ಗುರುವಾರ , ನವೆಂಬರ್ 14, 2019
18 °C

ಇರಿತ: ಕಾನ್‌ಸ್ಟೆಬಲ್ ಸಾವು ಸಹೋದ್ಯೋಗಿಗೆ ಗಾಯ

Published:
Updated:

ಬೀದರ್: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಪೇದೆಯೊಬ್ಬ ಮತ್ತೊಬ್ಬ ಪೇದೆಗೆ ಚಾಕುವಿನಿಂದ ಇರಿದು ಸ್ವತಃ ತಾನೂ ಇರಿದುಕೊಂಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ನರಸಾರೆಡ್ಡಿ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಜಿಲ್ಲಾ ಅಪರಾಧ ಪತ್ತೆ ದಳದ ಚಾಲಕ ಮನೋಹರ ಮತ್ತು ಮನ್ನಳ್ಳಿ ಠಾಣೆ ಪೇದೆ ನರಸಾರೆಡ್ಡಿ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದರು.  ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಈ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ನರಸಾರೆಡ್ಡಿ ಹಾಗೂ ಮನೋಹರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮನೋಹರ ಅವರನ್ನು ಚಾಕುವಿನಿಂದ ಇರಿದ ನರಸಾರೆಡ್ಡಿ ಬಳಿಕ ತಾನೂ ಇರಿದುಕೊಂಡಿದ್ದಾಗಿ ತಿಳಿದುಬಂದಿದೆ.ವೃತ್ತಿ ವಿಚಾರ ಅಥವಾ ಹಳೆಯ ವೈಷಮ್ಯ ಘಟನೆಗೆ ಕಾರಣವಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಗೆ ಅಧಿಕಾರಿಗಳು ಲಭಿಸಲಿಲ್ಲ. ಘಟನೆ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)