ಇರುಳಿಗರ ಕಲ್ಲು ಸೇವೆ

ಗುರುವಾರ , ಜೂಲೈ 18, 2019
22 °C

ಇರುಳಿಗರ ಕಲ್ಲು ಸೇವೆ

Published:
Updated:

ನಗರ ಹಾಗೂ ಪಟ್ಟಣ ಪ್ರದೇಶಗಳ ಸಮೀಪದಲ್ಲೇ ಇದ್ದರೂ ತಮ್ಮ ಸಾಂಪ್ರದಾಯಿಕ ಆಚರಣೆ, ನಂಬಿಕೆಗಳಿಂದಾಗಿ  ಪ್ರತ್ಯೇಕವಾಗಿ ಉಳಿದ ಜನ ಸಮುದಾಯವೊಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿದೆ! ಅವರನ್ನು ಇರುಳಿಗರು ಎಂದು ಕರೆಯುತ್ತಾರೆ. ಮಾಗಡಿ  ತಾಲ್ಲೂಕಿನ ಜೇನುಕಲ್ಲು ಪಾಳ್ಯದ ಇರುಳಿಗರು ತಮ್ಮ ಪೂರ್ವಿಕರ ವಿಶಿಷ್ಟ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಇರುಳಿಗರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಮೈಸೂರು ಭಾಗದಲ್ಲಿ ಇವರು ಸ್ವಲ್ಪಮಟ್ಟಿಗೆ ಸಂಘಟಿತವಾಗಿದ್ದಾರೆ. ಉಳಿದೆಡೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ.ಜೇನುಕಲ್ಲು ಪಾಳ್ಯ ಸಾವನದುರ್ಗದ ಅರಣ್ಯ ಪ್ರದೇಶ. ನೇರಲಕಲ್ಲು ಗುಡ್ಡ, ಹದ್ದಿನಕಲ್ಲು ಗುಡ್ಡ, ಸಿದ್ದೇದೇವರ ಗುಡ್ಡ, ಕಗ್ಗಲ್ಲು ಬೆಟ್ಟಗಳು ಈ ಪಾಳ್ಯವನ್ನು ಸುತ್ತುವರೆದಿವೆ.ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದ್ಲ್ಲಲಿರುವ ಜೇನುಕಲ್ಲು ಪಾಳ್ಯದಲ್ಲಿ 30 ಮನೆಗಳಿವೆ. ಒಂದು ಮನೆಯಲ್ಲಿ ಎರಡು ಕುಟುಂಬಗಳು ವಾಸ ಮಾಡುತ್ತವೆ.ಸುಮಾರು ಹತ್ತು ಕುಟುಂಬಗಳು ಗುಡಿಸಲುಗಳಲ್ಲಿವೆ. ಈ ಇರುಳಿಗರ ಪ್ರತ್ಯೇಕತೆ ಜನರ ಗಮನಕ್ಕೆ ಎದ್ದು ಕಾಣುವುದು ಅವರ ಆಚರಣೆಗಳ ಮೂಲಕ.

ಇರುಳಿಗರಲ್ಲಿ ಸತ್ತವರನ್ನು ನೆಲದಲ್ಲಿ ಹೂಳುವುದಿಲ್ಲ. ಶವಗಳನ್ನು ಬಂಡೆಗಳ ನಡುವೆ ಇಡುತ್ತಾರೆ. ಇದಕ್ಕೆ `ಕಲ್ಲುಸೇವೆ~ ಎಂದು ಹೆಸರು.

 

ಈ `ಕಲ್ಲು ಸೇವೆ~ಗಾಗಿ ಕಾಡಿನ ನಡುವೆ ನಿರ್ದಿಷ್ಟ ಜಾಗ ಗೊತ್ತುಪಡಿಸಿಕೊಂಡಿದ್ದಾರೆ. ಎರಡು ದೊಡ್ಡ ಬಂಡೆಗಳ ನಡುವೆ ಸ್ವಲ್ಪ ಕುಳಿಬಿದ್ದ ಸ್ಥಳವನ್ನು ಕಲ್ಲು ಸೇವೆಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ.ನಾಯಿ, ನರಿ, ಹದ್ದುಗಳು ಶವವನ್ನು ತಿನ್ನದಿರಲಿ ಎಂಬ ಕಾರಣದಿಂದ ಬಂಡೆಗಳ ಸುತ್ತ ಕಲ್ಲುಗಳನ್ನು ಕಟ್ಟಡದಂತೆ ಜೋಡಿಸುತ್ತಾರೆ. ಮೇಲೆ ಒಬ್ಬ ವ್ಯಕ್ತಿ ನುಸುಳುವಷ್ಟು ಜಾಗ ಬಿಟ್ಟಿರುತ್ತಾರೆ. ಶವವನ್ನು ಬಂಡೆಗಳ ನಡುವೆ ಹಾಕಿ ಮೇಲು ಭಾಗವನ್ನು ಕಲ್ಲಿನಿಂದ ಮುಚ್ಚುತ್ತಾರೆ. ಮೂರ್ನಾಲ್ಕು ಮಂದಿ ಒಂದೇ ದಿನ ಸತ್ತರೂ ಒಂದೇ ಸ್ಥಳದಲ್ಲಿ ಎಲ್ಲ ಶವಗಳನ್ನು ಇಡುತ್ತಾರೆ.ನಂತರ `ಭೂತನ ಸೊಣೆ~ ಹೆಸರಿನ ಹೊಂಡದಲ್ಲಿ ಕಲ್ಲುಸೇವೆಯಲ್ಲಿ ಭಾಗವಹಿಸಿದ್ದವರು ಶುಚಿಯಾಗಿ ಮನೆಗಳಿಗೆ ಹಿಂತಿರುಗುತ್ತಾರೆ. ಕಲ್ಲುಸೇವೆ ನಡೆಯುವ ಸ್ಥಳದಲ್ಲೇ ಸತ್ತವರ ನೆನಪಿನಲ್ಲಿ ವರ್ಷಕೊಮ್ಮೆ ಪೂಜೆ ನಡೆಯುತ್ತದೆ.ತಲೆಕಲ್ಲು ಸೇವೆ:  ಸಾವು ಯಾರನ್ನೂ ಬಿಡುವುದಿಲ್ಲ ಎಂಬ  ಸಂದೇಶ ಸಾರುತ್ತದೆ ಈ `ತಲೆಕಲ್ಲು ಸೇವೆ~. ಕಲ್ಲುಸೇವೆಗೆ ಮೊದಲು ತಲೆಕಲ್ಲು ಸೇವೆ ಮಾಡುವುದು ಸಂಪ್ರದಾಯ. ಮೃತನ ಬಂಧುಗಳು ಕಲ್ಲುಸೇವೆ ನಡೆಯುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ತಲಾ ಒಂದೊಂದು ಕಲ್ಲನ್ನು ಇಡುತ್ತಾರೆ. ಇದರ ಅರ್ಥ ನೀನು ಸಾವಿನಲ್ಲಿ ಮುಂದೆ ಹೋಗಿದ್ದೀಯ ನಾವು ನಿನ್ನನ್ನು ಹಿಂಬಾಲಿಸುತ್ತೇನೆ ಎಂಬುದೇ ಆಗಿದೆ. ಇದಕ್ಕೆ ಹಿಂದು-ಮುಂದಲ ಕಲ್ಲು ಎಂಬ ಹೆಸರಿದೆ.ಕಲ್ಲು ಹೂವು: ಮಕ್ಕಳ ಆರೋಗ್ಯ ಕೆಟ್ಟರೆ ಬಂಡೆ ಸಂದುಗಳಲ್ಲಿ ಬೆಳೆಯುವ ಹೂವನ್ನು ತಂದು ಮಕ್ಕಳ ಕೊರಳಿಗೆ ಕಟ್ಟುತ್ತಾರೆ. ಇದರಿಂದ ಅವರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ಮಂತ್ರ ಮತ್ತು ಪೂಜೆ ಸಂದರ್ಭದಲ್ಲಿ ಈ ಹೂವುಗಳಿಗೆ ಮಹತ್ವವಿದೆ.ಇರುಳಿಗರ ಆಹಾರ ಪದ್ಧತಿಯೂ ವಿಚಿತ್ರ. ಮೇ ಮತ್ತು ಜೂನ್‌ನಲ್ಲಿ  ಅವರು ಇಲಿ ಹಿಡಿದು ತಿನ್ನುತ್ತಾರೆ. ಇಲಿ ಹಿಡಿಯಲು ಚಿಕ್ಕ ಮಣ್ಣಿನ ಗಡಿಗೆ ಬಳಸುತ್ತಾರೆ. ಗಡಿಗೆ ತಳಭಾಗದಲ್ಲಿ ಸಣ್ಣದೊಂದು ರಂಧ್ರ ಮಾಡಿ, ಅದರ ಒಳಕ್ಕೆ ಒಣಗಿದ ಸಗಣಿ ಹಾಗೂ ಕಸ,ಕಡ್ಡಿ ತುಂಬುತ್ತಾರೆ. ಗಡಿಗೆ ಬಾಯನ್ನು ಇಲಿ ಬಿಲದ ಮೇಲೆ ಇಟ್ಟು ಮಣ್ಣಿನಿಂದ ಮುಚ್ಚುತ್ತಾರೆ. ರಂಧ್ರದ ಮೂಲಕ ಒಳಗಿನ ಕಸ,ಕಡ್ಡಿಗೆ ಬೆಂಕಿ ಹಚ್ಚುತ್ತಾರೆ. ಗಡಿಗೆಯಿಂದ ಹೊರಡುವ ಹೊಗೆ ಬಿಲ ಸೇರಿ ಇಲಿಗಳು ಉಸಿರುಗಟ್ಟಿ ಸಾಯುತ್ತವೆ. ನಂತರ ಬಿಲ ಅಗೆದು ಇಲಿಗಳನ್ನು ಆರಿಸಿ ತಿನ್ನುತ್ತಾರೆ.ಮೇ ಮತ್ತು ಜೂನ್ ತಿಂಗಳು ಬಿತ್ತನೆ ಕಾಲವಾದ್ದರಿಂದ ಒಂದೊಂದು ಬಿಲದಲ್ಲಿ 200ರಿಂದ 300 ಇಲಿಗಳು ವಾಸವಿರುತ್ತವಂತೆ. ಈ ಅವಧಿಯಲ್ಲಿ ಮಾತ್ರ ಇಲಿ ಹಿಡಿದು ತಿನ್ನುತ್ತೇವೆ. ಕಳೆದ 40, 45 ವರ್ಷಗಳಿಂದ ಒಂದೆಡೆ ವಾಸ ಮಾಡುತ್ತಿದ್ದೇವೆ. ಇದಕ್ಕೂ ಮೊದಲು ಗುಡ್ಡದೊಳಗೆ ಗವಿಗಳಲ್ಲಿ ಇದ್ದೆವು ಎನ್ನುತ್ತಾರೆ ಜೇನುಕಲ್ಲು ಪಾಳ್ಯದ ಇರುಳಿಗರು.ಜೇನುಕಲ್ಲು ಪಾಳ್ಯದ ಐದಾರು ಕುಟುಂಬದವರಿಗೆ ಮಾತ್ರ 20ರಿಂದ 30 ಗುಂಟೆ ಭೂಮಿ ಇದೆ. ಉಳಿದವರು ಕೂಲಿ ಮಾಡಿ ಜೀವಿಸುತ್ತಾರೆ. ಈಗ ನಮ್ಮ ಹುಡುಗರು ಶಾಲೆಗೆ ಹೋಗುತ್ತಾರೆ. ಆದರೆ ಯಾರೂ ಸರ್ಕಾರಿ ನೌಕರಿಗೆ ಸೇರಿಲ್ಲ.  ನಮ್ಮ ಹಿರಿಯರು ಕಾಡಿನಲ್ಲಿ ಗಿಡ ಮೂಲಿಕೆಗಳಿಂದ ಔಷಧಿ ಮಾಡುತ್ತಿದ್ದರು. ಅದನ್ನು ನಮಗೆ ಕಲಿಸಲಿಲ್ಲ ಎನ್ನುತ್ತಾರೆ ಇರುಳಿಗರ ಬರಿಯಪ್ಪ.ಇರುಳಿಗರು ಪ್ರಕೃತಿ ಆರಾಧಕರು. ಕಾಡಿನ ಮರಕ್ಕೆ ಕಲ್ಲು ಕಟ್ಟೆ ಕಟ್ಟಿ ದೇವರೆಂದು ಆರಾಧಿಸುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಹಿರಿಯರ ಪೂಜೆ ನಡೆಸುತ್ತಾರೆ. ಜೇನುಕಲ್ಲು ಸಮೀಪದ ಬಂಡೆಯಲ್ಲಿ ಪಾದದ ಆಕಾರದ ಗುರುತುಗಳು ಮೂಡಿದ್ದು ಇದು ದೇವರ ಪಾದ ಎಂಬ ನಂಬಿಕೆ ಅವರದು.ಅವರು ಆಡುವ ಭಾಷೆಯ ಬಗ್ಗೆ ಸ್ಪಷ್ಟತೆ ಇಲ್ಲ. ತಮಿಳು, ಹಿಂದಿ, ತೆಲುಗು, ಉರ್ದು ಎಲ್ಲಾ ಭಾಷೆಗಳ ಪದಗಳು ನಮ್ಮ ಭಾಷೆಯಲ್ಲಿವೆ. ಆದರೆ ನಮ್ಮ ಭಾಷೆಗೆ ಹೆಸರಿಲ್ಲ ಎನ್ನುತ್ತಾರೆ ಅಡ್ಡಬರಿಯಪ್ಪ.ಎಳಯಮ್ಮ ಮತ್ತು ಬರಿಯಮ್ಮ ಇರುಳಿಗರ ಮನೆ ದೇವರುಗಳು. ಗಂಡು ಮಕ್ಕಳಿಗೆ ಬರಿಯಪ್ಪ ಇಲ್ಲವೇ ಎಳೆಯಪ್ಪ ಹೆಣ್ಣು ಮಕ್ಕಳಿಗೆ ಎಳಯಮ್ಮ, ಬರಿಯಮ್ಮ ಎಂಬ ಹೆಸರುಗಳನ್ನು ಹೆಚ್ಚಾಗಿ ಇಡುತ್ತಾರೆ. ಒಂದೇ ಹೆಸರುಗಳು ಹೆಚ್ಚಾದಾಗ ಹೆಸರಿನ ಜತೆ ಅಡ್ಡ, ಚಿಕ್ಕ ಇತ್ಯಾದಿ ವಿಶೇಷಣಗಳನ್ನು ಸೇರಿಸಿ ಕರೆಯುತ್ತಾರೆ. ಇತ್ತೀಚಿನ ಮಕ್ಕಳ ಹೆಸರುಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.ಮಾಗಡಿ ತಾಲ್ಲೂಕಿನ ಏಳಿಗೆಹಳ್ಳಿ, ಸೊಪ್ಪಿನಗುಡ್ಡೆ, ಜೋಡುಗಟ್ಟೆ, ಸೊನ್ನೇನಹಳ್ಳಿ, ಮಾರೇಗೌಡನದೊಡ್ಡಿ, ಅಜ್ಜನಹಳ್ಳಿಯಲ್ಲಿ ಇರುಳಿಗ ಸಮುದಾಯವರಿದ್ದರೂ ಅವರು ಸಂಘಟಿತರಾಗಿಲ್ಲ. ಅರಣ್ಯ ಉತ್ಪನ್ನಗಳ ಸಂಗ್ರಹ, ಬೇಟೆ ಮತ್ತು ಬಿದಿರು ಉತ್ಪನ್ನಗಳ ತಯಾರಿಕೆ ಅವರ ಕಸುಬು.ಅರಣ್ಯ ಇಲಾಖೆಯವರ ಕಾವಲಿನಿಂದ ಬಿದಿರು, ಜೇನು ಎಲ್ಲವನ್ನೂ ಕದ್ದು ತರಬೇಕಾದ ಪರಿಸ್ಥಿತಿ ಇದೆ. ನಾವು ಹಲವಾರು ವರ್ಷಗಳಿಂದ ಉಳುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ಸ್ವಾಧೀನ ಪಡಿಸಿಕೊಂಡಿದೆ ಎಂದು ಇರುಳಿಗರು ದೂರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry