ಇವರಿಗೆ ಬೆಂಕಿ ಹಾಕ: ನಿಸಾರ್‌ ಟೀಕೆ

7
ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ: ವಿಳಂಬಕ್ಕೆ ಕಿಡಿ

ಇವರಿಗೆ ಬೆಂಕಿ ಹಾಕ: ನಿಸಾರ್‌ ಟೀಕೆ

Published:
Updated:
ಇವರಿಗೆ ಬೆಂಕಿ ಹಾಕ: ನಿಸಾರ್‌ ಟೀಕೆ

ಬೆಂಗಳೂರು: ‘ಹಣದ ಹೊಳೆ ಹರಿಯುವ ಸಂಸ್ಥೆ­ಗ­ಳಿಗೆ ಅಧ್ಯಕ್ಷರನ್ನು ಸರ್ಕಾರ ಶೀಘ್ರ ನೇಮಕ ಮಾಡು­ತ್ತದೆ. ಆದರೆ, ವಿವಿಧ ಅಕಾಡೆಮಿಗಳಿಗೆ 2 ವರ್ಷಗಳಿಂದ ಅಧ್ಯಕ್ಷರನ್ನೇ ನೇಮಿಸಿಲ್ಲ. ಇವರಿಗೆ ಬೆಂಕಿ ಹಾಕ’ ಎಂದು ಹಿರಿಯ ಕವಿ ಕೆ.ಎಸ್‌.ನಿಸಾರ್‌ ಅಹಮದ್ ಅವರು ರಾಜ್ಯ ಸರ್ಕಾರದ ಧೋರಣೆ­ಯನ್ನು ಕಟುವಾಗಿ ಟೀಕಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಯನ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಎಚ್.­ಎಸ್‌.­ವೆಂಕಟೇಶ­ಮೂರ್ತಿ ಅವರ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸಾಹಿತ್ಯ ಅಕಾಡೆಮಿ, ಯಕ್ಷಗಾನ ಮತ್ತಿತರ ಅಕಾಡೆಮಿ­ಗಳ ಅಧ್ಯಕ್ಷರ ನೇಮಕಕ್ಕೆ ವಿಳಂಬ ಮಾಡಲಾಗುತ್ತಿದೆ. ಎಲ್ಲ ಅಕಾಡೆಮಿಗಳಿಗೆ ಕೂಡಲೇ ಅಧ್ಯಕ್ಷ­ರನ್ನು ನೇಮಿಸಬೇಕು’ ಎಂದು ಅವರು ಒತ್ತಾಯಿಸಿದರು. ಹಿರಣ್ಯಾಕ್ಷ ಮನೋಭಾವ: ರಾವಣ ಸೀತೆಯ ಮೇಲೆ ಮಾತ್ರ ಕಣ್ಣು ಹಾಕಿದ. ಆದರೆ, ಹಿರಣ್ಯಾಕ್ಷ ಭೂ­ಮಂಡಲ­ವನ್ನೇ ಕಬಳಿಸ­ಬೇಕು ಎಂಬ ಮನೋಭಾವ ಬೆಳೆಸಿ­ಕೊಂಡಿದ್ದ. ಸಮಾಜ­­ದಲ್ಲಿ ಈಗ ಹಿರಣ್ಯಾಕ್ಷ ಮನೋಭಾವ ಹೆಚ್ಚುತ್ತಿದೆ ಎಂದು ನಿಸಾರ್‌ ಕಳವಳ ವ್ಯಕ್ತಪಡಿಸಿದರು.ಸಾತ್ವಿಕ ಕೋಪ: ಪರಂಪರೆಯಲ್ಲಿ ಕಾಲೂರಿ ಆಧುನಿ­ಕತೆ ಕಡೆಗೆ ನೋಡಿದವರು ಎಚ್ಎಸ್‌ವಿ. ಯಾವ ಕವಿಯ ಬಗ್ಗೆಯೂ ಕೇವಲವಾಗಿ ಮಾತನಾಡಿದ­ವರು ಅಲ್ಲ. ಅವರದ್ದು ಸಾತ್ವಿಕ ಕೋಪ. ಹೇಳುವು­ದನ್ನು ನಿರ್ಭಿಡೆಯಿಂದ ಹೇಳುತ್ತಾರೆ. ಅವರು ಲೋಕಾ­ನು­ಭವ, ಭಾವಾನುಭವ­ದಿಂದ ಸೃಜನ­ಶೀ­ಲತೆ­­ಯಿಂದ ಕಾವ್ಯದ ಮೂಲಕ ಪ್ರತಿಪಾದಿಸುತ್ತಾರೆ ಎಂದು   ಅಭಿಪ್ರಾಯ­ಪಟ್ಟರು.‘ಹಿರಿಯ ಕವಿ ಬಿ.ಆರ್‌. ಲಕ್ಷ್ಮಣ ರಾವ್‌ ಹಾಗೂ ಎಚ್‌ಎಸ್‌ವಿ ಅವರು ನನ್ನ ಪ್ರೀತಿಯ ಶಿಷ್ಯರು. ಲಕ್ಷ್ಮಣ ರಾವ್‌ ಅವರ ವ್ಯಕ್ತಿತ್ವ ತುಂಟತನದಿಂದ ಕೂಡಿದ್ದು. ಎಚ್‌ಎಸ್‌ವಿ ವ್ಯಕ್ತಿತ್ವ ಗಂಭೀರ. ಅವರು ಅಂತ­ರ್ಮುಖಿ. ಅವರ ಕಾವ್ಯ ಪ್ರಶಾಂತವಾಗಿ, ನದಿ ಹರಿಯುವ ರೀತಿ ಹರಿಯುತ್ತದೆ’ ಎಂದು ಬಣ್ಣಿಸಿದರು.ಹಿರಿಯ ವಿದ್ವಾಂಸ ಪ್ರೊ.ಎಂ.­ಎಚ್‌.­ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿ, ‘ತುಂಬಿ ತುಳುಕುವ ವಿನಯ, ಹೃದಯ ತುಂಬಿದ ಭಾವನೆಗಳು, ಬಾಯಿ ತುಂಬಾ ಪ್ರಿಯವಾದ ಮಾತು, ಸದಾ ಮುಗುಳ್ನಗೆ ಎಚ್‌­ಎಸ್‌ವಿ ವ್ಯಕ್ತಿತ್ವದ ಕುರುಹುಗಳು’ ಎಂದರು.‘ಬಡವಾಡೆಯಾಗದ ರಸೀದಿ ಕಾವ್ಯದ ಮೂಲಕ ಲಕ್ಕೂರು ಆನಂದ ಅವರ ಅಂತರಂಗದ ತಳಮಳ­ಗಳನ್ನು ಗ್ರಹಿಸಬಹುದು. ಅವರ ಭಾವ ಪ್ರಪಂಚದ ಪರಿಚಯ ಆಗುತ್ತದೆ’ ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ­ರಾದ ಎಚ್‌.­ಎಸ್‌.­ವೆಂಕಟೇಶ­ಮೂರ್ತಿ ಹಾಗೂ  ಲಕ್ಕೂರು ಸಿ.ಆನಂದ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.­ಆರ್‌.ರಾಮಕೃಷ್ಣ ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry