ಮಂಗಳವಾರ, ನವೆಂಬರ್ 19, 2019
29 °C

`ಇಲಾಖೆ ಗೌರವ ಕಾಪಾಡುವುದು ಮುಖ್ಯ'

Published:
Updated:

ಹಾವೇರಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಅತ್ಯಂತ ಮಹತ್ವವಾಗಿದ್ದು, ಇಲಾಖೆ ಬಗ್ಗೆ ಸಮಾಜವು ಇಂದಿಗೂ ಇಟ್ಟುಕೊಂಡು ಬಂದಿರುವ ಗೌರವ ಉಳಿಸಿಕೊಂಡು ಹೋಗುವತ್ತ ನಿರಂತರ ಪ್ರಯತ್ನ ನಡೆಸುವ ಜವಾಬ್ದಾರಿ ಪೊಲೀಸರ ಮೇಲಿದೆ' ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಹೇಳಿದರು.ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕಣವನ್ನು ನೀಡಿ, ಸಮಾಜದಲ್ಲಿ ಎಲ್ಲರಂತೆ ಪೊಲೀಸ್ ಸಿಬ್ಬಂದಿ ಕುಟುಂಬಗಳು ಸಹ ಜೀವನ ಸಾಗಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.ಪೊಲೀಸ್ ಕಲ್ಯಾಣ ನಿಧಿಯಲ್ಲಿ ಇರುವ ಮೊತ್ತವನ್ನು ವಿನಿಯೋಗಿಸುವಾಗ ಶಿಕ್ಷಣಕ್ಕೆ ಸಿಂಹಪಾಲನ್ನು ಮೀಸಲಿಡುವಂತೆ ನೋಡಿಕೊಳ್ಳಲು ಸಲಹೆ ಮಾಡಿದ ಅವರು, ಈ ನಿಧಿಯಿಂದ ಅತಂತ್ರ ಸ್ಥಿತಿಯಲ್ಲಿರುವ ಪೊಲೀಸ್‌ರ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲಿ ಎಂದು ಆಶಿಸಿದರು.ನಿವೃತ್ತ ಪೊಲೀಸ್ ಉಪ ಅಧೀಕ್ಷಕ ವಿ.ಎ.ಪೂಜಾರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕೆಂದರು. ಅದೇ ರೀತಿ  ಕುಟುಂಬದ ಆಗುಹೋಗುಗಳ ಕುರಿತು ಕಾಳಜಿ ವಹಿಸುವಂತೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋರ ವಾರ್ಷಿಕ ವರದಿ ವಾಚಿಸಿದರು. ಇದಕ್ಕೂ ಮೊದಲು ಪೊಲೀಸ್ ಕಮಾಂಡರ್ ಮಲ್ಲಿಕಾರ್ಜುನ ಮರೋಳ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.ಡಿವೈಎಸ್‌ಪಿ ಸಿ.ಸಿ.ಪಾಟೀಲ ಅವರು ಸ್ವಾಗತಿಸಿದರು. ಜಯಪ್ರಕಾಶ ಅಕ್ಕರಕೆ ವಂದಿಸಿದರು. ಸನ್ಮಾನ: ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ವಿ.ಎ.ಪೂಜಾರ, ಎಸ್.ಪಿ.ಹುಲ್ಲೂರ, ಎ.ಬಿ.ಓಲೇಕಾರ, ಡಿ.ಎಚ್.ಡೊಂಬರ ಹಾಗೂ ಪಿ.ಬಿ.ಬಿದರಿ ಅವರುಗಳನ್ನು ಜಿಲ್ಲಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.ಪೊಲೀಸ್ ಅಧಿಕಾರಿಗಳಾದ ಸಿದ್ಧಾರೂಡ ಬಡಿಗೇರ, ಕುಮಾರಿ ಈರವ್ವ ಚಿಕ್ಕೇರಿ, ಸಂತೋಷ ಪಾಟೀಲ, ಮಹಾಂತೇಶ, ಜಿ.ಸಿ.ಡೊಣ್ಣನವರ, ಗಣಪತಿ, ಸಿಪಿಐಗಳಾದ ಪಂಪಾಪತಿ, ಎಂ.ಮುರುಗೇಂದ್ರಯ್ಯ, ಚಿಕ್ಕರೆಡ್ಡಿ ಸೇರಿದಂತೆ ಮುಂತಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)