ಇಲ್ಲದ ಶೌಚಾಲಯ: ಮಹಿಳೆಯರ ಪರದಾಟ

ವಾಡಿ: ಸಮೀಪದ ನಾಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಂಬಾರಳ್ಳಿ ಗ್ರಾಮದಲ್ಲಿ ಇದುವರೆಗೂ ಮಹಿಳಾ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರು ಪರಿತಪಿಸುವಂತಾಗಿದೆ.
`ಕುಂಬಾರಳ್ಳಿ ಗ್ರಾಮದಲ್ಲಿ ಸುಮಾರು 1500 ಜನಸಂಖ್ಯೆ ಇದೆ. ಯಳವಾರ್ , ಬುಡ್ಗ , ಗೊಂದಳಗಿ, ಉಪ್ಪರ್, ಕೊರವೆ, ಕುಂಬಾರ, ಲಂಬಾಣಿ, ಜೊಗೇರ್ ಹೀಗೆ ವಿವಿಧ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರೇ ಇಲ್ಲಿ ಹೆಚ್ಚಾಗಿದಾರೆ.
`ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿಯಾಗಲಿ ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ, ನಮ್ಮ ಕುಂದುಕೊರತೆ ಕೇಳಿಲ್ಲ~ ಎಂದು ಇಲ್ಲಿನ ನಿವಾಸಿಗಳು ಸಂಬಂಧಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ದಿನವೂ ರಾತ್ರಿಯಲ್ಲೇ ಶೌಚಾಲಯಕ್ಕೆ ಹೋಗಬೇಕು. ಕೆಲವೊಮ್ಮೆ ರಾತ್ರಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದರೇ ವಿಷಕಾರಿ ಜೀವ ಜಂತುಗಳ ಕಡಿತಕ್ಕೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಖಾಲಿ ಸ್ಥಳ ಇಲ್ಲ. ಖಾಸಗಿ ಜಾಗಕ್ಕೆ ಹೋದರೆ ಅಲ್ಲಿ ಹಲವರು ಬೈಗುಳ ಕೇಳಿಸಿಕೊಳ್ಳಬೇಕು~ ಎಂದು ಆಶಾಮ್ಮ ಯಳವಾರ್, ಕಸ್ತೂರಿಬಾಯಿ ಗೊಂದಲಗಿ ಹೇಳಿದರು.
`ಇಲ್ಲಿಯವರೆಗೂ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಇದರಿಂದ ಮಕ್ಕಳು ಶಾಲೆಗೆ ಹೊಗಬೇಕಾದರೆ ತೊಂದರೆಯಾಗುತ್ತಿದೆ. ವೃದ್ಧರು ರಸ್ತೆ ಮೇಲೆ ನಡೆದಾಡದಂತಹ ಪರಿಸ್ಥಿತಿ ಬಂದೋದಗಿದೆ. ಇದರಿಂದ ನಮ್ಮ ಬದುಕು ನರಕದಂತಾಗಿದೆ~ ಎಂದು ನಿವಾಸಿ ತಾಯಮ್ಮ ಹೇಳಿದರು.
`ಪಡಿತರ ಚೀಟಿ ಸೇರಿದಂತೆ ವಿವಿಧ ಯೋಜನೆಯಲ್ಲಿ ಮಂಜೂರಾಗುವ ಆಶ್ರಯ ಮನೆಗಳು ಇಲ್ಲಿ ಮರೀಚಿಕೆಯಾಗಿವೆ. ಚುನಾವಣೆಗಳಲ್ಲಿ ಜನಪ್ರತಿನಿಧಿಗಳು ನಮ್ಮನ್ನು ಬಳಿಸಿಕೊಳ್ಳುತ್ತಾರೆ. ಆದರೆ ಸರ್ಕಾರದ ಸೌಕರ್ಯಗಳನ್ನು ನೀಡುವಾಗ ನಮ್ಮನ್ನು ಸಂಪೂರ್ಣ ನಿರ್ಲಕ್ಷ್ಯಿಸುತ್ತಾರೆ. ಇದರಿಂದ ನಮ್ಮ ಜೀವನ ಪ್ರಾಣಿಗಳಿಗಿಂತ ಕಡೆಯಾಗಿದೆ~ ಎಂದು ಅಶೋಕ ಗುತ್ತೇದಾರ್, ಪರಮೇಶ್ವರ ಜಳಕಿ, ರಾಜೇಂದ್ರ ಕೊರವೆ ಬೇಸರ ವ್ಯಕ್ತಪಡಿಸುತ್ತಾರೆ.
`ಕಳೆದ ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಗ್ರಾಮಕ್ಕೆ ವಿವಿಧ ಮೂಲ ಸೌಕರ್ಯ ಸೇರಿದಂತೆ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದರು.
ಆದರೆ ಇದುವರೆಗೂ ಶಾಸಕ ವಾಲ್ಮೀಕ ನಾಯಕ ಅವರು ಒಂದು ಬಾರಿಯಾದರೂ ಇಲ್ಲಿಗೆ ಬಂದಿಲ್ಲ~ ಎಂದು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಬಯಲಲ್ಲಿ ಬಹಿರ್ದೆಸೆಗೆ ಹೋಗುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಬೀಡುಗಡೆ ಮಾಡುತ್ತಿದೆ. ಆದರೂ ಈ ಗ್ರಾಮದಲ್ಲಿನ ಮಹಿಳೆಯರ `ಬಹಿರ್ದೆಸೆಯ ಬವಣೆ~ ಕೊನೆಗೊಂಡಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.