ಇಬ್ಬರು ಭಾಗೀರತಿಯರು

7

ಇಬ್ಬರು ಭಾಗೀರತಿಯರು

Published:
Updated:

ತಮ್ಮ ಸಿನಿಮಾಗಳು ಕಲಾತ್ಮಕ ಎನಿಸಿಕೊಂಡ ಸಿನಿಮಾಗಳಿಗಿಂತ ವೇಗವಾಗಿದ್ದು, ನಿರ್ಮಾಣ ಬೇರೆ ರೀತಿಯಲ್ಲಿದ್ದರೂ ಯಾರೋ ಅವುಗಳನ್ನು ಕಲಾತ್ಮಕ ಸಿನಿಮಾ ಪಟ್ಟಿಗೆ ಸೇರಿಸುತ್ತಾರೆಂಬುದು ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಪಾಲಿಗೆ ವಿಪರ್ಯಾಸದಂತೆ ಕಾಣುತ್ತಿದೆ.ತಮ್ಮ ಸಿನಿಮಾದ ಪತ್ರಿಕಾಗೋಷ್ಠಿ ಹೋಟೆಲೊಂದರಲ್ಲಿ ನಡೆಯುತ್ತಿರುವುದು ಇದೇ ಮೊದಲು ಎಂದು ಖುಷಿಪಟ್ಟ ಅವರು, ಅದಕ್ಕೆ ಕಮರ್ಷಿಯಲ್ ಚಿತ್ರಗಳ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ತಮ್ಮಂದಿಗೆ ಕೈಜೋಡಿಸಿರುವುದೇ ಕಾರಣ ಎಂದರು. `ಭಾಗೀರತಿ~ ಚಿತ್ರದ ಚಿತ್ರೀಕರಣ ಮುಗಿಸಿರುವ ಬರಗೂರು ಸಿನಿಮಾ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟರು.“ಐದಾರು ವರ್ಷಗಳ ಹಿಂದೆ ಕಂಡ ಕನಸು `ಕೆರೆಗೆ ಹಾರ~ ಜನಪದ ಕಥನವನ್ನು ಸಿನಿಮಾ ಮಾಡುವುದು. ಆ ಮೂಲ ಕತೆಯನ್ನು ಹಾಗೆಯೇ ಸಿನಿಮಾ ಮಾಡಿದರೆ ಅದು ಕೇವಲ 40 ನಿಮಿಷದ ಸಿನಿಮಾ ಆಗಬಹುದು. ಹಾಗಾಗಿ ಕತೆಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾ ರೂಪಿಸಿರುವೆ.

 

ಆದರೆ ಮೂಲ ಆಶಯಕ್ಕೆ ಎಲ್ಲಿಯೂ ಧಕ್ಕೆ ಬಂದಿಲ್ಲ. ಕೆರೆ ಕಟ್ಟಲು ಪ್ರೇರಣೆಯಾಗುವ ಭಾಗೀರತಿ ತನ್ನ ಬದುಕನ್ನು ಅಲ್ಲಿಯೇ ಅಂತ್ಯಗೊಳಿಸಿಕೊಳ್ಳುವುದು ವ್ಯಂಗ್ಯ ಎನಿಸುತ್ತದೆ. ಕೆರೆಯು ಮದುವೆ, ಸಾವು, ಸಂಭ್ರಮ, ಸಂಕಟ, ಸದಾಶಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.`ಪ್ರಬುದ್ಧ ಕರ್ನಾಟಕ~ ಪತ್ರಿಕೆಯಲ್ಲಿ ಮೊದಲು ಪ್ರಕಟವಾದ ಈ ಕಥನವನ್ನು ನಂತರ ಹಲವರು ಹಲವು ರೀತಿಯಲ್ಲಿ ಬರೆದರು. ಆದರೆ ನಾನು ಇಬ್ಬರು ಭಾಗೀರತಿಯರನ್ನು ಸೃಷ್ಟಿಸಿ ತಳಮಳಗಳ ನಡುವೆ ಕತೆ ಹರಿಯುವಂತೆ ಮಾಡಿರುವೆ.ಪತಿ ಸಹಗಮನ ಇದರ ವಿಶೇಷ. ಚನ್ನಪಟ್ಟಣದ ಸಮೀಪದ ಇರುವ ವಿರೂಪಾಕ್ಷಿಪುರ ಮತ್ತು ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಸ್ತ್ರೀಪರ ಧೋರಣೆಯೂ ಚಿತ್ರದಲ್ಲಿದೆ.ಇದರೊಂದಿಗೆ ಜೀವಜಲ ಮತ್ತು ಯುದ್ಧ ಮುಖಾಮುಖಿಯಾಗುವುದನ್ನೂ ಕೂಡ ತೋರಿಸಿದ್ದೇನೆ. ಸಿನಿಮಾದಲ್ಲಿ ನಟಿಸಿರುವ ಹಿರಿಯ ಕಿರಿಯ ಕಲಾವಿದರ ತಂಡ ಪಾತ್ರಗಳಿಗೆ ತಮ್ಮನ್ನು ಅರ್ಪಿಸಿಕೊಂಡಿದೆ” ಎಂದು ಬರಗೂರರು ಹೇಳಿದರು. ನಿರ್ಮಾಪಕ ಶ್ರೀನಿವಾಸ್ ಅವರಿಗೆ ಬರಗೂರರು ಸಿನಿಮಾ ಮುಗಿಸಿದ ವೇಗ ಇಷ್ಟವಾಗಿದೆ. ಅವರು ಒಪ್ಪಿದರೆ ವರ್ಷಕ್ಕೆ ನಾಲ್ಕು ಸಿನಿಮಾ ನಿರ್ಮಿಸಲು ತಾವು ಸಿದ್ಧ ಎಂದು ಅವರು ಅತ್ಯುತ್ಸಾಹದಿಂದ ಘೋಷಿಸಿದರು.ನವೆಂಬರ್ 1ರಂದು ಹುಬ್ಬಳ್ಳಿಯಲ್ಲಿ ರಾಜ್ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿರುವ ಸಂದರ್ಭದಲ್ಲಿ ಸಿನಿಮಾದ ಆಡಿಯೋ ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದ ಶ್ರೀನಿವಾಸ್, ಬರಗೂರರ ವೃತ್ತಿಪರತೆಯನ್ನು ಹೊಗಳಿದರು. ಮಲ್ಲನಗೌಡನ ಪಾತ್ರ ಮಾಡಿರುವ ಹಿರಿಯ ನಟ ಶ್ರೀನಾಥ್ ತಮ್ಮ ತಂದೆ ತೀರಿಕೊಂಡರೂ ಪಾತ್ರದ ಆಕರ್ಷಣೆಯಿಂದ ತಾವು ಬಂದು ನಟಿಸಿದ್ದಾಗಿ ಹೇಳಿದರು. ಇಂಥ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದಕ್ಕೆ ಬರಗೂರರಿಗೆ ವಂದಿಸಿದರು. ಹೇಮಾ ಚೌಧರಿ ಅವರಿಗೂ ತಮ್ಮಂಥ ಕಲಾವಿದರನ್ನು ಬರಗೂರು ಗುರುತಿಸಿದ್ದು ಅಚ್ಚರಿ ಮೂಡಿಸಿದೆ.ತಾರಾ ಅವರಿಗೆ ಸಿನಿಮಾದಲ್ಲಿ ನಟಿಸಲು ಕರೆ ಬಂದಾಗ ತಾವೇ ಭಾಗೀರತಿ ಎನಿಸಿತ್ತಂತೆ. ಆದರೆ ಭಾವನಾ ಆ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ತಿಳಿದಾಗ ನಿರಾಸೆಯಾಯಿತಂತೆ. ಆದರೂ ಬರಗೂರು ತಮ್ಮ ಪಾತ್ರವನ್ನೂ ಭಾಗೀರತಿಯ ಮಟ್ಟಕ್ಕೆ ರೂಪಿಸಿರುವುದಾಗಿ ಹೇಳಿದಾಗ ಒಪ್ಪಿಕೊಂಡು ನಟಿಸಿದರಂತೆ.ನಟ ರವಿಶಂಕರ್ ಅವರು ಮೊದಲಿಗೆ ಬರಗೂರು ರಾಮಚಂದ್ರಪ್ಪ ಅವರು ತಮ್ಮನ್ನು ಹಾಡಲು ಕರೆದಿದ್ದಕ್ಕೆ ಖುಷಿಪಟ್ಟರು. ಜೊತೆಗೆ ನಟಿಸಲು ಅವಕಾಶ ನೀಡಿ ಎಂಬ ಕೋರಿಕೆಯನ್ನು ಮನ್ನಿಸಿ ತಕ್ಷಣ ರಾಜನ ಪಾತ್ರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು.`ಬರಗೂರರು ನನ್ನ ಬಗ್ಗೆ ಇಟ್ಟ ಭರವಸೆ ಕಂಡು ಖುಷಿಯಾಗುತ್ತಿದೆ. ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವೆ~ ಎಂದು ಭಾವನಾ ಮಾತನ್ನು ತುಸು ತಡೆದರು. `ಬರಗೂರರ ಎದುರು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಅಭಿನಯಿಸುವಾಗ ಸಂಕೋಚವಾಗುತ್ತಿತ್ತು~ ಎಂದು ಮತ್ತೆ ಸಂಕೋಚದಿಂದಲೇ ಹೇಳಿಕೊಂಡ ಭಾವನಾ, ನಿರ್ದೇಶರಿಗೆ ಕೇವಲ ಧನ್ಯವಾದವನ್ನಷ್ಟೇ ಅರ್ಪಿಸಲಾಗುತ್ತಿಲ್ಲ ಎಂದು ಹೊಗಳಿದರು.ಸಂಕಲನಕಾರ ಸುರೇಶ್ ಅರಸ್, ಛಾಯಾಗ್ರಾಹಕ ಹರೀಶ್ ಎನ್.ಸೊಂಡೆಕೊಪ್ಪ, ನಟಿಯರಾದ ಹರಿಣಿ, ರಾಧಾ, ವತ್ಸಲಾ ಮೋಹನ್, ನಟ ವೆಂಕಟರಾಜು ಗೋಷ್ಠಿಯಲ್ಲಿ ಇದ್ದರು.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry