ಗುರುವಾರ , ಮೇ 6, 2021
31 °C
ವಾರದ ವಿನೋದ

ಇಲ್ಲೆತಂಕ ನಾ ಹೇಳಿದ್ದೆಲ್ಲ ಸುಳ್ಳು!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

ಮಿಸ್ಸಮ್ಮನ ಚಾದಂಗಡಿ ಮುಂದೆ ಹರಟೆಕಟ್ಟೆಯ ವಿಶೇಷ ಸಭೆ ಆರಂಭವಾಗಿತ್ತು. ಗುಡ್ಡೆ ಬಹಳ ಹುರುಪಿನಲ್ಲಿದ್ದ. `ಮಿಸ್ಸಮ್ಮೋ ಎಲ್ರಿಗೂ ವಗ್ಗರಣೆ ಮಂಡಕ್ಕಿ, ಬಿಸಿ ಬಿಸಿ ಖಡಕ್ ಚಾ ಬರ‌್ಲಿ. ಇವತ್ತು ನಿನ್ ಅಂಗಡಿ ಮುಂದೇನೇ ಮಳೆಗಾಲದ ಅಧಿವೇಶನ. ಆದ್ರೆ ಬಿಲ್ ಮಾತ್ರ ಕೇಳಬೇಡ' ಎಂದ ನಗುತ್ತ.

`ಯಾಕಪ್ಪಾ, ಇದನ್ನೇನು ಧರ‌್ಮಛತ್ರ ಅನ್ಕಂಡ್ಯಾ? ಪುಗಸಟ್ಟೆ ಗಂಡ ಹೊಟ್ಟೆತುಂಬ ಉಂಡ ಅಂತಾರಲ್ಲ, ಆ ಜಾತಿಗೆ ಸೇರಿದೋನು ನೀನು' ಮಿಸ್ಸಮ್ಮ ನಗುತ್ತಲೇ ಗುಡ್ಡೆಯ ಬಿಸಿ ಬಿಸಿ ಚಹಾ ಆಸೆಗೆ ತಣ್ಣೀರೆರೆಚಿದಳು.ಗುಡ್ಡೆಗೆ ಅವಮಾನವಾದಂತಾಯಿತು. `ಥತ್ತೇರಿಕೆ, ಲೇ ಕೊಟ್ರಾ, ಆ ಫುಡ್ ಮಿನಿಸ್ಟ್ರಿಗೊಂದು ಫೋನ್ ಹಚ್ಚಲೆ, ಈ ಮಿಸ್ಸಮ್ಮನ ಶೆಡ್ ಎತ್ತಿಸಿಬಿಡ್ತೀನಿ. ನಮ್ ಪವರ್ ಏನು ಅಂತ ಮಿಸ್ಸಮ್ಮುಂಗೆ ಗೊತ್ತಿಲ್ಲ. ಸಿದ್ರಾಮಯ್ಯುನ್ನ ಮುಖ್ಯಮಂತ್ರಿ ಮಾಡಿದ್ದೇ ನಾವು. ನಮಗೇ ಹಿಂಗಂದ್ರೆ?' ಎಂದು ಎಗರಾಡಿದ.

ದುಬ್ಬೀರನಿಗೆ ನಗು ಬಂತು. `ಲೇ ಗುಡ್ಡೆ, ಫುಡ್ ಮಿನಿಸ್ಟ್ರಿಗೂ ವಗ್ಗರಣೆ ಮಂಡಕ್ಕಿಗೂ ಏನಲೆ ಸಂಬಂಧ? ಪಾಪ ಅವರು ಎಪಿಎಲ್ಲು, ಬಿಪಿಎಲ್ಲು ಅಂತ ಬಿ.ಪಿ. ಏರಿಸ್ಕಂಡು ಕುಂತಿದಾರೆ. ಅದರಮ್ಯಾಲೆ ನಿಂದೊಂದು ವಗ್ಗರಣೆ' ಎಂದ.`ಸಂಬಂಧ ಐತಪಾ ಶಾಣ್ಯಾ, ಬಿಪಿಎಲ್ ಅಲ್ಲದಿದ್ರೂ ಈ ಮಿಸ್ಸಮ್ಮುಂಗೆ ಬಿಪಿಎಲ್ ಕಾರ್ಡು ಕೊಡ್ಸಿದ್ದೇ ನಾನು. ನಮ್ಮ ಸರ್ಕಾರದಿಂದ ಈಗ ಎಲ್ಲ ಸವಲತ್ತೂ ಫ್ರೀಯಾಗಿ ಸಿಕ್ತಿಲ್ವಾ? ಜುಜುಬಿ ವಗ್ಗರಣೆ ಮಂಡಕ್ಕಿ ಕೇಳಿದ್ರೆ ತಪ್ಪಾ?' ಗುಡ್ಡೆ ವಾದಿಸಿದ.`ಕರೆಕ್ಟ್ ಕಣಲೆ ಗುಡ್ಡೆ, ನಮ್ಮ ಸರ‌್ಕಾರ ಬಂದ ಮೇಲೆ ಎಲ್ಲ ಮಂತ್ರಿಗಳೂ ಜನರಿಗೆ ಹೊಸ ಹೊಸ ಕೊಡುಗೆ ಕೊಡ್ತಾ ಅದಾರೆ. ಆರೋಗ್ಯ ಮಂತ್ರಿಗಳು ಹಲ್ಲು ಮುರಿಸ್ಕೊಂಡೋರಿಗೆಲ್ಲ ಫ್ರೀ ಹಲ್ಸೆಟ್ಟು, ಕಣ್ಣು ಕಾಣದೇ ಇರೋರಿಗೆಲ್ಲ ಫ್ರೀ ಕನ್ನಡಕ ಕೊಡ್ತಿದಾರೆ. ಮುಖ್ಯಮಂತ್ರಿ ಸಿದ್ರಾಮಯ್ಯನೋರು ಒಂದ್ರುಪಾಯಿಗೆ ಕೆ.ಜಿ. ಅಕ್ಕಿ ಕೊಡ್ತಿದಾರೆ, ವಸತಿ ಮಂತ್ರಿ ಅಂಬರೀಷು ಬಡವರಿಗೆಲ್ಲ ಫ್ರೀ ಮನೆ ಕೊಡ್ತಿದಾರೆ. ಶಿಕ್ಷಣ ಮಂತ್ರಿಗಳು ಅಂಗನವಾಡಿ ಮಕ್ಕಳಿಗೆಲ್ಲ ಫ್ರೀ ಹಾಲು ಕೊಡ್ತಿದಾರೆ. ನಮಗೆ ಹಾಲು ಬೇಡ, ಫ್ರೀ ಚಾ ಆದ್ರೂ ಬ್ಯಾಡೇನು?' ಗುಡ್ಡೆ ಮಾತನ್ನು ಸಮರ್ಥಿಸಿದ ಪರಮೇಶಿ.

`ಸದ್ಯ ಫ್ರೀ ಆಲ್ಕೋಹಾಲು ಕೇಳಲಿಲ್ವಲ್ಲ, ನಮ್ ಪುಣ್ಯ. ಎಲ್ಲ ನಿನ್ನಂಥ ಓಸಿ ಗಿರಾಕಿಗಳೇ ಆಗಿಬಿಟ್ರೆ ಸಿದ್ರಾಮಣ್ಣ ಸರ‌್ಕಾರ ನಡೆಸಿದಂಗೇ' ಮಿಸ್ಸಮ್ಮ ಗುಡ್ಡೆಯನ್ನು ತಿವಿಯುವ ಹಾಗೆ ನೋಡಿದಳು.`ಪಾಪ ಸಿದ್ರಾಮಯ್ಯನೋರ ಖಜಾನೇಲಿ ಈಗ ದುಡ್ಡೇ ಇಲ್ಲಂತಪ. ಹಿಂದಿನೋರು ನಡುಬೀದಿಯಲ್ಲಿ ಕುಂತು ಉಂಡು ಖಜಾನೆ ಖಾಲಿ ಮಾಡಿ ಹೋದ್ರು. ಈಗ ಸಿದ್ರಾಮಯ್ಯ ಎಲ್ಲ ದುಡಕೊಂಡೇ ತಿನ್ಬೇಕು. ಅಂಥದ್ರಲ್ಲಿ ಎಲ್ಲ ಫ್ರೀ ಕೇಳಿದ್ರೆ ಹೆಂಗೆ?' ಕೊಟ್ರೇಶಿ ಮುಖ್ಯಮಂತ್ರಿಗಳ ಮೇಲೆ ಕಕ್ಕುಲಾತಿ ತೋರಿದ.

`ಅದೆಲ್ಲ ಗೊತ್ತಿಲ್ಲ, ಸ್ಕೂಲ್ ಮಕ್ಕಳಿಗೆ ಫ್ರೀ ಹಾಲು ಕೊಟ್ಟಂಗೆ ನಮ್ಮಂಥೋರಿಗೆಲ್ಲ ಫ್ರೀ ಎಣ್ಣೆ ಕೊಡ್ಬೇಕು. ಫ್ರೀ ಆಗದಿದ್ರು ಒಂದ್ರುಪಾಯಿಗೆ ಕೆಜಿ ಅಕ್ಕಿ ಕೊಟ್ಟಂಗೆ ಎರಡು ರೂಪಾಯಿಗೊಂದು ಕ್ವಾಟ್ರು ಎಣ್ಣೆ ಕೊಡ್ಲಿ. ಅದಕ್ಕೆ ಬೇಕಾದ್ರೆ ಸೆಪರೇಟಾಗಿ `ಎಣ್ಣೆ ಕಾರ್ಡು' ಅಂತ ಮಾಡ್ಲಿ' ಗುಡ್ಡೆ ಪಟ್ಟು ಸಡಿಲಿಸಲಿಲ್ಲ.`ಆಮೇಲೆ ಕುಡಿದು ಟೈಟಾದೋರ‌್ನ ಮನೆಗೆ ಡ್ರಾಪ್ ಮಾಡೋಕೆ ಗಾಡಿ ಬೇಡ್ವಾ? ನೂರಾ ಎಂಟು ಆ್ಯಂಬುಲೆನ್ಸ್ ತರ `ಟೈಟು-ರೈಟು' ಅಂತ ಒಂದು ಆ್ಯಂಬುಲೆನ್ಸ್ ಮಾಡಿದ್ರೆ ಹೇಗೆ? ಟೈಟಾದೋರು ಬದುಕಿದ್ರೆ ಮನೆಗೆ ಡ್ರಾಪ್ ಮಾಡಬಹುದು. ಅರ್ಧ ದಾರೀಲೆ ರೈಟ್ ಹೇಳಿದ್ರೆ ಡೆಡ್‌ಬಾಡೀನ ಅದೇ ಆ್ಯಂಬುಲೆನ್ಸ್‌ನಲ್ಲಿ ಪೋಸ್ಟ್‌ಮಾರ್ಟಂಗೆ ಕಳಿಸಬಹುದು, ಹೆಂಗೆ?' ದುಬ್ಬೀರ ನಗಾಡಿದ.`ಅದೇನು ಬೇಡ ಬಿಡಲೆ, ಈಗ ಹೆಂಗಿದ್ರು ಸಿದ್ರಾಮಣ್ಣ ಗಲ್ಲಿಗೊಂದೊಂದು ಹೊಸ ಎಣ್ಣೆ ಅಂಗಡಿಗೆ ಲೈಸೆನ್ಸ್ ಕೊಡ್ತಾರಂತೆ. ಛಲೋ ಆತು. ಎಲ್ಲೋ ದೂರದ ಬಾರ್‌ನಲ್ಲಿ ಕುಡಿದು ಇನ್ನೆಲ್ಲೋ ಗಟಾರದಾಗೆ ಬೀಳೋಕಿಂತ ಮನೆ ಬಾಗಿಲಲ್ಲೇ ಬಾರ್ ಇದ್ರೆ ಅಲ್ಲೇ ಕುಡಿದು ಇಲ್ಲೇ ಬೀಳಬಹುದು. ನಮ್ಮ ಹೆಂಡ್ತೀರು ನಮ್ಮ ಕಾಲಿಡಿದು ದರದರ ಎಳ್ಕೊಂಡು ಮನಿ ಒಳಕ್ಕಾದ್ರು ಒಗೀತಾರೆ. ಅವರ ತಾಳೀನೂ ಗಟ್ಟಿ ಉಳಿತಾವೆ ಹೌದಿಲ್ಲೋ?' ಎಂದ ಕಡೇಮನಿ ಕೊಟ್ರೇಶಿ.`ಏನೇ ಆಗ್ಲಿ ನಮ್ ಸಿದ್ರಾಮಣ್ಣ ಬಡವರ ಪರ ಕಣಲೆ, ಅದ್ಕೇ ಆಡಳಿತ ಪಕ್ಷದೋರು, ವಿರೋಧ ಪಕ್ಷದೋರು ಇಬ್ರೂ ಸಿದ್ರಾಮಣ್ಣ ನಮ್ಮೊರು ನಮ್ಮೊರು ಅಂತಿರೋದು. ಆವತ್ತು ಅಧಿವೇಶನದಲ್ಲಿ ದತ್ತ ಅವರು `ಸಿದ್ರಾಮಯ್ಯ ನಮ್ ಜನತಾಪರಿವಾರದೋರು ಕಣ್ರಿ, ಅದ್ಕೇ ಸಂಪುಟದಲ್ಲಿ ಜಾಸ್ತಿ ಜನತಾಪರಿವಾರದೋರ‌್ನೇ ತುರುಕಿದಾರೆ' ಅಂದ್ರು. ಅದ್ಕೆ ಕಾಂಗ್ರೆಸ್‌ನೋರು `ಇಲ್ಲ ಇಲ್ಲ, ಸಿದ್ರಾಮಣ್ಣ ಈಗ ನಮ್ಮೊರಾಗಿದ್ದಾರೆ, ಅವರು ನಮ್ಮೊರೇ' ಅಂದ್ರು. ಇಬ್ರಿಗೂ ಸೇರಿದ ಒಬ್ಬರೇ ಮುಖ್ಯಮಂತ್ರಿ ಅಂದ್ರೆ ನಮ್ ಸಿದ್ರಾಮಣ್ಣ ಅಲ್ವಾ?' ದುಬ್ಬೀರನ ಮಾತಿಗೆ `ಕರೆಕ್ಟ್' ಎಂದು ತಲೆಯಾಡಿಸಿದ ಕೊಟ್ರೇಶಿ, ಇದರ ಮೇಲೆ ನಾನೊಂದು ಕವನ ಬರೆದಿದೀನಪ, ಹೇಳ್ಲಾ?' ಎಂದು ಕೇಳಿದ. `ಆಯ್ತು ಹೇಳಪಾ ಕವಿರಾಜ, ಅದೇನ್ ಬರೆದಿದಿ ಒದರು' ಗುಡ್ಡೆ ಅಪ್ಪಣೆ ಕೊಡುತ್ತಿದ್ದಂತೆ ಕೊಟ್ರ ಗಂಟಲು ಸರಿಪಡಿಸಿಕೊಂಡ.ಇವ ನಮ್ಮವ ಇವ ನಮ್ಮವ ಎಂದರುಜನತಾ ಪರಿವಾರದವರುಇಲ್ಲ, ಇವ ನಮ್ಮವ, ನಮ್ಮವನೇ ಎಂದರು ಕಾಂಗ್ರೆಸ್ಸಿಗರುಏನಿದು ನಿನ್ನ ಲೀಲೆ ಅಣ್ಣಾಸಿದ್ದರಾಮಣ್ಣ!`ವಾಹ್, ಚೆನ್ನಾಗೈತಿ ಕಣಲೆ, ಗುಡ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ ದುಬ್ಬೀರ. ಅಷ್ಟರಲ್ಲಿ ಕ್ಯಾಮೆರಾದೊಂದಿಗೆ ಪ್ರತ್ಯಕ್ಷನಾದ `ಬ್ರೇಕಿಂಗ್ ನ್ಯೂಸ್' ಟಿವಿ ಚಾನೆಲ್ ರಿಪೋರ್ಟರ್ ತೆಪರೇಸಿ `ಉಸ್ಸಪ್ಪಾ' ಎಂದು ಕುಳಿತುಕೊಳ್ಳುತ್ತ `ಮಿಸ್ಸಮ್ಮ ಚಾ ಹಾಕು' ಎಂದ.`ಎಲ್ಲೋಗಿದ್ಯೋ ತೆಪರಾ? ಯಾರದಾರ ಇಂಟ್ರೂ ಇತ್ತಾ?' ದುಬ್ಬೀರ ವಿಚಾರಿಸಿದ.

`ಹೂ ಮಾರಾಯ, ಬಿಜೆಪಿ ಮುಖಂಡರೊಬ್ಬರ ಇಂಟ್ರೂ ಮಾಡ್ಕಂಡ್ ಬಂದೆ. ಒಳ್ಳೆ ಮಜಾ ಇತ್ತು' ಎಂದ ತೆಪರೇಸಿ.

`ಹೌದಾ? ಏನಲೆ ಅದು?'`ಹೇಳ್ತೀನಿ ತಡಿ, ನಾನು ಏನು ಕೇಳಿದ್ರು ಅದು ಸುಳ್ಳು ಇದು ಸುಳ್ಳು, ಅದೆಲ್ಲ ಮಾಧ್ಯಮಗಳ ಸೃಷ್ಟಿ ಅಂತಿದ್ರು ಮಾರಾಯ. ಉದಾಹರಣೆಗೆ...

`ಏನ್ಸಾ, ಅಡ್ವಾಣಿ-ಮೋದಿ ಸಂಬಂಧ ಕೆಟ್ಟು ಕುಲಗೆಟ್ಟು ಹೋಗೇತಂತೆ?'`ಛೆಛೆ, ಎಲ್ಲ ಸುಳ್ಳು, ಅದು ಗುರು-ಶಿಷ್ಯರ ಪ್ರೀತಿಯ ಜಗಳ. ಇಬ್ರೂ ಯಾವಾಗ್ಲೋ ಒಂದಾಗಿದಾರೆ'

`ಹೌದಾ? ಮತ್ತೆ ಬಿಹಾರದಲ್ಲಿ ನಿತೀಶ್‌ಕುಮಾರು ಬಿಜೆಪೀನ ಹೊರ ಹಾಕೋಕೆ ಅಡ್ವಾಣಿನೇ ಕಾರಣ ಅಂತೆ?'

`ನೂರಕ್ಕೆ ನೂರು ಸುಳ್ಳು. ಅದೆಲ್ಲ ಮಾಧ್ಯಮಗಳ ಸೃಷ್ಟಿ'`ಮೊನ್ನೆ ವಿಧಾನಸಭೆ ಚುನಾವಣೇಲಿ ಯಡ್ಯೂರಪ್ಪ ಸೋತು ಗೆದ್ರು, ನೀವು ಗೆದ್ದು ಸೋತ್ರಿ ಅಂತಾರೆ?'

`ಸುಳ್ಳು ಕಣ್ರಿ, ನಾವೆಲ್ಲಿ ಸೋತ್ವಿ? ಜನರ ಮನಸ್ಸಲ್ಲಿ ನಾವಿನ್ನೂ ಗೆದ್ದ ಹಾಗೇ ಇದೀವಿ.'

`ಹೋಗ್ಲಿ ಯಡ್ಯೂರಪ್ಪ ಮತ್ತೆ ಬಿಜೆಪಿ ಸೇರ‌್ತಾರಂತೆ ಹೌದಾ?'`ಸುಳ್ಳು, ಸುಳ್ಳು. ಯಡ್ಯೂರಪ್ಪ ಈ ಜನ್ಮದಲ್ಲಿ ಮತ್ತೆ ಬಿಜೆಪಿ ಸೇರೋದಿಲ್ಲ'

`ಮತ್ತೆ ಕರ್ನಾಟಕದಲ್ಲಿ ಬಿ.ಜೆ.ಪಿ. ಒಡೆದ ಮನೆಯಾಗಿದೆಯಂತೆ? `ಮನೆಯೊಂದು ಮೂರು ಬಾಗಿಲು' ತರ ಗುಂಪುಗಳಾಗಿದಾವಂತೆ?'

`ಅಪ್ಪಟ ಸುಳ್ಳು, ನಾವೆಲ್ಲ ಒಗ್ಗಟ್ಟಾಗಿದೀವಿ. ನಮ್ಮಲ್ಲಿ ಯಾವ ಭಿನ್ನಮತವೂ ಇಲ್ಲ'.......... `ಇಷ್ಟೇ ನೋಡ್ರಪ ಇಂಟರ್‌ವ್ಯೆ. ಪುಣ್ಯಾತ್ಮ ಏನು ಕೇಳಿದ್ರೂ ಸುಳ್ಳು ಸುಳ್ಳು ಅಂತಿದ್ರು. ಕೊನೆಗೆ ಕ್ಯಾಮೆರಾ ಆಫ್ ಮಾಡಿದ ಮೇಲೆ ನನ್ನ ಕಿವೀಲಿ ಏನು ಹೇಳಿದ್ರು ಗೊತ್ತಾ?' ತೆಪರೇಸಿ ಕೇಳಿದ.`ಏನು ಹೇಳಿದ್ರು?' ಎಲ್ಲರೂ ಒಟ್ಟಿಗೇ ಕೇಳಿದರು.

`ಯಾರಿಗೂ ಹೇಳಬೇಡ, ನಿನಗೊಬ್ಬನಿಗೇ ಹೇಳ್ತೀನಿ, ಇಲ್ಲೆತಂಕ ನಾ ಹೇಳಿದ್ದೆಲ್ಲ ಸುಳ್ಳು ಅಂದ್ರು!' ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.