ಇರುವುದೊಂದೇ ಮಹಿಳಾ ಕಾಲೇಜಿಗೆ ಬೆನ್ನೇರಿದ ಸಮಸ್ಯೆ

7

ಇರುವುದೊಂದೇ ಮಹಿಳಾ ಕಾಲೇಜಿಗೆ ಬೆನ್ನೇರಿದ ಸಮಸ್ಯೆ

Published:
Updated:

ತುಮಕೂರು: ನಗರದ ಹೃದಯ ಭಾಗದಲ್ಲಿರುವ ಎಂಪ್ರೆಸ್ ಸರ್ಕಾರಿ ಬಾಲಕಿಯರ ಕಾಲೇಜು ಸಮಸ್ಯೆಗಳ ಆಗರವಾಗಿದೆ. ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೂ ಅವಕಾಶ ಇಲ್ಲದಂತಾಗಿದೆ.ಜಿಲ್ಲೆಯ ಏಕೈಕ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಎಂಬ ಹೆಗ್ಗಳಿಕೆ. ಈ ಕಾಲೇಜಿನಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತ್ದ್ದಿದಾರೆ. ಆದರೆ ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ.20 ಕೊಠಡಿಗಳಿರುವ ಕಾಲೇಜಿನಲ್ಲಿ 2000 ವಿದ್ಯಾರ್ಥಿಗಳಿದ್ದಾರೆ. ಪ್ರತಿ ಕೊಠಡಿಯಲ್ಲಿ 150ರಿಂದ 200 ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಪಾಠ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಜೋರಾಗಿ ಮಳೆ ಬಂದರೆ ಕಟ್ಟಡ ಕುಸಿಯುವ ಭೀತಿ ವಿದ್ಯಾರ್ಥಿಗಳಲ್ಲಿದೆ.ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆಯೂ ಸರಿಯಾಗಿಲ್ಲ. ಕೊಠಡಿಗಳು ಸೋರುತ್ತಿವೆ. ಮಳೆ ನೀರು ತರಗತಿಯಲ್ಲಿ ನಿಂತಿದೆ. ಗಾಳಿ ಬೆಳಕಿಲ್ಲದೆ ಕಿಷ್ಕಿಂದೆಯಂತಿರುವ ಕೊಠಡಿಯಲ್ಲಿ ಪಾಠ ಕಲಿಯಬೇಕಾಗಿದೆ. ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ ಎಂದು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ಕಾಲೇಜು ಆವರಣದಲ್ಲಿ ನಾಲ್ಕೈದು ಶೌಚಾಲಯಗಳಿದ್ದರೂ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಸ್ವಚ್ಛತೆ ಮಾಯವಾಗಿದೆ. ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದು, ಎಲ್ಲೆಂದರಲ್ಲಿ ಅನ್ನ ಚೆಲ್ಲುವುದರಿಂದ ಕಾಲೇಜು ಆವರಣಕ್ಕೆ ನಾಯಿಗಳ ದಂಡೇ ಬರುತ್ತದೆ. ತ್ಯಾಜ್ಯದಿಂದ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದ್ದು, ತರಗತಿಯಲ್ಲಿ ಕುಳಿತು ಪಾಠ ಕೇಳುವುದು ಅಸಾಧ್ಯವೆನಿಸಿದೆ. ಇದರಿಂದ ಬೇಸತ್ತಿರುವ ಉಪನ್ಯಾಸಕರು ಆವರಣದಲ್ಲಿರುವ ಮರದ ಕೆಳಗೆ ಪಾಠ ಹೇಳಿಕೊಡುವುದು ಮಾಮೂಲಿಯಾಗಿದೆ.`ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತಿದ್ದರೂ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದಿರುವುದು ವಿಪರ್ಯಾಸ' ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಎಂ.ವಿ.ಕಲ್ಯಾಣಿ ಹೇಳಿದರು.ವಿದ್ಯಾರ್ಥಿಗಳಿಗೆ ಬೆದರಿಕೆ

ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಎಐಡಿಎಸ್‌ಒ ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆಗೆ ಮುಂದಾದ ಕಾಲೇಜು ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ ವಾಪಸ್ ಕರೆಸಿಕೊಂಡ ಪ್ರಸಂಗ ನಡೆಯಿತು.

ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಬಂದ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ತಡೆದರು.ಪ್ರತಿಭಟನೆಗೆ ಮುಂದಾದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಬೆದರಿಸಿದ್ದರಿಂದ ಆತಂಕಗೊಂಡ ವಿದ್ಯಾರ್ಥಿನಿಯರು ಪ್ರತಿಭಟನೆ ಕೈಬಿಟ್ಟು ಕಾಲೇಜಿಗೆ ತೆರಳಿದರು.ಕಾಲೇಜಿನ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ಮರುಳಯ್ಯ, `ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಶೌಚಾಲಯ ವ್ಯವಸ್ಥೆ ಸರಿಯಿದೆ. ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ' ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.ಶಾಲೆಯದ್ದೇ ಸ್ವಂತ ಬೋರ್‌ವೆಲ್ ಇದೆ. ನೀರಿನ ಸಮಸ್ಯೆ ಇಲ್ಲವೇ ಇಲ್ಲ. ಕೆಲವರು ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ್ದನ್ನು ಹೇಳಿಕೊಡುತ್ತಿದ್ದಾರೆ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry