ಸೋಮವಾರ, ಮೇ 23, 2022
30 °C
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಚವಾಣ್ ನಿವೃತ್ತಿ

`ಇಲಾಖೆಯಷ್ಟೆ ಜವಾಬ್ದಾರಿ ನಾಗರಿಕರ ಮೇಲಿದೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಷ್ಟೆ ಜವಾಬ್ದಾರಿ ನಾಗರಿಕರ ಮೇಲೂ ಇರುತ್ತದೆ' ಎಂದು ಸೇವೆಯಿಂದ ನಿವೃತ್ತರಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಚವಾಣ್ ಅಭಿಪ್ರಾಯಪಟ್ಟರು.ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಅವಧಿ ಅತ್ಯಂತ ಸಂತೋಷ ನೀಡಿದೆ. ಸೇವಾವಧಿಯಲ್ಲಿ ಸಾಕಷ್ಟು ಸಂದಿಗ್ಧ ಹಾಗೂ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಬೇಕಾಗಿತ್ತು. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ಪೊಲೀಸ್ ಇಲಾಖೆಯಲ್ಲಿ ಮುಖ್ಯ. ಶಾಂತಿ ಕಾಪಾಡಲು ಸಾರ್ವಜನಿಕರು ಸಹ ಇಲಾಖೆಯ ಜೊತೆಗೆ ಕೈಜೋಡಿಸುವುದು ಮುಖ್ಯ' ಎಂದು ಹೇಳಿದರು.`1975ರಲ್ಲಿ ಪಿಎಸ್‌ಐ ಆಗಿ ಇಲಾಖೆಗೆ ಸೇರಿದೆ. ಪದವಿ ನಂತರ ವಿದ್ಯಾಭ್ಯಾಸ ನಡೆಸಲು ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ವಿದ್ಯಾಭ್ಯಾಸದ ವೇಳೆಯಿಂದಲೂ ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಗೆ ಸೇರಬೇಕು ಎಂಬುದು ನನ್ನ ಕನಸು. ಗ್ರಾಮೀಣಪ್ರದೇಶದಿಂದ ಬಂದ ಅಭ್ಯರ್ಥಿ ನಾನು. 22 ಮಂದಿ ಐಎಎಸ್ ಅಧಿಕಾರಿಗಳೊಂದಿಗೆ ಕೆಲಸ ಮಾಡಿದ ಅನುಭವ ನನಗಿದೆ. ಪಿಎಸ್‌ಐ, ಇನ್‌ಸ್ಪೆಕ್ಟರ್, ಡಿವೈಎಸ್ಪಿ ಹಾಗೂ ಎಎಸ್ಪಿ ಆಗಿ ಸೇವೆ ಸಲ್ಲಿಸಿದ ಅನುಭವ ನನ್ನದು' ಎಂದು ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಚವಾಣ್ ಸೇವಾವಧಿಯಲ್ಲಿ ಅತ್ಯಂತ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಸ್ಪಿ ಇಲ್ಲದ ಅವಧಿಯಲ್ಲೂ ಸಹ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕೆಲಸ ಮಾಡಿದ್ದಾರೆ. ಮುಂದೆಯೂ ಕೂಡ ಸಮಾಜಕ್ಕೆ ಅವರ ಸಾರ್ಥಕ ಸೇವೆ ಸಿಗಲಿ' ಎಂದು ಹೇಳಿದರು.ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ ಮಾತನಾಡಿ, ಕೌಟುಂಬಿಕ ಹಾಗೂ ಇಲಾಖೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸೇವೆ ಸಲ್ಲಿಸುವುದು ಅತ್ಯಂತ ಮುಖ್ಯ. ಚವಾಣ್ ಅದನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಾರ್ವಜನಿಕರ ಜೊತೆಗೆ ಅವರಿಗೆ ಹೆಚ್ಚಿನ ಒಡನಾಟವಿತ್ತು. ಯಾವುದೇ ಸಂದಿಗ್ಧ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ನಿಭಾಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ' ಎಂದು ಬಣ್ಣಿಸಿದರು.

ಪೂರ್ವವಲಯ ಐಜಿಪಿ ಸಂಜಯ್ ಸಹಾಯ್, ಸಿಐಡಿ ಡಿವೈಎಸ್ಪಿ ಜಗದೀಶ್ ಮಾತನಾಡಿದರು. ಎಎಸ್ಪಿ ರಾಜ, ಡಿವೈಎಸ್ಪಿ ಶಿವಕುಮಾರ್ ಗುಣಾರೆ ಹಾಜರಿದ್ದರು.ಹರಪನಹಳ್ಳಿ ಡಿವೈಎಸ್ಪಿ ರಾಧಾಮಣಿ ಸ್ವಾಗತಿಸಿದರು. ಸಿಪಿಐ ಮಹಾಂತರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ದೇವರಾಜ್ ಪ್ರಾರ್ಥಿಸಿದರು. ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಹಾಗೂ ಸ್ಬಿಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.