ಇರಾನ್ ಭೂಕಂಪನ: ಬದುಕುಳಿದವರಿಗಾಗಿ ಹುಡುಕಾಟ

ಸೋಮವಾರ, ಮೇ 27, 2019
24 °C

ಇರಾನ್ ಭೂಕಂಪನ: ಬದುಕುಳಿದವರಿಗಾಗಿ ಹುಡುಕಾಟ

Published:
Updated:
ಇರಾನ್ ಭೂಕಂಪನ: ಬದುಕುಳಿದವರಿಗಾಗಿ ಹುಡುಕಾಟ

ವರ್ಜಾಕಾನ್ (ಇರಾನ್) (ಎಎಫ್‌ಪಿ): ಕಣ್ಣ ಮುಂದೆ ಚೆಲ್ಲಾಡಿರುವ ಸಂಬಂಧಿಗಳ ಶವದ ಮುಂದೆ ಕಣ್ಣೀರಿಡುತ್ತಿರುವ ಮಹಿಳೆಯರು, ಸಲಿಕೆ, ಗುದ್ದಲಿ ಹಿಡಿದು ಕುಸಿದುಬಿದ್ದ ಮನೆಗಳ ಅವಶೇಷಗಳಡಿ ಬದುಕುಳಿದವರಿಗಾಗಿ ಹುಡುಕುತ್ತಿರುವ ಪುರುಷರು....ಇರಾನ್‌ನ ಈಶಾನ್ಯ ಭಾಗದಲ್ಲಿ ಶನಿವಾರ ಸಂಭವಿಸಿದ ಅವಳಿ ಭೂಕಂಪನಗಳ ನಂತರ ಆ ಪ್ರದೇಶದ ಹಳ್ಳಿಗಳಲ್ಲೆಲ್ಲಾ ಈ ಕರುಳು ಹಿಂಡುವ ದೃಶ್ಯ ಸಾಮಾನ್ಯವಾಗಿದೆ. ಭೂಕಂಪನಗಳಲ್ಲಿ ಸತ್ತವರ ಸಂಖ್ಯೆ 227ಕ್ಕೆ ಏರಿದೆ. 1,380ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ತಬ್ರೀಜ್ ನಗರದಿಂದ ಈಶಾನ್ಯಕ್ಕಿರುವ ಹಳ್ಳಿಗಳಲ್ಲಿ ಭೂಕಂಪನದಿಂದ ಅತಿ ಹೆಚ್ಚಿನ ಹಾನಿಯಾಗಿದೆ. ಸುದ್ದಿಸಂಸ್ಥೆ ಪ್ರತಿನಿಧಿಗಳು ಅಲ್ಲಿಗೆ ಭೇಟಿ ನೀಡಿದಾಗ ಪರಿಹಾರ ಕಾರ್ಯಕರ್ತರು ಗಾಯಗೊಂಡವರ ಆರೈಕೆಯಲ್ಲಿ, ಕುಸಿದುಬಿದ್ದ ಮಣ್ಣಿನ ಹಾಗೂ ಕಾಂಕ್ರೀಟ್ ಅವಶೇಷ ತೆರವುಗೊಳಿಸುವಲ್ಲಿ ನಿರತರಾಗಿರುವ ದೃಶ್ಯ ಕಂಡುಬಂತು.ಮೃತಪಟ್ಟ ಮಹಿಳೆಯರು ಹಾಗೂ ಮಕ್ಕಳ ಶವಗಳನ್ನು ಸಾಲು, ಸಾಲಾಗಿ ಮಲಗಿಸಲಾಗಿದ್ದು, ಮೃತರ ಅಂತ್ಯಸಂಸ್ಕಾರಕ್ಕಾಗಿ ಗೋರಿ ತೋಡುವ ಕಾರ್ಯದಲ್ಲಿ ಹಳ್ಳಿಯ ಪುರುಷರು ತೊಡಗಿಕೊಂಡಿದ್ದರು.ಬದುಕುಳಿದವರಲ್ಲಿ ಭಯದ ಅಲೆ ಹುಟ್ಟುಹಾಕುವಂತೆ, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ಕಾರ್ಯಕರ್ತರ ತಲೆಬಿಸಿ ಹೆಚ್ಚಿಸುವಂತೆ ಶನಿವಾರದಿಂದ ಭೂಮಿ ನಡುಗುತ್ತಲೇ ಇದೆ. 55 ಸಲ ಮರುಕಂಪನಗಳು ಸಂಭವಿಸಿವೆ.ರಂಜಾನ್ ಉಪವಾಸವನ್ನು ಆಚರಿಸುತ್ತಿದ್ದವರಿಗೆ ಆಘಾತ ನೀಡುವಂತೆ ಶನಿವಾರ ಮಧ್ಯಾಹ್ನ 11 ನಿಮಿಷಗಳ ಅಂತರದಲ್ಲಿ 2 ಪ್ರಬಲ ಭೂಕಂಪನಗಳು ಸಂಭವಿಸಿದವು.ತಬ್ರೀಜ್ ನಗರದಿಂದ 60 ಕಿ.ಮೀ. ಈಶಾನ್ಯಕ್ಕಿರುವ ಅಹರ್ ಮತ್ತು ವರ್ಜಾಕಾನ್‌ನಲ್ಲಿ ನೆಲದಿಂದ 10 ಕಿ.ಮೀ. ಆಳದಲ್ಲಿ ಈ ಅವಳಿ ಭೂಕಂಪನಗಳ ಕೇಂದ್ರವಿತ್ತು ಎನ್ನಲಾಗಿದೆ.ಟೆಹರಾನ್ ವಿಶ್ವವಿದ್ಯಾಲಯದ ಭೂಕಂಪನ ಕೇಂದ್ರದ ಪ್ರಕಾರ ಮೊದಲು ರಿಕ್ಟರ್ ಮಾಪಕದಲ್ಲಿ  6.2ರ ತೀವ್ರತೆಯ ಕಂಪನ ಸಂಭವಿಸಿತ್ತು. 11 ನಿಮಿಷಗಳ ನಂತರ 6ರ ತೀವ್ರತೆಯ ಮತ್ತೊಂದು ಕಂಪನದ ಅನುಭವವಾಯಿತು.ಚೀನಾದಲ್ಲೂ ಕಂಪನ

ಬೀಜಿಂಗ್ (ಪಿಟಿಐ):
ವಾಯವ್ಯ ಚೀನಾದಲ್ಲಿ ಭಾನುವಾರ ಭೂಕಂಪನ ಸಂಭವಿಸಿದ್ದು, ಕಂಪನ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.2ರಷ್ಟು ಇತ್ತು. ಯಾವುದೇ ಸಾವು- ನೋವುವಿನ  ವರದಿಯಾಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry