ಬುಧವಾರ, ಜನವರಿ 22, 2020
26 °C

ಇಬ್ಬರು ಹೇಮಂತ್, ಆಕೆ ಸೇವಂತಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಳು ಚಿತ್ರ ನಿರ್ದೇಶನದಿಂದ ಕನ್ನಡ ಚಿತ್ರಗಳತ್ತ ಹೊರಳಿರುವ ಸುಧಾಕರ ಬನ್ನಂಜೆ, ಹಾಸ್ಯ ಪ್ರಧಾನ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ‘ನಾನು ಹೇಮಂತ್, ಅವಳು ಸೇವಂತಿ’ ಎಂಬ ಶೀರ್ಷಿಕೆಗೆ ಅಷ್ಟೇ ಉದ್ದನೆಯ ‘ನಗೋದಕ್ಕೆ ಕಂಜೂಸ್ತನ ಯಾಕೆ’ ಅನ್ನೋ ಟ್ಯಾಗ್ ಲೈನ್ ಕೊಟ್ಟಿದ್ದಾರೆ. ಬರೋಬ್ಬರಿ ಎರಡು ಗಂಟೆಗಳ ಕಾಲ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಕೊಡಲಿದೆ ಈ ಸಿನಿಮಾ ಎಂಬ ಅಪರಿಮಿತ ವಿಶ್ವಾಸ ಅವರಲ್ಲಿದೆ.ಬೆಂಗಳೂರು–ಮೈಸೂರು ರಸ್ತೆಯ ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯ ಕೊಠಡಿಯೊಂದರಲ್ಲಿ ಚಿತ್ರದ ಮುಹೂರ್ತ ನಡೆಯಿತು. ತಂತ್ರಜ್ಞರೊಬ್ಬರೂ ಸೇರಿದಂತೆ ಬಂಡವಾಳ ಹೂಡಿದ ಏಳು ಮಂದಿ ಪೈಕಿ ಕೆಲವರು ಹಾಜರಿದ್ದರು. ಈ ಸಂದರ್ಭದಲ್ಲಿ ಸುದ್ದಿಮಿತ್ರರ ಜತೆ ಸುಧಾಕರ ಬನ್ನಂಜೆ ಕುಶಲೋಪರಿ ರೀತಿಯಲ್ಲೇ ಮಾತನಾಡಿದರು.

‘ತಾನು ಮದುವೆಯಾಗುವ ಹುಡುಗ ಹೇಗಿರುತ್ತಾನೆ? ಮದುವೆಯಾದ ಬಳಿಕ ತಾನು ಹೇಗಿರಬೇಕು ಎಂಬ ಯೋಚನೆ ಬಹುತೇಕ ಹುಡುಗಿಯರಿಗೆ ಇರುತ್ತದೆ. ಇದೇ ಎಳೆ ಹಿಡಿದುಕೊಂಡು ಚಿತ್ರ ಸಾಗುತ್ತದೆ. ಮದುವೆ ವಯಸ್ಸಿಗೆ ಬಂದ ಹುಡುಗಿ ಸೇವಂತಿ. ಇಬ್ಬರು ನಾಯಕರ ಹೆಸರೂ ಹೇಮಂತ್. ಅವರ ಪೈಕಿ ನಾಯಕಿ ಸೇವಂತಿ ಯಾರಿಗೆ ಒಲಿಯುತ್ತಾಳೆ? ಈ ನಡುವೆ ನಡೆಯುವ ತಮಾಷೆ ಪ್ರಸಂಗಗಳು ಸಿನಿಮಾದಲ್ಲಿ ಇರಲಿವೆ’ ಎಂದು ಸುಧಾಕರ ಸಿನಿಮಾದ ಹೂರಣ ಬಿಚ್ಚಿಟ್ಟರು.ಕರಾವಳಿ, ಶಿರಸಿ, ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮೂರು ಫೈಟ್ ಹಾಗೂ ಒಂದು ಮಸಾಲೆಭರಿತ ಐಟಂ ಸಾಂಗ್ ಕೂಡ ಇದೆಯಂತೆ.ಉಡುಪಿಯ ರವಿ, ಈ ಚಿತ್ರದ ಮೂಲಕ ನಾಯಕ ಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ. ಅವರ ಹೆಸರನ್ನು ರಜನೀಶ ಎಂದು ಬದಲಾಯಿಸಲಾಗಿದೆ. ಫಿಟ್‌ನೆಸ್ ಸೆಂಟರ್ ನಡೆಸುತ್ತಿರುವ ಪುತ್ತೂರು ಮೂಲದ ವಿಜಯಶೆಟ್ಟಿ ಇನ್ನೊಬ್ಬ ನಾಯಕ.

ಹಾಸನ ಮೂಲದ ಲೇಖಚಂದ್ರ ನಾಯಕಿ. ಹಾಡು ಬರೆದ ವಿ. ಮನೋಹರ್, ಸಂಕಲನಕಾರ ಗಿರೀಶ ಉಪಸ್ಥಿತರಿದ್ದರು.

ಛಾಯಾಗ್ರಹಣದ ಹೊಣೆ ನಾಗರಾಜ ಅದ್ವಾನಿ ಅವರದಾಗಿದ್ದರೆ, ಸಂಗೀತ ಮದನ ಮೋಹನ್ ಅವರದು. ನಿಗದಿತ ಸಮಯದಲ್ಲಿ ಚಿತ್ರೀಕರಣ ಮುಗಿಸಿ, ಏಪ್ರಿಲ್ ತಿಂಗಳಲ್ಲಿ ತೆರೆಗೆ ತರುವ ಯೋಚನೆ ಚಿತ್ರತಂಡಕ್ಕಿದೆ. 

ಪ್ರತಿಕ್ರಿಯಿಸಿ (+)