ಮಂಗಳವಾರ, ಜುಲೈ 5, 2022
21 °C

ಇರುವೆ ಎಂಬ ಸ್ನೇಹಿತನಿಗೆ...

ಅನಿತಾ ಈ. Updated:

ಅಕ್ಷರ ಗಾತ್ರ : | |

ಇರುವೆ ಎಂಬ ಸ್ನೇಹಿತನಿಗೆ...

ಹೆಚ್ಚುತ್ತಿರುವ ನಗರೀಕರಣ, ಅರಣ್ಯನಾಶ, ಪರಿಸರ ಮಾಲಿನ್ಯ ಸೇರಿದಂತೆ ಇನ್ನೂ ಕೆಲವು ಕಾರಣಗಳ ಪರಿಣಾಮವಾಗಿ ಅವೆಷ್ಟು ಪ್ರಾಣಿ, ಪಕ್ಷಿ, ಕೀಟ ಹಾಗೂ ಸಸ್ಯ ಪ್ರಭೇದಗಳು ಕಾಣೆಯಾಗಿವೆ. ಅದರಲ್ಲೂ ಕೆಲವು ಪ್ರಭೇದಗಳು ಅಳಿದ ನಂತರ ಮನುಷ್ಯನ ಗಮನಕ್ಕೆ ಬಂದರೆ, ಮತ್ತಷ್ಟು ಅಳಿವಿನ ಅಂಚು ತಲುಪಿದ ನಂತರ ತಿಳಿಯುತ್ತಿದೆ.ಪರಿಸರದ ಒಂದು ಭಾಗವಾಗಿರುವ ಇರುವೆಗಳೂ ಇದಕ್ಕೆ ಹೊರತಾಗಿಲ್ಲ. ಇರುವೆ ಎಂದ ಕೂಡಲೇ ನೆನಪಾಗುವುದು ಕೆಂಪಿರುವೆ, ಕಪ್ಪಿರುವೆ, ಬೆಲ್ಲದ ಇರುವೆ ಹಾಗೂ ಕಟ್ಟಿರುವೆ. ಆದರೆ ಇವುಗಳನ್ನು ಹೊರತುಪಡಿಸಿ ಇನ್ನೂ ಸಾವಿರಾರು ಇರುವೆ ಪ್ರಭೇದಗಳಿವೆ. ಕೂಲಿ ಇಲ್ಲದೆ ದುಡಿಯುವ ಮನುಷ್ಯನ ಸ್ನೇಹಿತ ಇರುವೆಗಳ ಕುರಿತು ನಡೆಯುತ್ತಿರುವ ಸಂಶೋಧನೆಗಳು ತುಂಬಾ ಕಡಿಮೆ.ಅವುಗಳಿಂದ ಮನುಷ್ಯನಿಗೆ ಹಾನಿ ಇಲ್ಲದಿದ್ದರೂ, ಅನುಕೂಲಗಳಂತೂ ಇವೆ. ಆದರೂ ಇರುವೆಗಳ ರಕ್ಷಣೆ ಹಾಗೂ ಅವುಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವ ಸಂಶೋಧನೆಗಳು ತೀರಾ ಕಡಿಮೆ. ಸದ್ಯಕ್ಕೆ ವಿಶ್ವದಲ್ಲಿ 14,800 ಇರುವೆ ಪ್ರಭೇದಗಳಿದ್ದು, ಭಾರತದಲ್ಲಿ 700 ಪ್ರಭೇದಗಳಿವೆ. ರಾಜ್ಯದಲ್ಲಿ 200 ಪ್ರಭೇದಗಳಿರಬಹುದು ಎಂದು ಅಂದಾಜಿಸಲಾಗಿದೆ. ಇರುವೆಗಳ ಕುರಿತ ಸಂಶೋಧನೆಗಳು ಹೆಚ್ಚಾಗಿ ನಡೆಯದ ಕಾರಣ ಇನ್ನೂ ಬೆಳಕಿಗೆ ಬಾರದೆ ಇರುವ ಪ್ರಭೇದಗಳು ಹಾಗೇ ಉಳಿದುಕೊಂಡಿವೆ. ಅವುಗಳ ಕುರಿತು ಅಧ್ಯಯನ ನಡೆಸುವ ಅಗತ್ಯ ಇದೆ.