ಇಲ್ಲಿ ನಾಗರಿಕರಿಗೆ ದೊರಕದ ಸೌಲಭ್ಯವೇ ಹೆಚ್ಚು

7

ಇಲ್ಲಿ ನಾಗರಿಕರಿಗೆ ದೊರಕದ ಸೌಲಭ್ಯವೇ ಹೆಚ್ಚು

Published:
Updated:

ರಿಪ್ಪನ್‌ಪೇಟೆ: ಗ್ರಾಮೀಣ ಜನರ ಅನುಕೂಲ ಹಾಗೂ ಮಧ್ಯಮವರ್ಗದ ಜನರ ಬದುಕಿಗೆ ಆಶಾಕಿರಣ ಹುಟ್ಟಿಸುವ ಸಲುವಾಗಿ ಸರ್ಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸರ್ಕಾರ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದರೂ, ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಇಂದಿಗೂ ಬಡವರು ಸೌಲಭ್ಯ ವಂಚಿತರಾಗಿ ಖಾಸಗಿ ಆಸ್ಪತ್ರೆಯ ಮೊರೆ ಹೋಗುವುದು ಸರ್ವೆ ಸಾಮಾನ್ಯ.ತಾಲ್ಲೂಕಿನ ಪ್ರಮುಖ ಕೇಂದ್ರವಾದ ಈ ಪಟ್ಟಣದಲ್ಲಿ ಕೆರೆಹಳ್ಳಿ ಹಾಗೂ ಹುಂಚ ಹೋಬಳಿ ಕೇಂದ್ರದ ವ್ಯಾಪ್ತಿಯ ರಿಪ್ಪನ್‌ಪೇಟೆ, ಅರಸಾಳು, ಕೆಂಚನಾಲ, ಬೆಳ್ಳೂರು, ಹೆದ್ದಾರಿಪುರ, ಜೇನಿ, ಬಾಳೂರು, ಅಮೃತ ಹಾಗೂ ಹುಂಚ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅದಕ್ಕೆ ತಕ್ಕ ಆಸ್ಪತ್ರೆ ಹೆಸರಿಗೆ ಇದ್ದರೂ, ಮೂಲಸೌಕರ್ಯ ರಹಿತವಾಗಿರುವುದು ಶೋಚನೀಯ.ಇರುವ ಸೌಲಭ್ಯಗಳೂ ಸಹ ಜನರ ಕೈಗೆ ಎಟುಕದೇ ಬರುವ ಸೌಲಭ್ಯಗಳಿಗೆ ಚಾತಕಪಕ್ಷಿಯಂತೆ ಕಾಯುತ್ತಿರುವುದು ಇಲ್ಲಿಯ ಆಸ್ಪತ್ರೆ ಹಾಗೂ ಜನರ ಪರಿಸ್ಥಿತಿಯಾಗಿದೆ. ಜನಪ್ರತಿನಿಧಿಗಳಂತೂ ಕಂಡುಕಾಣದಂತೆ, ಕೇಳಿಯೂ ಕೇಳದಂತೆ ಈ ಮಾರ್ಗದಲ್ಲಿಯೇ ಹವಾನಿಯಂತ್ರಿತ ಕಾರುಗಳಲ್ಲಿ ಸಂಚರಿಸುತ್ತಿದ್ದರೂ ಇತ್ತ ಕಡೆಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.  ಈ ಆಸ್ಪತ್ರೆಯ ದಾಖಲೆಯಲ್ಲಿ ಎಲ್ಲವೂ ಇದೆ. 1998ರಲ್ಲಿ ತಾಲ್ಲೂಕು ಕೇಂದ್ರದಿಂದ ರವಾನೆಯಾದ ಈ ಜೀಪು 2005ರವರೆಗೆ ತನ್ನ ಸೇವೆ ಸಲ್ಲಿಸಿ ಇದೀಗ ತನ್ನ ಸೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಸಾರ್ವಜನಿಕರ ಶವಗಾರ ಕೊಠಡಿ  2006ರಲ್ಲಿಯೇ ಕಟ್ಟಡ ನಿರ್ಮಾಣಗೊಂಡಿದ್ದರೂ ತಾಂತ್ರಿಕ ಕಾರಣಗಳಿಂದ ಇನ್ನೂ ಆಸ್ಪತ್ರೆಗೆ ಹಸ್ತಾಂತರವಾಗಿಲ್ಲ. ಶವಪರೀಕ್ಷೆಗೆ ತಂದ ಶವಗಳನ್ನು ಆಸ್ಪತ್ರೆಯ ಆವರಣದಲ್ಲಿಯೇ ಇಟ್ಟು ಕೊಳ್ಳುವಂತಾಗಿದೆ.1998ರಲ್ಲಿಯೇ ಮಂಜೂರಾತಿ ಪಡೆದ ಹೆರಿಗೆ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಂದ ಶಂಕುಸ್ಥಾಪನೆ ನೆರವೇರಿದರೂ, ಕಟ್ಟಡ ಕಾಮಗಾರಿ ಮಾತ್ರ ಇಂದಿಗೂ ಪೂರ್ಣಗೊಳ್ಳಲೇ ಇಲ್ಲ.ಜನಪ್ರತಿನಿಧಿಗಳ ನಿರ್ಲಕ್ಷ್ಯ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದು ಸಾಮಾನ್ಯ ಜನತೆಯೂ ಸಹ ದುಬಾರಿ ವೆಚ್ಚದ ಆಸ್ಪತ್ರೆ ಕಡೆಗೆ ಮುಖ ಮಾಡುವಂತಾಗಿದೆ. ಅಲ್ಲದೇ, ಸುತ್ತಮುತ್ತಲ ಕಾಡಿನಲ್ಲಿ ಇದೀಗ ಮಂಗನಕಾಯಿಲೆ ಉಲ್ಬಣ ಗೊಂಡಿದ್ದು, ಕಾಯಿಲೆ ಭೀತಿಯಲ್ಲಿ ಇರುವ ಗ್ರಾಮಕ್ಕೆ ಭೇಟಿ ನೀಡಲು ಆರೋಗ್ಯ ಇಲಾಖೆಯಲ್ಲಿ ತುರ್ತು ವಾಹನ ಆವಶ್ಯವಿದೆ. ಈ ನಿಟ್ಟಿನಲ್ಲಿಯಾದರೂ ಈ ಆರೋಗ್ಯ ಇಲಾಖೆಗೆ ಸೂಕ್ತ ಸೌಕರ್ಯಗಳ ವ್ಯವಸ್ಥೆ ನಾಗರಿಕರಿಗೆ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry