ಭಾನುವಾರ, ನವೆಂಬರ್ 17, 2019
21 °C

ಇಮೇಜ್ ಬದಲಾವಣೆ ನಿರೀಕ್ಷೆಯಲ್ಲಿ ಬೀದರ್

Published:
Updated:
ಇಮೇಜ್ ಬದಲಾವಣೆ ನಿರೀಕ್ಷೆಯಲ್ಲಿ ಬೀದರ್

ಬೀದರ್: `ಚುನಾವಣೆಯಲ್ಲಿ ಯಾರಾದರೂ ಗೆದ್ದು ಬರಲಿ. ಆದರೆ ಅವರು ನಮ್ಮ ಜಿಲ್ಲೆಯ ಇಮೇಜ್ ಚೇಂಜ್ ಕೆಲಸ ಮಾಡಲಿ'. ಮುಸ್ಸಂಜೆ ಹೊತ್ತಲ್ಲಿ ಬೀದರ್ ಕೋಟೆಯ ಬಳಿ ತನ್ನ ಸ್ನೇಹಿತರೊಂದಿಗೆ ಮೆಣಸಿನಕಾಯಿ ಬಜ್ಜಿ ತಿನ್ನುತ್ತಿದ್ದ ಶೌಕತ್ ಅಲಿ ಹೇಳಿದ.ಶೌಕತ್ ಇನ್ನೂ ಚಿಗುರು ಮೀಸೆಯ ಹುಡುಗ. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದವ. `ಈ ಬಾರಿ ಮತದಾನ ಮಾಡುತ್ತೇನೆ' ಎನ್ನುವವ. ಈಗ ನಡೆಯುವ ವಿಧಾನಸಭೆ ಚುನಾವಣೆಯ ಬಗ್ಗೆ ಮಾತಿಗೆ ಎಳೆದಾಗ, ಆತನ ಮಾತಿನ ಛಾಯೆಯಲ್ಲಿ ಕಂಡಿದ್ದು `ರಾಜ್ಯದ ಬಹುತೇಕ ಮಂದಿಗೆ ಬೀದರ್ ಬಗ್ಗೆ ಇನ್ನೂ ಗೊತ್ತೇ ಇಲ್ಲ' ಎನ್ನುವ ಭಾವ. `ಬೀದರ್ ಎಂದರೆ ಹಸಿವಿನಿಂದ ನರಳುವ ಜಿಲ್ಲೆ, ಬಿಸಿಲಿನ ಬೇಗೆಯಿಂದ ಬೇಯುವ ಜಿಲ್ಲೆ ಎನ್ನುವ ಭಾವನೆಯೇ ಇದೆ. ಆದರೆ ಈ ಜಿಲ್ಲೆ ಹಾಗಿಲ್ಲ. ಬೀದರ್ ನಗರದ ಸುತ್ತಮುತ್ತ 7 ಝರಿಗಳಿವೆ. ಒಂದು ಲಕ್ಷ ಹೆಕ್ಟೇರ್ ಹಸಿರು ಅರಣ್ಯ ಇದೆ. ಸರಾಸರಿ 900 ಮಿಮೀ ಮಳೆಯಾಗುತ್ತದೆ. ವರ್ಷದಲ್ಲಿ 70 ದಿನ ಮಳೆ ಇರುತ್ತದೆ. ಫಲವತ್ತಾದ ಭೂಮಿಯನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಹಸಿವಿನಿಂದ ನರಳುವವರು ಯಾರೂ ಇಲ್ಲ. ಹೈದರಾಬಾದ್, ಮುಂಬೈಗೆ ಇಲ್ಲಿಂದ ಜನರು ವಲಸೆ ಹೋಗಿರಬಹುದು. ಆದರೆ ಇಲ್ಲಿ ಕೂಲಿ ಸಿಗದೆ ಗುಳೇ ಹೋದವರಲ್ಲ ಅವರು. ಇಲ್ಲಿ ದೇವದಾಸಿ ಪದ್ಧತಿ ಇಲ್ಲ' ಎಂದು ಹೇಳಿದ.ಆತನ ಸ್ನೇಹಿತ ಶರಾಫತ್ ಕೂಡ ಈ ಮಾತನ್ನು ಬೆಂಬಲಿಸಿದ. `ಜಿಲ್ಲೆಯಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಶ್ರೀಗಂಧ ಮರಗಳಿವೆ. ಬೆಳಿಗ್ಗೆ ವಾಕಿಂಗ್ ಹೋಗುವಾಗ ನವಿಲುಗಳು ಸಿಗುತ್ತವೆ. ವನ್ಯಜೀವಿಗಳೂ ಬೇಕಾದಷ್ಟು ಇವೆ. 12 ತಿಂಗಳೂ ಹಸಿರು ಹುಲ್ಲು ಇರುತ್ತದೆ. ಇದು ಬಹುತೇಕ ಮಂದಿಗೆ ಗೊತ್ತೇ ಇಲ್ಲ ಸರ್' ಎಂದ.ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಯಾತ್ರೆ ಕೈಗೊಂಡಾಗ ಮುಖ್ಯವಾಗಿ ಗಮನಕ್ಕೆ ಬಂದಿದ್ದು ಇಲ್ಲಿ ಅನ್ನ ಇಲ್ಲದೆ ಹಸಿವಿನಿಂದ ನರಳುತ್ತಿರುವವರು ಕಾಣುವುದಿಲ್ಲ. ಆದರೆ ಅಭಿವೃದ್ಧಿಯ ಹಸಿವು ಸಿಕ್ಕಾಪಟ್ಟೆ ಇದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಅಭಿವೃದ್ಧಿಯಲ್ಲಿ ಜಿಲ್ಲೆ ಸಾಕಷ್ಟು ಹಿಂದೆ ಇದೆ. ನಂಜುಂಡಪ್ಪ ವರದಿಯಲ್ಲಿ ಜಿಲ್ಲೆಯ ಎಲ್ಲ ಐದು ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳು ಎಂದೇ ಗುರುತಿಸಲಾಗಿದೆ.`ಕರ್ನಾಟಕದ ಮ್ಯಾಪ್‌ನಲ್ಲಿ ಮಾತ್ರ ಬೀದರ್ ಅತ್ಯಂತ ಮೇಲಿದೆ. ಉಳಿದ ಎಲ್ಲ ವಿಷಯಗಳಲ್ಲಿ ಕೆಳಗಿದೆ' ಎಂದು ಹೇಳಿದವರು ವಿಧಾನ ಪರಿಷತ್ ಮಾಜಿ ಸದಸ್ಯ ಖಾಜಿ ಅರ್ಷದ್ ಅಲಿ. ಭಾಷೆಯ ಆಧಾರದಲ್ಲಿಯೇ ಇಲ್ಲಿ ಚುನಾವಣೆ ನಡೆಯುತ್ತದೆ ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ಇಲ್ಲಿನ ಜನರು ಉರ್ದು, ಮರಾಠಿ, ಹಿಂದಿ ಮಾತನಾಡುತ್ತಾರೆ. ಬಹುತೇಕ ಎಲ್ಲರಿಗೂ ಕನ್ನಡ ಬರುತ್ತದೆ. ಆದರೆ ಅದರಲ್ಲಿ ಉರ್ದು, ಮರಾಠಿ ಮಿಶ್ರಣವಾಗಿರುತ್ತದೆ. ತೆಲುಗು ಮಾತನಾಡುವವರೂ ಇದ್ದಾರೆ.`ಇಲ್ಲಿನ ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಕಡಿಮೆ' ಎಂದು ಖಡಾಖಂಡಿತವಾಗಿ ಹೇಳಿದ್ದು ರಾಜಕುಮಾರ ಗುಮ್ಮೆ. ಅದಕ್ಕೆ ಅವರು ಕೊಡುವ ಉದಾಹರಣೆ ಗೋದಾವರಿ ನದಿಯ ನೀರಿನದ್ದು. `ಬಚಾವತ್ ತೀರ್ಪಿನಲ್ಲಿ ಜಿಲ್ಲೆಗೆ 21 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾರೂ ಈ ಬಗ್ಗೆ ಮಾತನಾಡವುದೇ ಇಲ್ಲ. ಕಾರಂಜಾ, ಮಾಂಜ್ರಾ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ' ಎಂದು ಅವರು ಹೇಳುತ್ತಾರೆ.

