ಇಬ್ಬರು ಯುವಕರ ಕೊಲೆ

7

ಇಬ್ಬರು ಯುವಕರ ಕೊಲೆ

Published:
Updated:

ಚನ್ನಮ್ಮನ ಕಿತ್ತೂರು: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವಕರನ್ನು ಕೊಲೆ ಮಾಡಿ, ಶವಗಳನ್ನು ಸುಟ್ಟು ಹಾಕಲು ಯತ್ನಿಸಿರುವ ಘಟನೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಫೆ. 9ರಂದು ಪರಸನಟ್ಟಿಯ ವಳಸಂಗ ಎಂಬುವವರಿಗೆ ಸೇರಿದ ನೀಲಗಿರಿ ಗಿಡಗಳ ಮಧ್ಯೆ ಸುಮಾರು 20ರಿಂದ 25 ವಯಸ್ಸಿನ ಅಪರಿಚಿತ ಯುವಕನನ್ನು ಕೊಲೆ ಮಾಡಲಾಗಿದೆ. ಪುರಾವೆ ನಾಶಪಡಿಸುವ ಉದ್ದೇಶದಿಂದ ಕೊಲೆಗಾರರು ಶವ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಆದರೆ ಶವ ಪೂರ್ತಿಯಾಗಿ ಸುಟ್ಟಿಲ್ಲ. ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಐದೂವರೆ ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿಗೆಂಪು ಮೈಬಣ್ಣವಿದ್ದು, ಕೆಂಪು ಬಣ್ಣದ ಟೀ ಶರ್ಟ್, ಆಕಾಶ ನೀಲಿ ಬಣ್ಣದ ಬರ್ಮುಡಾ ಶವದ ಮೇಲಿದೆ. ಕೊರಳಲ್ಲಿ ಬೆಳ್ಳಿಯನ್ನು ಹೋಲುವ ಬಣ್ಣದ ಚೈನ್ ಇದ್ದು, ಅದರಲ್ಲಿ ಸಾಯಿಬಾಬಾ ಮತ್ತು ಗಣಪತಿಯ ಲಾಕೇಟುಗಳಿವೆ. ಕೈ ಬೆರಳಿಗೆ ಬೆಳ್ಳಿ ನಮೂನೆಯ ಉಂಗುರವಿದೆ. ಕೈಯಲ್ಲಿ ಹಾಕಲಾಗಿದ್ದ ಕಡಗ ಸುಟ್ಟು ಕರಕಲಾಗಿದೆ. ಕಾಲಲ್ಲಿ ಸ್ಯಾಂಡಲ್ ಚಪ್ಪಲಿಗಳಿವೆ.

ಇನ್ನೊಂದು ಘಟನೆಯಲ್ಲಿ ಫೆ. 11ರಂದು ರಾತ್ರಿ ತಿಮ್ಮಾಪುರ ಹಾಗೂ ಬಸಾಪುರ ಮಾರ್ಗ ಮಧ್ಯೆ  ಸುಮಾರು 20ರಿಂದ 25 ವಯಸ್ಸಿನ ಮತ್ತೊಬ್ಬನ ಶವ ಸಿಕ್ಕಿದೆ. ಈ ಶವವನ್ನೂ ಸಹ ಅರೆಬರೆ ಸುಟ್ಟು ಹಾಕಲಾಗಿದೆ. ಮುಖ ಗುರುತು ಹಿಡಿಯಲಾರದಷ್ಟು ವಿರೂಪಗೊಂಡಿದೆ. ಬಲ ಮುಂಗೈಯಲ್ಲಿ ಕೇಸರಿ ದಾರ ಇದೆ. ಶವದ ಮೇಲೆ ಖಾಕಿ ಪ್ಯಾಂಟ್, ಬೂದುಬಣ್ಣದ ಅಂಗಿ ಇದೆ. ಇವೆರಡೂ ಶವಗಳ ಕುರಿತು ವಿವರಗಳಿಗೆ ಕಿತ್ತೂರು ಪೊಲೀಸ್ ಠಾಣೆ ಅಥವಾ ದೂರವಾಣಿ ಸಂಖ್ಯೆ 08288-286233 ಸಂಪರ್ಕಿಸಲು ಕೋರಲಾಗಿದೆ.

ಜನತೆಯ ಆತಂಕ: ಎರಡು ದಿನಗಳ ಅವಧಿಯಲ್ಲಿ ಇಬ್ಬರು ಯುವಕರ ಕಗ್ಗೊಲೆ ಮಾಡಿ, ಶವಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದ ದುಷ್ಕರ್ಮಿಗಳ ಕುಕೃತ್ಯದಿಂದಾಗಿ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry