ಸೋಮವಾರ, ಜೂನ್ 21, 2021
23 °C

ಇಲಿಯಮ್ಮನ ಐಡಿಯಾ

ಚಂದ್ರಿಕಾ ಹೆಗಡೆ Updated:

ಅಕ್ಷರ ಗಾತ್ರ : | |

ಇಲಿಯಮ್ಮನ ಐಡಿಯಾ

ಒಂದು ಇಲಿ. ಒಂದು ಹಳೆಯ ಮನೆಯ ಉಗ್ರಾಣದ ಗೋಡೆಯ ಸಂದಿಯ ಬಿಲದಲ್ಲಿ ಅಚ್ಚುಕಟ್ಟಾದ ಪುಟ್ಟ ಮನೆಯೊಂದನ್ನು ಮಾಡಿಕೊಂಡು ವಾಸವಾಗಿತ್ತು. ಅದು ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಆ ಮನೆಯಲ್ಲಿದ್ದ ಒಂದು ಬೆಕ್ಕು, ಇಲಿ ಹೊರಹೋದ ಸಂದರ್ಭವನ್ನು ಕಾದು ಇಲಿಯ ಮನೆಯೊಳಕ್ಕೆ ನುಗ್ಗಿ ಇಲಿಯ ಮರಿಗಳನ್ನು ತಿಂದುಹಾಕಿ ಬಿಡುತ್ತಿತ್ತು. ಇಷ್ಟು ದಿನಗಳಾದರೂ ತನ್ನಿಂದ ಒಂದೇ ಒಂದು ಮರಿಯನ್ನೂ ಉಳಿಸಿಕೊಳ್ಳಲಾಗಲಿಲ್ಲವೆಂಬ ಕೊರಗು ಇಲಿಯಮ್ಮನನ್ನು ಕಾಡುತ್ತಾ ಇತ್ತು.ಇದೇ ಚಿಂತೆಯಲ್ಲಿಯೇ ಒಂದು ರಾತ್ರಿ ಆಹಾರವನ್ನು ಹುಡುಕುತ್ತಾ ಇಲಿ ಆ ಮನೆಯಲ್ಲಿ ಅಡ್ಡಾಡುತ್ತಿರುವಾಗ ಅಜಾಗರೂಕತೆಯಿಂದ ಅಲ್ಲೇ ಸ್ಟಾಂಡಿನ ಮೇಲಿದ್ದ ಒಂದು ಕನ್ನಡಿಯನ್ನು ಕೆಡವಿ ಬಿಟ್ಟಿತು. ಕನ್ನಡಿ ಒಡೆದು ಚೂರು ಚೂರಾಯಿತು. ಒಡೆದ ಕನ್ನಡಿಯ ಪ್ರತಿ ಚೂರಿನಲ್ಲಿಯೂ ತನ್ನ ಪ್ರತಿಬಿಂಬವನ್ನು ಕಂಡ ಇಲಿ ಮೊದಲು ಬೆಚ್ಚಿಬಿದ್ದಿತು. ಮರುಕ್ಷಣವೇ ಅದಕ್ಕೆ ಉಪಾಯವೊಂದು ಹೊಳೆಯಿತು. ಅದು ಜೋಪಾನವಾಗಿ ಆ ಕನ್ನಡಿಯ ಚೂರುಗಳನ್ನು ಕಚ್ಚಿಕೊಂಡು ಹೋಗಿ ತನ್ನ ಮನೆಯ ಗೋಡೆಯ ಸುತ್ತಲೂ ಜೋಡಿಸಿಟ್ಟಿತು.ಮರುದಿನ ಇಲಿಯಮ್ಮ ಜೋಗುಳ ಹಾಡಿ ಗೂಡಿನಲ್ಲಿ ಮರಿಗಳನ್ನು ಮಲಗಿಸಿ ಹೊರಹೋದ ಮೇಲೆ ಕಳ್ಳಬೆಕ್ಕು ಮೆಲ್ಲಗೆ ಬಂದು ಇಲಿಯ ಮನೆಯೊಳಕ್ಕೆ ಹೊಕ್ಕಿತು. ಮನೆ ಹೊಕ್ಕ ಕೂಡಲೇ, ಎದುರಿನ ಗೋಡೆಯ ಬಳಿ ಕನ್ನಡಿಯಲ್ಲಿ ಬೆಕ್ಕೊಂದು ಕಾಣಿಸಿತು. `ಅರೆ...!ಇದ್ಯಾವ ಬೆಕ್ಕು~ ಎನ್ನುತ್ತಾ ಗಾಬರಿಯಿಂದ ಸುತ್ತಲೂ ನೋಡಿತು. ಗೂಡಿನ ಸುತ್ತಲೂ ಒಂದಲ್ಲ ಹಲವಾರು ಬೆಕ್ಕುಗಳು ಇದನ್ನೇ ನೋಡುತ್ತಾ ಇದ್ದವು. ಬೆಕ್ಕು ಸಿಟ್ಟಿನಿಂದ ಬಾಲ ಎತ್ತಿ `ಗುರ್ರ‌್‌~ ಎಂದಿತು. ತಕ್ಷಣ ಅಷ್ಟೂ ಬೆಕ್ಕುಗಳೂ ಬಾಲ ಎತ್ತಿ ಈ ಬೆಕ್ಕನ್ನೇ `ಗುರ್ರ‌್‌~ ಎಂದು ದುರುಗುಟ್ಟಿ ನೋಡಿದವು.ಈಗ ಬೆಕ್ಕಿಗೆ ಹೆದರಿಕೆಯಾಗತೊಡಗಿತು. ಅಷ್ಟೂ ಬೆಕ್ಕುಗಳನ್ನು ತಾನೊಬ್ಬನೇ ಎದುರಿಸಲಾರೆನೆಂಬ ಭಯದಿಂದ ಬಾಲಮುದುಡಿಕೊಂಡು ಅಲ್ಲಿಂದ ಪಲಾಯನ ಮಾಡಿಬಿಟ್ಟಿತು.ಅಂದಿನಿಂದ ಬೆಕ್ಕು ಇಲಿಯಮ್ಮನ ಮನೆಯ ಕಡೆ ಅಪ್ಪಿತಪ್ಪಿಯೂ ತಲೆಹಾಕಿಲಿಲ್ಲ. ಇಲಿಯಮ್ಮ ಈಗ ನೆಮ್ಮದಿಯಾಗಿ, ಬೆಕ್ಕಿನ ಕಾಟವಿಲ್ಲದೇ ತನ್ನ ಮಕ್ಕಳು ಮರಿಗಳನ್ನು ಬೆಳೆಸಿಕೊಂಡು, ತುಂಬಿದ ಸಂಸಾರದೊಂದಿಗೆ ಸಂತೋಷದಿಂದ ಬಾಳತೊಡಗಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.