ಇಲ್ಲಿ ಬಯಲೇ ಬಸ್ ತಂಗುದಾಣ

7

ಇಲ್ಲಿ ಬಯಲೇ ಬಸ್ ತಂಗುದಾಣ

Published:
Updated:

ಮಂಡ್ಯ: ನಗರದ ಮಹಾವೀರ ವೃತ್ತ ಸೇರಿದಂತೆ ಹಲವೆಡೆ ನಗರದಲ್ಲಿ ಹಾಗೂ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಸಾಗುವ ಜನರು ಬಸ್‌ಗಳಿಗಾಗಿ ಕಾದು ನಿಲ್ಲುತ್ತಾರೆ. ಆದರೆ, ಇವರಿಗೆ ಬಸ್ ಕಾಯಲೊಂದು ಬಸ್ ತಂಗುದಾಣವಿಲ್ಲ.ಮಳೆಯಲ್ಲಿ ನೆನೆದುಕೊಂಡು, ಬಿಸಿಲಿನಲ್ಲಿ ಬೆವರಿಳಿಸಿಕೊಂಡು, ಕಾಲು ನೋಯುವವರೆಗೂ ನಿಂತುಕೊಂಡೇ ಬಸ್ ಕಾಯಬೇಕಾದ ಸ್ಥಿತಿ ಇವರದ್ದಾಗಿದೆ.ಮಹಾವೀರ ವೃತ್ತದ ಬಳಿ ಬಸ್ ನಿಲುಗಡೆ ಇದೆ. ಇಲ್ಲಿ ಮದ್ದೂರು, ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಕೆ.ಎಂ.ದೊಡ್ಡಿ, ಪಾಂಡವಪುರ ಸೇರಿದಂತೆ ಹಲವು ಕಡೆ ಪ್ರಯಾಣಿಸುವ ಪ್ರಯಾಣಿಕರು ಆಗಮಿಸುತ್ತಾರೆ. ಬೆಳಿಗ್ಗೆ ಹಾಗೂ ಸಂಜೆಯಂತೂ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುತ್ತಾರೆ.ಜತೆಗೆ ಅಲ್ಲಿಯೇ ಇರುವ ರೈಲ್ವೆ ನಿಲ್ದಾಣದಿಂದ ಆಗಮಿಸುವ ಪ್ರಯಾಣಿಕರೂ ನಗರದ ವಿವಿಧ ಬಡಾವಣೆಗಳಿಗೆ ತೆರಳು ಅಲ್ಲಿಗೇ ಆಗಮಿಸುತ್ತಾರೆ.ಅಲ್ಲಿ ಕಬ್ಬಿಣದ ಬ್ಯಾರಿಕೇಡ್ ನಿರ್ಮಿಸಿರುವುದು ಬಿಟ್ಟರೆ, ಬೇರಾವ ಸೌಲಭ್ಯವೂ ಅಲ್ಲಿಲ್ಲ. ಫುಟ್‌ಪಾತ್ ಮೇಲೆ ನಿಂತುಕೊಂಡೇ ಬಸ್ ಕಾಯಬೇಕು. ಇದರಿಂದ ಫುಟ್‌ಪಾತ್ ಮೇಲೆ ಸಂಚರಿಸುವವರಿಗೂ ತೊಂದರೆಯಾಗುತ್ತದೆ.ಅಲ್ಲಿರುವ ಗಿಡಗಳು ಒಂದಷ್ಟು ನೆರಳು ನೀಡುತ್ತವೆ. ಉಳಿದಂತೆ ಬಿಸಿಲಿನಲ್ಲಿ ಝಳ ತಾಗಿಸಿಕೊಂಡೇ ಬಸ್ ಕಾಯುತ್ತಾರೆ. ಮಳೆ ಬಂದರೆ ಆಶ್ರಯಕ್ಕಾಗಿ ಸುತ್ತ-ಮುತ್ತಲಿನಲ್ಲಿರುವ ಅಂಗಡಿಗಳತ್ತ ಓಡಿ ಹೋಗಬೇಕಾಗುತ್ತದೆ.ನಗರ ಸಾರಿಗೆ ಸಂಚಾರ ಆರಂಭಿಸಿ, ಮೂರು ತಿಂಗಳು ಕಳೆದಿದೆ. ನಿತ್ಯ ಸಿಟಿ ಬಸ್‌ಗಳ ಓಡಾಟ ಜೋರಾಗಿಯೇ ಸಾಗಿದೆ. ಆದರೆ, ಆ ಬಸ್ಸುಗಳು ನಿಲ್ಲುವಲ್ಲಿಯೂ ಯಾವುದೇ ಬಸ್ ಸ್ಟ್ಯಾಂಡ್ ನಿರ್ಮಿಸುವ ಗೋಜಿಗೆ ನಗರಸಭೆಯಾಗಲೀ, ಸಾರಿಗೆ ಸಂಸ್ಥೆಯಾಗಲೀ ಹೋಗಿಲ್ಲ.ಇತ್ತೀಚಿನ ದಿನಗಳಲ್ಲಿ ರೋಟರಿ, ಲಯನ್ಸ್ ಸಂಸ್ಥೆಗಳು ಸೇವಾ ಮನೋಭಾವದಿಂದ ಹಾಗೂ ಖಾಸಗಿ ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರಚಾರದ ದೃಷ್ಟಿಯಿಂದ ಸಣ್ಣ, ಸಣ್ಣ ನಿಲ್ದಾಣಗಳನ್ನು ನಿರ್ಮಿಸಿ ಕೊಡುತ್ತಿವೆ. ಅಂತಹ ಸಂಸ್ಥೆಗಳ ನೆರವು ಪಡೆದು ನಿಲ್ದಾಣ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ.ಹತ್ತಾರು ವರ್ಷದಿಂದ ಇಲ್ಲಿ ಬಸ್ ನಿಲುಗಡೆ ಇದೆ. ಮಳೆಯಲ್ಲಿ, ಬಿಸಿಲಿನಲ್ಲಿ ನಿಂತುಕೊಂಡೇ ಪ್ರಯಾಣ ಮಾಡುತ್ತೇವೆ. ಇಲ್ಲೊಂದು ಸಣ್ಣದಾದ ನಿಲ್ದಾಣ ನಿರ್ಮಿಸುವ ಕೆಲಸ ಆಗಿಲ್ಲ. ಕೂಡಲೇ ಬಸ್ ತಂಗುದಾಣ ನಿರ್ಮಿಸಬೇಕು ಎಂದು ಆಗ್ರಹಿಸುತ್ತಾರೆ ಸುಜಾತಾ ಕೃಷ್ಣೇಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry