ಇಬ್ಬರು ಆರೋಪಿಗಳ ಬಂಧನ

7
ಮಾಜಿ ಭಾರತ ಸುಂದರಿಯಿಂದ ಚಿನ್ನಾಭರಣ ದರೋಡೆ

ಇಬ್ಬರು ಆರೋಪಿಗಳ ಬಂಧನ

Published:
Updated:

ಬೆಂಗಳೂರು: ಮಾಜಿ ಭಾರತ ಸುಂದರಿ ನಂದಿನಿ ಆರ್.ಕುಮಾರ್ ಅವರನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಜೆ.ಸಿ.ನಗರ ಪೊಲೀಸರು ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಬಿಹಾರ ಮೂಲದ ಪ್ರದೀಪ್ ಉರುಫ್ ಸುರೇಶ್ (24) ಮತ್ತು ಉತ್ತರ ಪ್ರದೇಶದ ಅಜಯ್‌ಕುಮಾರ್ ಪಾಸ್ವಾನ್ ಅಲಿಯಾಸ್ ಅಜಯ್ (19) ಬಂಧಿತರು.ಬೆನ್ಸನ್‌ಟೌನ್‌ನಲ್ಲಿ ಒಬ್ಬಂಟಿಯಾಗಿ ವಾಸವಾಗಿರುವ ನಂದಿನಿ ಅವರು ಪ್ರದೀಪ್ ಮತ್ತು ಅಜಯ್‌ನನ್ನು ನವೆಂಬರ್‌ನಲ್ಲಿ ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು. ಆರೋಪಿಗಳು ಸುಳ್ಳು ವೈಯಕ್ತಿಕ ವಿವರ ನೀಡಿ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಆರೋಪಿಗಳು ಡಿ.14ರಂದು ನಂದಿನಿ ಅವರ ಮೇಲೆ ಹಲ್ಲೆ ನಡೆಸಿ ಮತ್ತು ಕೈ ಕಾಲು ಕಟ್ಟಿ ಹಾಕಿ, 650 ಗ್ರಾಂ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ದೋಚಿಕೊಂಡು ಮುಂಬೈಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳ ಬಗ್ಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಪ್ರದೀಪ್, ಆಕೆಯ ಜತೆ ನಿರಂತರ ಸಂಪರ್ಕದಲ್ಲಿದ್ದ. ಆ ಯುವತಿ ನೀಡಿದ ಮಾಹಿತಿ ಮತ್ತು ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳು ಮುಂಬೈನಲ್ಲಿರುವುದನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ದರೋಡೆಯಾಗಿದ್ದ ಆಭರಣಗಳನ್ನು ನಂದಿನಿ ಅವರಿಗೆ ಶನಿವಾರ ಹಸ್ತಾಂತರಿಸಿದರು.ಉತ್ತರ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ತನ್ವೀರ್ ಅಹಮ್ಮದ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry