ಇಳುವರಿ ಅಂತರ: ಪ್ರಧಾನಿ ಕಳವಳ

7

ಇಳುವರಿ ಅಂತರ: ಪ್ರಧಾನಿ ಕಳವಳ

Published:
Updated:

ನವದೆಹಲಿ (ಪಿಟಿಐ): ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸುವ ಇಳುವರಿಗೂ ರೈತರು ಹೊಲದಲ್ಲಿ ಬೆಳೆಯುವ ಬೆಳೆಯ ಇಳುವರಿಗೂ ಬಹಳ ಅಂತರವಿದೆ. ಇದಕ್ಕೆ ಆಡಳಿತ ಯಂತ್ರದ ವೈಫಲ್ಯವೇ ಕಾರಣ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು.ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸ್ವರ್ಣ ಮಹೋತ್ಸವ ಸಂದರ್ಭದ ಘಟಿಕೋತ್ಸವದಲ್ಲಿ ಮಾತನಾಡಿದ ಪ್ರಧಾನಿ, ಕಳೆದ ಐದು ವರ್ಷಗಳಲ್ಲಿ ದೇಶದ ಕೃಷಿ ರಂಗವು ವಾರ್ಷಿಕ ಶೇ 3.5ರಷ್ಟು ಅಭಿವೃದ್ಧಿ ಸಾಧಿಸಿ ಉತ್ತಮ ಸಾಧನೆಗೈದಿದೆ ಎಂದರು.ಆದರೆ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಇಳುವರಿಯನ್ನು ರೈತರ ಹೊಲಕ್ಕೆ ತಲುಪಿಸಲು ಆಡಳಿತ ಯಂತ್ರ ವಿಫಲವಾಗಿದೆ. ಸಂಶೋಧಕರು ಅಭಿವೃದ್ಧಿಪಡಿಸುವ ಇಳುವರಿ ಪ್ರಮಾಣವನ್ನು ರೈತರು ಹೊಲದಲ್ಲೂ ಪಡೆಯುವಂತಾಗಬೇಕು ಎಂದರು. ಇದಕ್ಕಾಗಿ ಆಡಳಿತ ಯಂತ್ರ ಆದ್ಯತೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನಿ ಸಲಹೆ ಮಾಡಿದರು.ಕೃಷಿ ಕ್ಷೇತ್ರದ ವ್ಯಾಪಾರ ವಹಿವಾಟು ಹೆಚ್ಚಳಕ್ಕೆ ತೆಗೆದುಕೊಂಡ ಕ್ರಮಗಳು ಫಲ ನೀಡುತ್ತಿವೆ. ಈ ಬಾರಿ 25 ಕೋಟಿ ಟನ್ ಆಹಾರಧಾನ್ಯ ಉತ್ಪಾದನೆಯಾಗುವ ನಿರೀಕ್ಷೆ ಇದ್ದು, ಸಾರ್ವಕಾಲಿಕ ದಾಖಲೆಯಾಗಲಿದೆ ಎಂದು ಹೇಳಿದರು.12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ (2012-2017) ಕೃಷಿ ಕ್ಷೇತ್ರದ ವಾರ್ಷಿಕ ಬೆಳವಣಿಗೆಯ ಗುರಿ ಶೇಕಡಾ 4. ಈ ಗುರಿಯನ್ನು ತಲುಪಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ಸೂಚಿಸಿದರು.ಮಿತವಾದ ನೈಸರ್ಗಿಕ ಸಂಪನ್ಮೂಲ ಮತ್ತು ಹೆಚ್ಚುತ್ತಿರುವ ಆಹಾರಧಾನ್ಯಗಳ ಬೇಡಿಕೆಯ ಹಿನ್ನೆಲೆಯಲ್ಲಿ  ಭೂಮಿಯ ಫಲವತ್ತತೆ ಹೆಚ್ಚಿಸಲು ಮತ್ತು ಕಡಿಮೆ ನೀರು ಬಳಸಿ ಬೆಳೆ ತೆಗೆಯುವ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ವಿಜ್ಞಾನಿಗಳಿಗೆ ಕರೆ ನೀಡಿದರು.ಮುಂದಿನ 10 ವರ್ಷಗಳಲ್ಲಿ ದೇಶದ ಆಂತರಿಕ ಆಹಾರಧಾನ್ಯ ಬೇಡಿಕೆಯು 5 ಕೋಟಿ ಟನ್‌ಗಳಷ್ಟು ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದ್ದು, ಈ ಬೇಡಿಕೆ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ಸಿಂಗ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry