ಗುರುವಾರ , ಮಾರ್ಚ್ 4, 2021
30 °C
ಮನೆಪಾಠದ ವಿದ್ಯಾರ್ಥಿನಿ ಅಪಹರಣ ಸುಖಾಂತ್ಯ

ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಮನೆಪಾಠಕ್ಕೆ ಬರುತ್ತಿದ್ದ ವಿದ್ಯಾರ್ಥಿನಿ­ಯನ್ನು ಹಣಕ್ಕಾಗಿ ಅಪಹರಣ ಮಾಡಿದ್ದ ನಾಗ­ಭೂಷಣ್‌­ರಾವ್‌ (26) ಮತ್ತು ಆತನ ಪ್ರೇಯಸಿ ಐಶ್ವರ್ಯಾ (20) ಎಂಬುವರನ್ನು ರಾಜಾಜಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಜಯನಗರದ ಬಿ.ಕೆ.ಎಸ್‌. ಕಾಲೇಜಿ­ನಲ್ಲಿ ದ್ವಿತೀಯ ವರ್ಷದ ಬಿ.ಕಾಂ ಓದು­ತ್ತಿರುವ ರಾಜಾಜಿನಗರ ಎರಡನೇ ಹಂತದ ನಿವಾಸಿ ಐಶ್ವರ್ಯಾ, ಎರಡು ವರ್ಷದಿಂದ ಮನೆಪಾಠ ನಡೆಸುತ್ತಿದ್ದಾಳೆ. ಒಂದು ವರ್ಷದಿಂದ ಈಕೆಯ ಬಳಿ ಮನೆಪಾಠಕ್ಕೆ ಬರುತ್ತಿದ್ದ ರಾಜಾಜಿ­ನಗರದ ಅಸಮ್‌ಷನ್‌ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಪವಿತ್ರಾ (14) ಎಂಬಾಕೆಯನ್ನು ಆರೋಪಿಗಳು ಬುಧವಾರ ಬೆಳಿಗ್ಗೆ ಅಪಹರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬುಧವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಪವಿತ್ರಾ ಮನೆಪಾಠಕ್ಕೆಂದು ಮನೆಯಿಂದ ಹೊರಟಿದ್ದಾಳೆ. ಮಾರ್ಗ ಮಧ್ಯೆ ಐಶ್ವರ್ಯಾಳ ಬೈಕ್‌ನಲ್ಲಿ  ಬಂದಿ­ರುವ ನಾಗಭೂಷಣ್‌, ಐಶ್ವರ್ಯಾ ಮನೆಗೆ ಬಿಡುವುದಾಗಿ ನಂಬಿಸಿ ಬಾಲಕಿ­ಯನ್ನು ಬೈಕ್‌ಗೆ ಹತ್ತಿಸಿಕೊಂಡಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ಶ್ರೀನಗರದ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಕೂಡಿಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.ಪ್ರತಿದಿನ ಬೆಳಿಗ್ಗೆ 8.30ರ ಹೊತ್ತಿಗೆ ಮನೆಪಾಠದಿಂದ ವಾಪಸ್‌ ಬರುತ್ತಿದ್ದ ಮಗಳು 10 ಗಂಟೆಯಾದರೂ ಮನೆಗೆ ಬಾರದೆ ಇದ್ದಾಗ ಅನುಮಾನಗೊಂಡ ಬಾಲ­ಕಿಯ ತಾಯಿ ರತ್ನಮ್ಮ, ಐಶ್ವರ್ಯಾ ಮನೆಗೆ ಹೋಗಿ ಮಗಳ ಬಗ್ಗೆ ವಿಚಾ­ರಿಸಿದ್ದಾರೆ. ಆದರೆ, ಪವಿತ್ರಾ ಮನೆ­ಪಾಠಕ್ಕೆ ಬಂದಿಲ್ಲ ಎಂದು ಹೇಳಿರುವ ಐಶ್ವರ್ಯಾ, ರತ್ನಮ್ಮ ಅವರೊಂದಿಗೆ ಸೇರಿ ಆಕೆಯನ್ನು ಹುಡುಕುವ ನಾಟಕ­ವಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಮಧ್ಯೆ ಕಾಯಿನ್‌ಬೂತ್‌ನಿಂದ ಪವಿತ್ರಾ ತಂದೆ ಸುರೇಶ್‌ ಅವರಿಗೆ ಕರೆ ಮಾಡಿರುವ ನಾಗಭೂಷಣ್‌, ಬಾಲಕಿಯ ಬಿಡುಗಡೆಗೆ ₨ 25 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಮಗಳ ಅಪಹರಣದ ಬಗ್ಗೆ ಸುರೇಶ್‌ ಠಾಣೆಗೆ ದೂರು ನೀಡಿದರು. ಈ ಬಗ್ಗೆ ಐಶ್ವರ್ಯಾ ಅವರ ವಿಚಾರಣೆ ನಡೆಸಿದಾಗ ಅಪಹ­ರಣ ಪ್ರಕರಣ ಬೆಳ­ಕಿಗೆ ಬಂತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮೊದಲಿಗೆ ಹಣ ತೆಗೆದುಕೊಂಡು ಪೀಣ್ಯ ಬಳಿ ಬರುವಂತೆ ಬಾಲಕಿಯ ಪೋಷಕರಿಗೆ ತಿಳಿಸಿದ್ದ ನಾಗಭೂಷಣ್‌, ಬಳಿಕ ನೈಸ್‌ ರಸ್ತೆಯ ಬಳಿ ಬರುವಂತೆ ತಿಳಿಸಿದ್ದ. ಕೊನೆಗೆ ಬನಶಂಕರಿ ಬಳಿ ಬರುವಂತೆ ತಿಳಿಸಿದ್ದ ಆತ ಬಾಲಕಿಯನ್ನು ನೈಸ್‌ ರಸ್ತೆಯಲ್ಲಿ ಬಿಟ್ಟು ಪರಾರಿ­ಯಾ­ಗಲು ಯತ್ನಿಸಿದ್ದ. ಮೂರು ತಂಡಗಳಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ಎರಡು ವರ್ಷದ ಹಿಂದೆ ಪರಿಚಿತ­ರಾಗಿದ್ದ ಐಶ್ವರ್ಯಾ ಮತ್ತು ನಾಗಭೂ­ಷಣ್‌ ಪರಸ್ಪರ ಪ್ರೀತಿಸುತ್ತಿದ್ದಾರೆ. ನಾಗಭೂಷಣ್‌ ನಿರುದ್ಯೋಗಿ­ಯಾಗಿದ್ದು, ಮನೆ ಕಟ್ಟಿಸಲು ಮಾಡಿದ್ದ ಸಾಲವನ್ನು ತೀರಿಸಲು ಹಣದ ಅವಶ್ಯಕತೆ ಇದ್ದುದರಿಂದ ಈ ಕೃತ್ಯಕ್ಕೆ ಮುಂದಾಗಿ­ದ್ದಾಗಿ ಹೇಳಿಕೆ ನೀಡಿದ್ದಾನೆ. ಬಾಲಕಿಯ ತಂದೆ ಸುರೇಶ್‌ ರಾಜಾಜಿನಗರದಲ್ಲಿ ಹೋಟೆಲ್‌ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಎಂಎಸ್‌ನಿಂದ ಸಿಕ್ಕ ಸುಳಿವು

‘ಬಾಲಕಿಯನ್ನು ಬನಶಂಕರಿ­ಯಲ್ಲಿ ಕೂಡಿ ಹಾಕಿಕೊಂಡಿದ್ದ ನಾಗ­ಭೂಷಣ್‌, ಕ್ಷಣ ಕ್ಷಣಕ್ಕೂ ಐಶ್ವರ್ಯಾ ಮೊಬೈಲ್‌ಗೆ ಎಸ್‌ಎಂಎಸ್‌ ಕಳಿಸುತ್ತಿದ್ದ. ಪ್ರಕರಣದ ತನಿಖೆ ವೇಳೆ ಐಶ್ವರ್ಯಾ ಮೊಬೈಲ್‌ ತಪಾಸಣೆ ನಡೆಸಿದಾಗ ಕೃತ್ಯದ ಬಗ್ಗೆ ಆತ ಕಳಿಸಿದ್ದ ಎಸ್‌ಎಂಎಸ್‌ಗಳು ಸಿಕ್ಕವು. ಇದರಿಂದ ಕೃತ್ಯದಲ್ಲಿ ಐಶ್ವರ್ಯಾ ಭಾಗಿಯಾಗಿರುವುದು ತಿಳಿಯಿತು’ ಎಂದು ಉತ್ತರ ವಿಭಾ­ಗದ ಡಿಸಿಪಿ ಸಂದೀಪ್‌ ಪಾಟೀಲ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.