ಭಾನುವಾರ, ಆಗಸ್ಟ್ 9, 2020
21 °C

ಇಲ್ಲಿ ಮಳೆ ಎಂಬುದು `ಶಾಪ'

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಇಲ್ಲಿ ಮಳೆ ಎಂಬುದು `ಶಾಪ'

ಕೋಲಾರ: ಜಿಲ್ಲೆಯ ರೈತರು ಮಳೆಗಾಗಿ ಕಾಯುತ್ತಿದ್ದರೆ, ನಗರದ ರೈತರು ಮಳೆ ನಿಲ್ಲಲು ಕಾಯುತ್ತಾರೆ. ವರ್ಷಧಾರೆ ಸುರಿಯುತ್ತಲೇ ಇರಲಿ ಎಂಬುದು ರೈತರ ನಿರೀಕ್ಷೆ. ಮಳೆ ಯಾವಾಗ ನಿಲ್ಲುವುದೋ ಎಂಬುದು ನಗರದ ಜನರ ನಿರೀಕ್ಷೆ. ಹಾಗೆಂದು ನಗರದ ಜನರೇನೂ ರೈತರ ವಿರೋಧಿಗಲ್ಲ.ಮಳೆ ಬಂದರೆ ಮಾತ್ರ ರೈತರ ಕಷ್ಟ ಕಡಿಮೆಯಾಗುತ್ತದೆ ಎಂಬ ಸದ್ಭಾವನೆ ನಗರದ ಜನರೆಲ್ಲರಲ್ಲೂ ಇದೆ. ಆದರೆ ಪ್ರತಿ ಬಾರಿ ಮಳೆ ಸುರಿದಾಗಲೂ ಎದುರಾಗುವ ಹಲವು ಸಮಸ್ಯೆಗಳ ಕಾರಣಕ್ಕೆ ಮಳೆ ಯಾಕಾದರೂ ಬರುತ್ತದೋ ಎಂಬ ಚಿಂತೆ ನಗರದ ಜನರನ್ನು ಆವರಿಸುತ್ತದೆ. ಯಾಕಾಗಿ ಮಳೆ ಹೋದವೋ ಎಂದು ರೈತರು ಹಾಡಿದರೆ, ಯಾಕಾಗಿ ಮಳೆ ಬಂದಿತೋ ಎಂದು ಜನ ನಿಡುಸುಯ್ಯುತ್ತಾರೆ.

ಇವು ನಗರದ ಡೂಂ ಲೈಟ್ ವೃತ್ತದಲ್ಲಿ ಮೂರು ದಿನದ ಹಿಂದೆ ಮಳೆ ಸುರಿದ ಸಂದರ್ಭ ಸೃಷ್ಟಿಯಾದ ಸನ್ನಿವೇಶಗಳು.ಕೆನರಾಬ್ಯಾಂಕ್ ರಸ್ತೆ, ಬಂಗಾರಪೇಟೆ ರಸ್ತೆ ಮತ್ತು ಕ್ಲಾಕ್‌ಟವರ್‌ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ವೃತ್ತದಲ್ಲಿ ಎರಡೂ ದಿನ ಮಳೆ ಸುರಿದ ಸಂಜೆ ಜನ ಮತ್ತು ವಾಹನ ಸಲೀಸಾಗಿ ಸಾಗಿಹೋಲಾಗದ ರೀತಿಯಲ್ಲಿ ಮಳೆ ನೀರು ಮತ್ತು ಚರಂಡಿ ನೀರು ಆವರಿಸಿತ್ತು. ನೀರನ್ನು ದಾಟುವ ತೊಡಕಷ್ಟೇ ಅಲ್ಲದೆ, ಚರಂಡಿ ನೀರಿನ ಹಬ್ಬಿದ ದುರ್ವಾಸನೆಯನ್ನೂ ಸಹಿಸಲೇಬೇಕಾದ ಅನಿವಾರ್ಯ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು.ಸುತ್ತಮುತ್ತಲಿನ ಶಾಲೆಗಳಿಂದ ಮನೆಗೆ ಹೊರಟ ವಿದ್ಯಾರ್ಥಿಗಳು, ಮಕ್ಕಳನ್ನು ಕರೆದೊಯ್ಯಬೇಕಾದ ಪೋಷಕರು,  ವಿವಿಧ ಪ್ರದೇಶಗಳಿಂದ ಬಸ್‌ಗಳಲ್ಲಿ ಬಂದು ವೃತ್ತದಲ್ಲಿ ಇಳಿದ ಪ್ರಯಾಣಿಕರು, ಮಹಿಳೆಯರು, ವೃದ್ಧರು ರಸ್ತೆ ದಾಟಲು ಪರದಾಡಿದರು.

ಮಳೆ ನಿಂತ ಬಳಿಕವೂ ವೃತ್ತದಲ್ಲಿ ಮಳೆ ನೀರು ಹಾಗೇ ನಿಂತಿತ್ತು.ವೃತ್ತಕ್ಕೆ ಸಮೀಪದಲ್ಲೇ ಇರುವ ಹೊಸ ಬಡಾವಣೆಯ ಮೊದಲ ರಸ್ತೆಯುದ್ದಕ್ಕೂ ಮಳೆ ನೀರು ನಿಂತಿದ್ದ ಪರಿಣಾಮ ಜನ ಮನೆಯಿಂದ ಈಚೆ ಬರಲು ಸಾಧ್ಯವಾಗಲಿಲ್ಲ.  ಮಳೆ ನೀರು ಚರಂಡಿಗಳ ಮೂಲಕ ಸಲೀಸಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದಿರುವ ಪರಿಣಾಮವಾಗಿ ವೃತ್ತದ ಒಂದು ಬದಿಯಲ್ಲಿರುವ ಅಂಗಡಿಗಳ ಬಾಗಿಲವರೆಗೂ ಮಳೆ ನೀರು ಹರಿದು ಬಂದಿತ್ತು.ಅಂಗಡಿಗಳ ಮುಂದೆ ನಿಂತ ಗ್ರಾಹಕರು ಒಳಗೂ ಹೋಗಲಾಗದೆ, ಹೊರಗೂ ಹೋಗಲಾಗದೆ ಅತಂತ್ರ ಸ್ಥಿತಿಯಲ್ಲಿದ್ದರು. ಅಂಗಡಿಗಳ ಮುಂದೆ ಪುಟ್ಟ ಕುಂಟೆಯೇ ನಿರ್ಮಾಣವಾಗಿತ್ತು.ಇನ್ನೂ ಹೆಚ್ಚುಕಾಲ ಮಳೆ ಸುರಿದಿದ್ದರೆ ಅಂಗಡಿ, ಮನೆಗಳೊಳಕ್ಕೂ ನೀರು ನುಗ್ಗುವ ಆತಂಕ, ಅಪಾಯವೂ ಇತ್ತು. ಆದರೆ ಸುಮಾರು ಮುಕ್ಕಾಲು ಗಂಟೆ ಸುರಿದ ಮಳೆ ನಿಂತ ಪರಿಣಾಮ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ವರ್ಷಗಳಿಂದ: ಹಲವು ವರ್ಷಗಳಿಂದ ಪ್ರತಿಮಳೆಗಾಲದಲ್ಲೂ ಸುತ್ತಮುತ್ತಲಿನ ಜನ, ಅಂಗಡಿಗಳ ಮಂದಿ ಮತ್ತು ಪ್ರಯಾಣಿಕರು ಈ ವೃತ್ತದಲ್ಲಿ ತೊಂದರೆ ಅನುಭವಿಸುವುದು ತಪ್ಪಲಿಲ್ಲ.ಕನಿಷ್ಠ ಈ ವೃತ್ತದಲ್ಲಿರುವ ಚರಂಡಿಗಳನ್ನು ಮಳೆಗಾಲಕ್ಕೆ ಮುಂಚೆಯೇ ದುರಸ್ತಿ ಮಾಡಿಸಿ, ಮಳೆ ನೀರು ಹರಿದು ಹೋಗುವಂತೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಆಪ್ರಯತ್ನವನ್ನು ನಗರಸಭೆ ಗಂಭೀರವಾಗಿ ಮಾಡಿಲ್ಲ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಶ್ರೀನಾಥ.ನಗರದ ಅಭಿವೃದ್ಧಿಗೆಂದು ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿ ಬಳಕೆಯಾಗುತ್ತಿದೆ. ಕನ್ಸರ್ವೆನ್ಸಿ ರಸ್ತೆಗೆ ಕಾಂಕ್ರಿಟ್ ಹಾಕಲು ತುದಿಗಾಲಲ್ಲಿ ನಿಲ್ಲುವ ನಗರಸಭೆಯು ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ದುರಸ್ತಿಗೆ ಚೌಕಾಸಿ ಮಾಡುವುದು ವಿಪರ್ಯಾಸದ ಸಂಗತಿ ಎಂಬುದು ಅವರ ಅಸಮಾಧಾನ.ನಗರದಲ್ಲಿ ಹಲವು ವರ್ಷಗಳಿಂದ ಡಾಂಬರು ಕಾಣದ ಮಣ್ಣಿನ ರಸ್ತೆಗಳಲ್ಲೂ ನಿವಾಸಿಗಳು ಮಳೆಗಾಲದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ರಸ್ತೆಗೆ ನುಗ್ಗುವ ಚರಂಡಿ ನೀರು, ಕೆಸರಿನ ನಡುವೆ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಬೀಳುವುದು ಸಾಮಾನ್ಯವಾದ ದೃಶ್ಯಗಳು.ಮುಂಗಾರು ಮಳೆ ವಿಳಂಬವಾದರೂ ಸುರಿಯಲಾರಂಭಿಸಿದೆ. ಇನ್ನಾದರೂ ನಗರಸಭೆಯು ಪ್ರಮುಖ ಚರಂಡಿಗಳ ದುರಸ್ತಿಗೆ ಮುಂದಾಗಬೇಕು.ಮಣ್ಣಿನ ರಸ್ತೆಗಳಲ್ಲಿ ಜಲ್ಲಿಹಾಸಿನ ವ್ಯವಸ್ಥೆ ಮಾಡಿದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ನಗರಸಭೆಯನ್ನು ಶಪಿಸುವವರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೆಲವು ಬಡಾವಣೆಗಳ ನಿವಾಸಿಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.