ಪರಿಸರದಲ್ಲಿ ನಾನಾ ರೀತಿಯ ಇರುವೆಗಳಿವೆ. ಅವುಗಳಲ್ಲಿ ಹಣ್ಣುಗಳನ್ನು ತಿನ್ನುವ, ಎಲೆ ತಿಂದು ಜೀವಿಸುವ, ಸತ್ತ ಜೀವಿಗಳನ್ನು ಅವಲಂಬಿಸಿರುವ, ಕೊಳೆತ ಪದಾರ್ಥಗಳ ಮೇಲೆ ಬರುವ ಇರುವೆಗಳು ಪ್ರಮುಖ.ಎರೆಹುಳು ತೇವದ ನೆಲದಲ್ಲಿ ರೈತನ ಮಿತ್ರನಾಗಿ ಹೇಗೆ ಕೈಜೋಡಿಸುತ್ತದೆಯೋ ಹಾಗೇ ಒಣ ನೆಲದಲ್ಲಿ ಇರುವೆಗಳು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತವೆ. ಒಣ ನೆಲದಲ್ಲಿ ಮಣ್ಣಿನ ಒಳಗೆ ಗಾಳಿಯಾಡುವಂತೆ ಹಾಗೂ ಮಣ್ಣಿನಲ್ಲಿನ ಲವಣಾಂಶ ಹೆಚ್ಚಲು ಸಹಕಾರಿ. ಹೀಗಾಗಿಯೇ ಇರುವೆಗಳೂ ಆಹಾರ ಸರಪಳಿಯ ಪ್ರಮುಖ ಭಾಗವಾಗಿವೆ.ನಗರೀಕರಣ, ಕೀಟನಾಶಕ ಮತ್ತು ಕ್ರಿಮಿನಾಶಕಗಳ ಬಳಕೆಯಿಂದಾಗಿ ಎಲ್ಲೆಡೆ ಇರುವೆ ಪ್ರಭೇದಗಳು ಮೆಲ್ಲನೆ ಕಣ್ಮರೆಯಾಗುತ್ತಿವೆ. ಅದರಲ್ಲೂ ಮನುಷ್ಯನೊಂದಿಗೆ ಬದುಕಲು ರೂಢಿಸಿಕೊಂಡಿರುವ 2ರಿಂದ 3 ಪ್ರಭೇದದ ಇರುವೆಗಳು ಮಾತ್ರ ಸದ್ಯಕ್ಕೆ ಕಾಣಸಿಗುತ್ತವೆ.ನಗರ ಪ್ರದೇಶದಲ್ಲಿ ಮನುಷ್ಯನ ಮಧ್ಯ ಪ್ರವೇಶದಿಂದ ಇರುವೆಗಳ ಜೀವವೈವಿಧ್ಯದಲ್ಲಿ ಆಗುತ್ತಿರುವ ಬದಲಾವಣೆ ಕುರಿತಂತೆ ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿನಿ ವಿಯೊಲಾ ಮೆನ್‌ಡೊನ್ಸ್‌ ಅಧ್ಯಯನ ನಡೆಸಿದ್ದಾರೆ. ಕಳೆದೆರಡು ವರ್ಷಗಳಿಂದ ನಡೆಸಿರುವ ಅವರ ಅಧ್ಯಯನದ ಪ್ರಕಾರ ಅರೆ ನಗರ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಇರುವೆ ಪ್ರಭೇದಗಳ ಸಂಖ್ಯೆಯಲ್ಲಿ ಏರುಪೇರಾಗಿರುವುದು ಬೆಳಕಿಗೆ ಬಂದಿದೆ.ಐಐಎಸ್‌ಸಿ ವಿಜ್ಞಾನಿ ತೆರೇಸಿಯಮ್ಮ ಅವರು ನಡೆಸಿರುವ ಸಂಶೋಧನೆ ಪ್ರಕಾರ, ನಗರದಲ್ಲಿ 95ಕ್ಕೂ ಹೆಚ್ಚು ಇರುವೆ ಪ್ರಭೇದಗಳು ಪತ್ತೆಯಾಗಿವೆ. ಆದರೆ ಹೆಚ್ಚುತ್ತಿರುವ ಕಾಂಕ್ರೀಟ್‌ ಪ್ರದೇಶಗಳು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಕ್ರಿಮಿನಾಶಕಗಳ ಬಳಕೆ, ಪರಿಸರ ಮಾಲಿನ್ಯದಿಂದ ಇರುವೆಗಳು ನಗರ ಪ್ರದೇಶಗಳಿಂದ ದೂರ ಉಳಿಯುತ್ತಿವೆ.ಉದ್ಯಾನ ಹಾಗೂ ನೈಸರ್ಗಿಕವಾಗಿ ಬೆಳೆಯುವ ಹುಲ್ಲುಹಾಸು ಹೆಚ್ಚಾಗಿರುವ ಕಡೆ 32 ಪ್ರಭೇದದ ಇರುವೆಗಳು ಕಂಡುಬಂದಿವೆ. ಉಳಿದಂತೆ ಮನುಷ್ಯ ವಾಸವಿರುವ ಕಡೆ ಬೆರಳೆಣಿಕೆಯಷ್ಟೇ ಪ್ರಭೇದಗಳು ಉಳಿದುಕೊಂಡಿವೆ.     ಮಾನವ ವಾಸಸ್ಥಾನಗಳಲ್ಲಿ ಮನೆಯಲ್ಲಿ ಚೆಲ್ಲಿದ ಕಾಳು, ತಿಂಡಿಯನ್ನು ಸೇವಿಸುವ ಫ್ಯಾರೊ ಇರುವೆ (ಕಚ್ಚುವ ಸಣ್ಣ ಕೆಂಪಿರುವೆಗಳು) ಮತ್ತು ಕಪ್ಪು ಇರುವೆಗಳು, ಕೊಳೆತ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ತಿನ್ನುವ ಗೋಸ್ಟ್‌ ಆ್ಯಂಟ್‌ (ಕಪ್ಪು ತಲೆ –ಬಿಳಿ ಹೊಟ್ಟೆ ಇರುವ ಇರುವೆಗಳು–ಬೆಲ್ಲದ ಇರುವೆಗಳು) ಮತ್ತು ಕಟ್ಟಿರುವೆ, ಹುಲ್ಲಿನ ಬೀಜ ತಿಂದು ಜೀವಿಸುವ ಸೊಲೆನಾಪ್ಸಿಸ್‌ ಜೆಮಿನೇಟಾ (ಬೆಂಕಿ ಇರುವೆ) ಇವುಗಳನ್ನು ಅವಕಾಶವಾದಿ ಇರುವೆ ಎನ್ನಲಾಗುತ್ತದೆ. ಇವುಗಳು ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ಆಹಾರ ಪದ್ಧತಿ ಬದಲಾಯಿಸಿಕೊಂಡು ಮಾನವನೊಂದಿಗೆ ಜೀವಿಸುತ್ತಿವೆ.‘2012–13ರಿಂದ ಇರುವೆಗಳ ಕುರಿತ ಅಧ್ಯಯನ ಪ್ರಾರಂಭಿಸಿದೆ. ಪ್ರಾಥಮಿಕ ಹಂತದ ಅಧ್ಯಯನಕ್ಕಾಗಿ ನಗರದಲ್ಲಿರುವ ಕೆಲವು ಉದ್ಯಾನಗಳು ಹಾಗೂ ವಸತಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದೆ. ಆ ಪ್ರದೇಶದಲ್ಲಿ ಒಂದು ವರ್ಷ ಅಧ್ಯಯನ ನಡೆಸಿದೆ. ಆಗ ಈ ಪ್ರದೇಶಗಳಲ್ಲಿ ಕ್ರಿಮಿನಾಶಕಗಳ ಹೆಚ್ಚಿನ ಬಳಕೆ, ವಾಹನ ಸಂಚಾರ ಹಾಗೂ ಮಾನವನ ಮಧ್ಯಪ್ರವೇಶ ಹೆಚ್ಚಾಗಿದ್ದ ಕಡೆಗಳಲ್ಲಿ ಶೇಕಡ 60ರಷ್ಟು ಇರುವೆಗಳ ಸಂಖ್ಯೆ ಕಡಿಮೆಯಾಗಿತ್ತು.ಉಳಿದಂತೆ ಕ್ರಿಮಿನಾಶಕಗಳ ಬಳಕೆ ಕಡಿಮೆ ಇದ್ದು, ಹಸಿರು ಹೊದಿಕೆ ಹೆಚ್ಚಾಗಿರುವ ಕಡೆಗಳಲ್ಲಿ ಇರುವೆಗಳ ಸಂಖ್ಯೆ ಹೆಚ್ಚಾಗಿದ್ದವು. 2013–14ರಲ್ಲಿ ಮತ್ತೆ ಇರುವೆಗಳ ಕುರಿತ ಅಧ್ಯಯನವನ್ನು ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ನಡೆಸಿದೆ. ಆಗ ಅರೆ ನಗರ ಪ್ರದೇಶಕ್ಕೆ ಹೋಲಿಸಿದಾಗ ನಗರ ಪ್ರದೇಶಗಳಲ್ಲಿ ಇರುವೆ ಪ್ರಭೇದಗಳ ಸಂಖ್ಯೆ  ಇಳಿಮುಖವಾಗಿತ್ತು’ ಎಂದು ವಿವರಿಸುತ್ತಾರೆ ವಿಯೊಲಾ ಮೆನ್‌ಡೊನ್ಸ್‌.‘ಮಾನವನಿಗೆ ನಾನಾ ರೀತಿಯಲ್ಲಿ ಸಹಾಯವಾಗಿರುವ ಇರುವೆಗಳನ್ನು ಉಳಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿರುವ ದೊಡ್ಡ ಸವಾಲು. ಹೀಗಾಗಿಯೇ ನಗರೀಕರಣದ ನಡುವೆಯೂ ನಗರಗಳಲ್ಲಿ ಇರುವೆಗಳನ್ನು ಉಳಿಸಿಕೊಳ್ಳುವ ಕುರಿತು ಅಧ್ಯಯನ ಮಾಡಿದ್ದೇನೆ. ನಗರ ಪ್ರದೇಶಗಳಲ್ಲಿ ಮನೆಗಳ ಬಳಿ, ಉದ್ಯಾನಗಳಲ್ಲಿ ಸುಲಭವಾಗಿ ಬೆಳೆಸಬಹುದಾದ ಕೆಲವು ಗಿಡ ಮರಗಳಿಂದಾಗಿ 12ಕ್ಕೂ ಹೆಚ್ಚು ಪ್ರಭೇದಗಳ ಇರುವೆಗಳನ್ನು ಉಳಿಸಿಕೊಳ್ಳಬಹುದು.ಯಲಹಂಕದ ಬಳಿಯಿರುವ ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಪನ್ಮೂಲ (ಎನ್‌ಬಿಎಐಆರ್‌) ಸಂಸ್ಥೆಯ ‘ಕೀಟಗಳ ಜೀವ ವೈವಿಧ್ಯ ಉದ್ಯಾನ’ ಹಾಗೂ ಸುತ್ತಮುತ್ತಲ ಹುಲ್ಲುತಾಣಗಳಲ್ಲಿ ಅಧ್ಯಯನ ನಡೆಸಿದ್ದೇನೆ. 20 ಎಕರೆ ಇರುವ ಈ ಉದ್ಯಾನದಲ್ಲಿ ಯಾವುದೇ ಕೀಟನಾಶಕ ಬಳಸುವುದಿಲ್ಲ. ಇಲ್ಲಿರುವ 20 ಗಿಡಗಳ ಮೇಲೆ ಒಟ್ಟಾರೆ 32 ಪ್ರಭೇದದ ಇರುವೆಗಳು ಪತ್ತೆಯಾಗಿದ್ದು, 12 ಪ್ರಭೇದದ ಇರುವೆಗಳು ಅತಿ ಹೆಚ್ಚಾಗಿ ಕಂಡುಬರುತ್ತವೆ’ ಎಂದು ಮಾಹಿತಿ ನೀಡುತ್ತಾರೆ ಅವರು. ವಿಯೊಲಾ ಒಟ್ಟಾರೆ 58 ಗಿಡ–ಮರಗಳ ಕುರಿತು ಅಧ್ಯಯನ ನಡೆಸಿದ್ದು, ಅವುಗಳಲ್ಲಿ 21 ಗಿಡಗಳ ಮೇಲೆ 12 ಪ್ರಭೇದದ ಇರುವೆಗಳು  ಅಧಿಕವಾಗಿ ಕಾಣಿಸಿಕೊಂಡಿವೆ.ಅದರಲ್ಲೂ ಈ ಗಿಡ–ಮರಗಳು ಅತಿಹೆಚ್ಚು ಪ್ರಚಾರಕ್ಕೆ ಬಾರದ ಔಷಧೀಯಗುಣವುಳ್ಳವು. ಈ ಗಿಡಗಳಲ್ಲಿ ಬಿಡುವ ಎಲೆ, ಎಲೆಯ ಬುಡದಲ್ಲಿರುವ ಮಕರಂದ ಹೀರಲು, ಆ ಗಿಡಗಳ ಮೇಲೆ ಕೂರುವ ಕೀಟಗಳನ್ನು ತಿನ್ನಲು ಇರುವೆಗಳು ಬರುತ್ತವೆ. ಇದರಿಂದಾಗಿ ಆ ಗಿಡಕ್ಕೂ ಯಾವುದೇ ಕೀಟ ಭಾದೆ ಇರುವುದಿಲ್ಲ. ಜೊತೆಗೆ ಇರುವೆಯ ಜೀವನವೂ ಸುಗಮವಾಗಿ ಸಾಗುತ್ತದೆ. ಉದಾಹರಣೆಗೆ, ‘ಇಕೊಫಿಲಾ’ ಇರುವೆಗಳು ಮಾವು, ನಿಂಬೆ, ಕಿತ್ತಳೆ ಹಣ್ಣಿನ ಮರಗಳ ಮೇಲೆ ಜೀವಿಸುತ್ತವೆ. ಇವು ತುಂಬಾ ಸಿಡುಕಿನ ಇರುವೆಗಳು.ಮರದ ಮೇಲೆ ಬೇರೆ ಯಾವುದೇ ಕೀಟಗಳು ಬಂದರೂ ಅವುಗಳನ್ನು ಅಲ್ಲೇ ಕಚ್ಚಿ ಸಾಯಿಸುತ್ತವೆ. ಹೀಗಾಗಿಯೇ ಈ ಇರುವೆಗಳನ್ನು ಚೀನಾದಲ್ಲಿ ಬೆಳೆಸಿ ಕೃಷಿಗೆ ಬಳಸಿಕೊಳ್ಳುತ್ತಾರೆ. ಈ ಇರುವೆಗಳು ಈಗ ನಗರ ಪ್ರದೇಶಗಳಲ್ಲಿ ಕಡಿಮೆಯಾಗುತ್ತಿದೆ. ಇವು ಎಲೆಗಳನ್ನು ಫುಟ್‌ಬಾಲ್‌ ಆಕಾರದಲ್ಲಿ ನೇಯ್ದು ಗೂಡನ್ನು ಕಟ್ಟಿಕೊಳ್ಳುತ್ತವೆ.ಹೀಗಾಗಿಯೇ ಇವುಗಳಿಗೆ ನೇಕಾರರ ಇರುವೆ ಎಂದೂ ಕರೆಯಲಾಗುತ್ತದೆ. ನಗರದ ಉದ್ಯಾನಗಳಲ್ಲಿ ಹಾಗೂ ಮನೆಗಳ ಬಳಿ ಈ ಗಿಡಗಳನ್ನು ನೆಟ್ಟರೆ ಮಾತ್ರ ನಗರದಿಂದ ದೂರ ಸರಿಯುತ್ತಿರುವ 32 ಪ್ರಭೇದಗಳ ಇರುವೆಗಳನ್ನು ಉಳಿಸಿಕೊಳ್ಳಬಹುದು. ಉದ್ಯಾನಗಳನ್ನು ನಿರ್ಮಿಸುವಾಗ ಕೇವಲ ನೆರಳು ಹಾಗೂ ಸೌಂದರ್ಯದ ದೃಷ್ಟಿಯಿಂದ ಗಿಡಗಳನ್ನು ಆಯ್ಕೆ ಮಾಡಿಕೊಳ್ಳದೆ, ಜೀವವೈವಿಧ್ಯವನ್ನು ಕಾಪಾಡುವ ನಿಟ್ಟಿನಲ್ಲೂ ಯೋಚಿಸಿದರೆ ಉತ್ತಮ.12 ಇರುವೆ ಪ್ರಭೇದಗಳ ವಿವರಗಳು

ಟ್ಯಾಪಿನೋಮ ಮೆಲನೋಸೆಫಾಲಮ್, ಟೆಕ್ನೊಮಿರ್ಮಿಕ್ಸ್‌ ಆಲ್ಬಿಪೆಸ್, ಕ್ಯಾಂಪೊನೊಟಸ್‌ ಕಂಪ್ರೆಸಸ್‌, ಕ್ಯಾಂಪೊನೊಟಸ್‌ ಸಿರಿಸಿಯಸ್‌, ಕ್ಯಾಂಪೊನೊಟಸ್‌ ಪ್ಯಾರಿಯಸ್‌, ಪ್ಯಾರಟ್ರಕೈನಾ ಲಾಂಗಿಕಾರ್ನಿಸ್‌, ಕ್ರೆಮ್ಯಾಟೊಗ್ಯಾಸ್ಟರ್‌ ರ್‍ಯಾಂಡ್ಸೊನೆಟ್ಟಿ (ಮರ ಇದ್ದಲ್ಲಿ ಮಾತ್ರ ಜೀವಿಸುತ್ತವೆ), ಮೋನೊಮೊರಿಯಂ ಫ್ಯಾರೊನಿಸ್‌ (ಇವುಗಳನ್ನು ಈಜಿಷ್ಪಿಯನ್ ಇರುವೆ ಎಂದು ಕರೆಯಲಾಗುತ್ತದೆ), ಮಿರ್ಮಿಕೇರಿಯಾ ಬ್ರನ್ಯಾ (ಕೊಳೆತ ಹಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತದೆ), ಫಿಡೋಲ್‌ವ್ಯಾಟ್‌ ಸೋನಿ (ಹುಲ್ಲು ಬೀಜಗಳನ್ನು ತಿಂದು ಜೀವಿಸುತ್ತದೆ), ಸೊಲೆನ್ಯಾಪ್ಸಿಸ್‌ ಜಮ್ಮಿನೇಟ್‌, ಪೆಟ್ರಮೊರಿಯಂ (ಬಹುಬಗೆಯ ಆಹಾರ ಸೇವಿಸುತ್ತದೆ). 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.