ಮಂಗಳವಾರ, ಮೇ 11, 2021
26 °C
`ಮಸಿ ಇದ್ದಿಲಿಗೆ ಬುದ್ದಿ ಹೇಳಿತು' ಎನ್ನುವಂತಾಯಿತು...

ಇಲಾಖೆ ಆವರಣವೇ ಸೊಳ್ಳೆಗಳ ತಾಣ!

ನಾಗೇಂದ್ರ ಖಾರ್ವಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: `ಮನೆಯ ಒಳಗೆ ಮತ್ತು ಹೊರಗೆ ನೀರು ಸಂಗ್ರಹಿಸಿಡುವ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ತಪ್ಪದೇ ನೀರು ಖಾಲಿ ಮಾಡಿ. ಉಜ್ಜಿ, ತೊಳೆದು ಮತ್ತೆ ಭರ್ತಿ ಮಾಡಿ ಮುಚ್ಚಿ, ಮನೆಯ ಒಳಗೆ ಹಾಗೂ ಹೊರಗೆ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು'-ಇದು ಡೆಂಗೆ ಮತ್ತು ಚಿಕುನ್‌ಗುನ್ಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಕರಪತ್ರದಲ್ಲಿ ಮುದ್ರಿಸಿರುವ ಸಂದೇಶ.ಹೀಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯವೈಖರಿ `ಮಸಿ ಇದ್ದಿಲಿಗೆ ಬುದ್ಧಿ ಹೇಳಿತು' ಎನ್ನುವ ಹಾಗಾಗಿದೆ. ಏಕೆಂದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣ ತುಂಬ ಮಳೆಗಾಲ ಪೂರ್ತಿ ಮಳೆ ನೀರು ನಿಂತಿರುತ್ತದೆ.ಆರೋಗ್ಯ ಇಲಾಖೆಯ ಆವರಣದಲ್ಲಿ ನಿಂತಿರುವ ನೀರಿನಲ್ಲೇ ಲಕ್ಷಗಟ್ಟಲೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಒಡೆದ ಬಾಟಲಿ, ಟಿನ್, ಟೈರ್, ಅರೆಯುವ ಕಲ್ಲು ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಹಾಗೂ ವಿಲೇವಾರಿ ಮಾಡಬೇಕು ಎಂದು ತಿಳಿಸಿರುವ ಆರೋಗ್ಯ ಇಲಾಖೆಯ ಆವರಣ ಒಮ್ಮೆ ಸುತ್ತಾಡಿದರೆ ಎಲ್ಲಲ್ಲಿ ನೀರು ನಿಂತಿದೆ ಎನ್ನುವುದು ಗೊತ್ತಾಗುತ್ತದೆ.ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಅಂಕಿತ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಲಿಪಿಕ್ ನೌಕರರ ಸಂಘದ ಕಚೇರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯ ಕಚೇರಿಗಳಿವೆ.ಈ ಎಲ್ಲ ಕಚೇರಿಗೆ ಹೋಗಬೇಕಾದರೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕುಂಟೆಬಿಲ್ಲೆ ಆಡುತ್ತ ಹೋಗಬೇಕು. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಎದುರಿನಲ್ಲಂತೂ ದೊಡ್ಡ ಮಳೆ ಬಂದರೆ ಮೊಣಕಾಲು ಮಟ್ಟದ ವರೆಗೆ ನೀರು ನಿಲ್ಲುತ್ತದೆ. ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಕಾರ್ಯವೈಖರಿ `ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ' ಎಂಬಂತಾಗಿದೆ.ನಗರದಿಂದ ಕೋಡಿಬಾಗಕ್ಕೆ ಹೋಗುವ ಮುಖ್ಯರಸ್ತೆಯಲ್ಲೇ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಇದೆ. ಈ ರಸ್ತೆಗೆ ಅಂಟಿಕೊಂಡೆ ಕಚೇರಿಯ ಆವರಣ ಗೋಡೆ ಕಟ್ಟಿರುವುದರಿಂದ ಮಳೆ ನೀರು ಹರಿದು ಹೋಗದೆ ಕಚೇರಿಯ ಪ್ರವೇಶ ದ್ವಾರದ ಎದುರೇ, ರಸ್ತೆಯಲ್ಲಿ ನೀರು ನಿಲ್ಲುತ್ತದೆ.ಮುಖ್ಯರಸ್ತೆಯಲ್ಲಿ ವೇಗವಾಗಿ ಓಡಾಡುವ ವಾಹನಗಳು ಚಿಮ್ಮಿಸುವ ನೀರು ಕಚೇರಿ ಒಳಗೆ ಹೋಗುತ್ತದೆ. ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತನೆ ಆಗುತ್ತಿದ್ದರೂ ಪರಿಹಾರ ಎನ್ನುವುದು ಮರೀಚಿಕೆ ಆಗಿದೆ.

`ಪ್ರವೇಶದ್ವಾರದ ಎದುರು ನೀರು ನಿಲ್ಲುತ್ತಿದ್ದು, ಗಟಾರು ಮಾಡಿ ನೀರು ಹರಿದು ಹೋಗಲು ಅನುಕೂಲ ಮಾಡಿಕೊಡುವಂತೆ ನಗರಸಭೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.