ರಸ್ತೆ ದುರಸ್ತಿಗೂ ಹೈಕೋರ್ಟ್ ಆದೇಶ ಬೇಕು: ಬೀದರ್-ಔರಾದ ರಸ್ತೆಯಲ್ಲಿ ಸಂತೆಗೆ ದೇವಣಿ ಜಾತಿಯ ದನ ಹೊಡೆದುಕೊಂಡು ಹೋಗುತ್ತಿದ್ದ ಶಂಕರ ಮಾಧವರಾವ ಮರಗುಳಿ ಅವರಿಗೂ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂಬ ಚಿಂತೆ ಇದೆ. `ಈ ರಸ್ತೆ ನೋಡಿದರೆ ನಿಮಗೆ ಗೊತ್ತಾಗುತ್ತದೆಯಲ್ಲ. ನಾವು ಎಲ್ಲಿದ್ದೇವೆ ಎನ್ನುವುದು' ಎಂದು ಅವರು ಅತ್ಯಂತ ಹಾಳಾಗಿರುವ ರಸ್ತೆಯನ್ನು ತೋರಿಸುತ್ತಾರೆ. ಬೀದರ್- ಔರಾದ, ಔರಾದ- ಭಾಲ್ಕಿ- ಬಸವಕಲ್ಯಾಣ ಮುಖ್ಯ ರಸ್ತೆಗಳೇ ತೀರಾ ಹಾಳಾಗಿವೆ. ಯಾವುದೇ ವಾಹನ 10 ಕಿ.ಮೀ.ಗಿಂತ ವೇಗವಾಗಿ ಸಾಗುವುದು ಇಲ್ಲಿ ಕಷ್ಟ.ಕಷ್ಟಪಟ್ಟು ಔರಾದ ಪಟ್ಟಣವನ್ನು ಸೇರಿದಾಗ ಎದುರಿಗೆ ಸಿಕ್ಕವರು ಭವಾನಿ ಬಿಜಳಗಾಂವದ ಗುರುನಾಥ ವಡ್ಡೆ ಅವರು. ಔರಾದ ರಸ್ತೆ ದುರಸ್ತಿಗಾಗಿ ಸಾಕಷ್ಟು ಹೋರಾಟ ನಡೆಸಿದವರು. ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿ ಈಗ ಪೊಲೀಸ್ ಭದ್ರತೆಯಲ್ಲಿ ಓಡಾಡುವ ಮನುಷ್ಯ. `ಮಹಾರಾಷ್ಟ್ರದ ಗಡಿಭಾಗದಿಂದ ಬೀದರ್ ವರೆಗೆ ಈ ರಸ್ತೆಯನ್ನು ರಾಜ್ಯ ಹೆದ್ದಾರಿ ಮಾಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಕೋರ್ಟ್ ನನ್ನ ಪರವಾಗಿ ತೀರ್ಪು ನೀಡಿದೆ. ಆದರೂ ಇನ್ನೂ ಕೆಲಸವಾಗುತ್ತಿಲ್ಲ. ಕೌಠಾದಿಂದ ಔರಾದ್ ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ಹಾಕಿ 6 ತಿಂಗಳಿಗೂ ಹೆಚ್ಚು ಕಾಲವಾಯಿತು. ಇನ್ನೂ ದುರಸ್ತಿಯಾಗಿಲ್ಲ. ಸಾಮಾನ್ಯವಾಗಿ ಆಗಬಹುದಾದ ಕೆಲಸಗಳನ್ನೂ ಹೈಕೋರ್ಟ್ ಮೊರೆ ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾಗಿದೆ' ಎಂಬ ವ್ಯಥೆ ಅವರದ್ದು. `ಔರಾದ ತಾಲ್ಲೂಕಿನ ಬಹುತೇಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಶಿಕ್ಷಕರು ಶಾಲೆಗೆ ಹೋಗುವುದಿಲ್ಲ. ಯಾಕೆ ಶಾಲೆಗೆ ಹೋಗುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಳಿದರೆ ಅವರು ತಕ್ಷಣವೇ ವರ್ಗವಾಗುತ್ತಾರೆ' ಎಂದು ತಾಲ್ಲೂಕಿನ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಇಡೀ ಔರಾದ ತಾಲ್ಲೂಕಿನಲ್ಲಿ ಎಂಬಿಬಿಎಸ್ ಮಾಡಿದವರು ಇಬ್ಬರೇ ಇದ್ದಾರಂತೆ!ಖಂಡ್ರೆ ಸಮರ: ಭಾಲ್ಕಿಯಲ್ಲಿ ನಾಮಪತ್ರ ಸಲ್ಲಿಸುವ ಸಂಭ್ರಮ. ಇದು ಖಂಡ್ರೆ ಕುಟುಂಬದ ರಾಜಕೀಯದ ಕ್ಷೇತ್ರ. ಇಲ್ಲಿ ಬಹಳಷ್ಟು ವರ್ಷಗಳಿಂದ ಭೀಮಣ್ಣ ಖಂಡ್ರೆ ಮತ್ತು ಅವರ ಪುತ್ರ ಈಶ್ವರ ಖಂಡ್ರೆ ಹಾಗೂ ಅವರ ಸಂಬಂಧಿ ಪ್ರಕಾಶ ಖಂಡ್ರೆ ಅವರ ಜಿದ್ದಾಜಿದ್ದಿ. ಈ ಬಾರಿಯೂ ಕಾಂಗ್ರೆಸ್‌ನಿಂದ ಈಶ್ವರ ಖಂಡ್ರೆ ಮತ್ತು ಬಿಜೆಪಿಯಿಂದ ಪ್ರಕಾಶ ಖಂಡ್ರೆ ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಸುವ ಅವಸರದಲ್ಲೇ ಮಾತನಾಡಿದ ಪ್ರಕಾಶ ಖಂಡ್ರೆ ಹೇಳಿದ್ದು `ನಾನು ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಬ್ಬರೂ ಉತ್ತಮ ಸ್ನೇಹಿತರು. ರಾಜ್ಯದಲ್ಲಿ ಶೆಟ್ಟರ್ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ನಾನು ಇಲ್ಲಿ ಗೆದ್ದರೆ ನಾನೇ ಮುಖ್ಯಮಂತ್ರಿ ಆದ ಹಾಗೆ'.ಕ್ಷೇತ್ರದ ಬಹುತೇಕ ಎಲ್ಲ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿರುವ ಕೆಜೆಪಿ ಅಭ್ಯರ್ಥಿ ಡಿ.ಕೆ.ಸಿದ್ದರಾಮ ಕೂಡ ಸಮರಕ್ಕೆ ಸಜ್ಜಾಗಿದ್ದಾರೆ. ಠಾಣಾಕುಶನೂರ ಗ್ರಾಮದಲ್ಲಿ ಟೈರ್ ಅಂಗಡಿ ಇಟ್ಟುಕೊಂಡಿರುವ ವೀರಭದ್ರಸ್ವಾಮಿ ಮಾತ್ರ `ಈ ಬಾರಿ ಜಾತಿ ಮೇಲೆ ಚುನಾವಣೆ ನಡೆಯೋದಿಲ್ಲ. ಅಭಿವೃದ್ಧಿ ವಿಷಯವೇ ಮುಖ್ಯವಾಗುತ್ತದೆ' ಎನ್ನುತ್ತಾರೆ.ಲಾರಿಗಳ ಪಟ್ಟಣ ಬಸವಕಲ್ಯಾಣ: 108 ಅಡಿ ಎತ್ತರದ ಬಸವಣ್ಣನ ಮೂರ್ತಿವನ್ನು ಪ್ರತಿಷ್ಠಾಪಿಸಿರುವ ಬಸವಕಲ್ಯಾಣ ಈಗ ಬಸವಣ್ಣನ ಖ್ಯಾತಿಗಿಂತ ಲಾರಿಗಳ ಮಾಲಿಕತ್ವಕ್ಕೆ ಹೆಸರಾಗಿದೆ. ಈ ಪಟ್ಟಣದಲ್ಲಿ ಸುಮಾರು 10 ಸಾವಿರ ಲಾರಿಗಳಿವೆ. ಪಾನ್‌ಬೀಡಾ ಅಂಗಡಿ ನಡೆಸುವ ವ್ಯಕ್ತಿಯೊಬ್ಬನ ಬಳಿ 50 ಲಾರಿಗಳಿವೆಯಂತೆ. ಟ್ಯಾಕ್ಸಿ ಓಡಿಸುವವನ ಬಳಿಯೂ 5 ಲಾರಿಗಳಿವೆಯಂತೆ.  