ಮಂಗಳವಾರ, ನವೆಂಬರ್ 12, 2019
27 °C

ಇಳಿಯದ ಹೆಲಿಕಾಪ್ಟರ್: ಕುಮಾರಸ್ವಾಮಿ ಗೊಂದಲ

Published:
Updated:

ಗಂಗಾವತಿ: ಹೆಲಿಕಾಪ್ಟರ್ ನಿಗದಿಗೊಳಿಸಿದ ಸ್ಥಳದಲ್ಲಿ ಇಳಿಯದೆ ಆಗಸದಲ್ಲಿ ಸುತ್ತು ಹಾಕಿದ್ದರಿಂದ ಸ್ವತಃ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾದ ಘಟನೆ ಮಂಗಳವಾರ ಇಲ್ಲಿ ನಡೆಯಿತು.ಕೊನೆಗೆ ಕಾಪ್ಟರ್‌ನ ಕ್ಯಾಪ್ಟನ್ ಜಾಣ್ಮೆ ಮೆರೆದು ಗಂಗಾವತಿಯ ಹೆಲಿಪ್ಯಾಡಿನಲ್ಲಿ ಸುರಕ್ಷಿತವಾಗಿ ಎಚ್‌ಡಿಕೆ ಅವರನ್ನು ಇಳಿಸಿದಾಗ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು.ಗೊಂದಲಕ್ಕೆ ಕಾರಣ: ಮಂಗಳವಾರ ಕುಷ್ಟಗಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಆಗಮಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಕುಷ್ಟಗಿ ಕಾರ್ಯಕ್ರಮವನ್ನು ದಿಢೀರನೇ ತಾವರಗೇರಾಕ್ಕೆ ಬದಲಿಸಲಾಗಿತ್ತು.ಕಾರ್ಯಕ್ರಮ ಬದಲಾವಣೆ ಕುಮಾರಸ್ವಾಮಿ ಗಮನಕ್ಕೇ ಬಂದಿರಲಿಲ್ಲ. ಹೆಲಿಕಾಪ್ಟರ್ ಕುಷ್ಟಗಿಯಲ್ಲಿ ಇಳಿಯಲು ಅನುಮತಿ ಪಡೆಯಲಾಗಿತ್ತು. ಆದರೆ ಬದಲಾವಣೆ ಹೆಲಿಕಾಪ್ಟರ್‌ನ ಕ್ಯಾಪ್ಟನ್ ಗಮನಕ್ಕೆ ತಂದಿರಲಿಲ್ಲ. ಬಳಿಕ ಅನಿವಾರ್ಯವಾಗಿ ಗಂಗಾವತಿಯಲ್ಲಿ ಅನುಮತಿ ಪಡೆದು ಇಳಿಸಲಾಯಿತು.  ಗಂಗಾವತಿ ಹೆಲಿಪ್ಯಾಡಿನಲ್ಲಿ ಎಚ್ಡಿಕೆ ಅವರಿದ್ದ ಹೆಲಿಕಾಪ್ಟರ್ ಇಳಿಸುವ ಸಂಬಂಧ ಜಿಲ್ಲಾಡಳಿತದಿಂದ ಅನುಮತಿ ಪಡೆಯುವವರೆಗೂ ಹೆಲಿಕಾಪ್ಟರ್ ಆಗಸದಲ್ಲಿ ಗಿರಕಿ ಹೊಡೆಯುತ್ತಾ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.

`ಸಿದ್ದರಾಮಯ್ಯ ಬುದ್ಧಿವಂತ'

ಗಂಗಾವತಿ: ಇತರ ಪಕ್ಷದೊಂದಿಗೆ ಹೊಂದಾಣಿಕೆ, ಆಂತರಿಕ ಒಪ್ಪಂದ ಮಾಡಿಕೊಳ್ಳುವ ವಿಚಾರದಲ್ಲಿ ಸಿದ್ದರಾಮಯ್ಯ ನಮಗಿಂತ ಹೆಚ್ಚು ಬುದ್ಧಿವಂತರು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಬಿಜೆಪಿ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಂಡು ಇರಬೇಕು ಎಂಬುದು ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ ಎಂದರು.

 

ಪ್ರತಿಕ್ರಿಯಿಸಿ (+)