ಇಳಾ ಭಾರತಂ : ಗತ ವೈಭವಕ್ಕೆ ನವ ಭಾಷ್ಯ

6

ಇಳಾ ಭಾರತಂ : ಗತ ವೈಭವಕ್ಕೆ ನವ ಭಾಷ್ಯ

Published:
Updated:

ಧರಣಿದೇವಿ ಮಾಲಗತ್ತಿ ಉಪನ್ಯಾಸಕಿ, ಸಾಹಿತಿ, ಪೊಲೀಸ್ ಅಧಿಕಾರಿ- ಹೀಗೆ ತ್ರಿಪಾತ್ರದಲ್ಲಿ ಅನುಭವ ಪಡೆದವರು. ಸದ್ಯ, ಎ.ಸಿ.ಪಿಯಾಗಿ  ಕೆಲಸ ನಿರ್ವಹಿಸುತ್ತಿರುವ ಇವರು 16ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಭಾಮಿನಿ ಷಟ್ಪದಿಯಲ್ಲಿ ಮಹಾಕಾವ್ಯ ರಚಿಸಿ ಗಮನ ಸೆಳೆದಿದ್ದಾರೆ. ಈ ಮಹಾಕಾವ್ಯ ಸಂಪೂರ್ಣಗೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ ಹೊರತರಲಿದೆ.ಸಾಹಿತ್ಯ ರಚನೆಗೆ ವ್ಯಾಕರಣದ ಚೌಕಟ್ಟು ಏಕೆ ಬೇಕು ಎಂದುಕೊಂಡು ಅದನ್ನು ಕಿತ್ತೆಸೆದು ಇಂದಿನ ಸಾಹಿತ್ಯ ರೂಪವೇ ಬದಲಾಗಿ ಬಿಟ್ಟಿದೆ. ಸಾಹಿತ್ಯಕ್ಕೀಗ ಛಂದಸ್ಸು, ಲಘು-ಗುರುವಿನ ಗೊಡವೆಯೇ ಬೇಕಿಲ್ಲ ಎಂಬುದು ನಿಜ. ಅದನ್ನು ಜನ ಮರೆತೇಹೋದರು ಎಂಬ ಕಾಲಘಟ್ಟದಲ್ಲಿ ಭಾಮಿನಿ ಷಟ್ಪದಿಯಲ್ಲಿ `ಇಳಾ ಭಾರತಂ~ ರೂಪಿಸುವ ಮೂಲಕ ಕನ್ನಡ ಸಾಹಿತ್ಯದ ಗತ ವೈಭವ ಮರುಕಳಿಸುವ ಹೊಸ ದಾರಿಯೆಡೆಗೆ ಧರಣಿದೇವಿ ನೋಟ ಹರಿಸಿದ್ದಾರೆ.ಈ ಮಹಾಕಾವ್ಯ ರಚನೆಗೆ ಅವರು ಬರೋಬ್ಬರಿ ಹತ್ತು ವರ್ಷ ತೆಗೆದುಕೊಂಡಿದ್ದಾರೆ. ಇಷ್ಟೊಂದು ದೀರ್ಘಾವಧಿಯಲ್ಲಿ 1704 ಪದ್ಯಗಳಲ್ಲಿ ಮಹಿಳೆಯಿಂದ ಉಕ್ತಗೊಂಡ ಶೈಲಿಯಲ್ಲಿ ಮಹಾಭಾರತಕ್ಕಿಂತ ಪೂರ್ವದ ಕಥೆ ನಿರೂಪಿತಗೊಂಡಿದೆ. ಕಾವ್ಯ ಪೂರ್ಣಗೊಂಡು ಅದು ಅಚ್ಚಿಗೆ ಹೋಗಿರುವ ಈ ಸಂದರ್ಭದಲ್ಲಿ ಧರಣಿದೇವಿ ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

ಆಧುನಿಕ ಮಹಾಕಾವ್ಯದ ಪಟ್ಟಿಗೆ  `ಇಳಾ  ಭಾರತಂ~ ಸೇರ್ಪಡೆಯಾಗುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ?

 ಆಧುನಿಕ ಎಂಬುದನ್ನು ಯಾವ ನೆಲೆಯಲ್ಲಿ ವ್ಯಾಖ್ಯಾನ ಮಾಡುತ್ತಾರೆ ಎಂಬುದನ್ನು ಮೊದಲು ಗಮನಿಸಬೇಕು. ಕಾಲಘಟ್ಟದ ದೃಷ್ಟಿಯಿಂದ ಅದು ಆಧುನಿಕ. ಆದರೆ ವಸ್ತು, ವಿಷಯ, ಛಂದಸ್ಸು ಹಳೆಯವು. ನನ್ನ ಕಾಲಘಟ್ಟದಲ್ಲಿ ನನ್ನನ್ನು ಕಾಡಿದ ಅನೇಕ ಸಾಮಾಜಿಕ ಸಮಸ್ಯೆಗಳು ಕಥೆಗೆ ಪೂರಕವಾಗಿ ಅಲ್ಲಲ್ಲಿ ಪ್ರಸ್ತಾಪವಾಗಿವೆ. ಕಥೆ ಹಳೆಯದೇ ಆಗಿದೆ, ಹೀಗಾಗಿ ಇದನ್ನು ಆಧುನಿಕ ಎಂದು ಕರೆಯಬಹುದೇ ಎಂಬುದು ನನ್ನ ಪ್ರಶ್ನೆ.

ಈ ಕಾವ್ಯ ರೂಪುಗೊಳ್ಳಲು ಏನು ಪ್ರೇರಣೆ?

ಸಮಾನ ಮನಸ್ಕರಾದ ನಾನು, ಅರವಿಂದ ಮಾಲಗತ್ತಿ, ನೀಲಗಿರಿ ತಳವಾರ್, ಆರ್‌ವಿಎಸ್, ರಾಘವ, ನಾಗಣ್ಣ ಎಲ್ಲರೂ ಸೇರಿ `ಅನಿಲ ಆರಾಧನೆ~ ಎಂಬ ಕಾವ್ಯ ರಚಿಸಿದ್ದೆವು. ಹೀಗೆ ಚರ್ಚೆ ಮಾಡುತ್ತಿರುವಾಗ ಸಂಯುಕ್ತ ಮಹಾಕಾವ್ಯ ರಚನೆ ಮಾಡಬೇಕೆಂಬ ಮಾತು ಬಂತು. ಆ ಆಲೋಚನೆ ಆಲೋಚನೆಯಾಗಿಯೇ ಉಳಿಯಿತು. ಅದೇ ನಾನು ಮಹಾಕಾವ್ಯ ಬರೆಯುವ ಆಸೆ ಹುಟ್ಟಲು ಕಾರಣ.

ಕಾವ್ಯ ರಚಿಸಲು ಇಷ್ಟೊಂದು ದೀರ್ಘಾವಧಿ ತೆಗೆದುಕೊಂಡದ್ದು ಏಕೆ?

ಹತ್ತು ವರ್ಷಗಳಷ್ಟು ದೀರ್ಘಕಾಲ ನಿರಂತರ ಬರವಣಿಗೆ ಮಾಡಲಿಲ್ಲ. ಕಾವ್ಯ ಬರೆಯಲು ಪ್ರಾರಂಭಿಸಿದ ಮೇಲೆ ಪೊಲೀಸ್ ಇಲಾಖೆಗೆ ಸೇರಿದ ಕಾರಣ ಎರಡು ವರ್ಷ ಬರವಣಿಗೆ ಸಾಧ್ಯವಾಗಲಿಲ್ಲ. ಕೆಲ ಕಾಲ ಅಂಕಣ ಬರೆಯುತ್ತಿದ್ದೆ. ಆದರೆ ಇಷ್ಟು ದೀರ್ಘಾವಧಿಯಲ್ಲಿ ನಾನು ಪಡೆದುಕೊಂಡ ಜೀವನಾನುಭವಗಳು, ಅನುಭವಕ್ಕೆ ಬಂದ ಘಟನೆಗಳು ಕಾವ್ಯದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಪಡೆಯಲು ಸಹಕಾರಿಯಾಯಿತು. ನಿರಂತರವಾಗಿ ಕಾವ್ಯ ರಚನೆಯಲ್ಲಿ ತೊಡಗಿದ್ದರೆ ಕೆಲ ವರ್ಷಗಳಲ್ಲೇ ಮುಗಿಸಬಹುದಿತ್ತೇನೋ. ಈ ಕಥಾನಕದಲ್ಲಿ ಪಾತ್ರಗಳನ್ನು ಸೃಷ್ಟಿಸುವಾಗ ನನ್ನ ಅನುಭವಗಳು ಸೇರಿಕೊಂಡಿವೆ.

ಈ ಕೃತಿಯಲ್ಲಿ ಸ್ತ್ರೀಯರ ಪಾತ್ರ ಏನು?

ಗಂಡು- ಹೆಣ್ಣು ಹೇಗೆ ಅನುಬಂಧ ಉಳಿಸಿಕೊಂಡು ಹೋಗುತ್ತಾರೆ ಎಂಬುದನ್ನು ಹೇಳಿದ್ದೇನೆ. ಹೆಣ್ಣಾಗಲೀ, ಗಂಡಾಗಲೀ ಸಂಬಂಧ ಹೇಗೆ ನಿಭಾಯಿಸಬೇಕು ಎಂಬುದು ಕಾವ್ಯದ ಮುಖ್ಯ ವಸ್ತು. ಮಹಾಭಾರತಕ್ಕಿಂತ ಪೂರ್ವದ ಕಥೆಯನ್ನು ಆಯ್ಕೆ ಮಾಡಿಕೊಂಡು `ಇಳಾ ಭಾರತಂ~ ಎಂದೇಕೆ ಹೆಸರು?

ದೇಶದಲ್ಲಿ ಸೃಷ್ಟಿಯಾಗಿರುವ ಮಹಾಕಾವ್ಯಗಳ ಹಿನ್ನೆಲೆ ನೋಡಿದಾಗ ರಾಮಾಯಣ, ಮಹಾಭಾರತದ ಉಪ ಕಥೆಗಳ ಮೇಲೆಯೇ ಕಾವ್ಯಗಳು ಹುಟ್ಟಿಕೊಂಡಿವೆ. ಇವೆರಡೂ ಆಕರ ಗ್ರಂಥಗಳಾಗಿವೆ. ಇವುಗಳು ಛಂದಸ್ಸುಗಳಿಗೆ ಸಂಬಂಧಪಟ್ಟವು ಎಂಬುದು ನನ್ನ ವಾದ. ಹಾಗೆಯೇ ದ್ರಾವಿಡರಿಗೆ, ಆರ್ಯರಿಗೆ ಸಂಬಂಧಪಟ್ಟವೂ ಇರಬಹುದು.ಇಷ್ಟಿದ್ದೂ ಮಹಿಳಾ ಧ್ವನಿಯಾಗಿ ಯಾವ ಮಹಾಕಾವ್ಯವೂ ರೂಪುಗೊಂಡಿಲ್ಲ. ಮಹಾಭಾರತ ಪೂರ್ವದ ಚಂದ್ರವಂಶದ ಕಥೆಯ ಇಳಾ ಪಾತ್ರವೇ ನನ್ನ ಕಾವ್ಯದ ವಸ್ತು. ತನ್ನ ಅಸ್ತಿತ್ವ ಬಿಟ್ಟುಕೊಡದೇ ರಾಜ್ಯ ಆಳಿದ ಆಕೆ ಮಾದರಿ ಸ್ತ್ರೀವಾದಿ ಎನಿಸಿದ್ದಾಳೆ.ಪುರುಷನ ಜೊತೆ ಜೀವನ ನಡೆಸಿದಾಗಲೂ ತನ್ನ ಅಸ್ತಿತ್ವ ಬಿಡದ ಇಳಾ ಪಾತ್ರ ಆಧುನಿಕ ಮಹಿಳೆಯರಿಗೆ ಅನ್ವಯಿಸಬೇಕು. ಇಳಾ ಇಡೀ ಮಹಿಳೆಯರ ಪ್ರತಿನಿಧಿಯಾಗಿ ಇರಬೇಕು. ಹಾಗೆಯೆ ಇಡೀ ಭೂಮಿಯ ಪ್ರತಿನಿಧಿಯಾಗಿಯೂ ಕಾಣಬೇಕು. ಈ ಕಾರಣಕ್ಕಾಗಿಯೇ ಇಳಾ ಹೆಸರನ್ನು ಬಳಸಲಾಗಿದೆ.ಈಗಿರುವ ಯಾವ ಮಹಾಕಾವ್ಯದಲ್ಲೂ ಮಹಿಳೆ ಪಾತ್ರ ಪ್ರಧಾನವಾಗಿಲ್ಲ. ಮಹಿಳೆಯನ್ನು ಪ್ರಧಾನವಾಗಿಟ್ಟುಕೊಂಡು ನೋಡಿಲ್ಲ. ಎಲ್ಲೋ ಒಂದು ಕಡೆ ಅಲಕ್ಷ್ಯಕ್ಕೆ ಒಳಗಾಗಿದ್ದ ಪಾತ್ರವನ್ನು ಮುಖ್ಯ ಭೂಮಿಕೆಗೆ ತರಬೇಕೆಂಬ ಉದ್ದೇಶವನ್ನೂ ಕಾವ್ಯ ಒಳಗೊಂಡ ಕಾರಣವೇ `ಇಳಾ ಭಾರತಂ~ ಹೆಸರಿಗೆ ಕಾರಣವೂ ಹೌದು.

 

ಮಾಧವಿ ಪಾತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ?

ಮಹಿಳೆಯರಿಗೆ ಸಂಬಂಧಿಸಿದಂತೆ ಸಮಾಜದ ನಿಲುವನ್ನು ಎಲ್ಲೆಲ್ಲಿ ಪ್ರಶ್ನಿಸಲು ಸಾಧ್ಯವೋ ಅದೆಲ್ಲವನ್ನೂ ಮಾಧವಿ ಪಾತ್ರ ಪ್ರಶ್ನಿಸುತ್ತದೆ. ಸ್ತ್ರೀಯರ ಮೌನವೇ ಪ್ರತಿಭಟನೆ ಎಂದೂ ಹೇಳಿದ್ದೇನೆ.

ದೇಸಿ ಛಂದಸ್ಸು ಓದುಗರನ್ನು ತಲುಪುವುದು ಸಾಧ್ಯವೇ?

ತ್ರಿಪದಿ, ದ್ವಿಪದಿ ದೇಸಿ ಛಂದಸ್ಸು ಅಲ್ಲ. ಆಡುನುಡಿ ಅಲ್ಲಲ್ಲಿ ಬರುತ್ತದೆ. ಛಂದಸ್ಸು ಮಾತ್ರಗುಣದಿಂದ ಕೂಡಿದ್ದು, ದೇಸಿಯಲ್ಲಿ ಅಂಶಗುಣ ಇರುತ್ತದೆ. ತ್ರಿಪದಿಯಲ್ಲಿ ಅಂಶಗುಣವಿರುತ್ತದೆ. ಎಲ್ಲರಿಗೂ ಇಷ್ಟುವಾಗುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಕುಮಾರವ್ಯಾಸನ ಪಂಪಭಾರತದ ಕೆಲವು ಸಾಲುಗಳನ್ನು ಮರೆಯಲು ಸಾಧ್ಯವೇ? ಗಮಕಿಗಳಿಗೆ ಹೆಚ್ಚು ಅವಕಾಶ ಇರುವುದರಿಂದ ಗಮಕದ ಮೂಲಕ ಹೆಚ್ಚು ಜನರನ್ನು ತಲುಪುವ ಸಾಧ್ಯತೆ ಇರುತ್ತದೆ. ಕೃತಿ ಬಿಡುಗಡೆಯಾದ ನಂತರ ಕಾದು ನೋಡಬೇಕು.

ಕೃತಿಯ ಕುರಿತು ಏನು ಹೇಳುತ್ತೀರಿ?

ಭಾಮಿನಿ ಷಟ್ಪದಿಯ ಎಲ್ಲ ಲಕ್ಷಣಗಳನ್ನೂ ಅಳವಡಿಸಿಕೊಂಡಿದ್ದೇನೆ. ಒಂದು ಪದ್ಯ ನವ ಭಾಮಿನಿ ಷಟ್ಪದಿಯಲ್ಲಿದೆ. ಅದರಲ್ಲಿ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದೇನೆ. ಅಲ್ಲಲ್ಲಿ ಒಂದಷ್ಟು ನಿಯಮಗಳ ಗೆರೆ ಉಲ್ಲಂಘಿಸಿದ್ದರೂ ಶೇ 80ರಷ್ಟು ಕಾವ್ಯದ ಭಾಗ ಷಟ್ಪದಿಯ ರೂಪದಲ್ಲೇ ಇದೆ. ಹೆಣ್ಣನ್ನು ದ್ವೇಷಿಸುವವರು, ಕೀಳಾಗಿ ನೋಡುವವರು ಈ ಕಾವ್ಯ ಓದಿದ ಮೇಲಾದರೂ ಹೆಣ್ಣ-ಗಂಡು ಸಮಾನರು ಎಂಬ ನಿಲುವಿಗೆ ಬರಬಹುದು ಎಂಬುದೇ ನನ್ನ ನಂಬಿಕೆ.

