ಬುಧವಾರ, ಮೇ 25, 2022
29 °C

ಇಳುವರಿ ಹೆಚ್ಚಳಕ್ಕೆ ಕುಡಿ ಜಿಗುಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಸಸ್ಯಗಳ, ವಿಶೇಷವಾಗಿ ತರಕಾರಿ ಸಸ್ಯಗಳ ಕುಡಿ ಜಿಗುಟಿದರೆ ಅವು ಸಮೃದ್ಧವಾಗಿ ಬೆಳೆಯುತ್ತವೆ. ಸಸ್ಯ ಸಮೃದ್ಧವಾಗಿ ಬೆಳೆದರೆ ಅದರ ಇಳುವರಿ ಹೆಚ್ಚುತ್ತದೆ. ಇದು ಬಹುತೇಕ ರೈತರಿಗೆ ಗೊತ್ತಿದೆ. ಕುಡಿ ಜಿಗುಟುವುದರಿಂದ ತರಕಾರಿ ಹಾಗೂ ಇತರ ಬೆಳೆಗಳ ಇಳುವರಿ ಹೆಚ್ಚಿಸಿಕೊಳ್ಳಬಹುದು.ಮೆಣಸಿನಕಾಯಿ, ಬೆಂಡೆ, ಹರಳು, ಚೆಂಡು ಹೂ, ತೊಗರಿ, ಬದನೆ, ಚೌಳೆ, ಟೊಮೆಟೊ, ಕಡಲೆ ಮತ್ತಿತರ ಸಸ್ಯಗಳ ಕುಡಿಗಳನ್ನು ಸೂಕ್ತ ಸಮಯದಲ್ಲಿ ಜಿಗುಟುವುದರಿಂದ ಸಸ್ಯ ಹೆಚ್ಚು ಕವಲೊಡೆದು ಬೆಳೆಯುತ್ತದೆ.ಮೆಣಸಿನಕಾಯಿ, ಬದನೆ ಮತ್ತು ಟೊಮೆಟೊಗಳ ಸಸಿ ಮಡಿಯಲ್ಲಿಯೇ ಕುಡಿ ಜಿುಟುವ ಪದ್ಧತಿ ತುಮಕೂರು ಜಿಲ್ಲೆಯಲ್ಲಿದೆ. ಸಸಿಗಳ ಬೆಳವಣಿಗೆ ಕುಂಠಿತವಾಗಿದ್ದರೆ ನಾಟಿ ಮಾಡಿದ ಕೆಲ ದಿವಸಗಳ ನಂತರ ಕುಡಿ ಜಿಗುಟುವ ಪದ್ಧತಿ ರೂಢಿಯಲ್ಲಿದೆ. ಮಡಿಗಳಲ್ಲಿರುವ ಸಸಿಗಳ ಕುಡಿ ಜಿಗುಟಿದ ಒಂದು ವಾರದ ನಂತರ ನಾಟಿ ಮಾಡುವ ರೈತರಿದ್ದಾರೆ.ಮೆಣಸಿನಕಾಯಿ ಸಸಿಗಳನ್ನು ಮುಖ್ಯ ಬೆಳೆಯಾಗಿ ನಾಟಿ ಮಾಡಿ ಅದೇ ತಾಕಿನಲ್ಲಿ ಮಿಶ್ರ ಬೆಳೆಯಾಗಿ ಬೆಂಡೆ ಬೀಜ ಬಿತ್ತುವ ಪದ್ಧತಿ ಜಿಲ್ಲೆಯಲ್ಲಿದೆ. ‘ಮುಳ್ಳು ಬೆಂಡೆ’ (ನಾಟಿತಳಿ) ಬೀಜಗಳನ್ನು ಮೆಣಸಿನ ಸಸಿಗಳನ್ನು ನಾಟಿ ಮಾಡಿದ ವಾರದ ನಂತರ ತಾಕಿನ ಮಧ್ಯದ ಕಿರು ಬದುಗಳ ಮೇಲೆ ಊರುತ್ತಾರೆ.

ಸಸಿ ಮೊಳೆತು ಅಂದಾಜು ಒಂದು ತಿಂಗಳ ನಂತರ ಅಥವಾ ಸಸಿ ಒಂದು ಅಡಿ ಬೆಳೆದ ನಂತರ ಕುಡಿ ಜಿಗುಟುತ್ತಾರೆ. ಕುಡಿ ಜಿಗುಟಿದ 10-15 ದಿನಗಳಲ್ಲಿ ಜಿಗುಟಿದ ಭಾಗದ ಕೆಳಗೆ ಗೆಣ್ಣುಗಳಲ್ಲಿ ಹಲವು ಕವಲುಗಳು ಒಡೆಯುತ್ತವೆ.

ಕುಡಿ ಜಿಗುಟದಿದ್ದರೆ ಒಂದೋ ಎರಡೊ ಕವಲುಗಳು ಬಂದು ಗಿಡ ನೆಟ್ಟಗೆ ಬೆಳೆಯುತ್ತದೆ. ಕುಡಿ ಜಿಗುಟುವುದರಿಂದ ಹತ್ತಾರು ಕವಲುಗಳೊಡೆದು ಬೆಂಡೆ ಗಿಡ ಸಣ್ಣ ಪೊದೆಯಂತೆ ಬೆಳೆಯುತ್ತದೆ. ಇದರಿಂದ ಹೆಚ್ಚು ಕಾಯಿಗಳನ್ನು ಕಚ್ಚಲು ಸಹಾಯಕವಾಗುತ್ತದೆ.ಹರಳನ್ನು ಮುಖ್ಯ ಬೆಳೆಯ ಅಂಚುಗಳಲ್ಲಿ ಬೆಳೆಯುವ ಪದ್ಧತಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿದೆ. ಬಿರು ಗಾಳಿ ಹಾಗೂ ದನಕರುಗಳಿಂದ ಮುಖ್ಯ ಬೆಳೆಯನ್ನು ರಕ್ಷಿಸಲು ಹರಳು ಸಹಾಯಕ. ಬಿತ್ತನೆ ಮಾಡಿದ ನಂತರ ಹರಳು ಸಸಿಗಳ ಕುಡಿಗಳನ್ನೂ ಜಿಗುಟುತ್ತಾರೆ. ಮೆಣಸಿನ ಹೊಲದ ನಡುವೆ ಅಲ್ಲಲ್ಲಿ ಚೆಂಡು ಹೂ ಬೆಳೆಯುತ್ತಾರೆ.

ಚೆಂಡು ಹೂವನ್ನು ಏಕ ಬೆಳೆಯಾಗಿ ಹಾಕಿದಾಗಲೂ ಕುಡಿ ಜಿಗುಟುತ್ತಾರೆ. ಕುಡಿ ಜಿಗುಟುವ ಕೆಲಸವನ್ನು ಸಾಮಾನ್ಯವಾಗಿ ರೈತನ ಮನೆಯವರೇ ಮಾಡುತ್ತಾರೆ. ನಿತ್ಯ ಹೊಲಗಳಲ್ಲಿ ಅಡ್ಡಾಡುತ್ತ, ಬೆಳೆ ಪರಿಶೀಲನೆ ಮಾಡುವಾಗ ಕುಡಿ ಜಿಗುಟುವ ಪದ್ಧತಿ ಇದೆ.ಕಡಲೆ ಸಸಿಗಳ ಕುಡಿ ಚಿಗುಟಿದ ಎಳೆಯ ಸೊಪ್ಪನ್ನು ತಿಪ್ಪೆಗೆ ಎಸೆಯುವುದಿಲ್ಲ. ಎಳೆಯ ಚಿಗುರನ್ನು ಇತರ ಸೊಪ್ಪುಗಳ ಜತೆಯಲ್ಲಿ ಸೇರಿಸಿ ಸಾರು ಮಾಡುತ್ತಾರೆ. ಕಡಲೆ ಸಸಿಗಳ ಕುಡಿ ಜಿಗುಟಲು ಗ್ರಾಮದ ಜನರು ಮುಗಿ ಬೀಳುವ ದೃಶ್ಯ ಕಡಲೆ ಬೆಳೆಯುವ ಪ್ರದೇಶದಲ್ಲಿ ನೋಡಬಹುದು.ಕುಡಿ ಜಿಗುಟುವ ಸರಳ ವಿಧಾನ ಅನುಸರಿಸುವುದರಿಂದ ಪ್ರತಿ ಗಿಡಕ್ಕೆ ನೂರು ಗ್ರಾಂನಷ್ಟು ಇಳುವರಿ ಹೆಚ್ಚಿದರೂ ಎಷ್ಟೊಂದು ಲಾಭದಾಯಕ ಅಲ್ಲವೇ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.