`ಇಲ್ಲ'ಗಳ ಆಗರವಾದ ಪುತ್ತೂರು ಪುರಭವನ

7
ಸಾಂಸ್ಕೃತಿಕ ನಗರಿ ಖ್ಯಾತಿಗೆ ಕಪ್ಪು ಚುಕ್ಕಿ!

`ಇಲ್ಲ'ಗಳ ಆಗರವಾದ ಪುತ್ತೂರು ಪುರಭವನ

Published:
Updated:

ಪುತ್ತೂರು: ಸಾಂಸ್ಕೃತಿಕ ನಗರಿ ಎಂದೇ ಬಿಂಬಿತವಾಗಿರುವ ಪುತ್ತೂರಿನಲ್ಲಿ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಇಂಥ ಕಾರ್ಯಕ್ರಮಗಳಿಗೊಂದು ವ್ಯವಸ್ಥಿತ ಭವನ ಬೇಕು. ಪುತ್ತೂರಿನಲ್ಲೂ ಒಂದು ಸಾಂಸ್ಕೃತಿಕ ಭವನ- `ಪುರಭವನ' ಇದೆ. ಆದರೆ ಅದು ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ಇಲ್ಲಿ `ಇಲ್ಲ'ಗಳೇ ಹೆಚ್ಚು.ಪುತ್ತೂರಿನ ಪುರಭವನದಲ್ಲಿ ವಿದ್ಯುತ್ ವ್ಯವಸ್ಥೆಯಿದ್ದರೂ ವೇದಿಕೆ ಲೈಟಿಂಗ್ ಮತ್ತು ಧ್ವನಿವರ್ಧಕ ವ್ಯವಸ್ಥೆ ಇಲ್ಲ.  ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಸಾಕಷ್ಟು ಆಸನಗಳ ವ್ಯವಸ್ಥೆಯೂ ಇಲ್ಲ. ಪುರಭವನ ನಗರದ ಹೃದಯ ಭಾಗದಲ್ಲಿದೆ. ತಾಂತ್ರಿಕವಾಗಿ ಬಹಳಷ್ಟು ಉತ್ತಮವಾಗಿದೆ. ಆದರೆ ಅವ್ಯವಸ್ಥೆಗಳಿಂದ ಕೂಡಿರುವ ಕಾರಣ ಬಹುತೇಕ ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವುಳಿದಿದೆ.ಎಲ್ಲಾ ರಂಗಮಂದಿರ, ಸಭಾಂಗಣಗಳಿಗೆ ಕನಿಷ್ಟ ನಾಮಫಲಕವಾದರೂ ಇರುತ್ತದೆ. ಪುತ್ತೂರು ಪುರಭವನಕ್ಕೆ  ಒಂದು ನಾಮಫಲಕವೂ ಇಲ್ಲ. ದೂರದ ಊರಿಂದ ಬರುವವರು ಬೇರೆಯವರಲ್ಲಿ ಕೇಳಿ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬಹುತೇಕ ಸರ್ಕಾರಿ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ವಿವಾಹ, ನಾಟಕ ಹಾಗೂ ಖಾಸಗಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಆದರೆ ನಾಮಫಲಕ ಇಲ್ಲ ಎನ್ನವುದು ವಿಶೇಷ.ಆಸನಗಳು ಕಡಿಮೆ:ಪುರಭವನ ವಿಶಾಲವಾಗಿದ್ದರೂ, ಆಸನಗಳು ಬಹಳಷ್ಟು ಕಡಿಮೆಯಿದೆ. ಕೇವಲ 190 ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಕೈಕೊಟ್ಟರೆ ಜನರೇಟರ್ ವ್ಯವಸ್ಥೆ ಇಲ್ಲ. ಸಭಾಂಗಣದ ಒಳಗೆ ಮತ್ತು ಹೊರಗೆ ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ವೇದಿಕೆ ಅಚ್ಚುಕಟ್ಟಾಗಿಲ್ಲ. ಪರದೆ ಅಳವಡಿಸಲು ವ್ಯವಸ್ಥೆಗಳಿಲ್ಲ.ಕಳೆದ ಒಂದು ವರ್ಷದ ಹಿಂದೆ ನವೀಕರಿಸುವ ಹೆಸರಿನಲ್ಲಿ ಬಿಚ್ಚಿ ಹಾಕಲಾಗಿದ್ದ ವೇದಿಕೆಯ ಮೇಲ್ಭಾಗವನ್ನು ದುರಸ್ತಿ ಮಾಡಿಲ್ಲ. ಮೇಕಪ್ ಕೊಠಡಿಯಲ್ಲಿ ಕನ್ನಡಿ ಇಲ್ಲ. ಡ್ರೆಸ್ಸಿಂಗ್ ಕೊಠಡಿ ವ್ಯವಸ್ಥಿತವಾಗಿಲ್ಲ. ಪುರುಷ ಮತ್ತು ಮಹಿಳಾ ಕಲಾವಿದರಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೊಠಡಿಗಳಿಲ್ಲ. ಪ್ರೇಕ್ಷಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ.ಪುರಭವನದಲ್ಲಿ ಕಾರ್ಯಕ್ರಮ ನಡೆಸಲು ರೂ. 2 ಸಾವಿರ ಪುರಸಭೆಗೆ ಪಾವತಿಸಬೇಕಾಗುತ್ತದೆ. ಸಣ್ಣ ಕಾರ್ಯಕ್ರಮ ನಡೆಸುವವರು ಇಷ್ಟು ಹಣ ನೀಡುವ ಜೊತೆಗೆ ಆಸನ ವ್ಯವಸ್ಥೆ, ಲೈಟಿಂಗ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸ್ವತಃ ಮಾಡಿಸಿಕೊಳ್ಳಬೇಕಾಗುತ್ತದೆ.ಪುರಭವನ ದುರಸ್ತಿಗೆಂದು ಕೆಲವು ವರ್ಷ ಹಿಂದೆ ಸುಮಾರು ರೂ. 20 ಲಕ್ಷ  ಅನುದಾನ ಕಾದಿರಿಸಲಾಗಿತ್ತು . ಆದರೆ ಅದನ್ನು ಪರ್ಲಡ್ಕದ ಶಿವರಾಮ ಕಾರಂತ ಬಾಲವನದ ಅಭಿವೃದ್ಧಿಗೆ ವರ್ಗಾಯಿಸಲಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುರಭವನದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ ಎಂಬ ದೂರುಗಳು ವ್ಯಕ್ತವಾಗುತ್ತಿದೆ.ದುರಸ್ತಿಗೆ ಅನುದಾನ ಕೊರತೆ:ಪುರಭವನವನ್ನು ಈಗಾಗಲೇ ಪುರಸಭೆ ರೂ. 2 ಲಕ್ಷ ಅನುದಾನ ಹಾಗೂ ಕುಡ್ಸೆಂಪ್‌ನ ರೂ. 10 ಲಕ್ಷ ಅನುದಾನದಲ್ಲಿ 2009-10ರಲ್ಲಿ ತಕ್ಕಮಟ್ಟಿಗೆ ದುರಸ್ತಿ ಮಾಡಿದೆ. ಇನ್ನೂ ಸುಮಾರು ರೂ. 30 ಲಕ್ಷ ಅನುದಾನ ಬೇಕಾಗಬಹುದು ಎಂದು  ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಮತ್ತು ಎಂಜಿನಿಯರ್ ಶಿವಕುಮಾರ್ ಹೇಳುತ್ತಾರೆ.ಪುರಭವನವನ್ನು ದುರಸ್ತಿಗೊಳಿಸುವುದರ ಜತೆಗೆ ಹೆಚ್ಚು ಆಸನ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಯೋಜನೆ ಇದೆ.  ಆದರೆ ಅನುದಾನದ ಕೊರತೆಯಿಂದ ಸಮಸ್ಯೆಯಾಗಿದೆ. ಅನುದಾನ ಬಂದರೆ ಪುರಭವನವನ್ನು ಸುಸಜ್ಜಿತವಾಗಿ ಮಾಡಬಹುದು ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry