ಟು ಇಟಾಲಿಯನ್‌ ಖಾದ್ಯಗಳನ್ನು ಸವಿಯುವ ಅವಕಾಶ ಗ್ರಾಹಕರಿಗೆ ಲಭ್ಯ.ಇಟಾಲಿಯನ್‌ ಪಾಸ್ತಾ, ಪಿಜ್ಜಾಗಳನ್ನು ಇಷ್ಟಪಡುವವರು ಕೋರಮಂಗಲದಲ್ಲಿರುವ ಸ್ಪಗೆಟಿ ಕಿಚನ್‌ನಲ್ಲಿ ತಮ್ಮಿಷ್ಟದ ಖಾದ್ಯಗಳನ್ನು ಸವಿಯಬಹುದು. ಈ ಮಾದರಿಯ ಬಫೆ ಇರುವುದು ಕೋರಮಂಗದಲ್ಲಿರುವ ಸ್ಪಗೆಟಿ ಕಿಚನ್‌ನಲ್ಲಿ ಮಾತ್ರ. ಅನಿಯಮಿತವಾಗಿ ಬಡಿಸುವ ವೆಜ್‌ ಬಫೆ ಬೆಲೆ ₨399, ನಾನ್‌ವೆಜ್‌ ಬಫೆ ಬೆಲೆ ₨499.ಸ್ಥಳ: ಸ್ಪಗೆಟಿ ಕಿಚನ್‌, ಕೋರಮಂಗಲ. ಟೇಬಲ್ ಕಾಯ್ದಿರಿಸಲು: 4116 0500, 4099 0500.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry