ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಈಗ ಸುಲುಭವಲ್ಲ. ಜಿಲ್ಲೆಯ ವಿವಿಧೆಡೆ ಇರುವ ಹೈ ಲೆವಲ್, ಲೋ ಲೆವೆಲ್ ಕಾಲುವೆಗಳ ಸೇತುವೆಗಳಿಗೆ ಅನೇಕ ಕಡೆ ತಡೆಗೋಡೆಯೇ ಇಲ್ಲ.
ಇತ್ತೀಚೆಗಷ್ಟೇ ಅಂದರೆ, ಸೆ. 2ರಂದು ನಸುಕಿನಲ್ಲಿ ಜಿಲ್ಲೆಯ ತೋರಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿ- 63ರಲ್ಲಿ ಇರುವ ಕಾಲುವೆಯೊಳಗೆ ಇಂಡಿಕಾ ಕಾರ್ ಉರುಳಿಬಿದ್ದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದರೂ ತಡೆಗೋಡೆ ಇದ್ದಿದ್ದರೆ ಅಮಾಯಕರು ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ. ಆದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಈವರೆಗೆ ಅಂಥ ಕಡೆಗಳಲ್ಲಿ ತಡೆಗೋಡೆ ನಿರ್ಮಿಸುವ ಗೋಜಿಗೆ ಹೋಗಿಲ್ಲ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಾಲ್ಲೂಕಿನ ಕೊಳಗಲ್ ಗ್ರಾಮದ ಬಳಿಯ ಎಲ್‌ಎಲ್‌ಸಿ ಕಾಲುವೆಯ ಮೇಲಿಂದ ಕೂಲಿಕಾರರನ್ನು ಕರೆತರುತ್ತಿದ್ದ ಆಟೋ ಒಂದು, ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಹಿನ್ನೆಲೆಯಲ್ಲಿ ಐವರು ಕೂಲಿಕಾರರು ಪ್ರಾಣ ಕಳೆದುಕೊಂಡಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತಿ ವೇಗದಿಂದ ಸಾಗುವುದು ಸಾಮಾನ್ಯ. ಕಾಲುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿದರೆ ವಾಹನ ನೇರವಾಗಿ ನೀರಿಗೆ ಧುಮುಕುವುದರಿಂದ ಒಳಗಿದ್ದವರು ಉಳಿಯುವ ಸಾಧ್ಯತೆಗಳೇ ವಿರಳ. ಅಪಾಯದ ಕೆರೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಳಿ ಇರುವ ಹಳ್ಳಿಕೆರೆ ಹಾಗೂ ಕಮಲಾಪುರ ಕೆರೆಗಳ ದಂಡೆಯ ಮೇಲೇ ರಸ್ತೆ ಇದ್ದು, ತಡೆಗೋಡೆಯೇ ಇಲ್ಲ.
ಈ ರಸ್ತೆಯಗುಂಟವೇ ನಿತ್ಯ ನೂರಾರು ವಾಹನಗಳು ತೆರಳುತ್ತವೆ. ವಿದೇಶಿಯರೂ ಒಳಗೊಂಡಂತೆ ಅನೇಕರು ಈ ರಸ್ತೆಗುಂಟವೇ ಹಂಪಿ ಕನ್ನಡ ವಿವಿಗೆ ಆಗಮಿಸುವುದರಿಂದ ಒಂದೊಮ್ಮೆ ಅವಗಡ ಸಂಭವಿಸಿದ್ದೇ ಆದರೆ, ವಾಹನಗಳು ನೇರ ಕೆರೆಯೊಳಗೇ ಮುಳುಗಿ ಅಪಾರ ಪ್ರಾಣಹಾನಿ ಸಂಭವಿಸುವುದರಲ್ಲಿ ಸಂಶಯವಿಲ್ಲ.
ಅದೇ ರೀತಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿರುವ ರಾಮದುರ್ಗ ಕೆರೆಯೂ ಕೂಡ್ಲಿಗಿ- ಬಳ್ಳಾರಿ ಮುಖ್ಯರಸ್ತೆಯಲ್ಲೇ ಇದ್ದು, ಸಾವಿರಾರು ವಾಹನಗಳು ಆ ಮಾರ್ಗದಗುಂಟ ತೆರಳುತ್ತವೆ. ಅಲ್ಲೂ ಇಂಥದ್ದೇ ಅಪಾಯದಿದ್ದರೂ ತಡೆಗೋಡೆಯನ್ನು ನಿರ್ಮಿಸಲಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.