ಇಮ್ರಾನ್ ಒಳಗಿನ ವಿಶ್ಲೇಷಕ

ಬುಧವಾರ, ಮೇ 22, 2019
32 °C

ಇಮ್ರಾನ್ ಒಳಗಿನ ವಿಶ್ಲೇಷಕ

Published:
Updated:

ಅದೇ ತಾನೆ ಎದ್ದು, ಕಣ್ಣು ಹೊಸಕಿಕೊಂಡು ಬಾಲ್ಕನಿಯ ಮೇಲೆ ನಿಂತ ನಟ ಇಮ್ರಾನ್ ಖಾನ್‌ಗೆ ಗೇಟಿನ ಬಳಿ ಸ್ನೇಹಿತರ ದಂಡು ಕಂಡಿತು. ಅನುಮತಿಯೇ ಕೇಳದೆ ಒಳನುಗ್ಗುವಷ್ಟು ಸಲಿಗೆಯ ಸ್ನೇಹಿತರವರು. ಬಾಲ್ಕನಿಗೆ ಬಂದು ನಿಂತ ಅವರಲ್ಲಿ ಒಬ್ಬನೆಂದ: `ನೀನು ಡಾನ್ಸ್ ಮಾಡಿದ್ದೀಯಲ್ಲ; ಆ ಹಾಡನ್ನು ನೋಡಿದೆ. ಥೇಟ್ ಮೂರ್ಖನ ತರಹ ಕಾಣುತ್ತೀಯ~.ಇನ್ನೊಬ್ಬನದ್ದು ಈ ತಕರಾರು: `ಯಾರಯ್ಯಾ ನಿನಗೆ ಆ ಬಟ್ಟೆ ಕೊಟ್ಟಿದ್ದು. ನೀನು ಹಾಕಿಕೊಂಡಿದ್ದೆಯಲ್ಲ ಆ ಟೋಪಿ, ಎಷ್ಟು ಕೆಟ್ಟದಾಗಿತ್ತು. ನಿನಗೆ ಸ್ವಲ್ಪವೂ ಸೂಟ್ ಆಗೋಲ್ಲ~. ಮತ್ತೊಬ್ಬ `ಕುರುಚಲು ಗಡ್ಡ ಬಿಟ್ಟರೆ ನಿನ್ನ ಮುಖ ನೋಡೋಕಾಗೋಲ್ಲ~ ಎಂಬ ಕಾಮೆಂಟು ಪಾಸ್ ಮಾಡಿದ.ಇವೆಲ್ಲವನ್ನೂ ಸುಮ್ಮನೆ ಕೇಳುತ್ತಾ ಹ್ಞೂಂಗುಡುತ್ತಿದ್ದ ಇಮ್ರಾನ್ ಖಾನ್ ದೂಸರಾ ಮಾತನಾಡದೆ ಬಾತ್‌ರೂಮ್‌ಗೆ ಹೋಗಿ ಕದವಿಕ್ಕಿಕೊಂಡರು. ಇಪ್ಪತ್ತು ನಿಮಿಷದ ನಂತರ ಕದ ತೆರೆದುಕೊಂಡು ಮತ್ತದೇ ಬಾಲ್ಕನಿಗೆ ಬಂದರು.

 

ಸ್ನೇಹಿತರ ಚರ್ಚೆ ಇನ್ನಷ್ಟು ಕಾವೇರಿತ್ತು. ತಮ್ಮಿಷ್ಟದ ಸ್ನೇಹಿತ ಸಿನಿಮಾದಲ್ಲಿ ಹೇಗೆ ಕಾಣಬೇಕು, ಎಂಥ ಬಟ್ಟೆ ತೊಡಬೇಕು, ನೃತ್ಯ ಮಾಡಬೇಕೇ ಬೇಡವೇ ಎಂಬಿತ್ಯಾದಿ ವಿಷಯಗಳನ್ನು ಅವರು ಗಂಭೀರವಾಗಿ ಚರ್ಚಿಸುತ್ತಿದ್ದರು. ಇಮ್ರಾನ್ ತನ್ನ ರೆಕಾರ್ಡರನ್ನು ಆನ್ ಮಾಡಿ, ಅವರ ಮಾತನ್ನೆಲ್ಲಾ ದಾಖಲಿಸಿಕೊಳ್ಳಲಾರಂಭಿಸಿದರು. ಅದನ್ನು ಕಂಡ ಸ್ನೇಹಿತರು ಏನೋ ಅನುಮಾನ ಬಂದವರಂತೆ ಸುಮ್ಮನಾಗಿಬಿಟ್ಟರು.ಆಮೇಲೆ ಇಮ್ರಾನ್ ಖಾನ್ ಮಾತನಾಡಲಾರಂಭಿಸಿದರು: `ನೋಡಿ, ಒಂದು ರೆಕಾರ್ಡರ್ ಕಂಡೊಡನೆ ನಿಮ್ಮ ಮಾತು ಬಂದ್ ಆಯಿತು. ನಾನು ನನಗಿಷ್ಟವಿದೆಯೋ ಇಲ್ಲವೋ ಮೇಕಪ್ ಹಾಕಿಸಿಕೊಳ್ಳಬೇಕು. ಇಷ್ಟವಿಲ್ಲದಿದ್ದರೂ ಕುರುಚಲು ಗಡ್ಡ ಬಿಡಬೇಕು.ಲೈಟಿಂಗ್ ಹೆಚ್ಚಾಗುತ್ತಿದೆಯೇನೋ ಅನ್ನಿಸಿದರೂ ಸುಮ್ಮನೆ ಕ್ಯಾಮರಾಮನ್ ಕೆಲಸವನ್ನು ದೂರದಿಂದಲೇ ನೋಡಿ ಗೌರವಿಸಬೇಕು. ಆ್ಯಕ್ಷನ್ ದನಿ ಕೇಳಿದೊಡನೆ ನಾನು ಪಾತ್ರವಾಗಬೇಕು. ಕಟ್ ಎಂದಮೇಲೆ ನಿರಾಳವಾಗಬೇಕು.ಸ್ಕ್ರಿಪ್ಟ್‌ಗಳನ್ನು ತಿರುವಿಹಾಕಬೇಕು. ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳಬಾರದು. ಇಷ್ಟೆಲ್ಲಾ ಗೊಂದಲಗಳಲ್ಲಿ ಬದುಕುತ್ತಿರುವ ನಾನೆಲ್ಲಿ? ಬರೀ ರೆಕಾರ್ಡರ್ ಕಂಡು ಮಾತು ನಿಲ್ಲಿಸಿದ ನೀವೆಲ್ಲಿ? ನಿಮಗಿಂತ ನಾನೇ ಲೇಸು~. ಇಮ್ರಾನ್ ಮಾತು ಕೇಳಿದ ಸ್ನೇಹಿತರು ಕುಡಿಯುತ್ತಿದ್ದ ಕಾಫಿ ಕಪ್ಪುಗಳನ್ನು ಹಾಗೇ ಇರಿಸಿ ಏನೊಂದೂ ಮಾತನಾಡದೆ ಹೊರನಡೆದರು.ಸಂಜೆ ಅದೇ ಸ್ನೇಹಿತರ ಜೊತೆ ಇಮ್ರಾನ್ ಇನ್ನೊಂದು ಪಾರ್ಟಿಗೆ ಹೋಗಿ ಚರ್ಚೆಯನ್ನು ಮುಂದುವರಿಸಿದರು. ಈ ಸಲ ಸ್ನೇಹಿತರ ಅಭಿಪ್ರಾಯ ಬದಲಾಗಿತ್ತು.ಅಮೀರ್ ಖಾನ್ ಸಂಬಂಧಿ ಎಂಬ ಹಣೆಪಟ್ಟಿ ಇದ್ದರೂ ಇಮ್ರಾನ್ ಬಾಲಿವುಡ್‌ನ ತುಂಬಾ ಅದೃಷ್ಟಶಾಲಿ ನಾಯಕರೇನೂ ಅಲ್ಲ. ಆದರೂ ಅವರ ಕೈಲೀಗ `ಮಟ್ರೂ ಕಿ ಬಿಜಿಲಿ ಕಾ ಮಂಡೋಲಾ~ ಚಿತ್ರವಿದೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ಚಿತ್ರವಿದು ಎಂಬ ಕಾರಣಕ್ಕೆ ಇಮ್ರಾನ್ ಕಡೆಗೆ ಅನೇಕರ ಕಣ್ಣು ನೆಟ್ಟಿದೆ. ಈ ಚಿತ್ರಕ್ಕೆ ಆಯ್ಕೆಯಾದ ಮೇಲೆ ಸ್ಕ್ರಿಪ್ಟ್‌ನ ಪ್ರತಿ ಪಡೆದು ಮನೆಗೆ ಬಂದು ಓದಿದ ಇಮ್ರಾನ್‌ಗೆ ತಲೆಚಿಟ್ಟು ಹಿಡಿಯಿತಂತೆ.ಬರೆದಿರುವ ಸಾಲುಗಳು, ಚಿತ್ರಕತೆಯಲ್ಲಿ ಹುದುಗಿದ ಪದರಗಳು ಎಲ್ಲವುಗಳ ಬಗ್ಗೆ ದಟ್ಟ ಅನುಮಾನ. ಹರಿಯಾಣ ಶೈಲಿಯ ಮಾತುಗಳಂತೂ ಕಬ್ಬಿಣದ ಕಡಲೆ. ಕೊನೆಗೆ ಅವರು ವಿಶಾಲ್ ಭಾರದ್ವಾಜ್‌ಗೆ ಫೋನ್ ಮಾಡಿ, `ಈ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆನೋ ಏನೋ~ ಎಂದು ನೇರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ವಿಶಾಲ್ ನಿಧನಿಧಾನವಾಗಿ ಚಿತ್ರಕತೆಯ ಉದ್ದೇಶ, ಅದರೊಳಗೆ ಹುದುಗಿದ ಭಾವ, ಭಾಷೆಯ ಔಚಿತ್ಯ ಎಲ್ಲವನ್ನೂ ಅರ್ಥ ಮಾಡಿಸಿದ ಮೇಲಷ್ಟೇ ಇಮ್ರಾನ್ ಅವರಿಗೆ ಸಮಾಧಾನವಾದದ್ದು.ವಿಶಾಲ್ ಭಾರದ್ವಾಜ್ ಸಿನಿಮಾ ಅಂದೊಡನೆ ಗಂಭೀರವಾದ ಕಥಾನಕ ಇರುತ್ತದೆ ಎಂದೇ ಅನೇಕರ ಭಾವನೆ. ಆದರೆ, `ಮಟ್ರೂ ಕಿ ಬಿಜಿಲಿ ಕಾ ಮಂಡೋಲಾ~ ನಗೆಬುಗ್ಗೆಗಳನ್ನು ಹುದುಗಿಸಿಟ್ಟುಕೊಂಡ ಕತೆಯನ್ನು ಒಳಗೊಂಡಿದೆಯಂತೆ.ಇದಲ್ಲದೆ `ಒನ್ಸ್ ಅಪಾನ್ ಎ ಟೈಮ್~ ಎಂಬ ಇನ್ನೊಂದು ಮನರಂಜನಾತ್ಮಕ ಚಿತ್ರದಲ್ಲೂ ಇಮ್ರಾನ್ ನಟಿಸುತ್ತಿದ್ದಾರೆ.ಹೊಗಳಿಕೆ, ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಇಮ್ರಾನ್ ತಾಯಿಗೆ ಪತ್ರಕರ್ತರು ತಮ್ಮ ಮಗನ ಮೇಲೆ ಇಲ್ಲಸಲ್ಲದ್ದನ್ನು ಬರೆದಾಗ ಸಿಟ್ಟು ಬರುತ್ತದಂತೆ. ಅವರು ಹಾಗೆ ಬರೆದ ಪತ್ರಕರ್ತರ ಹೆಸರನ್ನು ನೆನಪಿಟ್ಟುಕೊಂಡು, ಮುಂದೆ ಎಂದಾದರೂ ಅವರು ಎದುರಲ್ಲಿ ಸಿಕ್ಕರೆ ಕೆನ್ನೆಗೆ ಬಾರಿಸುವುದಾಗಿಯೂ ಹೇಳುತ್ತಿರುತ್ತಾರಂತೆ.ಇದನ್ನು ಇನ್ನೊಬ್ಬ ಸುದ್ದಿಮಿತ್ರರ ಎದುರು ನಗುನಗುತ್ತಲೇ ಹೇಳಿಕೊಳ್ಳುವ ಇಮ್ರಾನ್, ಅಮೀರ್ ಖಾನ್ ಹಣದ ಎಳ್ಳಷ್ಟೂ ನಿರೀಕ್ಷೆ ಇಲ್ಲದೆ ನಿರ್ಮಿಸಿದ `ಸತ್ಯಮೇವ ಜಯತೆ~ ಕಾರ್ಯಕ್ರಮ ತುಂಬಾ ಇಷ್ಟವೆನ್ನುತ್ತಾರೆ.  ಕನ್ನಡಿ ಮುಂದೆ ನಿಂತು ಭಾವಾಭಿನಯದ ತಾಲೀಮು ನಡೆಸುವುದನ್ನೂ ಅವರಿನ್ನೂ ಬಿಟ್ಟಿಲ್ಲ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry