ಶನಿವಾರ, ಏಪ್ರಿಲ್ 17, 2021
30 °C

ಇಳುವರಿ ಆಧಾರಿತ ಕಬ್ಬು ದರ ನಿಗದಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳುವರಿ ಆಧಾರಿತ ಕಬ್ಬು ದರ ನಿಗದಿಗೆ ಆಗ್ರಹ

ಚಾಮರಾಜನಗರ: ಇಳುವರಿ ಆಧಾರದ ಮೇಲೆ ಪ್ರತಿಟನ್ ಕಬ್ಬಿಗೆ ಬೆಲೆ ನಿಗದಿಪಡಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆ ಗಳನ್ನು ಮುಖಂಡರು ಬಿಡಿಸಿಟ್ಟರು. ಶೇ. 9.5ರಷ್ಟು ಇಳುವರಿ ಹೊಂದಿರುವ ಒಂದು ಟನ್ ಕಬ್ಬಿಗೆ 3 ಸಾವಿರ ರೂ ದರ ನಿಗದಿ ಪಡಿಸಬೇಕು. ಜಿಲ್ಲೆಯಲ್ಲಿ ಶೇ. 11.5ರಷ್ಟು ಇಳುವರಿಯಿದೆ. ಹೀಗಾಗಿ, ಇಳುವರಿ ಆಧಾರದ ಮೇಲೆ ದರ ನಿಗದಿಪಡಿಸಬೇಕು. ಆ. 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರು ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿಯವರ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ಈ ಹಿಂದೆ ನಡೆದ ಸಭೆಯಲ್ಲಿ ಇಳುವರಿ ಆಧಾರದ ಮೇಲೆ ಹೆಚ್ಚುವರಿ ಸಹಾಯಧನ ನೀಡುವ ಬಗ್ಗೆ ಕಾರ್ಖಾನೆ ಮಾಲೀಕರೇ ಲಿಖಿತವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ, 2010-11ನೇ ಸಾಲಿನಡಿ 100 ರೂ ಸಹಾಯಧನ ನೀಡಬೇಕಿದೆ. ಈ ಅವಧಿಯ ಒಟ್ಟು 16 ಕೋಟಿ ಹಣ ಬಾಕಿಯಿದೆ. 2011-12ನೇ ಸಾಲಿನಡಿ 500 ರೂ ಸಹಾಯ ಧನ ನಿಗದಿಪಡಿಸಲಾಗಿತ್ತು. ಹೀಗಾಗಿ, 80 ಕೋಟಿ ಹಣ ಬೆಳೆಗಾರರಿಗೆ ಇಂದಿಗೂ ಪಾವತಿಯಾಗಿಲ್ಲ. ಬಣ್ಣಾರಿ ಅಮ್ಮನ್ ಮತ್ತು ಮಹದೇಶ್ವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಕೂಡಲೇ ಬಾಕಿ ಹಣ ಪಾವತಿಸಲು ಜಿಲ್ಲಾಧಿಕಾರಿ ಗಳು ಸೂಚಿಸಬೇಕು ಎಂದು ಆಗ್ರಹಿಸಿದರು.ರೈತ ಸಂಘದ ಮುಖಂಡ ಎ.ಎಸ್. ಚನ್ನಬಸಪ್ಪ ಮಾತನಾಡಿ, `ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಪ್ಪಂದ ಏರ್ಪಡಬೇಕಿದೆ. ಆಗಮಾತ್ರ ಸೂಕ್ತ ಬೆಲೆ ಸಿಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು~ ಎಂದು ಒತ್ತಾಯಿಸಿದರು.ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, `ಎಸ್‌ಎಪಿ ಕಾಯ್ದೆ ಜಾರಿಗೆ ಸರ್ಕಾರ ಹಿಂದೇಟು ಹಾಕಿದೆ. ಇದರಿಂದ ರಾಜ್ಯದಲ್ಲಿ ಏಕರೂಪ ಕಬ್ಬಿನ ಬೆಲೆ ನಿಗದಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಕಾಯ್ದೆಯ ಜಾರಿಗೆ ಕ್ರಮಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.ಮುಖಂಡರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆ.ಆರ್. ಸುಂದರ್, `ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿವಿದೆ. ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.ದ್ವಿಪಕ್ಷೀಯ ಒಪ್ಪಂದ ಜಾರಿಗೊಳಿಸಲು ಕಾರ್ಖಾನೆಗಳಿಗೆ ಸೂಚನೆ ನೀಡಲಾಗುವುದು~ ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಹೆಬ್ಬಸೂರು ಬಸವಣ್ಣ, ಹೊನ್ನೂರು ಪ್ರಕಾಶ್, ಅಣಗಳ್ಳಿ ಬಸವರಾಜು, ಮೂಕಹಳ್ಳಿ ಮಹದೇವಸ್ವಾಮಿ, ದೇವರಾಜು, ಪುಟ್ಟರಾಜು, ನಾಗರಾಜು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಸಿ. ಮಹದೇವಪ್ಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ಸಭೆಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.