ಇಲ್ಲೊಬ್ಬಚಿತ್ರಗಾರ

7

ಇಲ್ಲೊಬ್ಬಚಿತ್ರಗಾರ

Published:
Updated:

`ಅಪ್ಪ ಶಿಲ್ಪಕಲಾಕೃತಿಗಳನ್ನು ಮಾಡುವುದನ್ನು ನೋಡುತ್ತಾ ನೋಡುತ್ತಾ ನನ್ನೊಳಗೂ ಒಬ್ಬ ಕಲಾವಿದ ರೂಪುಗೊಂಡನೇನೊ. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಗೊಂಬೆಗಳನ್ನು ತಯಾರಿಸುತ್ತಿದ್ದೆ. ಅಂದ ಚಂದ, ರೂಪ ಎಲ್ಲಾ ನಗಣ್ಯ. ಆದರೆ  ಗೊಂಬೆ ಮಾಡಬೇಕು ಎಂಬುದಷ್ಟೇ ನನ್ನ ಗುರಿಯಾಗಿರುತ್ತಿತ್ತು~ ಎಂದರು ರಾಘವೇಂದ್ರ ಚಿತ್ರಗಾರ.ಕಲೆಯನ್ನೇ ಉಸಿರಾಗಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ಬಗೆಬಗೆ ಅಭಿರುಚಿಯ ಆಯಾಮ ನೀಡಿರುವ ಈ ಯುವಕ ಗ್ರಾಫಿಕ್ ಡಿಸೈನರ್, ಶಿಲ್ಪಿ, ಗೊಂಬೆ ತಯಾರಕ, ಚಿತ್ರಕಲಾವಿದ ಎಲ್ಲವೂ ಹೌದು. ಇವೆಲ್ಲವೂ ಅವರ ಆಯ್ಕೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯ.ಕತ್ರಿಗುಪ್ಪೆಯ ಶ್ರೀನಿವಾಸ್- ಪ್ರಭಾವತಿ ದಂಪತಿಯ `ಗೊಂಬೆಮನೆ~ ನೆನಪಿರಬೇಕಲ್ವಾ? ಪಾತ್ರವೇ, ಕಥೆಯೇ ಜೀವಂತಿಕೆ ಪಡೆದು ಮನೆಯಲ್ಲಿ ಕುಳಿತಂತೆ ಭಾಸವಾಗುವ ಆ ಗೊಂಬೆ ಲೋಕದಲ್ಲಿ ಹೆಚ್ಚಿನವುಗಳನ್ನು ತಯಾರಿಸಿದ್ದು ರಾಘವೇಂದ್ರ.ದಸರೆಯಲ್ಲಿ ಕೂರಿಸುವ ಗೊಂಬೆಗಳೆಂದರೆ ಲಿಲಿಪುಟ್ ರಚನೆಗಳು. ಅಷ್ಟು ಪುಟ್ಟ ಆಕೃತಿಯಲ್ಲಿ ಸಹಜತೆ, ಜೀವಂತಿಕೆ ತುಂಬುವ ಕಲೆ ಸಿದ್ಧಿಸಿಕೊಂಡಿದ್ದಾರೆ ರಾಘವೇಂದ್ರ.

`ಗೊಂಬೆ ತಯಾರಿಯನ್ನು ವೃತ್ತಿಯಾಗಿಸಿಕೊಂಡದ್ದು ಆಕಸ್ಮಿಕವಾಗಿ. ಇದಕ್ಕೆ ಪ್ರೇರಣೆ ಕಿರುತೆರೆ ನಟರಾಗಿದ್ದ ದಿವಂಗತ ವೆಂಕಿ. ಅವರ ತಂದೆ ಶ್ರೀನಿವಾಸ್ ತಮ್ಮ ಸಂಗ್ರಹಕ್ಕೆ ಹೊಸ ಗೊಂಬೆಗಳನ್ನು ಸೇರ್ಪಡೆ ಮಾಡಬೇಕೆಂದಿದ್ದು ಯಾರಾದರೂ ಕಲಾವಿದರಿದ್ದರೆ ತಿಳಿಸುವಂತೆ ನನ್ನ ಗೆಳೆಯನಿಗೆ ಹೇಳಿದ್ದರು. ಅವನು ನನ್ನ ಹೆಸರು ಸೂಚಿಸಿದ್ದನಂತೆ.ಒಂದು ದಿನ ನಾನು ಶ್ರೀನಿವಾಸ್ ಅವರನ್ನು ಭೇಟಿಯಾದೆ. ಅವರಿಗೆ ದಕ್ಷಿಣ ಕನ್ನಡದ ನೆಲದ ಭೂತದ ಕೋಲ, ಕಂಬಳ, ಡೊಳ್ಳು ಕುಣಿತ, ಯಕ್ಷಗಾನ ಮುಂತಾದ ಗೊಂಬೆಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಳ್ಳುವ ಬಹಳ ದಿನದ ಕನಸನ್ನು ಹೇಳಿಕೊಂಡರು. ಅವರಿಂದ ಫೋಟೊ ತರಿಸಿಕೊಂಡು ಈ ಕಲಾಪ್ರಕಾರಗಳನ್ನು ಗೊಂಬೆಯಾಗಿಸಿದೆ~ ಎಂದು ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

`ಶಿಲ್ಪ ತಯಾರಿಗಿಂತ ಗೊಂಬೆ ತಯಾರಿ ಹೆಚ್ಚು ಸೂಕ್ಷ್ಮ. ಆವೆಮಣ್ಣು, ಅಂಟು, ಬೆಂಡು, ಪ್ಲಾಸ್ಟರ್ ಆಫ್ ಪ್ಯಾರಿಸ್ ನಾನು ಬಳಸುವ ಪ್ರಮುಖ ಕಚ್ಚಾವಸ್ತುಗಳು. ಆರಂಭದಲ್ಲೇ ಸರಿಯಾದ ರೂಪ ಕೊಡುತ್ತೇನೆ. ಇಲ್ಲದಿದ್ದರೆ ಅಂತಿಮಸ್ಪರ್ಶ ಕೊಡುವಾಗ ಸಮಸ್ಯೆ ತಪ್ಪಿದ್ದಲ್ಲ~ ಎನ್ನುತ್ತಾರವರು.`ನಮ್ಮೂರು ಸವದತ್ತಿ. ಓದಿದ್ದು ಧಾರವಾಡದಲ್ಲಿ. ಆದರೆ ಬೆಂಗಳೂರು ನನ್ನ ವೃತ್ತಿಕ್ಷೇತ್ರ. ಅಪ್ಪ ಗುರುನಾಥ ಚಿತ್ರಗಾರ ಶಿಲ್ಪಿ ಮತ್ತು ಪೇಂಟರ್. ಸಣ್ಣವನಿರುವಾಗ ಅವರು ಕೆಲಸ ಮಾಡುವಾಗಲೆಲ್ಲ ಅವರೊಂದಿಗೇ ಕಳೆಯುತ್ತಿದ್ದೆ. ಆಗ ನಾನೂ ಒಂದು ಗೊಂಬೆ ತಯಾರಿಸಿದೆ. ಅದು ಡೋಲು ಬಾರಿಸುವ ಕಲಾವಿದನದ್ದು. ಚಿತ್ರಕಲೆಯಲ್ಲಿ ಮೊದಲ ಬಾರಿಗೆ ಬಿಡಿಸಿದ್ದು ಗಣೇಶನನ್ನು. ಶಿಲ್ಪಕಲೆ ಮತ್ತು ಕಾಷ್ಠದಲ್ಲಿ ಬೇಲೂರು ಹಳೇಬೀಡು ಶಿಲ್ಪಕಲೆಗಳ ಮಾದರಿಯ ಕೆಲಸ ಮಾಡಿದ್ದೇನೆ. ಉಳಿದಂತೆ ಹವ್ಯಾಸಗಳೇ ಬದುಕು. ಈಗ ನನಗೆ ಮದುವೆಯಾಗಿದೆ. ಅಮ್ಮ ಮತ್ತು ಹೆಂಡತಿ ಗೊಂಬೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಾರೆ~ ಎಂದು ಭೂತ ಮತ್ತು ವರ್ತಮಾನವನ್ನು ಬಿಡಿಸಿಡುತ್ತಾರೆ.ಗ್ರಾಫಿಕ್ ಡಿಸೈನರ್ ಆಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ, ಬಿಡುವಿನ ವೇಳೆಯನ್ನು ಹವ್ಯಾಸಗಳಿಗೆ ಮೂರ್ತರೂಪ ಕೊಡಲು ಮೀಸಲಿಟ್ಟಿದ್ದಾರೆ. ಗೊಂಬೆಗಳ ತಯಾರಿ ಮೆಚ್ಚಿನ ಕ್ಷೇತ್ರ. ಮಾಹಿತಿಗೆ ಸಂಪರ್ಕಿಸಿ: 89705 83505.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry