ಮಂಗಳವಾರ, ಮಾರ್ಚ್ 21, 2023
30 °C

ಇಳಿಮುಖವಾಗುತ್ತಿರುವ ಆಕರ್ಷಣೆಯ ಹಾದಿಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವೆಂಬರ್ ಎರಡನೇ ವಾರದಲ್ಲಿ  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನವದೆಹಲಿಯಿಂದ ಇಂಡೊನೇಷ್ಯಾದತ್ತ ಹಾರಿದ ಸಂದರ್ಭದಲ್ಲೇ ನಾನೂ ನನ್ನ ಊರು ಬೆಂಗಳೂರು ಬಿಟ್ಟು ಒಬಾಮರ ರಾಷ್ಟ್ರದತ್ತ ತೆರಳಿದೆ. ಈ ವ್ಯಕ್ತಿಯ ನಡವಳಿಕೆಗಳಲ್ಲಿನ ಸೊಬಗು, ಘನತೆ, ಅವರ ಮನದ ಉತ್ಕೃಷ್ಟತೆ ಹಾಗೂ ಭಾಷಣದ ಮೋಡಿಗೆ ಇತರ ಭಾರತೀಯರಂತೆ ನಾನೂ ಮಾರುಹೋಗಿದ್ದೆ. ಆದರೆ ಅಮೆರಿಕದಲ್ಲಿ ಪ್ರವಾಸ ಮಾಡುತ್ತಾ, ನನ್ನ ಸ್ನೇಹಿತರು ಹಾಗೂ ಆತಿಥೇಯರು ತಮ್ಮ ಅಧ್ಯಕ್ಷರ ಬಗ್ಗೆ ಹೊಂದಿದ್ದ ಅನುಮಾನ ಹಾಗೂ ಟೀಕೆಗಳನ್ನು ಕಂಡುಕೊಂಡೆ. ಆರ್ಥಿಕತೆ ಹಾಗೂ ನಾಗರಿಕರ ಪ್ರತಿದಿನದ ಬದುಕಿನ ಮೇಲೆ ಪ್ರಭುತ್ವದ ನಿಯಂತ್ರಣವನ್ನು ಬಲಪಡಿಸಲು ಯತ್ನಿಸುವ ಸಮಾಜವಾದಿ ಮನೋಧರ್ಮ ಒಬಾಮರದು ಎಂದು ಸಂಪ್ರದಾಯಶೀಲ ದೃಷ್ಟಿಕೋನದವರು  ದೂರಿದರು. ಒಬಾಮ ಕುರಿತಂತೆ ತಮ್ಮ ಟೀಕೆಗಳಲ್ಲಿ ಎಡಪಂಥೀಯರಂತೂ ಇನ್ನೂ ಹೆಚ್ಚು ಕಟುವಾಗಿದ್ದರು. ‘ವಾಲ್ ಸ್ಟ್ರೀಟ್’ನ ಲೂಟಿಕೋರರಿಗೆ ಕಡಿವಾಣ ಹಾಕುವಲ್ಲಿ ಅಥವಾ ಶಿಕ್ಷಿಸುವಲ್ಲಿ ಅಮೆರಿಕ ಅಧ್ಯಕ್ಷರು ಏನೂ ಕ್ರಮ ಕೈಗೊಳ್ಳಲಿಲ್ಲ ಅಥವಾ ಶ್ರೀಮಂತರಿಗೆ ಅತಿ ಹೆಚ್ಚಿನ ತೆರಿಗೆ ಹೇರುವ ವಿಚಾರ ಪರಿಗಣಿಸುತ್ತಿಲ್ಲ ಎಂದು ಅವರು ಕೋಪಗೊಂಡಿದ್ದರು.

ಬಲಪಂಥೀಯ ಹಾಗೂ ಎಡಪಂಥೀಯ ಅಮೆರಿಕನ್ನರು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿವಿಧ ದೃಷ್ಟಿಕೋನಗಳಿಂದ ಒಬಾಮ ವಿರುದ್ಧ  ವಿವಿಧ ಟೀಕೆಗಳನ್ನು ಮಾಡಿದ್ದಾರೆ. ಅದರ ಜೊತೆಗೇ ತಣ್ಣನೆಯ, ತಮ್ಮ ಪಾಡಿಗೆ ತಾವು ಇರುವಂತಹ ಒಂದೇ ಮಾತಿನಲ್ಲಿ ಹೇಳುವುದಾದರೆ ಬಿಗುಮಾನ ಎನ್ನುವಂತಹ ಒಬಾಮರ ವ್ಯಕ್ತಿತ್ವದ ಮಿತಿಗಳನ್ನು ಕುರಿತಂತೆ ಅವರದೆಲ್ಲಾ ಒಟ್ಟಾಗಿ ಒಂದೇ ಅಭಿಪ್ರಾಯವೇ ಆಗಿತ್ತು. ಅಸಾಧಾರಣ ಬುದ್ಧಿಮತ್ತೆ ಹಾಗೂ ಮಾತನಾಡುವ ಕಲೆಗಳನ್ನು ಹೊಂದಿದ್ದರೂ ಅಮೆರಿಕದ ಜನತೆಯ ಜೊತೆಗೆ ಭಾವನಾತ್ಮಕವಾಗಿ ಹಾಗೂ ಮಾನವೀಯ ಭಾವದಲ್ಲಿ ಅವರು ಸಂವಹನ ಮಾಡುವುದು ಸಾಧ್ಯವಿಲ್ಲ ಎನ್ನುವ ಭಾವ ಅಲ್ಲಿತ್ತು. ಹೀಗಾಗಿಯೇ ಭಾರತಕ್ಕೆ ಅಧ್ಯಕ್ಷ ಒಬಾಮರ ಪ್ರವಾಸಕ್ಕೆ ಸ್ವಲ್ಪ ದಿನಗಳ ಮುಂಚೆಯಷ್ಟೇ ಅವರ ಡೆಮಾಕ್ರಟಿಕ್ ಪಕ್ಷ ಪ್ರಮುಖ ಚುನಾವಣಾ ಸೋಲನ್ನು ಕಂಡಿತ್ತು.

ಕೆಲವು ವರ್ಷಗಳ ಹಿಂದೆ, ವಾಷಿಂಗ್ಟನ್ ಭೇಟಿಯ ವೇಳೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ‘ಭಾರತದ ಜನ ನಿಮ್ಮನ್ನು ಇಷ್ಟ ಪಡುತ್ತಾರೆ’ ಎಂದು ಆಗಿನ ಅಮೆರಿಕದ ಅಧ್ಯಕ್ಷರಿಗೆ ಹೇಳಿದ್ದರು. ಅದು ಉತ್ಪ್ರೇಕ್ಷೆಯ ಹೇಳಿಕೆಯಾಗಿತ್ತು. ತಮ್ಮ ಹಿಂದಿನವರು ಸೃಷ್ಟಿಸಿದ್ದ ಸಂರಕ್ಷಣಾತ್ಮಕ ಗಡಿಗಳನ್ನು ಉರುಳಿಸುವ ಯತ್ನಗಳಿಂದಾಗಿ ಜಾರ್ಜ್ ಡಬ್ಲ್ಯು ಬುಷ್ ಅವರು ಮುಂಬೈನ ಉದ್ಯಮಪತಿಗಳಿಗೇನೊ ಹಿತವಾದವರಾಗಿದ್ದರು. ತಮಗೆ ಸಾಮಾನ್ಯ ಶತ್ರು ಎನಿಸಿದ ಚೀನಾವನ್ನು ನಿಯಂತ್ರಿಸಿ ಮಣಿಸಲು ಭಾರತ - ಅಮೆರಿಕದ ಮಧ್ಯದ ಮೈತ್ರಿಗೆ ಜೂನಿಯರ್ ಬುಷ್‌ರ ಅನುಮೋದನೆಯಿಂದಾಗಿ ಮಿಲಿಟರಿ ಕಾರ್ಯತಂತ್ರಜ್ಞರು ಹಾಗೂ ದೆಹಲಿಯಲ್ಲಿನ ವಿದೇಶಿ ನೀತಿ ತಂತ್ರಜ್ಞರಿಗೂ ಅವರು ಹಿತ ಎನಿಸಿದ್ದುಂಟು. ಆದರೆ ಜಾಗತಿಕ ಆರ್ಥಿಕತೆಯಲ್ಲಿ ಯಾವುದೇ ಪಾಲು ಇಲ್ಲದ ಭಾರತೀಯರು ಅಥವಾ ಚೀನಾ ಜೊತೆಗಿನ ಹೋರಾಟದಲ್ಲಿ ಏನೂ ಆಗಬೇಕಾಗಿಲ್ಲದವರು ಬುಷ್ ಬಗ್ಗೆ ಉದಾಸೀನ ಭಾವ ತಳೆದಿದ್ದರು ಅಥವಾ ಇರಾಕ್‌ನಲ್ಲಿ ಅಪ್ರಚೋದಿತ ಹಾಗೂ ಸ್ಪಷ್ಟವಾಗಿ ಅಕ್ರಮ ಯುದ್ಧ ಆರಂಭಿಸಿದ್ದಕ್ಕಾಗಿ ಅವರನ್ನು ಇಷ್ಟ ಪಡುತ್ತಲೇ ಇರಲಿಲ್ಲ.

ಬದಲಿಗೆ, ಬರಾಕ್ ಒಬಾಮ ಅವರು  ಅಧ್ಯಕ್ಷ ಸ್ಥಾನಕ್ಕೆ ತಮ್ಮ ಪ್ರಚಾರಾಂದೋಲನವನ್ನು ಆರಂಭಿಸಿದ ಸಂದರ್ಭದಲ್ಲಿಯೇ ಅವರ ಜೊತೆ ಭಾರತದ ಜನರಿದ್ದರು. ಜಾರ್ಜ್ ಡಬ್ಲ್ಯು ಬುಷ್‌ರಂತೆ ಅಥವಾ ಡೆಮಾಕ್ರಟಿಕ್ ನಾಮಕರಣಕ್ಕೆ ಅವರದೇ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ನಂತೆ ಇಲಿನಾಯ್‌ನ ಈ ಸೆನೆಟರ್‌ಗೆ ರಾಜಕಾರಣದಲ್ಲಿ ಯಾವುದೇ ಕುಟುಂಬ ಸಂಪರ್ಕಗಳೂ ಇರಲಿಲ್ಲ. ತಮ್ಮ ಬುದ್ಧಿವಂತಿಕೆ ಹಾಗೂ ಕಠಿಣ ಪರಿಶ್ರಮದಿಂದಷ್ಟೇ ಯಾವುದೇ ಹಿನ್ನೆಲೆ ಇಲ್ಲದೆಯೂ ಅವರು ಮೇಲೆ ಬಂದಿದ್ದರು. ಏಷ್ಯಾ ಹಾಗೂ ಆಫ್ರಿಕಾದ ಇತರ ಜನರಂತೆಯೇ ಅವರ ಜನಾಂಗೀಯ ಹಿನ್ನೆಲೆಯ ಕಾರಣದ ಜೊತೆಗೆ, ಅಮೆರಿಕನ್ ರಾಜಕಾರಣದಲ್ಲಿ ಬಿಳಿಯರ ಪ್ರಾಬಲ್ಯಕ್ಕೆ ಅವರು ಪ್ರತಿನಿಧಿಸಿದಂತಹ ಸವಾಲಿನ ಕಾರಣವಾಗಿಯೂ ಒಬಾಮ ಪರ ಭಾರತೀಯರು ನಿಂತರು. ಅವರ ಉತ್ಕೃಷ್ಟ ಮಾತುಗಾರಿಕೆ ಕಲೆ ಅವರ ಬಗೆಗಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಜೊತೆಗೆ ಚಿಕ್ಕಂದಿನಲ್ಲಿ ಅವರನ್ನು ಬೆಳೆಸಿದ ಹವಾಯಿಯಲ್ಲಿರುವ ಅಜ್ಜಿಯ ಬಗೆಗಿನ ಅವರ ಬಾಂಧವ್ಯದಲ್ಲಿ ವ್ಯಕ್ತವಾಗುವ ಕುಟುಂಬ ಮೌಲ್ಯಗಳಿಗೆ ಒಬಾಮರ ಬದ್ಧತೆಯೂ ಆಕರ್ಷಣೆಯ ಮತ್ತೊಂದು ಅಂಶವಾಗಿತ್ತು. 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರಿಗೆ ಮತದಾನದ ಅವಕಾಶವೇನಾದರೂ ಇದ್ದಿದ್ದಲ್ಲಿ, ಭಾರತೀಯ ಕೈಗಾರಿಕೋದ್ಯಮದ ಒಕ್ಕೂಟದ ಸದಸ್ಯರು ಹಾಗೂ ನಿವೃತ್ತ ನಾಲ್ವರು ಮಿಲಿಟರಿ ಜನರಲ್‌ಗಳನ್ನು ಹೊರತು ಪಡಿಸಿ ಉಳಿದವರೆಲ್ಲರೂ ಜಾನ್ ಮೆಕೇನ್ ಬದಲಿಗೆ ಒಬಾಮರನ್ನೇ ಆರಿಸಿರುತ್ತಿದ್ದರು.

ಲಕ್ಷಾಂತರ ಭಾರತೀಯರು 2008ರಲ್ಲಿ ಒಬಾಮನನ್ನು ‘ಪ್ರೀತಿಸಿದ್ದರು’. ಹಲವರು ಈಗಲೂ ಅದನ್ನು ಮುಂದುವರಿಸಿದ್ದಾರೆ. ನಮ್ಮ ರಾಷ್ಟ್ರಕ್ಕೆ ಇತ್ತೀಚಿನ ಅವರ ಭೇಟಿ ಸಾಧಿಸಿದಂತಹ ಜನಪ್ರಿಯತೆಯ ದೃಷ್ಟಿಯಿಂದ, ಆ ಭೇಟಿ ದೊಡ್ಡ ಯಶಸ್ಸು ಎಂದೇ ಹೇಳಬಹುದು.  ಇಲ್ಲಿಗೆ ಅವರ ಆಗಮನದ ಮುಂಚೆ, ಬೆಂಗಳೂರಿನ ಸಂಸ್ಥೆಗಳು ಅಮೆರಿಕನ್ ಉದ್ಯೋಗಗಳನ್ನು ಕಸಿಯುತ್ತಿವೆ ಎಂಬಂಥ ದೂರುಗಳನ್ನು  ಪ್ರಸ್ತಾಪಿಸಬಹುದೆಂಬ ಬಗ್ಗೆ ಚಿಂತೆಗಳಿದ್ದದ್ದು ಹೌದು. ಅದೇ ರೀತಿ ಕಾಶ್ಮೀರ ವಿವಾದ ಪರಿಹರಿಸುವಲ್ಲಿ ಅಮೆರಿಕವೂ ಪಾತ್ರ ನಿರ್ವಹಿಸಬಹುದೆಂಬುದನ್ನು ಸೂಚಿಸಲು ‘ಕೆ’ ವಿಚಾರದ ಪ್ರಸ್ತಾಪವಾಗಬಹುದೆಂಬ ಬಗ್ಗೆ ಆತಂಕಗಳೂ ಇದ್ದವು.   ಕಡೆಗೆ ಹೊರಗುತ್ತಿಗೆಯ ವಿಚಾರವನ್ನು ಅವರೇ ಪ್ರಸ್ತಾಪಿಸಲಿಲ್ಲ (ಮತ್ತು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಕುರಿತ ಪ್ರಶ್ನೆಯನ್ನು ನಾಜೂಕಾಗಿ ಬೇರೆಡೆ ತಿರುಗಿಸಿಬಿಟ್ಟರು). ಹಾಗೆಯೇ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಧಾನ ಮಾತುಕತೆಗಳಲ್ಲಿ ತಮ್ಮ ರಾಷ್ಟ್ರ ಮಧ್ಯ ಪ್ರವೇಶಿಸುವುದಿಲ್ಲವೆಂದೂ ಸ್ಪಷ್ಟ ಪಡಿಸಿದರು. ಮುಂಬೈನಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗಿನ ಸಭೆಯಲ್ಲಿ ಒಬಾಮ ಅವರ ನಡವಳಿಕೆಗಳು ಹೃದಯಂಗಮವಾಗಿದ್ದವು. ಭಾರತದ ಸಂಸತ್  ಉದ್ದೇಶಿಸಿ ಮಾಡಿದ ಭಾಷಣ, ಅದರ ಐತಿಹಾಸಿಕ ಉಲ್ಲೇಖಗಳ ವಿಸ್ತಾರ ಹಾಗೂ ಮಹಾತ್ಮ ಗಾಂಧಿ ಇರದಿರುತ್ತಿದ್ದರೆ  ಶ್ವೇತಭವನದಲ್ಲಿ ತಾವು ಇರುವುದು ಸಾಧ್ಯವಿರುತ್ತಿರಲಿಲ್ಲ ಎಂಬಂತಹ ಉದಾರವಾದ ಮಾತುಗಳಿಂದ ಮತ್ತೂ ಹೆಚ್ಚು ಪ್ರಭಾವಶಾಲಿಯಾಗಿತ್ತು.

ಹೀಗಿದ್ದೂ ನನ್ನ ಪ್ರವಾಸಗಳಲ್ಲಿ ನಾನು ಕಂಡುಕೊಂಡಂತೆ, ನಾವೆಷ್ಟು ಗೌರವಾದರಗಳಿಂದ ಅವರನ್ನು ಕಾಣುವುದನ್ನು ಮುಂದುವರಿಸಿದ್ದರೂ, ಅವರದೇ ರಾಷ್ಟ್ರದಲ್ಲಿ ಒಬಾಮರ ಜನಪ್ರಿಯತೆ ಹಾಗೂ ಆಕರ್ಷಣೆ ಇಳಿಮುಖದ ಹಾದಿಯಲ್ಲಿದೆ. ಇತ್ತೀಚಿನ ಚುನಾವಣೆಗಳಲ್ಲಿ ಅವರ ಪಕ್ಷದ ಹಿನ್ನಡೆ ಇದಕ್ಕೆ ಸ್ಪಷ್ಟ ಸಂಕೇತ.  ಜೊತೆಗೆ ಅವರ ನೀತಿಗಳ ಕುರಿತಾಗಿ ಅಮೆರಿಕನ್ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಟೀಕೆಗಳು ಹಾಗೂ ಅಮೆರಿಕನ್ ಸ್ನೇಹಿತರ ಜೊತೆಗಿನ ಮಾತುಕತೆಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳೂ ಇದಕ್ಕೆ ದ್ಯೋತಕ.  ಕಳೆದುಕೊಂಡ ನೆಲೆಯನ್ನು ಅವರು ಒಂದಿಷ್ಟು ಮರು ಪಡೆದುಕೊಳ್ಳುವುದು ಈಗಲೂ ಸಾಧ್ಯವಿದೆ. ಎರಡನೇ ಅವಧಿಗೆ ಮರು ಚುನಾಯಿತರಾಗಲೂಬಹುದು. ಏಕೆಂದರೆ, ವಿಶ್ವಾಸಾರ್ಹವಾದ ರಿಪಬ್ಲಿಕನ್ ಅಭ್ಯರ್ಥಿ ಈಗಲೂ ಲಭ್ಯವಿಲ್ಲ. ಹೀಗಿದ್ದೂ ನನ್ನ ರಾಷ್ಟ್ರದಲ್ಲಿ ಬರಾಕ್ ಒಬಾಮ ಕುರಿತು ಇರುವ ಉನ್ನತ ಅಭಿಪ್ರಾಯ ಹಾಗೂ ಅವರದೇ ರಾಷ್ಟ್ರದಲ್ಲಿ ಅವರ ಕುರಿತು ಇಳಿಮುಖವಾಗುತ್ತಿರುವ ಕೀರ್ತಿಯ ವಿಚಾರಗಳಲ್ಲೇ ಸಿಲುಕಿಕೊಳ್ಳಬಾರದು.

ಈ ಕುರಿತು ಮತ್ತಷ್ಟು ಆಲೋಚಿಸಿದಾಗ, ಈ ವಿಚಾರದಲ್ಲಿ ಒಬಾಮರ ಪರಿಸ್ಥಿತಿ ಮನಮೋಹನ್‌ಸಿಂಗ್‌ಗಿಂತ ಬೇರೆಯದಲ್ಲ ಎಂದು ನನಗನಿಸುತ್ತದೆ. ಎರಡನೇ ಬಾರಿಗೆ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರದೆಂದೂ ಅಧಿಕಾರದ ಓಟದಲ್ಲಿ ಮೃದು ಸವಾರಿ ಆಗಿಲ್ಲ.  ಪರಿಸರ, ನಕ್ಸಲೀಯರು ಹಾಗೂ ಕಾಶ್ಮೀರ ವಿಚಾರಗಳ ನಿರ್ವಹಣೆಯಲ್ಲಿ ಪ್ರತಿಸ್ಪರ್ಧಿ ಸಚಿವರು ಈ ವರ್ಷದ ಆರಂಭದಲ್ಲಿ ಬಹಿರಂಗವಾಗಿಯೇ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಂತೆಯೇ, ತಮ್ಮದೇ ಸಂಪುಟದಲ್ಲಿನ ಭಿನ್ನಮತಗಳನ್ನು ಶಮನಗೊಳಿಸಲು ವಿಫಲರಾಗಿದ್ದಾರೆಂಬ ಟೀಕೆಗಳು ಮನಮೋಹನ್‌ಸಿಂಗ್ ವಿರುದ್ಧ ವ್ಯಕ್ತವಾದವು. ತೀರಾ ಇತ್ತೀಚೆಗೆ, ಕಳಂಕಿತ ಸಚಿವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯಕ್ಕಾಗಿ ಖಂಡನೆಗೊಳಗಾದರು. ಅಧಿಕಾರದ ಮೊದಲ ಅವಧಿಯಲ್ಲಿ ಮಾಧ್ಯಮಗಳು ಡಾ. ಸಿಂಗ್ ಅವರ ಪರ ಇದ್ದವು. ಜೊತೆಗೆ ಮಧ್ಯಮ ವರ್ಗದ ಜನರೂ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದರು. 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ನಿಸ್ಸಂಶಯವಾಗಿ ಇದು ಕೊಡುಗೆ ನೀಡಿತ್ತು. ಈಗ ಕೇವಲ 18 ತಿಂಗಳುಗಳ ನಂತರ, ಮಾಧ್ಯಮಗಳು ಅವರ ವಿರುದ್ಧ ತಿರುಗಿ ಬಿದ್ದಿವೆ. ಜೊತೆಗೆ, ತಾವು ತಪ್ಪೇ ಎಸಗದ ಸ್ವಚ್ಛ ಹಿನ್ನೆಲೆಯವರು ಎಂಬ ಭಾವದೊಳಗೆ, ಭ್ರಷ್ಟ ಸಹೋದ್ಯೋಗಿಗಳಿಗೆ ನೀಡಿದ ಅನುಗ್ರಹ ಹಾಗೂ ಈ ದಿಸೆಯಲ್ಲಿನ ಅವರ ಸಹನಶೀಲತೆಯನ್ನು ಕ್ಷಮಿಸಲು ಮಧ್ಯಮ ವರ್ಗದ ಜನರೂ ಇಷ್ಟ ಪಡುತ್ತಿಲ್ಲ.

ಇದೇ ಸಂದರ್ಭದಲ್ಲಿ ಡಾ ಸಿಂಗ್ ಅವರ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಪಾರ ಮೆಚ್ಚುಗೆ ಇದೆ. ಅವರ ವೈಯಕ್ತಿಕ ಪ್ರಾಮಾಣಿಕತೆ ಹಾಗೂ ಬೌದ್ಧಿಕ ಸಾಮರ್ಥ್ಯಗಳಿಗಾಗಿ ಪ್ರಭಾವಿ ಪತ್ರಿಕೆಗಳು ಅವರನ್ನು ಹೊಗಳಿ ಬರೆಯುತ್ತವೆ.  ಈ ಮಾಧ್ಯಮಗಳಿಗೆ ಸಿಂಗ್ ಅವರು ಕಳ್ಳರ ನಡುವೆ ಒಳ್ಳೆಯ ಮನುಷ್ಯ. ಮತಿಗೇಡಿಗಳ ನಡುವಿನ ಚಿಂತಕ. ಎರಡೂ ನೆಲೆಗಳಲ್ಲಿ ವಿಶಿಷ್ಟವೆನಿಸುವ ಇವರನ್ನು ಏಷ್ಯಾ ಹಾಗೂ ಆಫ್ರಿಕಾ ದೇಶಗಳಿಗೆ ಮಾದರಿ ನಾಯಕನಾಗಿ ಎತ್ತಿ ಹಿಡಿಯಲಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಈ ರಾಷ್ಟ್ರಗಳ ನಾಯಕರಿಗೆ ತಮ್ಮದೇ ರಾಷ್ಟ್ರಗಳ ಇತಿಹಾಸ ಅಥವಾ ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ ಉದಯವಾಗುತ್ತಿರುವ ಅವುಗಳ  ಸ್ಥಾನಮಾನಗಳ ಬಗ್ಗೆ ಸಮರ್ಪಕ ಅರಿವೇ ಇರುವುದಿಲ್ಲ. ಪಶ್ಚಿಮ ರಾಷ್ಟ್ರಗಳ ಜನಸಾಮಾನ್ಯರು ಭಾರತೀಯ ರಾಜಕಾರಣ ಅಥವಾ ಭಾರತೀಯ ರಾಜಕಾರಣಿಗಳ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಗಮನವನ್ನೇನೂ ನೀಡುವುದಿಲ್ಲ. ಆದರೆ ಯೂರೋಪ್ ಹಾಗೂ ಉತ್ತರ ಅಮೆರಿಕಗಳಲ್ಲಿರುವ ನಾಯಕರು ಹಾಗೂ ಅಭಿಪ್ರಾಯ ರೂಪಿಸುವವರು ಡಾಮನಮೋಹನ್ ಸಿಂಗ್ ಅವರನ್ನು ‘ಪ್ರೀತಿಸುತ್ತಾರೆ’.

ಹೀಗಾಗಿ, ಅಮೆರಿಕದ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿಯ ಕೀರ್ತಿಯ ವಿಚಾರದಲ್ಲಿ ಒಂದು ಬಗೆಯ ಸಮಾನತೆಯ ಅಂಶಗಳಿವೆ. ಇಬ್ಬರನ್ನೂ ವಿದೇಶಗಳಲ್ಲಿ ಶ್ಲಾಘಿಸಲಾಗುತ್ತದೆ. ಆದರೆ ಅವರವರದೇ ದೇಶಗಳಲ್ಲಿ ಟೀಕೆಗಳಿವೆ. ಈ ವೈರುಧ್ಯ, ನವೆಂಬರ್ ತಿಂಗಳ ಎರಡನೇ ವಾರದಲ್ಲಿ ನವದೆಹಲಿಯಲ್ಲಿ ಪರಸ್ಪರರ ಬಗೆಗಿನ ಆತ್ಮೀಯತೆ ಬಹಿರಂಗವಾಗಿ ಪ್ರದರ್ಶಿತಗೊಂಡಿದ್ದಕ್ಕೆ ವಿವರಣೆ ನೀಡುತ್ತದೆ. ಬರಾಕ್ ಒಬಾಮ ಹಾಗೂ ಮನಮೋಹನ್ ಸಿಂಗ್ ತಮ್ಮದೇ ದೇಶಿ ನೆಲಗಳಲ್ಲಿ ತಮ್ಮವರ ಹೃದಯ, ಮನಸ್ಸುಗಳಲ್ಲಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಿದ್ದರೂ, ಪರಸ್ಪರರ ರಾಷ್ಟ್ರಗಳಲ್ಲಿ ತಮ್ಮ ಕುರಿತಂತೆ ಜನರಿಗಿರುವ ಆಕರ್ಷಣೆಯಿಂದ ಇಬ್ಬರೂ ಸಮಾಧಾನ ಪಟ್ಟುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.