ಇಲ್ಲಿ ಕುಡಿಯುವ ನೀರು ಕೇಳುವವರಿಲ್ಲ!

7

ಇಲ್ಲಿ ಕುಡಿಯುವ ನೀರು ಕೇಳುವವರಿಲ್ಲ!

Published:
Updated:
ಇಲ್ಲಿ ಕುಡಿಯುವ ನೀರು ಕೇಳುವವರಿಲ್ಲ!

ಕಾರವಾರ: ಕುಡಿಯುವ ನೀರು ಪೂರೈಕೆ ಮಾಡುತ್ತೇವೆ ತೆಗೆದುಕೊಳ್ಳಿ ನಗರಸಭೆ ಮತ್ತು ಜಲಮಂಡಳಿಯವರು ದಮ್ಮಯ್ಯ ಹಾಕಿದರೂ ನಗರದ ನಿವಾಸಿಗಳು ಕುಡಿಯುವ ನೀರಿನ ಸಂಪರ್ಕ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ!ಇದು ಕಾರವಾರ ನಗರಸಭೆ ಮತ್ತು ಜಲಮಂಡಳಿಗೆ ತಲೆನೋವಿನ ಸಂಗತಿಯಾಗಿದೆ. ನಗರದ ಜನಸಂಖ್ಯೆ ಅಂದಾಜು 75 ಸಾವಿರ. ಒಟ್ಟು 13 ಸಾವಿರ ಮನೆಗಳಿವೆ. ಆದರೆ ನೀರಿನ ಸಂಪರ್ಕ ಇರುವುದು ಕೇವಲ 900 ಮನೆಗಳಿಗೆ ಮಾತ್ರ! ಪ್ರತಿನಿತ್ಯ 20 ಲಕ್ಷ ಲೀಟರ್ ಕುಡಿಯುವ ನೀರನ್ನು ಜನರು ಉಪಯೋಗಿಸುತ್ತಾರೆ. ಉಳಿದವರು ಕುಡಿಯುವ ನೀರಿಗಾಗಿ ಬೋರವೆಲ್, ತೆರೆದ ಬಾವಿಗಳನ್ನೇ  ಅವಲಂಬಿಸಿದ್ದಾರೆ.ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಜಲಮಂಡಳಿ ಅಂದಾಜು 37 ಕೋಟ ವೆಚ್ಚದಲ್ಲಿ 45 ಕಿ.ಮೀ (ಅಂಕೋಲಾ ತಾಲ್ಲೂಕಿನ ಅಗಸೂರು) ದೂರದಿಂದ ನೀರು ತಂದು  ಶುದ್ಧೀಕರಿಸಿ ಪೂರೈಸುವ ಯೋಜನೆ ಪೂರ್ಣಗೊಂಡಿದೆ. 11,500 ಮನೆಗಳಿಗೆ ನೀರಿನ ಸಂಪರ್ಕ ಕೊಡಲು ಒಟ್ಟು 136 ಕಿ.ಮೀ ಪೈಪ್ ಅಳವಡಿಸಲಾಗಿದೆ. ದಿನದ 24ಗಂಟೆಯೂ ನೀರು ಕೊಡಬೇಕು ಎನ್ನುವ ಉದ್ದೇಶದಿಂದ ಉತ್ಕೃಷ್ಟ ದರ್ಜೆಯ ಪೈಪ್‌ಗಳನ್ನು ಅಳವಡಿಸಲಾಗಿದೆ. ಆದರೆ, ನೀರಿನ ಸಂಪರ್ಕ ಪಡೆದುಕೊಳ್ಳಲು ನಗರದ ನಿವಾಸಿಗಳು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ. ಶಿವಕುಮಾರ ಅವರು.`ನಮಗೆ ನಿಮ್ಮ  (ಜಲಮಂಡಳಿ) ನೀರು ಬೇಡ, ಬಾವಿ, ಬೋರವೆಲ್ ನೀರನ್ನು ನಾವು ಬಳಸುತ್ತಿದ್ದೇವೆ~ ಎಂದು ನಗರಸಭೆ ಸದಸ್ಯರು ವಾದಿಸುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. `ನಗರದ ಬೋರವೆಲ್ ಮತ್ತು ತೆರೆದ ಬಾವಿಗಳಲ್ಲಿರುವ ನೀರು ಅಂತರ್ಜಲವಲ್ಲ; ಮಳೆಗಾಲದಲ್ಲಿ ಬೆಟ್ಟದಿಂದ ಹರಿದುಬಂದು ಇಂಗಿರುವ ನೀರು. ಅದು ಶುದ್ಧ ನೀರಲ್ಲ. ಬ್ಯಾಕ್ಟೀರಿಯಾಗಳು ಅದಲ್ಲಿರುತ್ತವೆ. ಆ ನೀರಿಗೆ ಹೊಂದಿಕೊಂಡಿರುವುದರಿಂದ ಶುದ್ಧೀಕರಿಸಿದ ಮತ್ತು ಬಾವಿ ನೀರಿನ ವ್ಯತ್ಯಾಸ ಜನರಿಗೆ ತಿಳಿಯುತ್ತಿಲ್ಲ~ ಎನ್ನುತ್ತಾರೆ ಅವರು.ಜಲಮಂಡಳಿ ಪೂರೈಸುವ ನೀರು ಎಷ್ಟು ಶುದ್ಧವಾಗಿರುತ್ತದೆ ಎನ್ನುವುದನ್ನು ತೋರಿಸಲು ನಗರಸಭೆ ಆಯುಕ್ತ ಡಾ. ಉದಯಕುಮಾರ ಶೆಟ್ಟಿ ಎಲ್ಲ ಸದಸ್ಯರಿಗೆ ಕೆಲ ದಿನಗಳ ಹಿಂದೆ ಅಗಸೂರಿನಲ್ಲಿರುವ ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕಕ್ಕೆ ಕರೆದುಕೊಂಡು ಹೋಗಿ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry