ಸೋಮವಾರ, ಡಿಸೆಂಬರ್ 16, 2019
25 °C

ಇರಾನ್ ತೈಲ ಆಮದು ಕಡಿತ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರಾನ್ ತೈಲ ಆಮದು ಕಡಿತ ಇಲ್ಲ

ಷಿಕಾಗೊ (ಪಿಟಿಐ): ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಇರಾನ್ ಮೇಲೆ ನಿರ್ಬಂಧ ಹೇರಿದ್ದರೂ  ಆ ದೇಶದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ತೈಲ ಉತ್ಪನ್ನದ ಪ್ರಮಾಣದಲ್ಲಿ ಕಡಿತ ಮಾಡುವುದಿಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟು ತೈಲ ಉತ್ಪನ್ನದಲ್ಲಿ ಶೇ 12ರಷ್ಟು ಇರಾನ್‌ನಿಂದ ಬರುತ್ತಿದೆ. ಹಾಗಾಗಿ ತಕ್ಷಣಕ್ಕೆ ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ತೈಲ ಉತ್ಪನ್ನವನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾವ ಭಾರತದ ಮುಂದೆ ಇಲ್ಲ ಎಂದರು.ಭಾರತಕ್ಕೆ ತೈಲ ಉತ್ಪನ್ನ ರಫ್ತು ಮಾಡುತ್ತಿರುವ ಪ್ರಮುಖ ದೇಶಗಳ ಪಟ್ಟಿಯಲ್ಲಿ ಇರಾನ್ ಸಹ ಸೇರಿದೆ. ಹಾಗಾಗಿ ಅಲ್ಲಿಂದ ತೈಲ ಉತ್ಪನ್ನ ಗಣನೀಯ ಪ್ರಮಾಣದಲ್ಲಿ  ಕಡಿತಗೊಳಿಸುವ ಉದ್ದೇಶ ಭಾರತಕ್ಕೆ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಸೌದಿ ಅರೇಬಿಯಾ, ನೈಜೀರಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳೂ ಭಾರತಕ್ಕೆ ತೈಲ ಉತ್ಪನ್ನ ರಫ್ತು ಮಾಡುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಇರಾನ್‌ನ ಮುಂಚೂಣಿಯಲ್ಲಿರುವ ದೇಶ ಎಂದರು.ಭಾರತ ಪ್ರತಿ ವರ್ಷ 110 ದಶಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇರಾನ್‌ನಿಂದ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಈ ಎಲ್ಲಾ ಕಾರಣಗಳಿಂದ ಇರಾನ್‌ನಿಂದ ಕಚ್ಚಾ ತೈಲ ಆಮದು ಪ್ರಮಾಣ ಕಡಿಮೆ ಮಾಡುವ ಬಗ್ಗೆ ಭಾರತ ಚಿಂತನೆ ನಡೆಸಿಲ್ಲ ಎಂದು ಪ್ರಣವ್ ಸ್ಪಷ್ಟಪಡಿಸಿದರು.ವಿವಾದಿತ ಪರಮಾಣು ಯೋಜನೆ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ನಿರ್ಬಂಧ ವಿಧಿಸಿವೆ.ಸಜ್ಜನಿಕೆಗೆ ಪ್ರಶಂಸೆ: ವಿದೇಶಗಳಲ್ಲಿರುವ ಭಾರತೀಯರ ಸಜ್ಜನಿಕೆಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಹೆಚ್ಚುವಂತಾಗಿದೆ ಎಂದು ಪ್ರಣವ್ ಮುಖರ್ಜಿ ಪ್ರಶಂಸೆ ವ್ಯಕ್ತಪಡಿಸಿದರು.ಇಲ್ಲಿನ ಭಾರತೀಯ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಗೌರವ ಲಭಿಸುತ್ತಿದೆ ಎಂದರೆ ಅದು ಸಾಮಾನ್ಯ ವಿಷಯವಲ್ಲ.ಹೊರ ದೇಶಗಳಲ್ಲಿ ಇರುವ ಭಾರತೀಯ ಸಮುದಾಯದವರು ಅನುಸರಿಸುತ್ತಿರುವ ಸಜ್ಜನಿಕೆಯ ನಡವಳಿಕೆಯೇ ಇದಕ್ಕೆ ಪ್ರಮುಖ ಕಾರಣ ಎಂದರು.ಹೊರ ದೇಶಗಳಲ್ಲಿರುವ ಭಾರತೀಯರ ಅನುಕೂಲಕ್ಕಾಗಿ ಭಾರತ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.ಹೊರ ದೇಶದಲ್ಲಿರುವ ಭಾರತೀಯರು 1950ರ ಜನಪ್ರತಿನಿಧಿ ಕಾಯಿದೆ ಅನ್ವಯ ನೋಂದಣಿ ಮಾಡಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)