ಸೋಮವಾರ, ಜೂನ್ 21, 2021
20 °C
ಬಳ್ಳಾರಿ ಲೋಕಸಭೆ ಕ್ಷೇತ್ರ ವಿಶೇಷ

ಇಲ್ಲಿ ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ ‘ಜಾತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಚುನಾವಣೆ ಸಂದರ್ಭ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಾತಿಯ ಲೆಕ್ಕಾಚಾರ ಹಾಕುವುದು ಸರ್ವೇ­ಸಾಮಾನ್ಯ ಸಂಗತಿ. ಆದರೆ, ಬಳ್ಳಾರಿ ಲೋಕ­ಸಭೆ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆ­ಗಳಲ್ಲಿ ‘ಜಾತಿ’ ಪ್ರಮುಖ ರಾಜಕೀಯ ಗಾಳ­ವಾಗಿ ಬಳಕೆಯಾಗಿಲ್ಲ ಎಂಬುದು ಗಮನಾರ್ಹ.2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಆದ ನಂತರ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಆದರೆ, ಅದಕ್ಕಿಂತ ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದ ಬಳ್ಳಾರಿ ಕ್ಷೇತ್ರದಲ್ಲಿ 1952ರಿಂದ 1999ರವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ‘ಜಾತಿ’ ಮತ್ತು ವ್ಯಕ್ತಿ ಪ್ರಮುಖವಾಗದೆ ಪಕ್ಷವೇ ಪ್ರಧಾನವಾಗಿತ್ತು.ದೇಶದಾದ್ಯಂತ ಎಂತಹ ರಾಜಕೀಯ ಬೆಳವಣಿಗೆಗಳು ಘಟಿಸಿದರೂ ಇಲ್ಲಿನ ಮತದಾರ ಕಾಂಗ್ರೆಸ್ ಪಕ್ಷದತ್ತಲೇ ಒಲವು ಹೊಂದಿದ್ದ. ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲೂ ಇಲ್ಲಿನ ಮತದಾರರು ಕಾಂಗ್ರೆಸ್‌ನ ಗುರುತಾದ ‘ಹಸ್ತ’ಕ್ಕೇ ‘ಜೈ’ ಎಂದಿದ್ದರು.

ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಪ್ರಮಾಣ­ದಲ್ಲಿರುವ ಸಮುದಾಯಕ್ಕೆ ಸೇರಿದವರು ಕಾಂಗ್ರೆಸ್‌­ನಿಂದ ಸ್ಪರ್ಧಿಸಿದಾಗ, ಅವರ ವಿರುದ್ಧ ಬಹುಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಗೆ ಮಣೆ ಹಾಕದ ಮತದಾರ ಅಷ್ಟರ ಮಟ್ಟಿಗೆ ಕಾಂಗ್ರೆಸ್‌ ಪರ ನಿಷ್ಠೆ ಇರಿಸಿಕೊಂಡಿದ್ದು, 2000ರಲ್ಲಿ ನಡೆದ ಉಪ ಚುನಾವಣೆವರೆಗೂ ಸಾಬೀತಾಗಿದೆ.ಲಿಂಗಾಯತ ಸಮುದಾಯದ ಮುಖಂಡ, ರಾವ್‌ಬಹದ್ದೂರ್‌ ವೈ.ಮಹಾಬಳೇಶ್ವರಪ್ಪ ಅವರು ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿದ್ದರೂ ಅವರ ಕಾಂಗ್ರೆಸ್ಸೇತರರು ಎಂಬ ಕಾರಣಕ್ಕೆ ಜಯ ಗಳಿಸಿರಲಿಲ್ಲ.ಅಂತೆಯೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ 1999ರಲ್ಲಿ ಈ ಕ್ಷೇತ್ರ­ದಿಂದ ಸ್ಪರ್ಧಿಸಿ, ಅಟಲ್‌ ಬಿಹಾರಿ ವಾಜಪೇಯಿ ಅವರ ಪರ ಅಲೆಯಿದ್ದಾಗಲೂ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಅವರನ್ನು ಸೋಲಿಸಿದ್ದರು.ಅಷ್ಟೇ ಅಲ್ಲ, ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದಲೂ ಸ್ಪರ್ಧಿಸಿ ಗೆದ್ದಿದ್ದ ಅವರು ಆ ಕ್ಷೇತ್ರ ಉಳಿಸಿಕೊಂಡು ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಎದುರಾದ ಉಪ­ಚುನಾವಣೆಯಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು.ಇಂದಿರಾ ಗಾಂಧಿ ಪ್ರಭಾವ: ಇಂದಿರಾ ಗಾಂಧಿ ಅವರ ಪ್ರಭಾವಕ್ಕೆ ಒಳಗಾಗಿದ್ದ ಬಳ್ಳಾರಿ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿಯ ನಂತರ ನಡೆದಿದ್ದ ಚುನಾವಣೆಯಲ್ಲೂ ಜನತೆ ಅವರ ಪಕ್ಷವನ್ನು ಬಿಟ್ಟುಕೊಟ್ಟಿರಲಿಲ್ಲ.ಅಂತೆಯೇ ಎಂ.ವೈ. ಘೋರ್ಪಡೆ ಅವರಿಗೆ ಹತ್ತಿರದವರಾಗಿದ್ದ ಕೆ.ಎಸ್‌. ವೀರಭದ್ರಪ್ಪ 1977ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅನಾಮಿಕರಾಗಿಯೂ 1.45 ಲಕ್ಷ ಮತಗಳ ಅಂತರದಲ್ಲಿ ಜಯಶಾಲಿಯಾಗಿದ್ದರು.‘ಈ ಚುನಾವಣೆಯ ಸಂದರ್ಭ ಬಳ್ಳಾರಿಯ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ  ಪ್ರಚಾರಕ್ಕೆಂದು ಆಗಮಿಸಲಿದ್ದ ಇಂದಿರಾ ಗಾಂಧಿ, ರಾತ್ರಿ 10ರ ಬದಲಿಗೆ ಮಧ್ಯರಾತ್ರಿ 1 ಗಂಟೆಗೆ ಆಗಮಿಸಿದರೂ (ಈಗಿನಂತೆ ರಾತ್ರಿ 9ರೊಳಗೆ ಬಹಿರಂಗ ಸಭೆ ಮುಗಿಸಿಬೇಕೆಂಬ ನಿಯಮ ಆಗ ಇರಲಿಲ್ಲ) ಜನ ಅವರನ್ನು ಕಾಣುವ ಕಾತರದಿಂದಾಗಿ ಜಾಗ ಬಿಟ್ಟು ಕದಲಿ­ರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಗಾಂಧಿ­ಭವನದ ಕಾರ್ಯದರ್ಶಿ ಟಿ.ಜಿ. ವಿಠ್ಠಲ್‌.1980ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅರಸು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ   ಎಂ.ವೈ. ಘೋರ್ಪಡೆ ಅವರನ್ನು ಸೋಲಿಸಲೇಬೇಕೆಂದು ಸ್ವತಃ ಇಂದಿರಾ ಗಾಂದಿ ಅವರೇ ಆಸಕ್ತಿ ತಾಳಿ, ರಾಜಕೀಯದಲ್ಲೇ ಇರದಿದ್ದ ಅವರ ಸೋದರ ರಣಜಿತ್‌ ಘೋರ್ಪಡೆ ಅವರಿಗೆ ಟಿಕೆಟ್‌ ನೀಡಿದ್ದರು. ಮತದಾರರು ಅವರ ‘ಕೈ’ ಹಿಡಿದು ವಿಶ್ವಾಸಾರ್ಹತೆ ಸಾಬೀತು ಮಾಡಿದ್ದರು.ಅನಾಮಿಕರಿಗೆ ಮಣೆ: ಕ್ಷೇತ್ರದಲ್ಲಿ ಚುನಾವಣೆ ಸಂದರ್ಭ ದಿಢೀರ್‌ ಪ್ರತ್ಯಕ್ಷರಾಗಿ ಕಣಕ್ಕಿಳಿದು ಗೆದ್ದವರ ಪಟ್ಟಿ ಉದ್ದವೇ ಇದೆ. ಡಾ.­ವಿ.­ಕೆ.ಆರ್‌.ವಿ. ರಾವ್ ಬೆಂಗಳೂರಿನಿಂದ ಬಂದವ­ರಾದರೆ, ಸಂಡೂರಿನ ರಣಜಿತ್‌ ಘೋರ್ಪಡೆ ರಾಜ ಮನೆತನದವರಾದರೂ ಕ್ಷೇತ್ರದಲ್ಲಿ ಪರಿಚಿತರೇನೂ ಆಗಿರಲಿಲ್ಲ.ವಿಧಾನ ಪರಿಷತ್‌ನ ಉಪಸಭಾಪತಿ ಹುದ್ದೆ ಅಲಂಕರಿಸಿದ್ದ ರಾಯಚೂರು ಮೂಲದ ಬಸವ­ರಾಜೇಶ್ವರಿ ಕೂಡ ಮೊದಲ ಬಾರಿ ಸ್ಪರ್ಧಿಸು­ವಾಗ ಕ್ಷೇತ್ರದಾದ್ಯಂತ ಜನರಿಗೆ ಅಷ್ಟಾಗಿ ಪರಿಚಿತ­ರಿರಲಿಲ್ಲ. ಕೆ.ಎಸ್‌. ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಜಿ.ಕರುಣಾಕರರೆಡ್ಡಿ, ಜೆ.ಶಾಂತಾ ಅವರೂ ಸ್ಥಳೀಯರೇ ಆಗಿದ್ದರೂ ಮೊದಲ ಬಾರಿ ಕಣಕ್ಕಿಳಿದಾಗ ಅನಾಮಿಕರಾಗಿಯೇ ಇದ್ದವರು ಎಂದು ಮತದಾರರು ನೆನಪಿಸಿಕೊಳ್ಳುತ್ತಾರೆ.ಹ್ಯಾಟ್ರಿಕ್‌ ವೀರರು: 1952ರಿಂದ ಸತತ ಮೂರು ಚುನಾವಣೆಗಳಲ್ಲಿ ಜಯಿಸಿ ಟೇಕೂರ್‌ ಸುಬ್ರಹ್ಮಣ್ಯಂ ಅವರೂ, ಕೇಂದ್ರದಲ್ಲಿ ಸಚಿವ ಸ್ಥಾನ ಗಳಿಸಿದ್ದ ಬಸವರಾಜೇಶ್ವರಿ ಅವರು ಇದುವರೆಗೆ ನಡೆದಿರುವ ಚುನಾವಣೆಗಳಲ್ಲಿ ಹ್ಯಾಟ್ರಿಕ್‌ ಗೆಲುವು ದಕ್ಕಿಸಿಕೊಂಡವರು.ಆದರೆ, ಟೇಕೂರ್‌ 15 ವರ್ಷ ಸಂಸದರಾಗಿದ್ದರು. ಸಚಿವರಾಗಿರಲಿಲ್ಲ. ಸಚಿವ ಸ್ಥಾನದ ಅವಕಾಶವನ್ನು ಅವರು ನಿರಾಕರಿ­ಸಿದ್ದರು. ಬಸವರಾಜೇಶ್ವರಿ ಒಮ್ಮೆ ಜಯಿಸಿದ ನಂತರ ಮಧ್ಯಂತರ ಚುನಾವಣೆ ಎದುರಾ­ಗಿದ್ದರಿಂದ ಅವರ ಮೂರೂ ಅವಧಿಗಳಲ್ಲಿ ಒಂದು ಅವಧಿ ಐದು ವರ್ಷಕ್ಕಿಂತ ಮೊದಲೇ ಕೊನೆಗೊಂಡಿತ್ತು. ಆದರೆ, ಅವರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು ಎಂಬುದು ವಿಶೇಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.