ಇವರು ನಮ್ಮ ಸಿರಿವಂತ ಭಾಗ್ಯಲಕ್ಷ್ಮಿಯರು

7

ಇವರು ನಮ್ಮ ಸಿರಿವಂತ ಭಾಗ್ಯಲಕ್ಷ್ಮಿಯರು

Published:
Updated:

`ನಮಗೆ ಹೆಣ್ಣುಮಗು ಹುಟ್ಟಿತು. `ಭಾಗ್ಯಲಕ್ಷ್ಮಿ~ ಯೋಜನೆಗೆ ಹೆಸರು ಸೇರಿಸಿದೆವು~ ಎಂದು ಆ ದಂಪತಿ ಖುಷಿಯಿಂದ ಹೇಳಿಕೊಂಡರು.

`ಇದೇನು? ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಅಲ್ಲವೇ ಆ ಯೋಜನೆ ಇರುವುದು?~ ಎಂದು ಆಶ್ಚರ್ಯದಿಂದ ಕೇಳಿದಾಗ, `ಅಯ್ಯೋ ನಮ್ಮೂರಿನಲ್ಲಿ ಇರುವ ದೊಡ್ಡ ದೊಡ್ಡ ಶ್ರೀಮಂತರೂ `ಭಾಗ್ಯಲಕ್ಷ್ಮಿ~ ಯೋಜನೆ ಅಡಿ ಮಕ್ಕಳ ಹೆಸರು ಸೇರಿಸುವಾಗ ನಮ್ಮದೇನು ಮಹಾ..~ ಎಂದಿತು ಆ ಜೋಡಿ. 

ಇವರು ಸರ್ಕಾರಿ ನೌಕರರಲ್ಲ ಎನ್ನುವುದನ್ನು ಬಿಟ್ಟರೆ, ವ್ಯಾಪಾರ, ವ್ಯವಹಾರ ಮಾಡಿಕೊಂಡು ಅನುಕೂಲವಾಗಿದ್ದಾರೆ. ಮಕ್ಕಳನ್ನು ಸಾಕಿ ಬೆಳೆಸುವಷ್ಟು ಹಣಕಾಸು ಅವರಲ್ಲಿ ಇದ್ದರೂ, ಸರ್ಕಾರದಿಂದ ಬರುವ ಪುಕ್ಕಟ್ಟೆ ಹಣದ ಮೇಲೂ ಅವರ ಕಣ್ಣು ಬಿದ್ದಿದೆ. ಅದರಿಂದ ಅವರ ಮುಖದಲ್ಲಿ ಹೆಣ್ಣುಮಗು ಹುಟ್ಟಿದ ಸಂಭ್ರಮಕ್ಕಿಂತ `ಭಾಗ್ಯಲಕ್ಷ್ಮಿ~ ಯೋಜನೆಯಲ್ಲಿ ಹೆಸರು ಸೇರಿಸಿದ ಸಂಭ್ರಮವೇ ಹೆಚ್ಚು ತುಂಬಿಕೊಂಡಿದೆ. ಉಚಿತವಾಗಿ ಸಿಗುವ ಹಣದ ಬೆನ್ನು ಬಿದ್ದ ಇಂಥವರಿಗೆ ಅದೊಂದು ಕಾರಣಕ್ಕೆ ಹೆಣ್ಣುಮಗು ಹುಟ್ಟಿದ್ದು ಬೇಸರ ತರುತ್ತಿಲ್ಲ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ `ಭಾಗ್ಯಲಕ್ಷ್ಮಿ~ ಯೋಜನೆ ಇದೀಗ ಸರ್ಕಾರದ ಎಲ್ಲಾ ಯೋಜನೆಗಳಂತೆ ಅಡ್ಡದಾರಿ ಹಿಡಿದಿದೆ. ಆ ಯೋಜನೆಯಲ್ಲಿ ಸೇರಬಯಸುವ ಅನುಕೂಲಸ್ಥರಿಗೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಸುಳ್ಳು ಪ್ರಮಾಣಪತ್ರ ಸೃಷ್ಟಿಸಲು ಇಂತಿಷ್ಟು ಹಣ ಪಡೆದು ದುಡ್ಡಿರುವವರಿಗೆ ಲಾಭ ಮಾಡುವ ದಾರಿ ತೋರುತ್ತಿದ್ದಾರೆ. ಸಣ್ಣ ಸಂಬಳ ಪಡೆಯುವ ಸರ್ಕಾರಿ ನೌಕರರಾದಿಯಾಗಿ ವ್ಯಾಪಾರಸ್ಥರೂ, ಸುಶಿಕ್ಷಿತರೂ ಕೂಡ `ಭಾಗ್ಯಲಕ್ಷ್ಮಿ~ ಯೋಜನೆಗೆ ಸುಳ್ಳು ದಾಖಲಾತಿ ಪತ್ರ ಸಲ್ಲಿಸಲು ಪಡಿಪಾಟಲು ಪಡುತ್ತಿದ್ದಾರೆ.

ಆರಂಭದಲ್ಲಿ 50 ಸಾವಿರ ಇದ್ದ ಮೊತ್ತ ಒಂದು ಲಕ್ಷಕ್ಕೆ ಏರಿಕೆಯಾಗಿರುವುದು ಕೂಡ ಇವರೆಲ್ಲಾ ಯೋಜನೆಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಹೆಣ್ಣುಮಗು ಹುಟ್ಟಿದ ಸಂಭ್ರಮ ಆಚರಿಸುವುದಕ್ಕಿಂತ ಹೆಚ್ಚಾಗಿ `ಭಾಗ್ಯಲಕ್ಷ್ಮಿ~ ಯೋಜನೆಯಲ್ಲಿ ಹೆಸರು ನೋಂದಾವಣೆ ಮಾಡಲು ಟೊಂಕಕಟ್ಟಿ ನಿಲ್ಲಲಾಗುತ್ತಿದೆ. ಇದರಿಂದ ಹೆಣ್ಣುಮಗು ಎಂದು ಹೀಗಳೆಯುತ್ತಿದ್ದವರ ಮುಖದಿಂದ ಒಂದು ರೀತಿಯ ವಿಕೃತ ನಗೆ ಹೊರಹೊಮ್ಮುತ್ತಿದೆ.

ಇದು ಇನ್ನೊಂಥರಾ ಹೆಣ್ಣು ಮಕ್ಕಳ ಮಾನಸಿಕ ಹತ್ಯೆ. ಹುಟ್ಟುವ ಮುಂಚೆಯೇ ಕಣ್ಣುಮುಚ್ಚುತ್ತಿದ್ದ ಹೆಣ್ಣು ಮಕ್ಕಳು `ಭಾಗ್ಯಲಕ್ಷ್ಮಿ~ಯಿಂದ ಉಳಿದುಕೊಂಡರು ಎಂಬುದು ಸಮಾಧಾನದ ಸಂಗತಿಯಾದರೂ, ಆ ಹೆಣ್ಣು ಮಕ್ಕಳ ಹಿಂದೆ ಸರ್ಕಾರದ ಆರ್ಥಿಕ ಬೆಂಬಲ ಇರುವುದೇ ಇದಕ್ಕೆ ಕಾರಣ ಎಂಬುದು ವಿಷಾದದ ವಿಚಾರ.  ಸದ್ಯಕ್ಕೆ ಅವರು `ಹೆಣ್ಣು ಮಗುನಾ?~ ಎಂಬ ಹೀಯಾಳಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆರಂಭದಲ್ಲಿ ಸಿಗುತ್ತಿದ್ದ ಹಣವನ್ನು ದುಪ್ಪಟ್ಟು ಮಾಡಿದ ನಂತರ ತಮ್ಮ ಹೆಣ್ಣುಮಗು ಹುಟ್ಟಬಾರದಿತ್ತೇ ಎಂದು ಪೇಚಾಡುವ ಪೋಷಕರ ಮನಸ್ಥಿತಿ ಕಂಡಾಗ ಅಸಹ್ಯ ಹುಟ್ಟದೇ ಇರದು.

ಭ್ರೂಣದಲ್ಲಿಯೇ ಅಥವಾ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಹೆಣ್ಣುಮಗುವಿನ ಹತ್ಯೆಯಾಗುತ್ತಿದ್ದುದನ್ನು ತಡೆಯಲು ಮತ್ತು ಬಡವರ್ಗದಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಸ್ಥಾನಮಾನ ಎತ್ತರಿಸುವ ದೃಷ್ಟಿಯಿಂದ `ಭಾಗ್ಯಲಕ್ಷ್ಮಿ~ ಯೋಜನೆ ಆರಂಭವಾಯಿತು. ಹೆಣ್ಣುಮಕ್ಕಳನ್ನು ಸಾಕುವ, ಅವರನ್ನು ಓದಿಸಿ ಮದುವೆ ಮಾಡುವ ಹೊರೆ ದೊಡ್ಡದು ಎಂದು ಭಾವಿಸಿದ್ದ ಬಡವರಿಗೆ ಸಹಾಯಕವಾಗಲಿ ಎಂಬ ಸದುದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತು. ಇಂಥ ಸದುದ್ದೇಶದಿಂದ ಆರಂಭವಾದ ಯೋಜನೆ ಶ್ರೀಮಂತರ ಪಾಲಾಗುತ್ತಿರುವುದಂತೂ ಖೇದಕರ. ಹೆಣ್ಣುಮಗು ಹುಟ್ಟಿದ್ದಕ್ಕೆ ಬಡವರಿಗಿಂತ ಸಿರಿವಂತರಿಗೇ ಹೆಚ್ಚು ಬೇಸರವಾಗುತ್ತಿತ್ತು ಎಂಬುದು ಇದರಿಂದ ಸಾಬೀತಾಗಿದೆ. ಕೆಲವು ಕಡೆ ವರ್ಷ ಕಳೆದರೂ ಅರ್ಹರಿಗೆ `ಭಾಗ್ಯಲಕ್ಷ್ಮಿ~ ಬಾಂಡ್ ಸಿಕ್ಕಿಲ್ಲ ಎಂಬ ಕೂಗು ಇದ್ದರೆ ಮತ್ತೊಂದು ಕಡೆ ಯೋಜನೆಯ ದುರುಪಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದಷ್ಟು ಬೇಗ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಸಾರ್ವಜನಿಕರ ತೆರಿಗೆ ಹಣ ಶ್ರೀಮಂತರ ಪಾಲಾಗಿ, ಬಡವರ ಯೋಜನೆಗಳು ಅವರ ಕೈಗೇ ಎಟುಕದ ಸ್ಥಿತಿ ತಲುಪುವುದು ಖಂಡಿತ.

`ಎರಡೂ ಮಕ್ಕಳಿಗೂ ಸಿಸೇರಿಯನ್ ಆಗಿದೆ. ಇನ್ನು ಮೂರನೆಯದು ಸಿಸೇರಿಯನ್ ಆಗೇ ಆಗುತ್ತದೆ. ಮಕ್ಕಳಾಗದಂತೆ ಆಪರೇಷನ್ ಮಾಡಿಸಿಬಿಡಿ~ ಎಂದು ವೈದ್ಯರು ನೀಡಿದ ಸಲಹೆಯನ್ನು ಕೇಳಿ ಆ ಅಮ್ಮ ಮಗನ ಮುಖದ ತುಂಬಾ ಕಳವಳ ತುಂಬಿಕೊಂಡಿತು. `ಹಾಗಾದರೆ ನಮ್ಮ ಮನೆಗೆ ಗಂಡು ಮಗು ಬೇಡವೇ?~ ಎನ್ನುತ್ತಾ ವೈದ್ಯರನ್ನು ಅವರು ದುರುಗುಟ್ಟಿ ನೋಡಿದರು. `ಇನ್ನೊಂದು ಸಿಸೇರಿಯನ್ ಆದರೆ ತಾಯಿಯ ಜೀವನಕ್ಕೆ ಅಪಾಯ. ನೀವು ಆಪರೇಷನ್‌ಗೆ ಒಪ್ಪಿ ಸಹಿ ಹಾಕದಿದ್ದರೆ ಪೊಲೀಸರಿಗೆ ದೂರು~ ನೀಡುವುದಾಗಿ ವೈದ್ಯರು ಬೆದರಿಸಿದಾಗ ಹೆದರಿ ಹೊರಬಂದ ಆ ಅಮ್ಮ, ಮಗ ಕೈ ಕೈ ಹಿಸುಕಿಕೊಳ್ಳುತ್ತಾ ನಿಂತಿದ್ದರು. ಅವರ ಮುಂದಿನ ಆಲೋಚನೆ ಅರಿತ ಆ ಹುಡುಗಿಯ ಮನೆಯವರು `ಈ ವಿಚಾರ ಪೊಲೀಸರ ಹತ್ತಿರಕ್ಕೆ ಹೋದರೆ ಹುಡುಗಿಯನ್ನು ಬದುಕಲು ಬಿಡುವುದಿಲ್ಲ~ ಎಂದು ಹೇಳಿ ವೈದ್ಯರ ಮನವೊಲಿಸಿ ಆಪರೇಷನ್ ಮಾಡದಂತೆ ಕೋರಿಕೊಂಡರು. ಇದೀಗ ಎರಡೂ ಮಕ್ಕಳನ್ನು ಸಿಸೇರಿಯನ್ ಮೂಲಕ ಹೆತ್ತ ಹುಡುಗಿ ಮತ್ತೊಂದು ಸಿಸೇರಿಯನ್‌ಗೆ ಸಿದ್ಧಳಾಗಬೇಕಾಗಿದೆ. ಎರಡು ಹೆಣ್ಣುಮಕ್ಕಳಿಗೆ `ಭಾಗ್ಯಲಕ್ಷ್ಮಿ~ ಯೋಜನೆ ಅನ್ವಯಿಸುವುದರಿಂದ ಎರಡು ಹೆಣ್ಣುಮಕ್ಕಳನ್ನು ಹೇಗೋ ಸಹಿಸಿಕೊಳ್ಳುವ ಪತಿಯ ಮನೆಯವರು ಮೂರನೇ ಮಗುವನ್ನು ಹೆಣ್ಣಾಗಲು ಬಿಡುವುದಿಲ್ಲ. ಇಂಥ ಸನ್ನಿವೇಶಗಳ ಸಂಖ್ಯೆ `ಭಾಗ್ಯಲಕ್ಷ್ಮಿ~ ಯೋಜನೆಯಿಂದ ಭಾರತದಲ್ಲಿ ಕಡಿಮೆಯಾಗುತ್ತಿಲ್ಲ.

ಮನಸ್ಸುಗಳು ಬದಲಾಗದ ಹೊರತು ಸರ್ಕಾರಿ ಯೋಜನೆಗಳು ಏನನ್ನೂ ಮಾಡಲಾರವು ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry