ಶುಕ್ರವಾರ, ಮೇ 7, 2021
19 °C

ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ತಂದೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಮದುವೆ ವೇಳೆ ವರದಕ್ಷಿಣೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನೇ ಹತ್ಯೆ ಮಾಡಿರುವ ಹೇಯ ಕೃತ್ಯ ಪ್ರಕಾಶಂ ಜಿಲ್ಲೆಯ ಪಮರುನಲ್ಲಿ ನಡೆದಿದೆ.ಪಠಾಣ್ ನಜೀರ್ ಖಾನ್ ಎಂಬಾತನೇ ಈ ಕ್ರೂರ ಕೃತ್ಯ ಎಸಗಿದಾತ. ಸಲೀಮಾ ಎಂಬವರನ್ನು ಮದುವೆಯಾಗಿರುವ ಖಾನ್‌ಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಮೊದಲಿನಿಂದಲೂ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಹೊಂದಿದ್ದ. 1998ರಲ್ಲಿ ಹಿರಿಯ ಮಗಳು ಶಕಿರಿನಿ (8)ಯನ್ನು ಚಿನ್ನಾಪವನಿ ಗ್ರಾಮದಲ್ಲಿರುವ ಅಜ್ಜನ ಮನೆಗೆ ಬಿಟ್ಟು ಬರುವ ನೆಪದಲ್ಲಿ ಕರೆದೊಯ್ದು ಉಳವಪಾಡು ಎಂಬಲ್ಲಿ ಮಗಳ ಕುತ್ತಿಗೆ ಹಿಸುಕಿ ಸಾಯಿಸಿದ ಖಾನ್, ಹೆಣವನ್ನು ಮನ್ನೇರು ಕೆರೆಯಲ್ಲಿ ಬಿಸಾಡಿದ್ದ.ಮನೆಗೆ ಬಂದು ಮಗಳನ್ನು ಚೆನ್ನೈನಲ್ಲಿ ಮದರಸಾದಲ್ಲಿ ಓದಲು ಬಿಟ್ಟಿದ್ದು, ವಿದ್ಯಾಭ್ಯಾಸ ಮುಗಿಯುವವರೆಗೂ ಅವರು ಕಳುಹಿಸುವುದಿಲ್ಲ ಎಂದು ಪತ್ನಿಯನ್ನು ನಂಬಿಸಿದ್ದ.ಎರಡನೇ ಮಗಳು ಶಜೀದಾ (16) ಎಸ್‌ಎಸ್‌ಎಲ್‌ಸಿ ವರೆಗೆ ಓದಿ ಮನೆಯಲ್ಲೇ ಇದ್ದಳು. ಮನೆಯ ಸ್ವಮೀಪದಲ್ಲಿ ವಾಸಿಸುವ ಹುಡುಗನ ಜತೆ ಪ್ರೇಮ ವ್ಯವಹಾರ ಇಟ್ಟುಕೊಂಡಿರಬಹುದು ಎಂದು ಶಂಕಿಸಿದ ಖಾನ್, 2011ರ ಫೆಬ್ರುವರಿ 25ರಂದು  ತನ್ನ ಸಹೋದರನ ಜತೆ ಸೇರಿಕೊಂಡು ಮಗಳನ್ನು ಬೈಕ್‌ನಲ್ಲಿ ಉಳವಪಾಡುವಿಗೆ ಕರೆದೊಯ್ದು ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರಸಿ ಕುಡಿಸಿದ. ಮಗಳು ಎಚ್ಚರ ತಪ್ಪಿದ ಕೂಡಲೆ ತಮ್ಮನ ಜತೆ ಸೇರಿಕೊಂಡು ರೈಲು  ಹಳಿಯ ಮೇಲೆ ಮಗಳನ್ನು ಮಲಗಿಸಿ ರೈಲು ಅವಳ ಮೇಲೆ ಹಾದು ಹೋಗಿ ರುಂಡಮುಂಡ ಬೇರೆಯಾಗುವುದನ್ನು ನೋಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ.ಈ ಬಾರಿಯೂ ಹೆಂಡತಿಯ ಬಳಿ ಹಳೆ ಕಥೆಯನ್ನೇ ಹೇಳಿದ. ಆದರೆ  ಸಲೀಮಾ ಇದನ್ನು ನಂಬಲಿಲ್ಲ. ಹಿರಿಯ ಮಗಳ ಬಗ್ಗೆಯೂ ವಿಚಾರಣೆ ಮಾಡಿದಳು. ಆಗ ಖಾನ್ ಇಬ್ಬರು ಗಂಡು ಮಕ್ಕಳಿಗೆ ಮತ್ತು ಪತ್ನಿಗೆ ಬೆದರಿಕೆ ಹಾಕತೊಡಗಿದ. ಆದರೂ ಸಲೀಮಾ ಪಮುರು ಪೊಲೀಸ್ ಠಾಣೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಕಾಣೆಯಾಗಿರುವ ಬಗ್ಗೆ ಮಾರ್ಚ್‌ನಲ್ಲಿ ದೂರು ನೀಡಿದಳು.ಪೊಲೀಸರು ಖಾನ್‌ನನ್ನು ಬಂಧಿಸಿ ರೈಲ್ವೆ ಪೊಲೀಸರು ನೀಡಿದ್ದ ಮಗಳ ಚಿತ್ರವನ್ನು ತೋರಿಸಿದಾಗ ಎರಡೂ ಮಕ್ಕಳನ್ನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಲ್ಲದೆ 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ಉಳಿಸಲು ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.