ರಾಷ್ಟ್ರೀಯ ಹೆದ್ದಾರಿ-9 ಈ ಪಟ್ಟಣದ ಮೇಲೆಯೇ ಹಾದು ಹೋಗುತ್ತದೆ. ಹೈದರಾಬಾದ್ ಮತ್ತು ಮುಂಬೈ ಮಾರ್ಗದ ಮಧ್ಯಭಾಗದಲ್ಲಿ ಬಸವಕಲ್ಯಾಣದಲ್ಲಿ ಇರುವುದರಿಂದ ಇಷ್ಟೊಂದು ಲಾರಿಗಳಿವೆ ಎಂದು ಬಾಬುರಾವ್ ಹೇಳುತ್ತಾರೆ.`ಇಲ್ಲಿನ ಜನರು ವ್ಯಕ್ತಿತ್ವ ನೋಡಿ ಮತ ಹಾಕುತ್ತಾರೆ. ಜಾತಿ ಮುಖ್ಯವಾಗೋದಿಲ್ಲ. ಆದರೆ ಅಭಿವೃದ್ಧಿ ಕೂಡ ಮುಖ್ಯ ಅಲ್ಲ. ವೈಯಕ್ತಿಕ ಸಂಬಂಧ ಇಟ್ಟುಕೊಂಡವರೇ ಇಲ್ಲಿ ಹೆಚ್ಚು ಬಾರಿ ಗೆದ್ದಿದ್ದಾರೆ' ಎನ್ನುತ್ತಾರೆ ಬಸವರಾಜ ಹುಷಾರೆ. `ಇಲ್ಲಿ ಬಹಳ ಕಾಲದಿಂದ ಲಿಂಗಾಯಿತ-ಮರಾಠಾ ರಾಜಕಾರಣ ನಡೆಯುತ್ತಿದೆ. ಗಡಿಭಾಗದ ಸಮಸ್ಯೆಗಳೂ ಬಹಳಷ್ಟು ಇವೆ. ಪ್ರವಾಸೋದ್ಯಮ ಪ್ರಮುಖ ವಿಷಯ. ಇಲ್ಲಿ ಹಲವಾರು ವರ್ಷಗಳಿಂದ ನೆಲೆಯೂರಿರುವ ಅಧಿಕಾರಿಗಳನ್ನು ವರ್ಗ ಮಾಡಿ ಪ್ರವಾಸೋದ್ಯಮವನ್ನು ಬೆಳೆಸಿದರೆ ಬಸವಕಲ್ಯಾಣದ ಜನರ ನಿಜವಾದ ಕಲ್ಯಾಣವಾಗುತ್ತದೆ' ಎನ್ನುವ ಆಶಾಭಾವ ಸೂರ್ಯಕಾಂತ ಅವರದ್ದು.ಬಸವಕಲ್ಯಾಣದ ಬಳಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹರಿಯುವ ಅಮೃತಕುಂಡ ಎಂಬ ಸಣ್ಣ ಹಳ್ಳವಿದೆ. ಈ ಹಳ್ಳಕ್ಕೆ ಮಹಾರಾಷ್ಟ್ರ ಭಾಗದಲ್ಲಿ 15ಕ್ಕೂ ಹೆಚ್ಚು ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ ಕರ್ನಾಟಕದ ಭಾಗದಲ್ಲಿ ಒಂದೂ ಬ್ಯಾರೇಜ್ ಇಲ್ಲ. ಇಲ್ಲಿಯೂ ಕೂಡ ಬ್ಯಾರೇಜ್ ನಿರ್ಮಾಣ ಮಾಡಿದ್ದರೆ ತಮಗೂ ಅನುಕೂಲವಾಗುತ್ತಿತ್ತು ಎಂಬ ಭಾವ ಝರೆಪ್ಪ ಅವರದ್ದು.ಬೀದರ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ಚೈತನ್ಯ ಎಂದು ಅರ್ಥ. ನಿಜವಾಗಿಯೂ ಈ ಜಿಲ್ಲೆಯ ಜನ ಈಗ ಚೈತನ್ಯಶೀಲ ನಾಯಕರಿಗಾಗಿ ಹುಡುಕಾಟ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)