ಶುಕ್ರವಾರ, ಜೂನ್ 18, 2021
20 °C

ಇರಾಕ್‌ನಲ್ಲಿ ಬಾಂಬ್ ದಾಳಿ: 44 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರಾಕ್‌ನಲ್ಲಿ ಬಾಂಬ್ ದಾಳಿ: 44 ಸಾವು

 ಬಾಗ್ದಾದ್ (ಎಪಿ):  ಶಿಯಾ ಪಂಗಡದ ಪವಿತ್ರ ನಗರಗಳು, ಪೊಲೀಸರು, ಶಾಪಿಂಗ್ ಮಾಲ್‌ಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಗುರಿಯಾಗಿರಿಸಿಕೊಂಡು ಉಗ್ರಗಾಮಿಗಳು ಮಂಗಳವಾರ ಇರಾಕ್‌ನಾದ್ಯಂತ ನಡೆಸಿದ ಬಾಂಬ್ ದಾಳಿಗಳಿಂದ 44 ಮಂದಿ ಸಾವನ್ನಪ್ಪ್ದ್ದಿದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಮುಂದಿನ ವಾರ ಇಲ್ಲಿ ನಡೆಯಲಿರುವ ಅರಬ್ ರಾಷ್ಟ್ರಗಳ ಹಿರಿಯ ನಾಯಕರ ವಾರ್ಷಿಕ ಶೃಂಗಸಭೆಗೆ ಮುನ್ನ ನಡೆದಿರುವ ಈ ದಾಳಿಯಿಂದ ಇರಾಕ್ ಅಧಿಕಾರಿಗಳು ಕಳವಳಗೊಂಡಿದ್ದಾರೆ. ಸರ್ಕಾರದ ಸ್ಥಿರತೆಗೆ ಧಕ್ಕೆ ಉಂಟು ಮಾಡುವ ಸಲುವಾಗಿ ಉಗ್ರರು ಈ ಭೀಕರ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಿದ್ದಾರೆ.ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಳ್ಳದಿದ್ದರೂ, ಅಲ್‌ಖೈದಾ ಅಥವಾ ಅದರ ಸುನ್ನಿ ವಿಭಾಗದ ಕೈವಾಡ ಈ ಕೃತ್ಯದ ಹಿಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಾಗ್ದಾದ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಶಿಯಾಗಳ ಪವಿತ್ರ ನಗರವಾದ ಕರ್ಬಾಲಾದ ಜನದಟ್ಟಣೆಯ ವ್ಯಾಪಾರ ಕೇಂದ್ರ ಹಾಗೂ ರೆಸ್ಟೋರೆಂಟ್ ಪ್ರದೇಶದಲ್ಲಿ ನಡೆದ ಎರಡು ಪ್ರಬಲ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, 50 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಇರಾನ್‌ನ ಐವರು ಯಾತ್ರಾರ್ಥಿಗಳೂ ಸೇರಿದ್ದಾರೆ.`ಕರ್ಬಾಲಾದ ಭದ್ರತಾ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಸಲುವಾಗಿ ಮತ್ತು ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಸಲುವಾಗಿ ಈ ದಾಳಿ ನಡೆದಿದೆ. ಜೊತೆಗೆ ಇದು ಇರಾಕ್ ಭೇಟಿ ನೀಡಲು ಸೂಕ್ತವಾದ ಸ್ಥಳವಲ್ಲ ಎಂಬ ಸಂದೇಶವನ್ನು ಅರಬ್ ಮುಖಂಡರಿಗೆ ರವಾನಿಸುತ್ತದೆ~ ಎಂದು ಸ್ಥಳೀಯ ಪ್ರಾಂತೀಯ ಮಂಡಳಿ ಸದಸ್ಯ ಹುಸೇನ್ ಶಾಧಾನ್ ಅಲ್- ಅಬೌದಿ ತಿಳಿಸಿದ್ದಾರೆ.ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿರಿಸಿ ಒಟ್ಟು ಎಂಟು ನಗರಗಳ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, ಬಾಗ್ದಾದ್‌ನ ಪಶ್ಚಿಮದಲ್ಲಿನ ಫಲ್ಲುಜಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆಯನ್ನು ಸ್ಫೋಟಿಸಲಾಗಿದೆ. ಉತ್ತರ ಭಾಗದ ಕಿರ್ಕುಕ್ ನಗರದ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಲಾಗಿದೆ. ಇಷ್ಟೇ ಅಲ್ಲದೆ ಶೃಂಗಸಭೆ ನಡೆಯಲಿರುವ ಬಾಗ್ದಾದ್‌ನ `ಹಸಿರು ವಲಯ~ದ ಬಳಿ ಬಾಂಬ್‌ಗಳನ್ನು ಇರಿಸುವ ಮೂಲಕ ಭೀತಿಯ ವಾತಾವರಣ ನಿರ್ಮಿಸುವುದರೊಂದಿಗೆ ರೆಸ್ಟೋರೆಂಟ್‌ಗಳು ಮತ್ತು ವ್ಯಾಪಾರ ಕೇಂದ್ರಗಳ ಬಳಿಯೂ ಉಗ್ರಗಾಮಿಗಳು ಬಾಂಬ್ ದಾಳಿ ನಡೆಸಿದ್ದಾರೆ.`ನಾನು ಕೆಲಸಕ್ಕೆ ಬಂದ ಕೂಡಲೇ ಠಾಣೆಯ ಹೊರಗೆ ಸ್ಫೋಟ ಸಂಭವಿಸಿತು. ಕೂಡಲೇ ಕಾರಿನಿಂದಿಳಿದು ನೋಡಿದಾಗ ಅದೊಂದು ನರಕದ ದೃಶ್ಯದಂತೆ ಕಂಡುಬಂತು. ಎಲ್ಲಿ ನೋಡಿದರೂ ಬೆಂಕಿ ಮತ್ತು ಮೃತದೇಹಗಳು ಕಾಣುತ್ತಿದ್ದವು~ ಎಂದು ಕಿರ್ಕುಕ್ ಠಾಣೆಯ ಛಾಯಾಚಿತ್ರಗ್ರಾಹಕ ಸಮಾನ್ ಮಜಿದ್ ತಮಗಾದ ಅನುಭವವನ್ನು ವಿವರಿಸಿದ್ದಾರೆ.ಇರಾಕ್ ಇದೇ ಮೊದಲ ಬಾರಿಗೆ ಅರಬ್ ರಾಷ್ಟ್ರಗಳ ಹಿರಿಯ ನಾಯಕರ ಶೃಂಗಸಭೆಯನ್ನು ನಡೆಸುತ್ತಿದೆ. ಕಳೆದ ವರ್ಷ ಬಾಗ್ದಾದ್‌ನಲ್ಲಿ ಈ ಶೃಂಗಸಭೆ ನಡೆಸಲು ನಿರ್ಧರಿಸಲಾಗಿತ್ತಾದರೂ ಭದ್ರತಾ ಕಾರಣಗಳಿಂದ ಅದನ್ನು ಮುಂದೂಡಲಾಗಿತ್ತು.ಮುಂದಿನ ವಾರದ ಶೃಂಗಸಭೆಗೆ ಪ್ರಮುಖರು ಹಾಗೂ ಪತ್ರಕರ್ತರು ಸೇರಲಿರುವುದರಿಂದ ಇನ್ನಷ್ಟು ದಾಳಿಗಳು ನಡೆಯುವ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.