ಇಲ್ಲಿ ಕಾವೇರಿ ನಿತ್ಯ ಹರಿಯುತ್ತಾಳೆ...

7

ಇಲ್ಲಿ ಕಾವೇರಿ ನಿತ್ಯ ಹರಿಯುತ್ತಾಳೆ...

Published:
Updated:

ಚನ್ನಪಟ್ಟಣ: ಕೆಆರ್‌ಎಸ್‌ನಲ್ಲಿ ಕಾವೇರಿ ನೀರು ಇರಲಿ ಅಥವಾ ಬಿಡಲಿ, ತಮಿಳುನಾಡಿಗೆ ಕಾವೇರಿ ಹರಿಯಲಿ ಬಿಡಲಿ, ಬೆಂಗಳೂರಿನ ಜನತೆಗೆ ಕಾವೇರಿ ನೀರನ್ನು ಹರಿಸದಿದ್ದರೂ, ಇಲ್ಲಿ ಮಾತ್ರ ದಿನದ ಇಪ್ಪತ್ನಾಲ್ಕು ಗಂಟೆಯೂ ಕಾವೇರಿ ಸರಾಗವಾಗಿ ಹರಿಯುತ್ತಾಳೆ.ಇದು ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮ. ಕಾವೇರಿಗೂ ಇಲ್ಲಿಗೂ ಅಜಗಜಾಂತರ ದೂರ. ಆದರೂ ಕೋಡಂಬಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆಗೆ ಮಾತ್ರ ಕಾವೇರಿ ಸುಲಭವಾಗಿ ಸಿಗುತ್ತಾಳೆ. ಹಾಗೆಯೇ ಬಹುಪಯೋಗಿ ಕಾರ್ಯಗಳಿಗೆ ನೆರವಾಗಿದ್ದಾಳೆ.ಆಗಿರುವುದಿಷ್ಟು:  ಚನ್ನಪಟ್ಟಣ ಹಾಗೂ ರಾಮನಗರ ಪಟ್ಟಣಗಳಿಗೆ ಕಾವೇರಿ ಕುಡಿಯುವ ನೀರು ಪೂರೈಸಲು ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಲಗೂರು ಬಳಿಯ ತೊರೆಕಾಡನ ಹಳ್ಳಿಯಿಂದ ಈ ಪಟ್ಟಣಗಳವರೆಗೆ ಪೈಪ್‌ಲೈನ್ ಅಳವಡಿಸಿದೆ. ಮಂಡಳಿಯು ಪೈಪ್‌ಲೈನ್ ಅಳವಡಿಸುವಾಗ ಅಲ್ಲಲ್ಲಿ ಕೆಲವು ಕಡೆ ಪೈಪ್ ಜಾಯಿಂಟ್‌ನಲ್ಲಿ ಪಾಯಿಂಟ್‌ಗಳನ್ನು ಬಿಟ್ಟಿದೆ. ಈ ಜಾಯಿಂಟ್‌ಗಳ ಕೆಲವು ಪಾಯಿಂಟ್‌ಗಳಲ್ಲಿ ಕಾವೇರಿ ನೀರು ಸೋರಿಕೆಯಾಗುತ್ತದೆ.ಬೇರೆಲ್ಲಾ ಕಡೆ ಕಡಿಮೆ ಪ್ರಮಾಣದಲ್ಲಿ ನೀರು ಸೋರಿಕೆಯಾದರೆ, ಕೋಡಂಬಹಳ್ಳಿಯಲ್ಲಿ ಮಾತ್ರ ತುಸು ಹೆಚ್ಚು ನೀರು ಸೋರಿಕೆಯಾಗುತ್ತದೆ. ಈ ಸೋರಿಕೆಯ ನೀರನ್ನೇ ಇಲ್ಲಿನ ಜನತೆ ವಿವಿಧ ಕಾರಣಗಳಿಗೆ ಬಳಸುತ್ತಿದ್ದಾರೆ. ಮೊದಲೆಲ್ಲಾ ಕೇವಲ ಉಕ್ಕುತ್ತಿದ್ದ ಕಾವೇರಿಗೆ ಯಾರೋ ಒಂದು ಪೈಪ್ ಅಳವಡಿಸಿ ಪಂಪ್‌ಸೆಟ್ ನೀರು ಬೀಳುವ ರೀತಿ ಮಾಡಿದ್ದಾರೆ. ಇಲ್ಲಿ ಈಗ ಕಾವೇರಿ ಸದಾ ಹರಿಯುತ್ತಿರುತ್ತಾಳೆ! ನಾಲ್ಕೈದು ವರ್ಷಗಳಿಂದ ಈಕೆ ಇ್ಲ್ಲಲಿನ ಜನರ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದ್ದಾಳೆ.ಇಲ್ಲಿ ಸುಲಭವಾಗಿ ಸಿಗುವ ಕಾವೇರಿಗೆ ಎಲ್ಲಿಲ್ಲದ ಬೇಡಿಕೆ. ಕೋಡಂಬಹಳ್ಳಿ ಸೇರಿದಂತೆ ಸುತ್ತಮುತ್ತಲ ಬಹುತೇಕ ಜನರು ಈ ನೀರನ್ನೇ ಕುಡಿಯಲು ಬಳಸುತ್ತಾರೆ. ಸೈಕಲ್, ಬೈಕ್, ಟ್ರ್ಯಾಕ್ಟರ್, ಇನ್ನಿತರೆ ವಾಹನಗಳಲ್ಲಿ ಬಂದು ಬಿಂದಿಗೆ, ಪಾತ್ರೆ, ಕ್ಯಾನ್, ಡ್ರಮ್‌ಗಳಲ್ಲಿ ಹಿಡಿದು ಒಯ್ಯುತ್ತಾರೆ. ಮದುವೆ ಮುಂತಾದ ಸಮಾರಂಭಗಳಿಗೂ ಕುಡಿಯಲು ಈ ನೀರೇ ಬಳಕೆಯಾಗುತ್ತದೆ.ಹಾಗೆಯೇ ಪಕ್ಕದಲ್ಲೇ ಇರುವ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕುಡಿಯಲು ಇದೇ ನೀರು ಬಳಕೆಯಾಗುತ್ತದೆ. ಶಾಲಾ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದ ನಂತರ ತಟ್ಟೆ-ಪಾತ್ರೆಗಳನ್ನು ತೊಳೆಯಲು ಇಲ್ಲಿ ಕಾವೇರಿಯೆ ಆಧಾರ. ಕಾವೇರಿ ನೀರು ಇಲ್ಲಿ ಹರಿಯುವುದರಿಂದ ಶಾಲಾಮಕ್ಕಳ ಬಿಸಿಯೂಟ ಕಾರ್ಯಕ್ರಮಕ್ಕೆ ತುಂಬಾ ಅನುಕೂಲವಾಗಿದೆ, ಇಲ್ಲದಿದ್ದರೆ ನೀರು ಪೂರೈಸುವುದೇ ಕಷ್ಟವಾಗುತ್ತಿತ್ತು ಎಂಬುದು ಶಾಲಾ ಸಿಬ್ಬಂದಿಯ ಅಭಿಪ್ರಾಯವಾಗಿದೆ.ಹಾಗೆಯೇ ಜಾನುವಾರು, ಸೈಕಲ್, ಬೈಕ್, ಕಾರು, ಟ್ರ್ಯಾಕ್ಟರ್, ಎತ್ತಿನಗಾಡಿ, ಬಸ್ಸುಗಳನ್ನು ತೊಳೆಯಲು ಸಹ ಕಾವೇರಿಯೇ ಬಳಕೆಯಾಗುತ್ತಾಳೆ. ಕೆಲವರು ಕುಡಿಯಲು ಬಳಸಿದರೆ ತೀರಾ ಹತ್ತಿರವಿರುವ ಮಂದಿ ಸ್ನಾನಕ್ಕೆ, ಬಟ್ಟೆ ಒಗೆಯಲು, ಪಾತ್ರೆ ಪಡಗ ತೊಳೆಯಲು ಇದೇ ನೀರನ್ನು ಬಳಸುತ್ತಾರೆ.ನೀರು ಹರಿದು ಕೆಳಭಾಗಕ್ಕೆ ಹೋದಂತೆ ಕೆಲವರು ವ್ಯವಸಾಯಕ್ಕೂ ಬಳಸುತ್ತಾರೆ. ಅಷ್ಟೇಅಲ್ಲದೆ ಈ ಮಾರ್ಗವಾಗಿ ಓಡಾಡುವ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಚಾಲಕ-ನಿವಾಹಕರೂ ಇಲ್ಲಿ ಬಸ್‌ಗಳು ಅಥವಾ ತಮ್ಮ ವಾಹನಗಳನ್ನು ನಿಲ್ಲಿಸಿ ಕುಡಿಯಲು ಬಾಟಲ್‌ಗಳಲ್ಲಿ ನೀರು ಒಯ್ಯುವುದು ವಾಡಿಕೆಯಾಗಿದೆ.ಇಲ್ಲಿ ಕಾವೇರಿ ಹರಿಯುವ ಮೊದಲು ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇತ್ತು.ಈಗ ಇವರಿಗೆ ನೀರಿನ ತೊಂದರೆ ತಪ್ಪಿದೆ. ವಾಸ್ತವದಲ್ಲಿ ಗ್ರಾಮಕ್ಕೆ ಕಾವೇರಿ ನೀರನ್ನು ಅಧಿಕೃತವಾಗಿಯೇ ಕೊಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂಬುದು ಸ್ಥಳೀಯ ಬಹುತೇಕ ಗ್ರಾಮ ಪಂಚಾಯ್ತಿ ಸದಸ್ಯರ ಅಭಿಪ್ರಾಯವಾಗಿದೆ.ಯಾರಾದರೂ ನೀರು ಹರಿಯುವುದರ ಬಗ್ಗೆ ಸುದ್ದಿ ಹಬ್ಬಿಸಿದರೆ ನೀರು ನಿಲ್ಲಬಹುದು ಎಂಬ ಭಯವೂ ಇಲ್ಲಿನ ಜನತೆಗೆ ಇದೆ. ಇಲ್ಲಿ ಕಾವೇರಿ ಹರಿಯುವುದರಿಂದ ನಮ್ಮ ನೀರಿನ ಕೊರತೆ ದೂರವಾಗಿದೆ. ಈ ವಿಷಯವನ್ನು ಯಾರಾದರೂ ಬಹಿರಂಗಗೊಳಿಸದರೆ ಅಧಿಕಾರಿಗಳು ಬಂದು ನೀರು ನಿಲ್ಲಿಸಿಬಿಡುತ್ತಾರೆ. ಈ ಬಗ್ಗೆ ಎಲ್ಲೂ ಹೇಳುವುದೂ ಬೇಡ, ದಯಮಾಡಿ ಈ ಬಗ್ಗೆ ಸುದ್ದಿ ಬರೆಯಬೇಡಿ ಎಂದೇ ಈ ಭಾಗದ ಜನತೆ ಕೋರುತ್ತಾರೆ.`ನಮಗೆ ಕಾವೇರಿಯಿಂದ ಬಹಳ ಉಪಯೋಗ ಆಗಿದೆ. ನೀವ್ ಇದನ್ನು ಫೋಟೋ ತೆಗಿಯೋದ್ ನೋಡಿದ್ರೆ ಏನೋ ಮಾಡ್ತೀರಿ ಅನ್ನೋವಂಗ್ ಅದೆ. ನೀರ್ ಮಾತ್ರ ನಿಲ್ಲಿಸ್‌ಬೇಡಿ, ನೀರ್ ಹರಿದ್ರೆ ನಿಮ್ಗೇನ್ ತೊಂದ್ರೆ, ಈ ನೀರಿಂದ ನಮ್ಗೆ ಎಷ್ಟ ಉಪಯೋಗ್ ಆಗದೆ ಅನ್ನೋದ್ ನಿಮ್ಗೇನ್ ಗೊತ್ತು. ಇದ್ನ ನಿಲ್ಸೋ ಕೆಲ್ಸ ಮಾತ್ರ ಮಾಡ್ಬೇಡಿ~ ಎನ್ನುವುದು ಇಲ್ಲಿ ನೀರು ಹಿಡಿಯುವ ಮಹಿಳೆಯರ ಮನವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry