ಗುರುವಾರ , ಮೇ 19, 2022
20 °C

ಇಮೇಲ್ ಮಾರ್ಕೆಟಿಂಗ್ ಭವಿಷ್ಯದ ವಾಣಿಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಟರ್‌ನೆಟ್ ಕ್ರಾಂತಿಯೊಂದಿಗೆ ಆರಂಭವಾದ ಮಾಹಿತಿಯುಗದಲ್ಲಿ ಇ-ಮೇಲ್ ಮಾರ್ಕೆಟಿಂಗ್ ಭವಿಷ್ಯದ ವಾಣಿಜ್ಯ ವ್ಯವಹಾರ ಮಾಧ್ಯಮವಾಗಿ ಬೆಳೆಯಲಿದೆ.

ಇ-ಮೇಲ್ ಮಾರ್ಕೆಟಿಂಗ್ ಬಗ್ಗೆ ಭಾರತೀಯರಲ್ಲಿ ಇನ್ನೂ ಅನುಮಾನ ಇದೆ. ಆದರೆ ಬೇರೆ ದೇಶಗಳಲ್ಲಿ ಇದನ್ನೇ ಅವಲಂಬಿಸಿದ ಅನೇಕ ಕಂಪೆನಿಗಳು ಸಾಕಷ್ಟು ಪ್ರಗತಿ ಸಾಧಿಸಿವೆ.



ಇಮೇಲ್ ಮಾರ್ಕೆಟಿಂಗ್ ವ್ಯವಸ್ಥಿತ ಹಾಗೂ ತ್ವರಿತವಾಗಿ ಖರೀದಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತದೆ. ಆದರೆ ನಿರೀಕ್ಷಿತ ಜನಪ್ರಿಯತೆ ಇದಕ್ಕೆ ಸಿಗುತ್ತಿಲ್ಲ. ಇಮೇಲ್ ಹಾಗೂ ಮೊಬೈಲ್ ಮೂಲಕ ವಾಣಿಜ್ಯ ವ್ಯವಹಾರ ವಿಸ್ತರಿಸುವ, ಹೆಚ್ಚಿಸಿಕೊಳ್ಳುವ ಅವಕಾಶ ಅನೇಕ ಕಂಪೆನಿಗಳಿಗೆ ಇದೆ.ಆದರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಿಸುತ್ತಿಲ್ಲ.



ಹಾಗಂತ ಇದು ನಿಷ್ಪ್ರಯೋಜಕ ಎಂದು ಹೇಳಲಾಗದು. ಮುಂದಿನ ದಿನಗಳಲ್ಲಿ ವಾಣಿಜ್ಯ ವ್ಯವಹಾರಗಳ ಬಹುಪಾಲನ್ನು ಇದು ಆಕ್ರಮಿಸಿಕೊಳ್ಳಲಿದೆ.



ಏಕೆಂದರೆ ಖಾಸಗಿ ಕೆಲಸಕ್ಕಾಗಿ ಒಂದು ಗಂಟೆ ಅವಧಿಯನ್ನೂ ಮೀಸಲಿಡಲಾಗದಷ್ಟು ಉದ್ಯೋಗದಲ್ಲಿ, ವ್ಯಾಪಾರ ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಹೆಚ್ಚುತ್ತಿದೆ. ಇವರಿಗೆ  ಗೃಹೋಪಯೋಗಿ, ದಿನಬಳಕೆ ಹಾಗೂ ಎಲೆಕ್ಟ್ರಾನಿಕ್ ಮತ್ತಿತರ ವಸ್ತುಗಳನ್ನು ಕೊಳ್ಳಲು ಮುಂದಿನ ದಿನಗಳಲ್ಲಿ ಇ-ಮೇಲ್ ಮಾರ್ಕೆಟಿಂಗ್ ಸುಲಭ ಮಾರ್ಗವಾಗಲಿದೆ.



ಎಚ್ಚರ ಅಗತ್ಯ

ಒಳ್ಳೆಯದರ ಜತೆ ಕೆಟ್ಟದ್ದು ಇದ್ದೇ ಇರುತ್ತದೆ. ಅದೇ ರೀತಿ ಇಂದು ಇಮೇಲ್ ಮಾರ್ಕೆಟಿಂಗ್‌ನಲ್ಲಿಯೂ ಮೋಸದ ಪ್ರಮಾಣ ಏರುತ್ತಿದೆ. ಆದರೆ ಅಂತರ್ಜಾಲದೊಂದಿಗೆ ಒಡನಾಡುವವರಿಗೆ ಯಾವುದು ಸರಿ ಯಾವುದು ತಪ್ಪು ಅನ್ನುವ ಅರಿವಿರುತ್ತದೆ. ಅಂಥವರು ಇಂದು ವ್ಯವಸ್ಥಿತ ಇಮೇಲ್ ಮಾರ್ಕೆಟಿಂಗ್‌ನ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.



ನಿಮ್ಮ ಇಮೇಲ್‌ನ ಇನ್‌ಬಾಕ್ಸ್‌ಗೆ ಬರುವ ಸಾಕಷ್ಟು ಮೇಲ್‌ಗಳಲ್ಲಿ ಕೆಲವು ಮಾರ್ಕೆಟಿಂಗ್‌ಗೆ ಸಂಬಂಧಿಸಿದ್ದು ಇರುತ್ತವೆ. ಅದನ್ನು ಹೆಚ್ಚಿನವರು ಗಮನಿಸುವುದೇ ಇಲ್ಲ. ಆದರೆ ಇದರಲ್ಲಿ ಸಾಕಷ್ಟು ಉಪಯೋಗಿ ಮೇಲ್ ಇರುತ್ತವೆ.



ಚಿರಪರಿಚಿತ ಕಂಪನಿಗಳ, ದೇಶೀಯ ಹಾಗೂ ನಾವಿರುವ ನಗರ ಹಾಗೂ ಪಟ್ಟಣದ ಸಣ್ಣ ಉದ್ದಿಮೆದಾರರದ್ದು ಇರಬಹುದು. ವ್ಯಾಪಾರ ವಹಿವಾಟನ್ನು ಊರೂರು ಅಲೆದು ಮಾಡಲಾಗದವರು ತಮ್ಮ ಗುಣಮಟ್ಟದ ಉತ್ಪನ್ನವನ್ನು ಇಮೇಲ್ ಮೂಲಕ ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದಾರೆ.



ಸಣ್ಣ ಬಜೆಟ್‌ನಲ್ಲಿ, ಕಡಿಮೆ ಸಂಖ್ಯೆಯ ಸಿಬ್ಬಂದಿ ಹೊಂದಿ ವ್ಯಾಪಾರ ನಡೆಸುವವರಿಗೆ ತಮ್ಮ ಉತ್ಪನ್ನ ಪ್ರದರ್ಶನ, ಗ್ರಾಹಕರನ್ನು ಸೆಳೆಯಲು ಇದೊಂದೇ ಸರಳ ಮಾರ್ಗ.



ನೆಟ್‌ಕೋರ್ ಸಲ್ಯೂಷನ್‌ನಂಥ ಕೆಲ ಸಂಸ್ಥೆಗಳು ಭವಿಷ್ಯದ ಇಮೇಲ್ ಮಾರ್ಕೆಟಿಂಗ್ ಹಾಗೂ ಸಾಮಾಜಿಕ ಬದಲಾವಣೆಯ ದಿಕ್ಕು ಅರಿತು ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಿವೆ.



ಗ್ರಾಹಕಸ್ನೇಹಿ ವಾತಾವರಣ ರೂಪಿಸುವುದು, ಅದಕ್ಕೆ ತಕ್ಕಂತೆ ಮಾರ್ಕೆಟಿಂಗ್ ಉದ್ಯಮ ಬೆಳೆಸುವುದು ಇವುಗಳ ಗುರಿ. ಸಂವಹನದ ಮೂಲಕ ಇವು ಗ್ರಾಹಕರು ಹಾಗೂ ವ್ಯಾಪಾರಿಗಳು ಇಬ್ಬರಿಗೂ ಅನುಕೂಲ ಆಗುವ ವಾಣಿಜ್ಯ ವ್ಯವಹಾರ ಮಾಡುತ್ತಿವೆ.



ಗ್ರಾಹಕರಿಗೆ ಇ-ಮೇಲ್ ಮಾರ್ಕೆಟಿಂಗ್ ಕುರಿತು ಮಾಹಿತಿ ನೀಡಲು ಶ್ರಮಿಸುತ್ತಿರುವ ನೆಟ್‌ಕೋರ್ ಇದುವರೆಗೂ 300 ಕೋಟಿಗೂ ಹೆಚ್ಚು ಇಮೇಲ್ ಸಂದೇಶ ರವಾನಿಸಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ.



ಅಲ್ಲದೇ ಇಂದು ಇಮೇಲ್ ಮಾರ್ಕೆಟಿಂಗ್ ಪ್ರತಿಯೊಬ್ಬ ಉದ್ದಿಮೆದಾರರ ಅನಿವಾರ್ಯ ಆಯ್ಕೆ. ಅಲ್ಲದೇ ವಾಣಿಜ್ಯ ವ್ಯವಹಾರದ ಒಂದು ಭಾಗವಾಗಿ ಇದು ಸೇರ್ಪಡೆ ಆಗಿದೆ. ಅಲ್ಲದೇ ಹಣಕಾಸು ವಿಷಯದಲ್ಲಿಯೂ ಇದು ಅತ್ಯಂತ ಮಿತ ವೆಚ್ಚದಲ್ಲಿ ಜನರನ್ನು ತಲುಪುವ ವ್ಯವಸ್ಥೆ ಆಗಿದೆ. ಹೊಸ ಗ್ರಾಹಕರ ಸೆಳೆಯಲು, ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಇದೊಂದು ಸರಳ ಮಾರ್ಗ.



ನೆಟ್‌ಕೋರ್ ನಡೆಸಿದ ಸಮೀಕ್ಷೆಯಂತೆ ಮಧ್ಯಮ ದರ್ಜೆಯ ವ್ಯಾಪಾರಿಗಳಿಗೆ ಇಮೇಲ್ ಮಾರ್ಕೆಟಿಂಗ್ ಅತ್ಯಂತ ಸಹಕಾರಿ ಎನಿಸಿದೆ. ಏಕೆಂದರೆ ಈ ಮೂಲಕ ನಡೆಸಿದ ಪ್ರಯತ್ನ ಶೇ 48ರಷ್ಟು ಗ್ರಾಹಕರನ್ನು ಆಕರ್ಷಿಸಿದೆ.



ಹಳೆಯ ಗ್ರಾಹಕರ ಜತೆ ಪ್ರತಿ ತಿಂಗಳು ಹೊಸದಾಗಿ 300 ಗ್ರಾಹಕರು ಇಮೇಲ್ ಮಾರ್ಕೆಟಿಂಗ್ ಮೂಲಕ ವ್ಯಾಪಾರಿಗಳ ಸಂಪರ್ಕ ಜಾಲಕ್ಕೆ ಒಳಪಡುತ್ತಿದ್ದಾರೆ. ಹೂಡಿಕೆದಾರರಿಗೆ ಮಾರುಕಟ್ಟೆ ವಿಭಾಗದಲ್ಲಿ ಕಡಿಮೆ ಬಂಡವಾಳಕ್ಕೆ ಅತಿ ಹೆಚ್ಚು ಮೊತ್ತದ ಆದಾಯ ತಂದುಕೊಡುವ ವಿಧಾನವಾಗಿ ಇದು ಬೆಳೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.