ಸೋಮವಾರ, ಮೇ 23, 2022
22 °C

ಇಲ್ಲಿ ರಸ್ತೆ, ಚರಂಡಿ ಬೇರೆ ಅಲ್ಲ..!

ಪ್ರಜಾವಾಣಿ ವಾರ್ತೆ/ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಇಲ್ಲಿ ರಸ್ತೆ, ಚರಂಡಿ ಬೇರೆ ಅಲ್ಲ..!

ಕೋಲಾರ: ಸರ್ಕಾರವೇನೋ ತರಾತುರಿಯಿಂದ ನಗರಸಭೆ ಚುನಾವಣೆಯನ್ನು ನಡೆಸಿತು. ಸದಸ್ಯರಆಯ್ಕೆಯೂ ಆಯಿತು. ಆದರೆ ನಮ್ಮ ಸಮಸ್ಯೆ ಮಾತ್ರ ಹಾಗೇ ಉಳಿಯಿತು....

-ನಗರದ 17ನೇ ವಾರ್ಡ್‌ಗೆ ಸೇರಿದ ಅನ್ಸರ್ ಮೊಹಲ್ಲಾದ ಜನ ನಿರಾಶೆ ಮತ್ತು ಜುಗುಪ್ಸೆಯಿಂದ ಹೇಳಿದ ಮಾತುಗಳಿವು.ಮೊಹಲ್ಲಾದ ಮುಖ್ಯರಸ್ತೆಯಲ್ಲಿರುವ ಈ ಚರಂಡಿಯನ್ನು ದುರಸ್ತಿ ಮಾಡಿ, ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಎಂದು ಅವರು ಎರಡು ವರ್ಷದಿಂದ ನಗರಸಭೆ ಕಚೇರಿಗೆ ಅಲೆದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ರಸ್ತೆ ಹಾಗೂ ಚರಂಡಿ ಒಂದೇ ಆಗಿರುವ ಈ ಸ್ಥಳವು ಮಳೆ ಬಂದಾಗ ನಮಗೆ ನರಕವಾಗಿ ಬದಲಾಗುತ್ತದೆ ಎನ್ನುತ್ತಾರೆ ನಿವಾಸಿಗಳಾದ ಜಾವೀದ್, ಅನ್ಸರ್‌ಪಾಷಾ ಮತ್ತು ಅಮೀರ್‌ಜಾನ್.ಬಡವರು, ಕೂಲಿಕಾರರು ಹೆಚ್ಚಿರುವ ಈ ಮೊಹಲ್ಲಾದಲ್ಲಿ ರಸ್ತೆ, ಚರಂಡಿ, ಒಳಚರಂಡಿ ಸೌಕರ್ಯಗಳಿಲ್ಲ. ನೀರು ಪೂರೈಕೆಯೂ ಸಮರ್ಪಕವಾಗಿಲ್ಲ. 2 ದಿನಕ್ಕೊಮ್ಮೆ ಟ್ಯಾಂಕರ್ ನೀರು ಬಂದರೂ ಸಿಗುವುದು ಪ್ರತಿ ಮನೆಗೆ 10 ಬಿಂದಿಗೆ ಮಾತ್ರ. ನಮ್ಮ ಸಮಸ್ಯೆ ಕೇಳೋರೇ ಇಲ್ಲ ಎಂಬುದು ಇವರ ಅಳಲು.ಈ ಪ್ರದೇಶಗಳು ಜಿಲ್ಲಾ ಕೇಂದ್ರವಾದ ನಗರ ಪ್ರದೇಶದಲ್ಲಿವೆ ಎಂದು ನಂಬಲಿಕ್ಕೇ ಸಾಧ್ಯವಾಗದ ಶೋಚನೀಯ ಸ್ಥಿತಿಯಲ್ಲಿ ಜನರಿದ್ದಾರೆ. ಸೌಕರ್ಯಗಳ ಕೊರತೆ ಅವರು ಬಾಧಿಸುತ್ತಿದೆ.ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ವಾರ್ಡ್‌ನಲ್ಲಿ ಸುಮಾರು 9 ಸಾವಿರ ಜನಸಂಖ್ಯೆ ಇದೆ. 3 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.ಬ್ಯಾಂಕ್ ಎಂಪ್ಲಾಯರ್ಸ್ ಕಾಲೊನಿ, ಅನ್ಸರ್ ಮೊಹಲ್ಲಾ, ಮಹಾಲಕ್ಷ್ಮಿ ಬಡಾವಣೆಯ ಅರ್ಧ ಭಾಗ ಮತ್ತು ಶೆಹನ್‌ಶಾ ನಗರದ ಅರ್ಧಭಾಗದ ವ್ಯಾಪ್ತಿಯಲ್ಲಿರುವ ವಾರ್ಡ್‌ನಲ್ಲಿ ಒಮ್ಮೆ ಸಂಚರಿಸಿದರೆ ರಸ್ತೆ ಮತ್ತು ಚರಂಡಿಗಳ ಸೌಕರ್ಯವಿಲ್ಲದೇ ಜನ ಬದುಕುತ್ತಿರುವುದು ಎದ್ದು ಕಾಣುತ್ತದೆ.ಮಹಾಲಕ್ಷ್ಮಿ ಬಡಾವಣೆ ಮತ್ತು ಬ್ಯಾಂಕ್ ಎಂಪ್ಲಾಯರ್ಸ್ ಕಾಲೊನಿಗಳಲ್ಲಿ ಸುಮಾರು 800 ಮನೆಗಳಿವೆ. ಆದರೆ ಒಂದೇ ಒಂದು ಕೊಳವೆಬಾವಿ ಇರುವುದರಿಂದ ಬಹುತೇಕ ಮನೆಗಳಿಗೆ ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ. ನಗರಸಭೆ ಸದಸ್ಯ ಅಫ್ರೋಸ್ ಪಾಷಾ ಹೇಳುವ ಪ್ರಕಾರ ಇಡೀ ವಾರ್ಡ್‌ಗೆ ದಿನಕ್ಕೆ ಕೇವಲ 8 ಟ್ಯಾಂಕರ್ ನೀರನ್ನು ಪೂರೈಸಲಾಗುತ್ತದೆ. ವಿಪರ್ಯಾಸವೆಂದರೆ ಈ ಎರಡು ಬಡಾವಣೆಗಳ ಬಹುತೇಕ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯೇ ಇಲ್ಲ.ತೇರಳ್ಳಿ ಬೆಟ್ಟದ ತಪ್ಪಲಿನಲ್ಲಿರುವ ಮಹಾಲಕ್ಷ್ಮಿ ಬಡಾವಣೆ ಕಡೆಗೆ ಬರುವ ಮಳೆನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆಯೇ ಇಲ್ಲ. ಎರಡೂ ಬಡಾವಣೆಗಳಲ್ಲಿ ಮಳೆ ನೀರು ನಿಂತು ಹಳ್ಳಗಳು ಏರ್ಪಡುತ್ತವೆ. ರಸ್ತೆ-ಹಳ್ಳಗಳ ನಡುವೆ ವ್ಯತ್ಯಾಸವೇ ಇಲ್ಲದ ಸನ್ನಿವೇಶ ನಿರ್ಮಾಣವಾಗುತ್ತದೆ. ದ್ವಿಚಕ್ರ ವಾಹನ ಸವಾರರಿಗೆ, ವೃದ್ಧರು, ಮಕ್ಕಳಿಗೆ ಮಳೆಗಾಲ ಇಲ್ಲಿ ಕಷ್ಟಕಾಲ.ಸ್ಪಂದನೆ ಇಲ್ಲ: ನಗರಸಭೆ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಕಡಿಮೆ ಎಂಬುದು ಇಲ್ಲಿನ ಜನರ ದೂರಾದರೆ, ನಗರಸಭೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎನ್ನುತ್ತಾರೆ ಈ ವಾರ್ಡ್‌ನ ಜನಪ್ರತಿನಿಧಿ ಅಫ್ರೋಸ್ ಪಾಷಾ.ಈ ಸಮಸ್ಯೆಗಳ ಬಗ್ಗೆ ನಗರಸಭೆ ಪೌರಾಯುಕ್ತರ ಗಮನ ಸೆಳೆದು, ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ದುಂಬಾಲು ಬಿದ್ದರೂ ಅವರು ಕಾಳಜಿ ವಹಿಸಿಲ್ಲ ಎಂಬುದು ಅವರ ಆರೋಪ.ಬ್ಯಾಂಕ್ ಎಂಪ್ಲಾಯರ್ಸ್ ಕಾಲೊನಿಯಲ್ಲಿರುವ ಕೊಳವೆಬಾವಿಯಲ್ಲಿ ನೀರು ಬತ್ತಿದೆ ಎಂದು ನಗರಸಭೆ ಎಂಜಿನಿಯರ್ ವರದಿ ಕೊಟ್ಟಿದ್ದಾರೆ. ಆದರೆ ಅಲ್ಲಿ ನೀರಿದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿದರೆ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗುತ್ತದೆ ಎಂಬ ಸಲಹೆಗೆ ಕಿಮ್ಮತ್ತೇ ಇಲ್ಲದಂತಾಗಿದೆ ಎಂದು ಅವರು ಹೇಳುತ್ತಾರೆ.ಎರಡೂ ಬಡಾವಣೆಗಳಿಂದ ನಗರಸಭೆಗೆ ಸಾಕಷ್ಟು ಆದಾಯವಿದೆ. ಕಂದಾಯವೂ ಸಂದಾಯವಾಗುತ್ತಿದೆ. ಆದರೆ ಎಲ್ಲಿಯೂ ಒಂದು ರಸ್ತೆ ಮತ್ತು ಚರಂಡಿ ನಿರ್ಮಾಣವಾಗಿಲ್ಲ. ಹತ್ತಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯ ನಡೆದೇ ಇಲ್ಲ ಎನ್ನುತ್ತಾರೆ ಅವರು.ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿ ಅಡಿಯಲ್ಲಿ ಮಹಾಲಕ್ಷ್ಮಿ ಬಡಾವಣೆಯಲ್ಲಿ ಕೆಲವೆಡೆ ರಸ್ತೆ ನಿರ್ಮಾಣ ಕಾರ್ಯ ಕಳೆದ ವರ್ಷವೇ ನಿಗದಿಯಾಗಿದೆ. ಆದರೆ ಆ ಕಾಮಗಾರಿಗಳು ಇನ್ನೂ ಶುರುವಾಗಿಲ್ಲ. ಅವನ್ನು ಹೊರತುಪಡಿಸಿದರೆ ವಾರ್ಡ್‌ನಲ್ಲಿ ಬೇರೆಲ್ಲೂ ಅಭಿವೃದ್ಧಿ ಕಾರ್ಯಗಳ ಪ್ರಸ್ತಾವ ಸದ್ಯಕ್ಕೆ ಇಲ್ಲ. ನಗರಸಭೆಯ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕವಷ್ಟೇ ಅಭಿವೃದ್ಧಿ ದಾರಿ ತೆರೆದುಕೊಳ್ಳಬಹುದು ಎಂದು ಅವರು ತಿಳಿಸಿದರು.ಕುಡಿಯುವ ನೀರಿಗೆ ಜನ ಪಡುವ ಬಾಧೆ ಹೇಳತೀರದಾಗಿದೆ. ಎರಡು ದಿನಕ್ಕೆ 10 ಬಿಂದಿಗೆ ನೀರು ಪಡೆದು ಜನ ಜೀವನ ಹೇಗೆ ಸಾಗಿಸಬೇಕು? ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ಪಂದಿಸಬೇಕು. ಸಮಸ್ಯೆಗಳ ಬಗ್ಗೆ ಹೇಳುವ ಜನರು, ಅದರ ನಿವಾರಣೆಗೆ ಮುಂದಾದರೆ ಅಡ್ಡಿಪಡಿಸಲು ಮುಂದಾಗುವ ವಿಲಕ್ಷಣ ಘಟನೆಗಳು ನಡೆಯುತ್ತವೆ.ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಸದಸ್ಯರಿಗೆ ಅಧಿಕಾರಿಗಳು ಕೂಡ ಸ್ಪಂದಿಸಬೇಕು. ನಗರಸಭೆ ಸದಸ್ಯರು ಅಧಿಕಾರಿಗಳನ್ನು ಹುಡುಕಿಕೊಂಡು ಓಡಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾದರೆ ವಾರ್ಡಿನಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ? ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಹೇಗೆ?

-ಅಪ್ರೋಸ್‌ಪಾಷಾ, ನಗರಸಭೆ ಸದಸ್ಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.