ವೃತ್ತಿ ಮತ್ತು ಪ್ರವೃತ್ತಿ ಕುರಿತು ಹೇಳಿ?

ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಸಾಹಿತ್ಯದ ಕಡೆಯೇ ಮೊದಲಿನಿಂದಲೂ ಒಲವು. ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವನ ಬರೆಯುತ್ತಿದ್ದೆ. ಪುಸ್ತಕ ಓದಿನ ಮೂಲಕ ಕೃತಿಯ ಸೀಮಾತೀತ ವಿಮರ್ಶೆ ಹೇಗೆ ಮಾಡುತ್ತಾರೆ ಎಂಬ ಕುತೂಹಲವೇ ಕನ್ನಡದಲ್ಲಿ ಎಂ.ಎ ಮಾಡಲು ಪ್ರೇರಣೆ. ವೃತ್ತಿ ಬದುಕು ಕೂಡ ಬರವಣಿಗೆಗೆ ನೆರವಾಗಿದೆ.

ಮಹಿಳಾ ಸಾಹಿತ್ಯ, ಅದರ ವಿಮರ್ಶೆಗೆ ಇಂದಿಗೂ ಸೂಕ್ತ ಜಾಗ ಸಿಕ್ಕಿಲ್ಲ ಎನ್ನುತ್ತಾರಲ್ಲ?

ಪ್ರಾರಂಭದಲ್ಲಿದ್ದ ಅಸಡ್ಡೆ ಈಗಿಲ್ಲ. ಪುರುಷರ ದೃಷ್ಟಿಕೋನದಿಂದ ಮಹಿಳಾ ಸಾಹಿತ್ಯದ ವಿಮರ್ಶೆ ನಡೆಯುತ್ತಿದ್ದುದರಿಂದ ಸೀಮಿತ ದೃಷ್ಟಿಕೋನದ ವಿಮರ್ಶೆ ಬರುತ್ತಿತ್ತು. ಮಹಿಳೆಯರ ಬರಹ ಪುರುಷರಿಗೆ ಸರಿಗಟ್ಟುವುದಿಲ್ಲ ಎಂದು ನೈಪಾಲ್ ಹೇಳಿದ್ದರು.

 

ಈ ಮಾತುಗಳು ಯಾಕೆ ಬರುತ್ತವೆ ಎಂದರೆ ವಿಮರ್ಶಾ ಲೋಕದಲ್ಲಿ ಗುರುತಿಸುವ ಕಣ್ಣುಗಳೇ ಇದಕ್ಕೆ ಕಾರಣ. ಈಚೆಗಷ್ಟೇ ಸ್ತ್ರೀವಾದಿ ವಿಮರ್ಶೆಗಳು ಬರುತ್ತಿವೆ. ಪುರುಷರು ಸಹ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮಹಿಳೆಯರ ಸಾಹಿತ್ಯವೂ ಇಡೀ ಸಮಾಜದ ಒಂದು ಭಾಗ ಎಂದು ನೋಡುವಂತಾಗಬೇಕು.

ಪೊಲೀಸ್ ಅಧಿಕಾರಿಯಾಗಿ ಮಹಿಳಾ ಸಮಸ್ಯೆಯನ್ನು ಹೇಗೆ ನೋಡುತ್ತೀರಿ?

ಅಧಿಕಾರಿಯು ಮಹಿಳೆ, ಪುರುಷ ಇಬ್ಬರನ್ನೂ ಹೊರತುಪಡಿಸಿ ನ್ಯಾಯಪರವಾಗಿರಬೇಕು. ಇಲ್ಲಿ ಮಹಿಳೆಯರ ಪರ, ಪುರುಷರ ಪರ ಎಂಬುದಿಲ್ಲ.

ನಿಮ್ಮ ಸಂಗಾತಿ ಅರವಿಂದ ಮಾಲಗತ್ತಿ ಕೂಡ ಲೇಖಕರು. ಅವರ ಕುರಿತು...

ಸಾಮಾಜಿಕ ಸಮಸ್ಯೆಗಳ ಬಗ್ಗೆ ಬರೆಯುವಾಗ ಅವರೊಂದಿಗೆ ಚರ್ಚಿಸುತ್ತೇನೆ. ತಾತ್ವಿಕ ಚರ್ಚೆಗಳಲ್ಲಿ ಮಾಲಗತ್ತಿಯವರ ಪ್ರಭಾವ ದಟ್ಟವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry