ಶುಕ್ರವಾರ, ಜೂನ್ 18, 2021
27 °C
ಅಕ್ರಮ ಮರಳು ಸಾಗಣೆ ಜಿಪಿಎಸ್‌ನಲ್ಲಿ ಪತ್ತೆ

ಇಲಾಖೆ ನಿಯಂತ್ರಣಕ್ಕೆ ಬಾರದ ಮರಳು ದಂಧೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ರಾಜ್ಯದಲ್ಲಿ ಮರಳು ನೀತಿ ಜಾರಿಯಲ್ಲಿದ್ದರೂ ಅಕ್ರಮ ಮರಳು ಸಾಗಣೆ ಮುಂದುವರಿದಿದೆ. ಸರ್ಕಾರದ ನೀತಿ ನಿಯಮ  ಉಲ್ಲಂಘಿಸಿ ಯಥೇಚ್ಛವಾಗಿ ಅಕ್ರಮ ಮರಳು ಸಾಗಣೆ ಬೆಳಕಿಗೆ ಬಂದಿದೆ. ಮರಳು ಸಾಗಣೆ ಮೇಲೆ ಹದ್ದಿನ ಕಣ್ಣಿಡುವ ಪಾರದರ್ಶಕ ಯಂತ್ರ ಜಿಪಿಎಸ್‌ ಅನ್ನು ದುರ್ಬಳಕೆ ಮಾಡಿಕೊಂಡು ಮರಳು ಸಾಗಣೆ ಮಾಡಲಾಗುತ್ತಿದೆ.ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಹಿಷಿ ಮರಳು ಕ್ವಾರಿಯಲ್ಲಿ ಮಾರ್ಚ್‌ 3ರಿಂದ ಇಲ್ಲಿಯವರೆಗೆ 14 ಲಾರಿಗಳು ಮರಳನ್ನು ಡಬ್ಲಿಂಗ್‌ ಮಾಡಿರುವುದು ಜಿಪಿಎಸ್‌ಯಂತ್ರದಿಂದ ಪತ್ತೆಯಾಗಿದೆ.

ಜನವರಿ, ಫೆಬ್ರುವರಿ ಕೊನೆಯಲ್ಲಿ 78 ಲಾರಿಗಳು ಡಬ್ಲಿಂಗ್‌ ಮಾಡಿರುವುದನ್ನು ಗುರುತಿಸಲಾಗಿದೆ. ಮರಳು ಡಬ್ಲಿಂಗ್‌ ಮಾಡಿರುವ ಕುರಿತು ಯಾವ ಯಾವ ಲಾರಿಗಳು ಮರಳು ಡಬ್ಲಿಂಗ್‌ನಲ್ಲಿ ತೊಡಗಿವೆ ಎಂಬುದರ ವಿವರವನ್ನು ಲೋಕೋಪಯೋಗಿ ಇಲಾಖೆ ನಾಮ ಫಲಕದಲ್ಲಿ ಪ್ರಕಟಮಾಡಿ,  ನಂತರ ಡಬ್ಲಿಂಗ್‌ಲ್ಲಿ ತೊಡಗಿರುವ ಲಾರಿಗಳಿಗೆ ಮರಳು ಸಾಗಣೆ ನಡೆಸಲು ಅನುಮತಿ ನಿರಾಕರಿಸದೇ ಅವಕಾಶ ಕಲ್ಪಿಸಲಾಗಿದೆ. ಲಾರಿಗಳು ಅನಧಿಕೃತವಾಗಿ ಮರಳು ತುಂಬಿಸಿಕೊಂಡು ಸಾಗಾಟದಲ್ಲಿ ತೊಡಗಿರುವುದು ಅಚ್ಚರಿಗೆ ಕಾರಣವಾಗಿದೆ. ಅನಧಿಕೃತವಾಗಿ ರಾತ್ರಿ ಹೊತ್ತಿನಲ್ಲಿಯೂ ಮರಳು ಕ್ವಾರಿಗೆ ನುಗ್ಗಿ  ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ಮರಳು ಸಾಗಿಸಲಾಗುತ್ತಿದೆ. ಇಂಥ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗುತ್ತಿಲ್ಲ.

ಸಾಗಣೆ ಪರ್ಮಿಟ್‌ ಪಡೆಯದ ಒಂದು ಲಾರಿ  ಕನಿಷ್ಠ 25ಕ್ಕೂ ಹೆಚ್ಚು ಲೋಡ್ ಮರಳನ್ನು ಸಾಗಣೆ ಮಾಡಿರುವುದು ಜಿಪಿಎಸ್‌ ಯಂತ್ರದ ಮೂಲಕ ದೃಢಪಟ್ಟಿದೆ. ಇದರಿಂದ ಸರ್ಕಾರದ ಖಜಾನೆಗೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿ ಅನ್ಯರ ಪಾಲಾಗುತ್ತಿದೆ.ಮಂಗಳೂರು ಮೂಲದ ಖಾಸಗಿ ಸಂಸ್ಥೆಗೆ ಜಿಪಿಎಸ್‌ ಯಂತ್ರದ ನಿರ್ವಹಣೆ ಗುತ್ತಿಗೆ ನೀಡಲಾಗಿದ್ದು ಸಂಸ್ಥೆಯ ಮುಖ್ಯಸ್ಥ, ಸಿಬ್ಬಂದಿ ಯಂತ್ರದ ದುರುಪಯೋಗಕ್ಕೆ ಆವಕಾಶ ನೀಡಿದ್ದಾರೆ ಎಂಬ ಅಂಶ ಇಲಾಖೆಯ ಪರಿಶೀಲನೆಯಿಂದ ಪತ್ತೆಯಾಗಿದೆ.ಸರ್ಕಾರ ನಿಗದಿಗೊಳಿಸಿದ್ದಕ್ಕಿಂತ ಹೆಚ್ಚು ಮರಳನ್ನು ಲಾರಿಗಳಿಗೆ ತುಂಬಿ ಸಾಗಾಟ ನಡೆಸಲಾಗುತ್ತಿದೆ. ಹೆಚ್ಚು ಮರಳು ತುಂಬಿಕೊಂಡು ಹೋಗುವ ಲಾರಿಗಳಿಂದ ಪ್ರತಿ ಲಾರಿಗೆ ₨200ನ್ನು ವಸೂಲಿ ಮಾಡಲಾಗುತ್ತಿದೆ. ಪ್ರತಿದಿನ ಮಹಿಷಿ ಕ್ವಾರಿಯೊಂದರಲ್ಲಿಯೇ 150ಕ್ಕೂ ಹೆಚ್ಚು ಪರ್ಮಿಟ್‌ ನೀಡಲಾಗುತ್ತದೆ. ಮುಂಡುವಳ್ಳಿ ಬ್ಲಾಕ್‌–1, ಬ್ಲಾಕ್‌–2, ಹೊಳೇಕೊಪ್ಪ ಕ್ವಾರಿಯಿಂದ ಹಾದುಹೋಗುವ ಪ್ರತಿ ಲಾರಿಯಿಂದಲೂ ಹಣವನ್ನು ವಸೂಲು ಮಾಡಲಾಗುತ್ತಿದೆ. ಈ ಹಣ ಕೆಲವು ಪ್ರಭಾವಿಗಳ ಕೈಸೇರುತ್ತಿದೆ.ಮರಳು ಕ್ವಾರಿಗೆ ಹೋಗುವ ದಾರಿ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆ ಮಾಡಿದ್ದರೂ ಈ ಮಾರ್ಗವಾಗಿ ಹೋಗುವ ಪ್ರತಿ ಲಾರಿಯಿಂದ ₨100ನ್ನು ವಸೂಲು ಮಾಡಲಾಗುತ್ತದೆ. ಮರಳು ಲಾರಿಗಳು ಖಾಸಗಿ ಮಾರ್ಗವಾಗಿ ಹೋಗಬೇಕಾದ ಸಂದರ್ಭದಲ್ಲಿ ಖಾಸಗಿ ಸ್ಥಳದ ವ್ಯಕ್ತಿಗಳು  ₨200 ವಸೂಲಿ ಮಾಡುತ್ತಿದ್ದಾರೆ. ಈ ರೀತಿ ವಸೂಲಾಗುವ ಹಣ ಪೊಲೀಸ್‌, ಸಾರಿಗೆ, ಅರಣ್ಯ, ಕಂದಾಯ, ಪಂಚಾಯತ್‌ ರಾಜ್‌ ಇಲಾಖೆ ಸಿಬ್ಬಂದಿಗೆ ಹಂಚಿಕೆಯಾಗುತ್ತದೆ. ದೇವಸ್ಥಾನದ ಹೆಸರಿನಲ್ಲಿ ಕೆಲವು ಕಡೆಗಳಲ್ಲಿನ ನದಿ ಪಾತ್ರದ ಮರಳನ್ನು ದೋಚಲಾಗುತ್ತಿದೆ. ಗ್ರಾಮ ಪಂಚಾಯ್ತಿಗಳೂ ಕೂಡ ಅಭಿವೃದ್ಧಿ ಹೆಸರಿನಲ್ಲಿ ಹಣ ವಸೂಲಿ ಮಾಡಲು ಮುಂದಾಗಿವೆ.ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಆದೇಶದಂತೆ ಮರಳು ಅಕ್ರಮ ತಡೆಗಟ್ಟಲು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆಸಿದ ಜನಪ್ರತಿನಿಧಿಗಳ ಸಭೆ ತೀರ್ಮಾನಕ್ಕೆ ಕವಡೇಕಾಸಿನ ಕಿಮ್ಮತ್ತು ಸಿಗದಂತಾಗಿದೆ. ‘ಅಕ್ರಮ ಮರಳು ಸಾಗಾಟ ತಡೆಯಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೆಲವೆಡೆ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.  ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಶಿವಮೊಗ್ಗ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಬಿ.ಎಸ್‌. ಬಾಲಕೃಷ್ಣ ತಿಳಿಸಿದ್ದಾರೆ.

ಶಿವಾನಂದ ಕರ್ಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.