ಸೋಮವಾರ, ಮಾರ್ಚ್ 1, 2021
31 °C

ಇರಬೇಕಾ, ಕೈಬಿಡಬೇಕಾ ?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಇರಬೇಕಾ, ಕೈಬಿಡಬೇಕಾ ?

ನಿಮಗೆಲ್ಲಾ ಗೊತ್ತೇ ಇದೆ. ಒಲಿಂಪಿಕ್ಸ್‌ನಲ್ಲಿ 100 ಮೀಟರ್‌ ಓಟದಲ್ಲಿ ಪಾಲ್ಗೊಳ್ಳಲು ನೀವು ರಾಷ್ಟ್ರೀಯ ಚಾಂಪಿಯನ್ ಆಗಿದ್ದರೆ ಸಾಲದು. ಬದಲಾಗಿ ಇಂತಿಷ್ಟು ಸೆಕೆಂಡ್‌ಗಳಲ್ಲಿ ಆ ಓಟವನ್ನು ಪೂರೈಸಿರಬೇಕು ಎಂಬ ಅರ್ಹತಾ ಮಟ್ಟವನ್ನು ನಿಗದಿಪಡಿಸಲಾಗಿರುತ್ತದೆ. ಇದು ಎಲ್ಲಾ ವಿಭಾಗಗಳ ಸ್ಪರ್ಧೆಗಳಿಗೆ ಅನ್ವಯಿಸುತ್ತದೆ. ಅಕಸ್ಮಾತ್ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆದವರಿಗೆಲ್ಲಾ ಅವಕಾಶ ಸಿಗುವುದಾಗಿದ್ದರೆ 200 ದೇಶಗಳ ಅಥ್ಲೀಟ್‌ಗಳು ಎಲ್ಲಾ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಒಲಿಂಪಿಕ್ ಕ್ರೀಡಾಕೂಟ 15 ದಿನಗಳ ಬದಲಿಗೆ ಒಂದೂವರೆ ತಿಂಗಳು ನಡೆಯಬೇಕಾಗುತಿತ್ತು. ಯಾರಲ್ಲೂ ಕುತೂಹಲ ಉಳಿಯುತ್ತಿರಲಿಲ್ಲ.ಈ ಮಾತನ್ನು ಇಲ್ಲಿ ಉಲ್ಲೇಖಿಸಲು ಕಾರಣ ಬಾಂಗ್ಲಾದೇಶದಲ್ಲಿ ಈಗ ನಡೆ ಯುತ್ತಿರುವ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ. ಈ ವಿಶ್ವಕಪ್‌ನಲ್ಲಿ ನೇಪಾಳ, ಹಾಂಕಾಂಗ್‌, ಯುಎಇ ರೀತಿಯ ತಂಡಗಳಿಗೆ ಅವಕಾಶ ನೀಡಲಾಗಿದೆ. ಐರ್ಲೆಂಡ್‌, ಜಿಂಬಾಬ್ವೆ, ಆಫ್ಘಾನಿಸ್ತಾನ, ಬಾಂಗ್ಲಾದೇಶದಂಥ ರಾಷ್ಟ್ರಗಳೂ ಇವೆ. ಇವುಗಳಲ್ಲಿ ಕೆಲ ತಂಡಗಳು ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿವೆ. ಆದರೆ ನೇಪಾಳ, ಹಾಂಕಾಂಗ್‌, ಯುಎಇ ತಂಡಗಳಿಗೆ ವಿಶ್ವಕಪ್‌ನಂಥ ಪ್ರತಿಷ್ಠಿತ ಟೂರ್ನಿಗಳಲ್ಲಿ ಅವಕಾಶ ನೀಡಬೇಕಿತ್ತೇ ಎಂಬ ಪ್ರಶ್ನೆ ಎದ್ದಿದೆ.ಈ ತಂಡಗಳು ಆಡುವಾಗ ಕ್ರೀಡಾಂಗಣಗಳು ಖಾಲಿಯಾಗಿರುತ್ತವೆ. ಪ್ರಾಯೋಜಕರು ಹಿಂದೇಟು ಹಾಕುತ್ತಾರೆ. ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಚಾನಲ್‌ನ ಟಿಆರ್‌ಪಿ ರೇಟಿಂಗ್ಸ್‌ ಕೂಡ ಕಡಿಮೆಯಾಗುತ್ತದೆ. ಪುಟ್ಟ ರಾಷ್ಟ್ರಗಳಿಗೆ ಅವಕಾಶ ನೀಡುತ್ತಿರುವುದರಿಂದ ವಿಶ್ವಕಪ್ ಸುದೀರ್ಘವಾಗುತ್ತಿದೆ. ಇದರಿಂದ ಪ್ರೇಕ್ಷಕರಿಗೆ ಬೋರು ಹೊಡೆಸುತ್ತಿದೆ. ಅಚ್ಚರಿ ಪ್ರದರ್ಶನಗಳೂ ಮೂಡಿಬಂದಿವೆ. ಆದರೆ ಕೆಲ ತಂಡಗಳು 60-70 ರನ್‌ಗಳಿಗೆ ಆಲೌಟ್ ಆಗುತ್ತಿವೆ. ಇಂಥ ಪಂದ್ಯಗಳಿಂದ ಪ್ರಯೋಜವೇನು ಎಂಬ ಮಾತು ಕೇಳಿಬರುತ್ತಿದೆ.ನಿಜ, ಎರಡನೇ ತರಗತಿಯಲ್ಲೊ ಮೂರನೇ ತರಗತಿಯಲ್ಲೊ ಓದುತ್ತಿರುವ ವಿದ್ಯಾರ್ಥಿಯೊಬ್ಬನ್ನನ್ನು ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕೂರಿಸಿ ಪಾಸ್ ಆಗು ಎಂದರೆ ಹೇಗೆ? ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಪುಟ್ಟ ರಾಷ್ಟ್ರಗಳಿಗೂ ಈ ಉದಾಹರಣೆ ಅನ್ವಯಿಸುತ್ತದೆ. ಹಾಗಾಗಿ ಮೊದಲು ಆ ರಾಷ್ಟ್ರಗಳಲ್ಲಿ ಕ್ರಿಕೆಟ್ ಸುಧಾರಣೆಗೆ ಅವಕಾಶ ಮಾಡಿಕೊಡಬೇಕು. ದೇಶಿ ಕ್ರಿಕೆಟ್ ಟೂರ್ನಿ ಆಯೋಜಿಸಬೇಕು. ಈ ಪುಟ್ಟ ರಾಷ್ಟ್ರಗಳ ನಡುವೆ ಹೆಚ್ಚೆಚ್ಚು ಕ್ರಿಕೆಟ್ ನಡೆಸಬೇಕು. ಆರ್ಥಿಕ ನೆರವು ನೀಡಬೇಕು. ಸೂಕ್ತ ಮಾರ್ಗದರ್ಶನ ಹಾಗೂ ಸೌಲಭ್ಯ ನೀಡಬೇಕು. ತಳಮಟ್ಟದ ಕ್ರಿಕೆಟ್‌ಗೆ ಒತ್ತು ನೀಡಬೇಕು. ಅದಕ್ಕೆ ಬದಲಾಗಿ ವಿಶ್ವಕಪ್‌ನಂಥ ದೊಡ್ಡ ವೇದಿಕೆಗಳಲ್ಲಿ ಸ್ಟೇನ್ ಅಥವಾ ಮಾರ್ಕೆಲ್ ಅವರಂಥ ಬೌಲರ್‌ಗಳ ಎದುರು ಆಡಿದರೆ ಹೆಚ್ಚು ಅಭಿವೃದ್ಧಿ ಕಾಣಬಹುದು ಎಂಬುದು ಸಿನಿಕತನ. ದೋನಿ, ಕೊಹ್ಲಿ, ಗೇಲ್, ಅಫ್ರಿದಿ, ಡಿವಿಲಿಯರ್ಸ್‌ ಅವರಂಥ ಆಟಗಾರರ ಜೊತೆ ಆಡುವುದರಿಂದ ಹೆಚ್ಚು ಅನುಭವ ಸಿಗುತ್ತದೆ  ಎಂಬ ಮಾತನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ವಿಶ್ವಕಪ್ ಆಡಿದರೆ ಮಾತ್ರ ಆ ದೇಶದಲ್ಲಿ ಕ್ರಿಕೆಟ್‌ ಅಭಿವೃದ್ಧಿ ಸಾಧ್ಯ ಎಂಬ ಅಭಿಪ್ರಾಯಕ್ಕೆ ಅರ್ಥವೂ ಇಲ್ಲ. ಅಷ್ಟಕ್ಕೂ ಟಿ-20 ವಿಶ್ವಕಪ್ ನಡೆಯುವುದು ಎರಡು ವರ್ಷಗಳಿಗೊಮ್ಮೆ. 2015ರ ಏಕದಿನ ವಿಶ್ವಕಪ್‌ಗೆ ಪುಟ್ಟ ರಾಷ್ಟ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ಐಸಿಸಿ ಹೇಳಿದೆ. ಇದೊಂದು ಉತ್ತಮ ತೀರ್ಮಾನ ಕೂಡ.ಆದರೆ ಆರ್ಥಿಕ ದೃಷ್ಟಿಕೋನ ಇಟ್ಟು ಕೊಂಡು ಈ ಮಾತು ಹೇಳಲಾಗುತ್ತಿದೆ ಎಂಬ ಆರೋಪವೂ ಇದೆ. ಪುಟ್ಟ ರಾಷ್ಟ್ರಗಳಿಗೆ ಅವಕಾಶ ನೀಡದಿದ್ದರೆ ಅಲ್ಲಿ ಕ್ರಿಕೆಟ್ ಅಭಿವೃದ್ಧಿ ಹೇಗೆ ಎಂಬುದು ಕೆಲವರ ಪ್ರಶ್ನೆ. ಕ್ರಿಕೆಟ್ ಆಡಲು ಶುರು ಮಾಡಿದಾಗ ಭಾರತ ಕೂಡ ದುರ್ಬಲ ತಂಡವಾಗಿತ್ತು. 1979ರ ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಮೊದಲ ಟೆಸ್ಟ್ ಗೆಲ್ಲಲು 20 ವರ್ಷ ತೆಗೆದುಕೊಂಡಿತ್ತು. ಅಕಸ್ಮಾತ್‌ ಭಾರತ ದುರ್ಬಲ ತಂಡ ಎಂದು ಅವಕಾಶ ನೀಡಿರದಿದ್ದರೆ 1983ರ ವಿಶ್ವಕಪ್‌ ಗೆಲ್ಲಲು ಸಾಧ್ಯವಿತ್ತೇ ಎಂಬುದು ಕೆಲವರ ವಾದ.

1996ರವರೆಗೆ ಶ್ರೀಲಂಕಾ ಕೂಡ ದುರ್ಬಲ ತಂಡ ಎಂಬ ಟೀಕೆ ಎದುರಿಸುತ್ತಿತ್ತು. ಆದರೆ 1996ರಲ್ಲಿ ವಿಶ್ವಕಪ್ ಗೆದ್ದ ಮೇಲೆ ಆ ದೇಶದ ತಂಡವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ಈಗಲೇ ನೋಡಿ ವಿದೇಶದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಭಾರತದವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ದೇಶವನ್ನು ಟೆಸ್ಟ್ ಆಡದಂತೆ ನಿರ್ಬಂಧಿಸಬೇಕು ಎಂಬ ಮಾತು ಕೇಳಿಬರುತ್ತಿದೆ.ಹಿಂದೆ ಕೆಲ ಪಂದ್ಯಗಳಲ್ಲಿ  ಕೀನ್ಯಾ, ಐರ್ಲೆಂಡ್ ಅಮೋಘ ಪ್ರದರ್ಶನ ತೋರಿವೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಕೀನ್ಯಾ ಸೆಮಿಫೈನಲ್ ತಲುಪಿತ್ತು. 2007ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದ್ದ ಭಾರತ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ವಿಂಡೀಸ್‌ನಲ್ಲಿ ನಡೆದ ಅದೇ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಸೋತ ಪಾಕ್ ಮೊದಲ ಸುತ್ತಿನಲ್ಲಿ ಹೊರಬಿದ್ದಿತ್ತು. ಇತ್ತೀಚೆಗೆ ಆಫ್ಘಾನಿಸ್ತಾನ ತಂಡದವರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಯುದ್ಧಪೀಡಿತ ಈ ರಾಷ್ಟ್ರದವರ ಪ್ರಗತಿ ಮೆಚ್ಚಬೇಕಾದಂಥದ್ದು.2011ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್‌ನ ಐರ್ಲೆಂಡ್-ಇಂಗ್ಲೆಂಡ್ ನಡುವಿನ ಪಂದ್ಯದ ಉದಾಹರಣೆ ತೆಗೆದುಕೊಳ್ಳಿ. ಆಗ ಕೆವಿನ್ ಓಬ್ರಿಯಾನ್ ಕೇವಲ 50 ಎಸೆತಗಳಲ್ಲಿ ಶತಕ ಗಳಿಸಿದ್ದರು. ಆ ಪಂದ್ಯದಲ್ಲಿ ಐರ್ಲೆಂಡ್ ಗೆದ್ದಿತ್ತು. ಆದರೆ ನೆರೆಯ ರಾಷ್ಟ್ರ ಇಂಗ್ಲೆಂಡ್‌ ನೆರಳಿನಲ್ಲಿ ಐರ್ಲೆಂಡ್‌ ಸಾಧನೆ ಮಂಕಾಗಿದೆ.ಇನ್ನೊಂದು ವಿಷಯವೆಂದರೆ ಐರ್ಲೆಂಡ್, ಕೆನಡಾ, ಹಾಂಕಾಂಗ್ ತಂಡದವರು ವೃತ್ತಿಪರ ಆಟಗಾರರಲ್ಲ. ಕೆಲಸದ ನಡುವೆ ಬಿಡುವಿದ್ದಾಗ ಕ್ರಿಕೆಟ್ ಆಡುವವರು. ನಿಮಗೆ ಗೊತ್ತಿರಬಹುದು ಐರ್ಲೆಂಡ್ ತಂಡದವರು 2011ರ ವಿಶ್ವಕಪ್‌ನಲ್ಲಿ ಎರಡನೇ ಹಂತ ಪ್ರವೇಶಿಸಿದ್ದರು. ಆದರೆ ಅವರು ತಮ್ಮ ಕೆಲಸಕ್ಕೆ ರಜೆ ಹಾಕಿದ್ದು ಗುಂಪು ಹಂತದ ಪಂದ್ಯಗಳಿಗೆ ಮಾತ್ರ. ಆಗ ಮತ್ತೊಂದು ಮನವಿ ಪತ್ರ ನೀಡಿ ಕಷ್ಟಪಟ್ಟು ಹೆಚ್ಚುವರಿ ರಜೆ ಗಿಟ್ಟಿಸಿಕೊಂಡಿದ್ದರು.ನಿಜ, ತಮ್ಮ ದೇಶದ ಆಟಗಾರರು ಬಲಿಷ್ಠ ರಾಷ್ಟ್ರಗಳೊಂದಿಗೆ ಆಡುವುದನ್ನು ನೋಡಲು ಆ ದೇಶಗಳ ಜನರು ಇಷ್ಟಪಡುತ್ತಾರೆ. ಹಾಗೇ, ಆಟಗಾರರು ಕೂಡ ಅದಕ್ಕಾಗಿ ಕಾಯುತ್ತಿರುತ್ತಾರೆ. 2011ರಲ್ಲಿ ಐರ್ಲೆಂಡ್, ಹಾಲೆಂಡ್ ತಂಡದ ಆಟಗಾರರು ಸಚಿನ್ ತೆಂಡೂಲ್ಕರ್ ಆಟೋಗ್ರಾಫ್‌ಗಾಗಿ ಮುಗಿಬಿದ್ದಿದ್ದರು. ಆದರೆ ಹಾಂಕಾಂಗ್‌, ನೇಪಾಳ, ಯುಎಇ ತಂಡಗಳು ವಿಶ್ವಕಪ್‌ನಲ್ಲಿ ಆಡಿದ ಮಾತ್ರಕ್ಕೆ ಅಲ್ಲಿ ಕ್ರಿಕೆಟ್‌ ಅಭಿವೃದ್ಧಿಯಾಗುತ್ತಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರವಿಲ್ಲ. ವಿಶ್ವಕಪ್ ಎಂದರೆ ಅದು ಪ್ರಬಲ ತಂಡಗಳ ಪೈಪೋಟಿಯ ಕಣ. ಒಂದು ತಂಡ 50 ರನ್‌ಗೆ ಔಟ್ ಆಗಿ ಅದನ್ನು ಆಸ್ಟ್ರೇಲಿಯಾದಂಥ ತಂಡ ಬೆನ್ನಟ್ಟುವುದರಲ್ಲಿ ಯಾವ ರೀತಿಯ ಸಾಹಸ ಅಡಗಿದೆ? ಐರ್ಲೆಂಡ್-ನೇಪಾಳ ನಡುವಿನ ಪಂದ್ಯವನ್ನು ಯಾರು ವೀಕ್ಷಿಸುತ್ತಾರೆ? ಹಾಂಕಾಂಗ್-ಆಫ್ಘಾನಿಸ್ತಾನದ ಪಂದ್ಯದಿಂದ ಸಂಘಟಕರಿಗೇನು ಲಾಭ?  ಹೀಗೆ ಪ್ರಶ್ನೆಗಳು ಹಲವು. ವಿಶ್ವಕಪ್‌ ಟೂರ್ನಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಆಸಕ್ತಿ ಕೆರಳಿಸಲು ದುರ್ಬಲ ರಾಷ್ಟ್ರಗಳನ್ನು ಹೊರಗಿಡುವುದೇ ಒಳಿತು ಎನ್ನುವವರೇ ಹೆಚ್ಚು. ಈ ತಂಡಗಳು ಅಚ್ಚರಿ ಫಲಿತಾಂಶ ನೀಡಬಹುದು. ಅದು ಅಪರೂಪಕ್ಕೊಮ್ಮೆ ಮಾತ್ರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.