ಇವರಿಗೆ 99... ಉಲ್ಲಾಸಕ್ಕೆ ಷೋಡಶ!

7

ಇವರಿಗೆ 99... ಉಲ್ಲಾಸಕ್ಕೆ ಷೋಡಶ!

Published:
Updated:
ಇವರಿಗೆ 99... ಉಲ್ಲಾಸಕ್ಕೆ ಷೋಡಶ!

 


`ನಮ್ ನಮ್ ಕೆಲ್ಸಾನ ನಾವ್ ನಾವೇ ಮಾಡ್ಕೋಬೇಕು. ಮನುಷ್ಯ ಸ್ವಾವಲಂಬಿಯಾಗಿರಬೇಕು. ನನ್ನ ಬಟ್ಟೆ ನಾನೇ ಒಕ್ಕೋತೀನಿ. ಅದ್ರಲ್ಲೇನಿದೆ ಅಲ್ವಾ?' ಅಂತ ಮಾತಿಗೆ ಕೂತ ಆ ಮಹಾತಾಯಿಯ ವಯಸ್ಸು 99! ಹೆಸರು ಲಕ್ಷ್ಮಮ್ಮ ವೆಂಕಟಸುಬ್ಬರಾವ್. 

 

ಚಹರೆಯಲ್ಲೂ, ಜೀವನಪ್ರೀತಿಯಲ್ಲೂ, ಚಟುವಟಿಕೆಯಲ್ಲೂ ಷೋಡಶದ ಉತ್ಸಾಹ, ಉಲ್ಲಾಸ. ಮುಂದೆ ಕುಳಿತವರನ್ನೂ ಜೀವನ್ಮುಖಿಗಳಾಗಿಸುವಂತಹ ಭರವಸೆಯ ಮಾತು. ಮುಂಜಾನೆಯಿಂದ ತಡರಾತ್ರಿವರೆಗೂ ಕ್ರಿಯಾಶೀಲರಾಗಿರುವುದು ಅರ್ಥಾತ್ ಬ್ಯುಸಿಯಾಗಿರುವುದು ಕಡ್ಡಾಯ.

 

`ತೊಂಬತ್ತಾ ಒಂಬತ್ತು ಆಯ್ತು ಅಂತ ಮೂಲೆ ಸೇರ‌್ಕೊಳ್ಳೋದಾ? ಬೆಂಗಳೂರಲ್ಲೇ ಎಲ್ಲ ಮಕ್ಕಳಿದ್ದಾರೆ. ಇವತ್ತೂ ಒಂದು ದೇವರನಾಮ ಬರೆದೆ. ವಯಸ್ಸಾಯ್ತು ಅಂತ ಸುಮ್ಮನೆ ಕೂರೋದೇ ಒಂದು ಕಾಯಿಲೆ. ಸತ್‌ಚಿಂತನೆ, ಸತ್ಕರ್ಮ ಮಾಡಿದರೆ ಸಾವು ಬೇಗ ಬರಲ್ಲ' ಅನ್ನುವ ಲಕ್ಷ್ಮಮ್ಮ ಅವರಿಗೆ, ಬಿಸಿಲೇರುವವರೆಗೂ ನಿದ್ದೆ ಮಾಡುವ, ಪ್ರತಿಯೊಂದು ಕೆಲಸಕ್ಕೂ ಕೆಲಸದಾಳುಗಳನ್ನು ನೆಚ್ಚಿಕೊಳ್ಳುವವರನ್ನು ಕಂಡರೆ ಸಿಡಿಮಿಡಿ. ತುಂಬು ಬಾಳು, 99 ಸಂವತ್ಸರಗಳು... ಅನುಭವಶಾಲೆಯಲ್ಲಿ  ಕಲಿತದ್ದು ನೂರಾರು ಪಾಠಗಳು!

 

ಗಂಡ ಬಂದಾಗ ಅಟ್ಟದ ಮೇಲೆ!

ಬೆಂಗಳೂರೇ ನನ್ನೂರು. ಬಸವನಗುಡಿಯಲ್ಲಿ ನಮ್ಮ ಮನೆಯಿತ್ತು. ನನಗೆ 11ನೇ ವಯಸ್ಸಿಗೆ ಮದುವೆಯಾಯ್ತು. `ಇವರಿಗೆ' 18. ಅಂದು 1930ರ ಏಪ್ರಿಲ್ 20. ನಮ್ಮ ಮದುವೆ ಎಷ್ಟು ಅದ್ದೂರಿಯಾಗಿತ್ತು ಗೊತ್ತಾ? ಆಗ ಸವರನ್ನು (ಎಂಟು ಗ್ರಾಂ) ಚಿನ್ನಕ್ಕೆ 13 ರೂಪಾಯಿ. ನಾನು ಧಾರೆಗೆ ಉಟ್ಟಿದ್ದ ರೇಷ್ಮೆ ಸೀರೆಗೆ 25 ರೂಪಾಯಿ!ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ಆಗಿದ್ದ ನನ್ನ ಗಂಡನಿಗೆ 25 ರೂಪಾಯಿ ಸಂಬಳ ನಡೀತಿತ್ತು. ನನಗೋ ಆಡುವ ವಯಸ್ಸು. ಗಂಡ, ಅತ್ತೆ, ಮಾವ, ಗಂಡನ ಮನೆ ಎಂಬ ಪರಿಜ್ಞಾನವಿಲ್ಲದೆ ನನ್ನ ಪಾಡಿಗೆ ಇರುತ್ತಿದ್ದೆ. ಇಷ್ಟಕ್ಕೂ ನಾನಿನ್ನೂ ಮೆಚ್ಯೂರ್ ಆಗಿರದ ಕಾರಣ ತಾಯಿ ಮನೆಯಲ್ಲೆ ಇರುತ್ತಿದ್ದೆ. 

 

ಇವರು ಹಜಾರದಲ್ಲಿದ್ದರೆ ನಾನು ಮನೆಯ ಯಾವುದೋ ಮೂಲೆಯಲ್ಲಿರುತ್ತಿದ್ದೆ. ನಾನು ವಯಸ್ಸಿಗೆ ಬಂದ ಮೇಲೆ ನನ್ನನ್ನು ಕರೆದುಕೊಂಡು ಹೋಗಲು ಇವರು ಬಂದಿದ್ದಾಗ ಏನಾಯ್ತು ಗೊತ್ತಾ? ಕರೆದೊಯ್ಯಲು ಬಂದಿರುವುದು ತಿಳಿದದ್ದೇ ನಾನು ಏಣಿ ಹತ್ತಿ ಅಟ್ಟದಲ್ಲಿ ಕುಳಿತುಕೊಂಡೆ. ನನ್ನನ್ನು ಕೆಳಗಿಳಿಸಲು ಅಮ್ಮ ತನ್ನ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಯ್ತು. ಆದರೆ ಗಂಡನ ಮನೆಗೆ ಹೋದ ಮೇಲೆ ಇವರೆಷ್ಟು ಒಳ್ಳೆಯವರು ಅಂತ ಗೊತ್ತಾಯ್ತು'

 

ಬರವಣಿಗೆ ಒಲಿಯಿತು

ಮದುವೆಯಾದ ಮೇಲೆ ವಿರಾಮದ ವೇಳೆ ಏನು ಮಾಡಬೇಕೆಂದು ತಿಳಿಯದೆ ಹಾಗೇ ಗೀಚುತ್ತಾ ಹೋದೆ. ಮತ್ತೆ ಮತ್ತೆ ಬರೀತಾ ಹೋದೆ. ಕ್ರಮೇಣ ಉತ್ತಮ ಪದ (ಹಾಡು)ಗಳು ಹೊರಬಂದವು. ನನ್ನ ಹಿರಿಮಗ ನನ್ನ ಮಗ ಮೂರ್ತಿ (ವಿ.ಎಸ್. ಮೂರ್ತಿ, ಮಾಜಿ ಪ್ರಧಾನಿ ದಿವಂಗತ ರಾಜೀವಗಾಂಧಿ ಅವರ ನಿಕಟವರ್ತಿ) ಮತ್ತು ಹಿತೈಷಿಗಳು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತಲೇ ಇದ್ದರು. ಇಲ್ಲಿವರೆಗೂ ನಾನು ಬರೆದ ದೇವರನಾಮಗಳ ಮೂರು ಪುಸ್ತಕಗಳು ಪ್ರಕಟಗೊಂಡಿವೆ. ಕೆಲ ತಿಂಗಳ ಹಿಂದೆ ಸಿ.ಡಿ ರೂಪದಲ್ಲೂ ಬಿಡುಗಡೆಯಾಯಿತು.  

 

ಹಾಗೆ ಬರೆಯಲು ಶುರು ಮಾಡಿದವಳು ಇದುವರೆಗೂ ನಿಲ್ಲಿಸಿಲ್ಲ. ಕೆಲಸ ಮಾಡುತ್ತಿದ್ದರೂ ಖಾಲಿ ಇದ್ದರೂ ನನಗೆ ಬೇರೇನೂ ಯೋಚನೆ ಬರುವುದಿಲ್ಲ. ಒಮ್ಮೆ ಮನಸ್ಸಿನಲ್ಲಿ ಮೂಡಿದ ಶಬ್ದಗಳನ್ನು ಬರೆಯುತ್ತಾ ಹೋಗುತ್ತೇನೆ. ಈಗಲೂ ಪ್ರತಿದಿನ ಅಲ್ಲದಿದ್ದರೂ ತೋಚಿದಾಗಲೆಲ್ಲ ಬರೀತಾನೆ ಇರ‌್ತೇನೆ. ಉಳಿದ ಸಮಯದಲ್ಲಿ ಬರೀತೇನೆ...'

 

ನಾನೇ ಅಡುಗೆ ಮಾಡಿಕೊಳ್ಳುವಷ್ಟು ಚೈತನ್ಯ ಇದ್ದರೂ ಮಕ್ಕಳು ಅವಕಾಶ ಕೊಡುವುದಿಲ್ಲ. ಈಗ ವರ್ತೂರಿನಲ್ಲಿ ನನ್ನ ಮಗಳ ಮನೇಲಿ ಹೆಚ್ಚಾಗಿ ಇರುತ್ತೇನೆ. ಹೂವು ಕೊಯ್ಯೋದು, ದೇವರ ಪೂಜೆ ಮಾಡೋದು, ಮನೆಯಲ್ಲಿ ಇತರ ಸಣ್ಣಪುಟ್ಟ ಕೆಲಸ ಮಾಡೋದು, ಆಯಾ ದಿನದ ಬಟ್ಟೆ ಒಗೆಯೋದು, ಮನೆಗೆ ಬರುವ ಕನ್ನಡ ದಿನಪತ್ರಿಕೆ ಓದೋದು... ಆದ್ಮೇಲೆ ಏನ್ಮಾಡೋದು? ಅದಕ್ಕೆ ದೇವರನಾಮ ಹಾಡ್ತಾ, ಬರೀತಾ ಇರ‌್ತೇನೆ' ಅಂತ ನಕ್ಕರು ಲಕ್ಷ್ಮಮ್ಮ ಅಜ್ಜಿ.

 

ಮುಖ್ಯಮಂತ್ರಿಗೆ ಘೇರಾವ್

ಸಮಯ, ಸಂದರ್ಭಕ್ಕೆ ತಕ್ಕುದಾದ ಆತ್ಮಸ್ಥೈರ್ಯ ಹೆಣ್ಣುಮಕ್ಕಳಿಗೆ ಇರಬೇಕು. ನ್ಯಾಯ, ಸತ್ಯ ಮತ್ತು ಮಾಡೋ ಕೆಲಸದ ಕಡೆಗೆ ನಿಷ್ಠೆ ಇರಬೇಕು. ನಾನು ಎಂದೂ ಅನ್ಯಾಯವನ್ನು ಸಹಿಸಿಕೊಂಡವಳಲ್ಲ. ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಒಂದು ಘಟನೆ ನಡೆಯಿತು. ನಮ್ಮವರಿಗೆ ನಿವೃತ್ತಿಯಾದ ಮೇಲೆ ಪೆನ್ಷನ್ ಬರಬೇಕಿತ್ತು. ಅರ್ಜಿ ಸಲ್ಲಿಸಿದರೂ ಯಾವುದೇ ಸ್ಪಂದನವಿರಲಿಲ್ಲ. ಒಂದು ದಿನ ಮಗ ಮೂರ್ತಿಯನ್ನು ಕರೆದುಕೊಂಡು ಸಿಎಂ ತಮ್ಮ ಮನೆಯ ಗೇಟಿನಿಂದಾಚೆ ಕಾದುನಿಂತೆ. ಕಾರು ಬಂತು. ಅಡ್ಡಹಾಕಿದೆ.ನನ್ನೆಜಮಾನ್ರು ಅಷ್ಟೊಂದು ನಿಷ್ಠೆಯಿಂದ ನಿಮ್ಮ ಸರ್ಕಾರದಲ್ಲಿ ಸೇವೆ ಸಲ್ಲಿಸಿದೋರು. ಅವರಿಗೆ ಬರಬೇಕಾದ ನಿವೃತ್ತಿವೇತನ ಕೊಡಲು ಯಾಕೆ ಇಷ್ಟು ಸತಾಯಿಸ್ತೀರಿ? ಮಂಜೂರು ಮಾಡೋವರೆಗೂ ಇಲ್ಲಿಂದ ನಾನೂ ಕದಲಲ್ಲ. ನಿಮ್ಮನ್ನೂ ಬಿಡೊಲ್ಲ ಅಂದೆ. ಯಾರನ್ನೋ ಕರೆದು ಫೈಲ್ ಚೆಕ್ ಮಾಡೋಕೆ ಹೇಳಿದ್ರು. ಎರಡೇ ವಾರದಲ್ಲಿ ಪೆನ್ಷನ್ ಬಂತು' ಅಂತ ತಮ್ಮ ದಿಟ್ಟತನವನ್ನೂ ವಿವರಿಸಿದರು ಮಹಾತಾಯಿ.


 

`ಸಣ್ಣ ವಯಸ್ಸಿನಿಂದಲೂ ಬಹಳ ಸಿಹಿ, ಭಕ್ಷ್ಯ ತಿನ್ತಾ ಇದ್ದೆ ನೋಡಿ. ಎಲ್ಲಾ ಹಲ್ಲು ಹುಳುಕು ಆಗಿ ನನ್ನ 32ನೇ ವಯಸ್ಸಿಗೇ ಸೆಟ್ ಕಟ್ಟಿಸಿಕೊಳ್ಳಬೇಕಾಯ್ತು. ಕಣ್ಣು ಸ್ವಲ್ಪ ಮಂಜಾಗ್ತಿತ್ತು ಅಂತ ಲೇಸರ್ ಶಸ್ತ್ರಚಿಕಿತ್ಸೆ ಮಾಡಿಸಿದ್ರು ಮಕ್ಕಳು. `ಸಕ್ಕರೆ', ಬಿಪಿ ಏನೂ ಇಲ್ಲ. ಸೊಸೆಯಂದಿರು ತುಂಬಾ ಒಳ್ಳೆಯವರು. ಯಾವಾಗಲೂ ಸೊಸೆಯರನ್ನು ಮಮತೆಯಿಂದ ನಡೆಸಿಕೊಳ್ಳಬೇಕು. ಅವರು ನೆಮ್ಮದಿಯಿಂದ ಇದ್ದರೆ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ನೆಮ್ಮದಿ ಅಲ್ವೇ? ಅವರಿಗೆ ಹಿಂಸೆ ಕೊಟ್ಟರೆ ನಮ್ಮ ಮನೆ ಉದ್ಧಾರವಾಗೋದಿಲ್ಲ. ಎಲ್ಲರಿಗೂ ಇದನ್ನೇ ನಾನು ಹೇಳ್ತಾ ಇರ‌್ತೇನೆ' ಅಂತ ನಕ್ಕರು ಅಜ್ಜಿ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry