ಶುಕ್ರವಾರ, ಮೇ 27, 2022
27 °C

ಇರಾನ್‌ನಿಂದ ತೈಲ ಆಮದು ನಿರ್ಬಂಧ: ಭಾರತ ಸೇರಿ 7 ರಾಷ್ಟ್ರಗಳಿಗೆ ವಿನಾಯ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಇರಾನ್‌ನಿಂದ ತೈಲ ಆಮದು ನಿರ್ಬಂಧ ನೀತಿಯನ್ನು ಸಡಿಲಿಸಿರುವ ಅಮೆರಿಕ, ಭಾರತ ಸೇರಿದಂತೆ ಏಳು ರಾಷ್ಟ್ರಗಳಿಗೆ ಇದರಿಂದ ವಿನಾಯ್ತಿ ನೀಡಿದೆ.ಭಾರತದೊಂದಿಗೆ ಮಲೇಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟರ್ಕಿ, ತೈವಾನ್, ಕೊರಿಯಾ ಗಣರಾಜ್ಯ ವಿನಾಯ್ತಿ ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿವೆ. ಈ ರಾಷ್ಟ್ರಗಳು ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕದ ವಿದೇಶಾಂಗ  ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮಂಗಳವಾರ  ಸಮರ್ಥಿಸಿಕೊಂಡಿದ್ದಾರೆ.ಭಾರತ ಮತ್ತು ಅಮೆರಿಕದ ಮಧ್ಯೆ ಆರಂಭವಾಗಲಿರುವ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಇಲ್ಲಿಗೆ ಆಗಮಿಸುವ ಕೆಲವೇ ಗಂಟೆಗಳಿಗೆ ಮೊದಲು ಈ ಮಹತ್ವದ ಹೇಳಿಕೆ ಹೊರಬಿದ್ದಿದೆ. ಏಳು ರಾಷ್ಟ್ರಗಳ ಆರ್ಥಿಕ ಸಂಸ್ಥೆಗಳಿಗೆ ದಿಗ್ಬಂಧನದ ಕಟ್ಟಳೆಗಳು ಅನ್ವಯಿಸುವುದಿಲ್ಲ ಎಂದು ಹಿಲರಿ ಇಸ್ಪಷ್ಟಪಡಿಸಿದ್ದಾರೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರಾನ್ ಕಚ್ಚಾ ತೈಲ ಮಾರಾಟಕ್ಕೆ ಕಡಿವಾಣ ಹಾಕುವ ಮೂಲಕ ಆ ರಾಷ್ಟ್ರದ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. 7 ರಾಷ್ಟ್ರಗಳಿಗೆ ವಿನಾಯ್ತಿ ನೀಡಿರುವುದು ಆರ್ಥಿಕ ದಿಗ್ಬಂಧನದ ಯಶಸ್ವಿ ಅನುಷ್ಠಾನದ ಪ್ರತೀಕವಾಗಿದೆ ಎಂದು ಹಿಲರಿ ಅಭಿಪ್ರಾಯಪಟ್ಟಿದ್ದಾರೆ.ಅಣ್ವಸ್ತ್ರ ತಯಾರಿಕೆ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಲು ಇರಾನ್ ದೃಢ ನಿರ್ಧಾರ ಕೈಗೊಳ್ಳಬೇಕು. ತಾನು ಕೈಗೊಂಡ ಕ್ರಮಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು. ಅಲ್ಲಿಯವರೆಗೆ ಆ ರಾಷ್ಟ್ರಕ್ಕೆ ಆರ್ಥಿಕ ನಿರ್ಬಂಧದ ಶಿಕ್ಷೆ ತಪ್ಪಿದ್ದಲ್ಲ. ಮಾಸ್ಕೊದಲ್ಲಿ ನಡೆಯಲಿರುವ ಮುಂದಿನ ಹಂತದ ಮಾತುಕತೆ ವೇಳೆ ಇರಾನ್‌ಗೆ ಮತ್ತೊಂದುಅವಕಾಶ ನೀಡುವುದಾಗಿ ಕ್ಲಿಂಟನ್ ಹೇಳಿದ್ದಾರೆ.ಭಾರತ ಪ್ರತಿಕ್ರಿಯೆ: `ತನ್ನ ದೇಶದ ಕಾನೂನು ಪ್ರಕಾರ ಅಮೆರಿಕ ಈ ನಿರ್ಧಾರ ತೆಗೆದುಕೊಂಡಿದೆ~ ಎಂದು ಭಾರತ ಹೇಳಿದೆ.`ನಾವು ಏಕಪಕ್ಷೀಯ ನಿರ್ಬಂಧದ ಮೇಲೆ ನಂಬಿಕೆ ಇಟ್ಟಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ~ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್ ಅಕ್ಬರುದ್ದಿನ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.