ಗುರುವಾರ , ಜನವರಿ 23, 2020
28 °C
‘ಲಿಟ್ಲ್ ಇಂಡಿಯಾ’ ದೊಂಬಿ ಪ್ರಕರಣ

ಇಬ್ಬರು ಭಾರತೀಯರ ಪೊಲೀಸ್‌ ವಶ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಇಲ್ಲಿನ ‘ಲಿಟ್ಲ್ ಇಂಡಿಯಾ’ ಪ್ರದೇಶದಲ್ಲಿ ನಡೆದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಭಾರತ ಮೂಲದ ಇಬ್ಬರು ಯುವಕರನ್ನು ಇನ್ನೂ ಒಂದು ವಾರಗಳ ಕಾಲ ಪೊಲೀಸ್‌ ವಶದಲ್ಲಿ ಮುಂದುವರಿಸಲು ಕೋರ್ಟ್‌ ಬುಧವಾರ ಆದೇಶಿಸಿದೆ.ಸರ್ಕಾರಿ ವಕೀಲರ ಮನವಿಯನ್ನು ಮಾನ್ಯ ಮಾಡಿದ ಜಿಲ್ಲಾ ನ್ಯಾಯಾಲಯವು ಆರೋಪಿಗಳನ್ನು  ಹೆಚ್ಚಿನ ತನಿಖೆಗಾಗಿ ಪೊಲೀಸರ ವಶದಲ್ಲಿ ಮುಂದುವರಿಸಲು ಒಪ್ಪಿ, ವಿಚಾರಣೆ ಯನ್ನು ಇದೇ 23ಕ್ಕೆ ಮುಂದೂಡಿದೆ ಎಂದು ದೈನಿಕವೊಂದು ವರದಿ ಮಾಡಿದೆ.ಪೊಲೀಸರ ವಶದ ಅವಧಿಯನ್ನು ವಿಸ್ತರಿಸಿರುವ ಮೂರ್ತಿ ಕಬಿಲ್‌ದೇವ್‌ (24), ಸತ್ಯಮೂರ್ತಿ ಶಿವರಾಮನ್‌ (36) ಅವರ ವಿರುದ್ಧ ಕಾನೂನು ಬಾಹಿರವಾಗಿ ಗುಂಪು ಸೇರಿದ ಆರೋಪ ಹೊರಿಸಲಾಗಿದೆ.ಇಂತಹದ್ದೇ ಆರೋಪಕ್ಕೆ ಗುರಿಯಾಗಿದ್ದ ರಾಜೇಂದ್ರನ್‌ ರಾಜನ್‌ (22) ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿದೆ.ದೊಂಬಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿರುವ 28 ಕಾರ್ಮಿಕರಲ್ಲಿ 26 ಜನರ ಪರವಾಗಿ ವಕೀಲರನ್ನು ನಿಯೋಜಿಸುವುದಾಗಿ ಕಾನೂನು ಸೊಸೈಟಿ ಹೇಳಿದೆ.ಗಲಭೆಯಲ್ಲಿ  ಭಾಗಿಯಾದ ಆಪಾದನೆ ಎದುರಿಸುತ್ತಿರುವ ಇನ್ನಿತರ 52 ಭಾರತೀಯರು ಮತ್ತು ಒಬ್ಬ ಬಾಂಗ್ಲಾದೇಶದ ನಾಗರಿಕನನ್ನು ತಾಯ್ನಾಡಿಗೆ ಗಡೀಪಾರು ಮಾಡಲು ಆದೇಶಿಸಲಾಗಿದೆ.

ಹಿನ್ನೆಲೆ:

ಭಾರತ ಮೂಲದವರೇ ಹೆಚ್ಚಾಗಿ ನೆಲೆಸಿರುವ ‘ಲಿಟ್ಲ್ ಇಂಡಿಯಾ’ ಪ್ರದೇಶದಲ್ಲಿ ಪಾದಚಾರಿಯೊಬ್ಬರಿಗೆ ಖಾಸಗಿ ಬಸ್‌ವೊಂದು ಡಿ. 8ರಂದು ಡಿಕ್ಕಿ ಹೊಡೆಯಿತು. ಇದರಿಂದಾಗಿ ಈ ಪ್ರದೇಶದಲ್ಲಿ ಗಲಭೆ ಆರಂಭವಾಯಿತು. 400ಕ್ಕೂ ಹೆಚ್ಚು ಜನರು ಈ ಗಲಭೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದ್ದು, ದೊಂಬಿಯಿಂದ 39 ಪೊಲೀಸರು ಗಾಯಗೊಂಡಿದ್ದರು. 16 ಪೊಲೀಸ್‌ ವಾಹನ ಸೇರಿದಂತೆ 25 ವಾಹನಗಳು ಗಲಭೆಯಿಂದ ಜಖಂ ಗೊಂಡಿವೆ.ಆದೇಶ ಒಪ್ಪಲಾಗದು

ಈ ಮಧ್ಯೆ, ಏಕಪಕ್ಷೀಯವಾಗಿ ಹೊರಡಿಸಿರುವ ಗಡೀಪಾರು ಆದೇಶ ಒಪ್ಪಲಾಗದು ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಹೇಳಿದೆ.

ಆರೋಪಿಗಳ ವಿರುದ್ಧ ಆಪಾದನೆ ಬಗ್ಗೆ ವಿಚಾರಣೆ ನಡೆಸದೆ ಈ ರೀತಿ ಆದೇಶಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ತನಿಖೆ ನಡೆಸ ಬಕೆಂದು ‘ವರ್ಕ್‌ ಫೇರ್‌ ಸಿಂಗಪುರ್‌’ ಎಂಬ ಎನ್‌ಜಿಒ ಒತ್ತಾಯಿಸಿದೆ.

ಪ್ರತಿಕ್ರಿಯಿಸಿ (+)