ಇಳೆಯ ಕೊಳೆ ತೊಳೆದ ವರ್ಷಧಾರೆ

7

ಇಳೆಯ ಕೊಳೆ ತೊಳೆದ ವರ್ಷಧಾರೆ

Published:
Updated:

ಹಾಸನ: ಬಹಳ ದಿನಗಳ ಅಂತರದ ಬಳಿಕ ಹಾಸನದಲ್ಲಿ ಭಾನುವಾರ ಸಂಜೆ ಚೆನ್ನಾಗಿ ಮಳೆಯಾಗಿದೆ. ಶನಿವಾರವೂ ಒಂದಿಷ್ಟು ಹನಿದು ಹೋಗಿದ್ದರೂ ಹೇಳಿಕೊಳ್ಳುವಂಥ ಮಳೆಯಾಗಿರಲಿಲ್ಲ. ಭಾನುವಾರದ ಮಳೆ ರಜೆಯ ಮಜಾ ಅನುಭವಿಸುತ್ತಿದ್ದ ಅನೇಕರಿಗೆ ಸ್ವಲ್ಪ ಅಡ್ಡಿ ಉಂಟುಮಾಡಿದೆ.ಕಳೆದ ವರ್ಷ ಮಳೆಗಾಲದ ಕೊನೆಯ ದಿನಗಳಲ್ಲಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿತ್ತು. ಭಾನುವಾರದ ಮಳೆ ಅಂಥ ಅನಾಹುತ ಸೃಷ್ಟಿಸದಿದ್ದರೂ, ಅನೇಕ ಮನೆಗಳಿಗೆ ನೀರು ನುಗ್ಗಿ ಜನರು ಕಷ್ಟ ಅನುಭವಿಸುವಂತಾಗಿದೆ.ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮಳೆಗಾಲ ಮುಗಿದೇಹೋಯಿತು ಅನ್ನುವ ವಾತಾವರಣ ನಿರ್ಮಾಣವಾಗಿತ್ತು. ಭಾನುವಾರ ಮಳೆಯಾಗಿದ್ದರಿಂದ ಛತ್ರಿ ಇಲ್ಲದೆ ಮಾರುಕಟ್ಟೆಗೆ ಬಂದಿದ್ದವರೆಲ್ಲ ಆಶ್ರಯಕ್ಕಾಗಿ ಅಂಗಡಿ ಮುಂಗಟ್ಟುಗಳನ್ನು ಆಶ್ರಯಿಸಬೇಕಾಗಿ ಬಂತು. ತಗ್ಗು ಪ್ರದೇಶದಲ್ಲಿ ವಾಸಿಸುವರು ಮಾತ್ರ ಕಳೆದ ವರ್ಷದ ಮಳೆಯನ್ನು ಒಮ್ಮೆ ನೆನಪಿಸಿಕೊಂಡರು.ಭಾನುವಾರ ಚೆನ್ನಾಗಿ ಮಳೆಯಾಗಿದೆಯೇ ವಿನಾ ಭೀಕರವಾದಂಥ ಮಳೆಯಾಗಿಲ್ಲ. ಆದರೆ ಚರಂಡಿಗಳಲ್ಲಿ ಇದ್ದ ಬದ್ದ ಕಸ-ಕಡ್ಡಿ ತುಂಬಿದ್ದರಿಂದ ನೀರು ಸರಾಗವಾಗಿ ಹರಿಯದೆ ತೊಂದರೆಯಾಗಿದೆ. ಕಸ್ತೂರಬಾ ರಸ್ತೆ ಸೇರಿದಂತೆ ಹಳೆಯ ಹಾಸನದ ಅನೇಕ ಭಾಗಗಳಲ್ಲಿ ಈ ಸಮಸ್ಯೆ ನಿರ್ಮಾಣವಾದರೆ ಅತ್ಯಂತ ಸುಸಜ್ಜಿತ ಬಡಾವಣೆಗಳಲ್ಲೊಂದು ಎನಿಸಿದ ಕೆ.ಆರ್. ಪುರಂನಲ್ಲೂ ಭಾನುವಾರ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಈಚೆಗೆ ಇಲ್ಲಿ ನಡೆಸಿದ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.ಚರಂಡಿ ಕಾಮಗಾರಿ ನಡೆಸಿದವರು ರಸ್ತೆಯ ನೀರು ಸುಸೂತ್ರವಾಗಿ ಚರಂಡಿ ಸೇರುವ ವ್ಯವಸ್ಥೆ ಮಾಡಿಲ್ಲ. ಒಂದೆಡೆ ಕಸಕಡ್ಡಿಗಳಿಂದ ಚರಂಡಿಗಳು ಮುಚ್ಚಿದ್ದರೆ ಇನ್ನೊಂದೆಡೆ ರಸ್ತೆಯ ನೀರು ಚರಂಡಿಗೆ ಹೋಗಲು ವ್ಯವಸ್ಥೆ ಇಲ್ಲದಂತಾಗಿ ಸಮಸ್ಯೆ ಉಂಟಾಗಿದೆ ಎಂದು ನಾಗರಿಕರು ದೂರಿದರು.ಕಳೆದ ಕೆಲವು ದಿನಗಳಿಂದ ಬಡವರ ಊಟಿ ಎನಿಸಿರುವ ಹಾಸನದಲ್ಲಿ ವಿಪರೀತ ಸೆಖೆಯ ವಾತಾವರಣ ನಿರ್ಮಾಣವಾಗಿತ್ತು. ಭಾನುವಾರ ಸುರಿದ ಮಳೆ ನಗರಕ್ಕೆ ಒಂದಿಷ್ಟು ತಂಪೆರಚಿದೆ.ಸಕಲೇಶಪುರ ವರದಿ: ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ, ಭಾನುವಾರ ಮಧ್ಯಾಹ್ನ ಸತತ ಒಂದು ಘಂಟೆಗಳ ಕಾಲ ಸುರಿದು ಹೋಯಿತು.ಮಧ್ಯಾಹ್ನ 2 ರಿಂದ 3 ಗಂಟೆವರೆಗೆ 40ಮಿ.ಮೀ. ಗೂ ಹೆಚ್ಚು ಮಳೆಯಾಗಿದ್ದು, ಚರಂಡಿಗಳು ಭರ್ತಿ ಯಾಗಿ ರಸ್ತೆಗಳ ಮೇಲೆ ಮಳೆ ನೀರು ಹೊಳೆಯಂತೆ ಹರಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾ ಯಿತು. ಹಳೆ ಬಸ್ಸು ನಿಲ್ದಾಣದಿಂದ ಟೋಲ್‌ಗೇಟ್‌ವರೆಗೂ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ವ್ಯವಸ್ಥಿತ ಚರಂಡಿ ಇಲ್ಲದೆ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿ ಧಾರಾಕಾರವಾಗಿ ಹರಿಯುತ್ತಿತ್ತು.ಗುಂಡಿಗಳಾಗಿರುವ ರಸ್ತೆಯಲ್ಲಿ ವಾಹನ  ಚಲಿಸಲ ಹರಸಾಹಸಪಡಬೇಕಾಯಿತು.  ಹಳೆ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಗುದಾಣ ಇಲ್ಲದಿರುವುದರಿಂದ ಅಂಗಡಿ, ಮುಂಗಟ್ಟುಗಳ ಮುಂದೆ ಗುಂಪು ಗುಂಪಾಗಿ ನಿಂತು ಮಳೆಯಿಂದ ರಕ್ಷಣೆ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry