ಸೋಮವಾರ, ಡಿಸೆಂಬರ್ 9, 2019
25 °C

ಇಮ್ರಾನ್, ಸಂಧು ಒಲಿಂಪಿಕ್‌ಗೆ ಅರ್ಹತೆ

Published:
Updated:
ಇಮ್ರಾನ್, ಸಂಧು ಒಲಿಂಪಿಕ್‌ಗೆ ಅರ್ಹತೆ

ದೋಹಾ (ಪಿಟಿಐ): ಭಾರತದ ಶೂಟರ್‌ಗಳಾದ ಮಾನವಜಿತ್ ಸಿಂಗ್ ಸಂಧು ಹಾಗೂ ಇಮ್ರಾನ್ ಖಾನ್ ಅವರು ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಶನಿವಾರ ಇಲ್ಲಿ ಮುಕ್ತಾಯವಾದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಸ್ವರ್ಣ ಗೆಲ್ಲುವ ಜೊತೆಗೆ ಮಾನವಜಿತ್ ಒಲಿಂಪಿಕ್ ಅರ್ಹತಾ ಮಟ್ಟವನ್ನೂ ಮುಟ್ಟಿದರು. 50 ಮೀಟರ್ ರೈಫಲ್ ತ್ರಿಭಂಗಿಯಲ್ಲಿ ಇಮ್ರಾನ್ ಐದನೇ ಸ್ಥಾನ ಪಡೆದರೂ ಲಂಡನ್ ಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮಟ್ಟದ ನಿಖರತೆ ತೋರಿದರು. ಟ್ರ್ಯಾಪ್ ಮತ್ತು 50 ಮೀ. ರೈಫಲ್ ತ್ರಿಭಂಗಿಯಲ್ಲಿ ಭಾರತ ತಂಡದವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಕೂಡ ಗೆದ್ದರು.ಈಗಾಗಲೇ ಒಲಿಂಪಿಕ್ ಅರ್ಹತೆ ಗಳಿಸಿರುವ ಸಂಜೀವ್ ರಜ್ಪುತ್ ಅವರು 50 ಮೀ. ರೈಫಲ್ ತ್ರಿಭಂಗಿಯಲ್ಲಿ  ಉತ್ತಮ ಗುರಿಗಾರಿಕೆ ಪ್ರದರ್ಶಿಸಿ ವೈಯಕ್ತಿಕ ಬಂಗಾರವನ್ನು ತಮ್ಮದಾಗಿಸಿಕೊಂಡರು. ಆದರೆ ಇದೇ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲಲು ಗಗನ್ ನಾರಂಗ್ ಬಹಳಷ್ಟು ಕಷ್ಟಪಡಬೇಕಾಯಿತು.ಮಾನವಜಿತ್ ಗೆದ್ದ ಸ್ವರ್ಣದೊಂದಿಗೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಾಲಿಗೆ ಬಂದ ಬಂಗಾರದ ಪದಕಗಳ ಸಂಖ್ಯೆ ಏಳಾಗಿದೆ. ಹತ್ತು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹನ್ನೊಂದು ಶೂಟರ್‌ಗಳು ಒಲಿಂಪಿಕ್ ಅರ್ಹತೆ ಪಡೆದಿದ್ದು ವಿಶೇಷ. ಈ ಹಿಂದೆ ಇಷ್ಟೊಂದು ಶೂಟರ್‌ಗಳು ಅರ್ಹತೆ ಗಳಿಸಲು ಸಾಧ್ಯವಾಗಿರಲಿಲ್ಲ.ಟ್ರಾಪ್ ಶೂಟಿಂಗ್ ಅರ್ಹತಾ ಸುತ್ತಿನಲ್ಲಿ ಶುಕ್ರವಾರ ಮುನ್ನಡೆ ಸಾಧಿಸಿದ್ದ ಮಾನವ್‌ಜಿತ್ ಫೈನಲ್‌ನಲ್ಲಿ ನಿರೀಕ್ಷಿಸಿದಷ್ಟು ನಿಖರ ಪ್ರದರ್ಶನ ನೀಡಲಿಲ್ಲ. ಆದರೆ ನಂತರ ಚೇತರಿಕೆ ಕಂಡು ಲಭ್ಯ 150ರಲ್ಲಿ 139 ಪಾಯಿಂಟ್ಸ್ ಗಳಿಸಿ, ವಿಜಯ ವೇದಿಕೆಯಲ್ಲಿ ಎತ್ತರದಲ್ಲಿ ನಿಂತರು. ಕುವೈಟ್‌ನ ತಲಾಲ್ ಅಲ್ ರಶೀದಿ (134) ಹಾಗೂ ಕತಾರ್‌ನ ರಶೀದ್ ಅಲ್ ಅತ್ಬಾ (132) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.

ಪ್ರತಿಕ್ರಿಯಿಸಿ (+)